ADVERTISEMENT

ಬೆಳಗಾವಿ | ಪ್ರಯೋಗಾಲಯದ ವರದಿ; ಕೃಷ್ಣಮೃಗಗಳ ಸಾವಿಗೆ ಗಳಲೆ ರೋಗ ಕಾರಣ: ಸುನೀಲ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2025, 13:59 IST
Last Updated 18 ನವೆಂಬರ್ 2025, 13:59 IST
   

ಬೆಳಗಾವಿ: ‘ಭೂತರಾಮನಹಟ್ಟಿಯ ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ 31 ಕೃಷ್ಣಮೃಗಗಳ ಸಾವಿಗೆ ಗಳಲೆ ರೋಗ (ಇಂಡೀಡ್‌ ಹೆಮರೈಜಿಕ್ ಸೆಪ್ಟೀಸಿಮಿಯಾ– ಎಚ್‌.ಎಸ್‌) ಕಾರಣ ಎಂದು ಪ್ರಯೋಗಾಲಯದ ವರದಿ ಖಚಿತಪಡಿಸಿದೆ’ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನೀಲ ಪನ್ವಾರ್‌ ತಿಳಿಸಿದ್ದಾರೆ.

‘ನವೆಂಬರ್ 13ರಂದು ಎಂಟು ಕೃಷ್ಣಮೃಗಗಳು ಮೃತಪಟ್ಟಿದ್ದವು. ಅದೇ ದಿನ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಎಚ್‌ಎಸ್‌ ಬ್ಯಾಕ್ಟೀರಿಯಾ ಸೋಂಕು ನಿವಾರಣೆಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಇದು ಅತ್ಯಂತ ಅಪಾಯಕಾರಿ ಸೋಂಕು’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಈವರೆಗೆ 31 ಕೃಷ್ಣಮೃಗಗಳು ಸತ್ತಿವೆ. ಬದುಕಿರುವ ಏಳು ಕೃಷ್ಣಮೃಗಗಳಿಗೂ ಸೋಂಕು ತಗಲಿದ್ದು ದೃಢಪಟ್ಟಿದೆ. ಅವು ಚಿಕಿತ್ಸೆಗೆ ಸ್ಪಂದಿಸುತ್ತಿವೆ. ಆಹಾರ ತಿನ್ನುತ್ತಿವೆ. 36 ಗಂಟೆಗಳಿಂದ ಯಾವುದೇ ಅಪಾಯ ಸಂಭವಿಸಿಲ್ಲ. ಸೋಂಕು ಅಕ್ಕಪಕ್ಕದ ಬೇರೆ ಪ್ರಭೇದದ ಪ್ರಾಣಿಗಳಿಗೆ ಹರಡದಂತೆ ಎಚ್ಚರಿಕೆ ವಹಿಸಲಾಗಿದೆ. ಮೃಗಾಲಯದ ತುಂಬ ಸ್ಯಾನಿಟೈಸೇಷನ್‌ ಮಾಡಲಾಗಿದೆ’ ಎಂದು ಚಿಕಿತ್ಸೆ ನೀಡುತ್ತಿರುವ ಬೆಂಗಳೂರಿನ ವೈದ್ಯರು ತಿಳಿಸಿದರು.

ADVERTISEMENT

‘ಕಿರು ಮೃಗಾಲಯದಲ್ಲಿ 195 ದೊಡ್ಡ ಪ್ರಾಣಿಗಳು ಹಾಗೂ ವಿವಿಧ ರೀತಿಯ ಪಕ್ಷಿಗಳಿವೆ. ಇತರ ಪ್ರಾಣಿಗಳ ಚಲನವಲನದಲ್ಲಿ ಬದಲಾವಣೆ ಕಂಡುಬಂದಿಲ್ಲ. ಅಲ್ಲದೇ, ಈ ಸೋಂಕು ಸಸ್ಯಾಹಾರಿ ಪ್ರಾಣಿಗಳಿಗೆ ಮಾತ್ರ ಹರಡುತ್ತದೆ. ಮಾಂಸಾಹಾರಿ ಪ್ರಾಣಿಗಳು ಸುರಕ್ಷಿತವಾಗಿವೆ’ ಎಂದು ಬೆಳಗಾವಿ ಡಿಸಿಎಫ್‌ ಎನ್.ಇ.ಕ್ರಾಂತಿ ತಿಳಿಸಿದರು.

‘ಈ ಬ್ಯಾಕ್ಟೀರಿಯಾ ಸಾಕು ಪ್ರಾಣಿಗಳಿಗೂ ಹರಡುವ ಸಾಧ್ಯತೆಯಿದೆ. ಮೃಗಾಲಯದ ಸುತ್ತಮುತ್ತಲ ಗ್ರಾಮಗಳಲ್ಲೂ ಮುಂಜಾಗ್ರತೆ ವಹಿಸಲು ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ’ ಎಂದರು.

ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಕೂಡ ಮಂಗಳವಾರ ಮೃಗಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.