ADVERTISEMENT

ಕಾಂಗ್ರೆಸ್ ಭ್ರಷ್ಟರಲ್ಲೂ ವರ್ಗ, ಜಾತಿ ಹುಡುಕುತ್ತಿರುವುದು ದುರಂತ: ಬಿಜೆಪಿ ಟೀಕೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2021, 12:28 IST
Last Updated 5 ಆಗಸ್ಟ್ 2021, 12:28 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಭ್ರಷ್ಟ ಕಾಂಗ್ರೆಸ್‌ ಶಾಸಕನ ಪರವಾಗಿ ಭ್ರಷ್ಟ ಕಾಂಗ್ರೆಸ್‌ ಅಧ್ಯಕ್ಷ ವಕಾಲತ್ತು ವಹಿಸುತ್ತಿದ್ದಾರೆ. ʼಒಂದು ವರ್ಗವನ್ನು ಗುರಿಯಾಗಿಸಿಕೊಂಡು ಐಟಿ ದಾಳಿ ನಡೆಸಲಾಗಿದೆʼ ಎನ್ನುವ ಮೂಲಕ ಡಿ.ಕೆ.ಶಿವಕುಮಾರ್ ಭ್ರಷ್ಟರಲ್ಲೂ ಜಾತಿ-ಧರ್ಮ ಅರಸುತ್ತಿದ್ದಾರೆ. ಭ್ರಷ್ಟರಲ್ಲೂ ವರ್ಗ, ಜಾತಿ ಹುಡುಕುತ್ತಿರುವುದು ದುರಂತವೇ ಸರಿ! ಎಂದು ಕರ್ನಾಟಕ ಬಿಜೆಪಿ ದೂರಿದೆ.

#ಭ್ರಷ್ಟಕಾಂಗ್ರೆಸ್‌ ಎನ್ನುವ ಹ್ಯಾಷ್‌ಟ್ಯಾಗ್ ಹಾಕಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಐಟಿ, ಇ.ಡಿ, ಸಿಬಿಐನಂಥ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡುವ ಚಾಳಿ ಇರುವುದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ. ಇದಕ್ಕೆ ದೇಶ ಹಲವಾರು ಬಾರಿ ಸಾಕ್ಷಿಯಾಗಿದೆ. ಸಿದ್ದರಾಮಯ್ಯ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರ ಎಸಿಬಿ ಸ್ಥಾಪನೆ ಮಾಡಿ ಅದನ್ನು ರಾಜಕೀಯ ದ್ವೇಷಕ್ಕೆ ಬಳಸಿಕೊಂಡಿದ್ದನ್ನು ನಾಡಿನ ಜನತೆ ಇನ್ನೂ ಮರೆತಿಲ್ಲ ಎಂದಿದೆ.

ಮತ್ತೊಂದು ಟ್ವೀಟ್‌ನಲ್ಲಿ, ಎರಡು ವರ್ಷವಾಯ್ತು ಎಂಬ ಕಾರಣಕ್ಕೆ ಐಎಂಎ ಪ್ರಕರಣದ ತನಿಖೆಯನ್ನು ಈಗ ನಡೆಸಬಾರದೇ ಡಿ.ಕೆ. ಶಿವಕುಮಾರ್ ಅವರೇ?! ಬಡವರು ಹತ್ತಾರು ವರ್ಷ ಶ್ರಮವಹಿಸಿ ಗಳಿಸಿದ ಉಳಿಕೆಯನ್ನು ಜಮೀರ್ ಕಬಳಿಸಿದಾಗ ನೀವ್ಯಾಕೆ ಮೌನವಾಗಿದ್ದಿರಿ? ನಿಮಗೂ ಅದರಲ್ಲೀ ಪಾಲು ಇತ್ತೇ? ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದೆ.

ADVERTISEMENT

ಸಿದ್ದರಾಮಯ್ಯ ಅವರಂತಹ ಅಲ್ಪಸಂಖ್ಯಾತರ ದ್ರೋಹಿ‌ ಇನ್ನೊಬ್ಬರಿಲ್ಲ. ಐಎಂಎ ವಂಚನೆ ಪ್ರಕರಣದ ಆರೋಪಿಯ ಬೆನ್ನಿಗೆ ನಿಲ್ಲುವ ಮೂಲಕ ಸಿದ್ದರಾಮಯ್ಯ ಅವರು ಬಡ ಅಲ್ಪಸಂಖ್ಯಾತರ ಶ್ರಮದ ಗಳಿಕೆಯ‌ನ್ನು ಅಣಕ ಮಾಡುತ್ತಿದ್ದಾರೆ. ಜಮೀರ್ ಅಹ್ಮದ್ ಅವರನ್ನು ಬೆಂಬಲಿಸುತ್ತಿರುವ ನಿಮಗೆ ಈ ಲೂಟಿಯಲ್ಲಿ ಪಾಲಿತ್ತೇ, ಸಿದ್ದರಾಮಯ್ಯ!? ಎಂದು ಪ್ರಶ್ನಿಸಿದ್ದಾರೆ.

ಭ್ರಷ್ಟ ಕಾಂಗ್ರೆಸ್ ಶಾಸಕನ ಮೇಲಿನ ದಾಳಿ ರಾಜಕೀಯ ಪ್ರೇರಿತ ದಾಳಿ ಎನ್ನುವ ಸಿದ್ದರಾಮಯ್ಯ ಅವರೇ, ಐಎಂಎ ಪ್ರಕರಣವನ್ನು ತನಿಖೆ ನಡೆಸಿದ್ದು ನಿಮ್ಮದೇ ಮೈತ್ರಿ ಸರ್ಕಾರ. ನಿಮ್ಮದೇ ಪಕ್ಷದ ಶಾಸಕ ರೋಶನ್ ಬೇಗ್ ಬಂಧನವಾಗಿತ್ತು. ಆಗೆಲ್ಲ ಮೌನವಾಗಿದ್ದ ನೀವು, ಈಗ ಜಮೀರ್ ವಿಚಾರದಲ್ಲೇಕೆ ಸಿಡಿಯುತ್ತಿದ್ದೀರಿ? ಎಂದು ಕೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.