ADVERTISEMENT

ಕುರ್ಚಿ ಉಳಿಸಿಕೊಳ್ಳಲು ಸಂವಿಧಾನ ಬದಲು ಮಾಡಿದ್ದು ಇಂದಿರಾಗಾಂಧಿ: ಪಿ.ರಾಜೀವ್‌

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2023, 15:30 IST
Last Updated 13 ಫೆಬ್ರುವರಿ 2023, 15:30 IST
ಪಿ.ರಾಜೀವ್‌
ಪಿ.ರಾಜೀವ್‌   

ಬೆಂಗಳೂರು: ಬಿಜೆಪಿ ಶಾಸಕ ಪಿ.ರಾಜೀವ್‌ ಅವರು ಸೋಮವಾರ ವಿಧಾನಸಭೆಯಲ್ಲಿ ತುರ್ತುಪರಿಸ್ಥಿತಿ ಮತ್ತು ಇಂದಿರಾಗಾಂಧಿ ಬಗ್ಗೆ ಸುದೀರ್ಘವಾಗಿ ಮಾತನಾಡಿದ್ದರಿಂದ ಬೇಸತ್ತ ಕೆಲ ಕಾಂಗ್ರೆಸ್‌ ಸದಸ್ಯರು ಕಲಾಪದಿಂದ ಅಸಮಾಧಾನಗೊಂಡು ಮೌನವಾಗಿ ಹೊರನಡೆದರು.

‘ಬಿಜೆಪಿ ಸಂವಿಧಾನ ಬದಲಿಸಲು ಯತ್ನಿಸುತ್ತಿದೆ’ ಎಂದು ಕಾಂಗ್ರೆಸ್‌ ನಾಯಕರು ಪದೇ ಪದೇ ಸುಳ್ಳು ಹೇಳುತ್ತಿದ್ದಾರೆ. ಇತಿಹಾಸದಲ್ಲಿ ತಮ್ಮ ಕುರ್ಚಿ ಉಳಿಸಿಕೊಳ್ಳಲು ಸಂವಿಧಾನ ಬದಲು ಮಾಡಿದ್ದು ಯಾರಾದರೂ ಇದ್ದರೆ ಅದು ಇಂದಿರಾಗಾಂಧಿ. ಬಿಜೆಪಿಯವರು ಎಂದೂ ಆ ಕೆಲಸ ಮಾಡಿಲ್ಲ’ ಎಂದು ರಾಜೀವ್‌ ಹೇಳಿದರು.

ಈ ಮಾತಿಗೆ ಕಾಂಗ್ರೆಸ್‌ನ ಎಂ.ಕೃಷ್ಣಪ್ಪ ಆಕ್ಷೇಪ ವ್ಯಕ್ತಪಡಿಸಿದರು. ‘ಎಷ್ಟು ಬಾರಿ ತುರ್ತುಪರಿಸ್ಥಿತಿ ಬಗ್ಗೆ ಮಾತನಾಡುತ್ತೀರಿ. ಅವೆಲ್ಲ ಎಲ್ಲರಿಗೂ ಗೊತ್ತು. ಪದೇ ಪದೇ ಮಾತನಾಡುವ ಅಗತ್ಯವಿದೆಯೇ? ತಮ್ಮನ್ನು ಸಮರ್ಥಿಸಿಕೊಂಡು ಇಂದಿರಾಗಾಂಧಿಯಾಗಲಿ, ರಾಜ್‌ನಾರಾಯಣ್ ಅವರಾಗಲಿ ಇಲ್ಲಿಗೆ ಬಂದು ಮಾತನಾಡಲು ಸಾಧ್ಯವೇ?’ ಎಂದು ಪ್ರಶ್ನಿಸಿದರು. ಇದಕ್ಕೆ ಕಾಂಗ್ರೆಸ್‌ನ ಶ್ರಿನಿವಾಸಮಾನೆ ಅವರೂ ಧ್ವನಿಗೂಡಿಸಿದರು.

ADVERTISEMENT

‘ರಾಜ್ಯಪಾಲರ ಭಾಷಣದ ಮೇಲೆ ಮಾತನಾಡುವ ಹಕ್ಕು ಇದೆ. ಅದನ್ನು ಮೊಟಕುಗೊಳಿಸಲು ಯಾರಿಗೂ ಸಾಧ್ಯವಿಲ್ಲ’ ಎಂದು ಹೇಳಿದ ರಾಜೀವ್‌ ಅವರು ತಮ್ಮ ಮಾತು ಮುಂದುವರಿಸಿದರು. ಆಗ ಬೇಸತ್ತ ಕೃಷ್ಣಪ್ಪ ಮತ್ತು ಇನ್ನೂ ಕೆಲವರು ಗೊಣಗಿಕೊಂಡು ಸದನದಿಂದ ಹೊರನಡೆದರು. ‘ಸತ್ಯವನ್ನು ಜೀಣಿಸಿಕೊಳ್ಳಬೇಕು ಶಕ್ತಿ ಇರಬೇಕು’ ಎಂದು ರಾಜೀವ್‌ ಹೇಳಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.