ADVERTISEMENT

LIVE | ಸಾರಿಗೆ ನೌಕರರ ಮುಷ್ಕರ: ರಸ್ತೆಗಿಳಿಯದ KSRTC ಬಸ್‌ಗಳು; ಸಂಚಾರದಲ್ಲಿ ಭಾರಿ ವ್ಯತ್ಯಯ

KSRTC Bus Strike: ರಾಜ್ಯ ಸಾರಿಗೆ ಒಕ್ಕೂಟಗಳ ಜಂಟಿ ಕ್ರಿಯಾ ಸಮಿತಿ ಕರೆ ನೀಡಿರುವ ಮುಷ್ಕರದಿಂದ ರಾಜ್ಯದಲ್ಲಿ ಬಸ್ ಸಂಚಾರ ಸ್ಥಬ್ದಗೊಂಡಿದ್ದು ಪ್ರಯಾಣಿಕರು ಪರದಾಡುತ್ತಿದ್ದಾರೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 6:34 IST
Last Updated 5 ಆಗಸ್ಟ್ 2025, 6:34 IST
<div class="paragraphs"><p>ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ನಿಂತಿರುವ ಬಸ್‌ಗಳು&nbsp;</p></div>

ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ನಿಂತಿರುವ ಬಸ್‌ಗಳು 

   

ಮಂಗಳೂರು: ಪರಿಣಾಮ ಬೀರದ ಸಾರಿಗೆ ನೌಕರರ ಮುಷ್ಕರ

ಮಂಗಳೂರು: ಸಾರಿಗೆ ಸಂಸ್ಥೆಗಳ ನೌಕರರ ಮುಷ್ಕರ ಮಂಗಳೂರು ವಿಭಾಗದಲ್ಲಿ ಯಾವುದೇ ಪರಿಣಾಮ ಬೀರಿಲ್ಲ.

ನಿತ್ಯ ಸಂಚರಿಸುತ್ತಿದ್ದ ಎಲ್ಲ ಬಸ್‌ಗಳು ಇಂದೂ ಸಹ ಸಂಚರಿಸುತ್ತಿವೆ. ಬಸ್‌ ಸೇವೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ ಎಂದು ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಸಾರಿಗೆ ಮುಷ್ಕರ: ಜನಜೀವನ ಅಸ್ತವ್ಯಸ್ತ

ದಾವಣಗೆರೆ: ಸಾರಿಗೆ ಮುಷ್ಕರದ ಪರಿಣಾಮ ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಬಸ್ ಸೌಲಭ್ಯ ಸಿಗದೇ ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳು ಪರದಾಡಿದರು.

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇದೆ. ಮುಷ್ಕರದ ಅರಿವಿಲ್ಲದೇ ಬಂದಿರುವ ಪ್ರಯಾಣಿಕರು ಬಸ್‌ಗೆ ಕಾಯುತ್ತಿದ್ದಾರೆ. ಬೆಂಗಳೂರು ಸೇರಿದಂತೆ ಕೆಲವೇ ನಗರಗಳಿಗೆ ಬಸ್ ಸೇವೆ ಒದಗಿಸುತ್ತಿವೆ.

ಬೆಂಗಳೂರು | ಸಾರಿಗೆ ಮುಷ್ಕರ: ತರಬೇತಿ ಚಾಲಕರು ಕರ್ತವ್ಯಕ್ಕೆ; ಇವಿ ವಾಹನಗಳ ಬಳಕೆ

ಸಾರಿಗೆ ಮುಷ್ಕರ; ಪ್ರಯಾಣಿಕರ ಪರದಾಟ

ಬೀದರ್: ವೇತನ ಪರಿಷ್ಕರಿಸುವುದು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ ಬೀದರ್ ವಿಭಾಗದ ನೌಕರರು ಕೆಲಸ ಸ್ಥಗಿತಗೊಳಿಸಿ ಮುಷ್ಕರ ನಡೆಸುತ್ತಿರುವುದರಿಂದ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ಮೈಸೂರು: ಬಸ್ ಸಂಚಾರ ಸ್ತಬ್ಧ

ಮೈಸೂರು: ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರ ಕಾರಣ ಮಂಗಳವಾರ ನಗರ ಬಸ್ ಸಂಚಾರ ಸ್ತಬ್ಧವಾಗಿದ್ದರೆ, ಗ್ರಾಮಾಂತರ ಭಾಗದಲ್ಲಿ ಅರ್ಧದಷ್ಟು ಬಸ್ ಗಳು ಕಾರ್ಯಾಚರಿಸಿದವು.

ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಹಮ್ಮಿಕೊಂಡಿರುವ ಮುಷ್ಕರಕ್ಕೆ ಜಿಲ್ಲೆಯ ಕೆಎಸ್‌ಆರ್‌ಟಿಸಿ ಕಾರ್ಮಿಕ ಸಂಘಟನೆಗಳು ಬೆಂಬಲ ನೀಡಿದ್ದು, ಜಿಲ್ಲೆಯಲ್ಲಿ ಬಸ್ ಸಂಚಾರ ಭಾಗಶಃ ಸ್ತಬ್ಧವಾಗಿತ್ತು.

KSRTC Strike |ಕಾಂಗ್ರೆಸ್ ಸರ್ಕಾರಕ್ಕೆ ಚೆಲ್ಲಾಟ; ಜನಸಾಮಾನ್ಯರಿಗೆ ಪರದಾಟ: ಅಶೋಕ

ಕೆಎಸ್‌ಆರ್‌ಟಿಸಿ ಬಸ್ ಸಂಪೂರ್ಣ ಬಂದ್‌: ಖಾಸಗಿ ಬಸ್‌ಗಳಲ್ಲಿ ಪ್ರಯಾಣ

ಚಿಕ್ಕಮಗಳೂರು: ಕೆಎಸ್ಆರ್‌ಟಿಸಿ ನೌಕರರ ಮುಷ್ಕರದಿಂದ ಬಸ್ ಇಲ್ಲವಾಗಿದ್ದು, ಖಾಸಗಿ ಬಸ್‌ಗಳಲ್ಲಿ ಜನ ಪ್ರಯಾಣ ಮಾಡುತ್ತಿದ್ದಾರೆ. ಚಿಕ್ಕಮಗಳೂರು ಡಿಪೊದಲ್ಲೇ 150ಕ್ಕೂ ಹೆಚ್ಚು ಬಸ್‌ಗಳು ನಿಂತಿವೆ. ಜಿಲ್ಲೆಯ ಆರು ಡಿಪೊಗಳ 560 ಬಸ್‌ಗಳು ಸಂಚಾರ ಸಂಪೂರ್ಣ ಸ್ಥಗಿತವಾಗಿದೆ.

ಸಾರಿಗೆ ಮುಷ್ಕರ: ಪ್ರಯಾಣಿಕರ ಪರದಾಟ

ವಿಜಯಪುರ: ರಸ್ತೆ ಸಾರಿಗೆ ನಿಗಮಗಳ ನೌಕರರು ಮಂಗಳವಾರ ಬೆಳಿಗ್ಗೆಯಿಂದಲೇ ಮುಷ್ಕರ ಅರಂಭಿಸಿದ ಪರಿಣಾಮ ಶಾಲಾ, ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಬಸ್ ಗಳಿಲ್ಲದೇ ಪರದಾಡಿದರು.

ಹುಣಸಗಿ: ರಸ್ತೆಗೆ ಇಳಿಯದ ಬಸ್‌ಗಳು

ಹುಣಸಗಿ (ಯಾದಗಿರಿ ಜಿಲ್ಲೆ): ಸಾರಿಗೆ ಸಂಸ್ಥೆಯ ನೌಕರರ ಮುಷ್ಕರಕ್ಕೆ ಹುಣಸಗಿಯಲ್ಲಿ ಬೆಂಬಲ ವ್ಯಕ್ತವಾಗಿದೆ.

ಹುಣಸಗಿ ಬಸ್ ನಿಲ್ದಾಣದಿಂದ ಒಂದು ಬಸ್ ಕೂಡ ರಸ್ತೆಗಳಿದಿಲ್ಲ. ಭಾನುವಾರ ರಾತ್ರಿ ಬಸ್‌ಗಳನ್ನು ಬಸ್ ನಿಲ್ದಾಣದಲ್ಲಿ ನಿಲ್ಲಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಬಸ್ ನಿಲ್ದಾಣ, ಬಸವೇಶ್ವರ ವೃತ್ತ, ಮಹಾಂತಸ್ವಾಮಿ ವೃತ್ತಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಕೊಪ್ಪಳ ವಿ.ವಿ. ಪರೀಕ್ಷೆ ಮುಂದೂಡಿಕೆ

ಸಾರಿಗೆ ನೌಕರರ ಸಂಘಟನೆಗಳು ಮುಷ್ಕರವಿದ್ದರೂ ಕೊಪ್ಪಳ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿಗಳ ಎರಡನೇ ಸೆಮಿಸ್ಟರ್‌ ಪರೀಕ್ಷೆ ಮಂಗಳವಾರ ನಿಗದಿಯಾಗಿತ್ತು. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿತ್ತು.

ನೌಕರರ ಮುಷ್ಕರ: ಕೊಡಗು ಜಿಲ್ಲೆಯ ಒಳಗೆ ಸಂಚಾರ ಸುಗಮ, ಹೊರ ಜಿಲ್ಲೆಯ ಬಸ್‌ಗಳ ಸಂಚಾರಕ್ಕೆ ತೊಂದರೆ

ಮಡಿಕೇರಿ: ಕೊಡಗು ಜಿಲ್ಲೆಯ ಒಳಗೆ ಬೆಳಿಗ್ಗೆಯಿಂದ 9 ಗಂಟೆಯವರೆಗೆ ಸಂಚರಿಸಬೇಕಿದ್ದ ಎಲ್ಲ 42 ಕೆ ಎಸ್ ಆರ್ ಟಿ ಸಿ ಬಸ್ ಗಳೂ ಸಂಚಾರ ನಡೆಸಿವೆ. ಜಿಲ್ಲೆಯ ಒಳಗೆ ಕೆ ಎಸ್ ಆರ್ ಟಿ ಸಿ ನೌಕರರ ಮುಷ್ಕರದ ಬಿಸಿ ತಟ್ಟಿಲ್ಲ.

ಆದರೆ, ಹಾಸನ ಮತ್ತು ಮೈಸೂರು ಭಾಗಕ್ಕೆ ತೆರಳಬೇಕಾದ ಬಸ್‌ಗಳು ಸಂಚರಿಸಲಾಗದೆ ಕುಶಾಲನಗರದಲ್ಲೆ ನಿಂತಿವೆ. ಇದರಿಂದ ಹೊರ ಜಿಲ್ಲೆಗೆ ಹೋಗಬೇಕಾದ ಪ್ರಯಾಣಿಕರು ಪರದಾಡುವಂತಾಗಿದೆ‌.

ತುಮಕೂರು | ಕೆಎಸ್ಆರ್ ಟಿಸಿ ಮುಷ್ಕರ: ಪರೀಕ್ಷೆ ಮುಂದೂಡಿಕೆ

ಕೆಎಸ್ಆರ್ ಟಿಸಿ ನೌಕರರ ಮುಷ್ಕರ ಕಾರಣದಿಂದ ತುಮಕೂರು ವಿಶ್ವವಿದ್ಯಾಲಯದ ಪರೀಕ್ಷೆ ಮುಂದೂಡಲಾಗಿದೆ. ಮಂಗಳವಾರ ನಡೆಯಬೇಕಾಗಿದ್ದ ಎಲ್ಲ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಮರು ನಿಗದಿಯಾದ ದಿನಾಂಕಗಳನ್ನು ಮುಂದೆ ತಿಳಿಸಲಾಗುವುದು ಎಂದು ಪರೀಕ್ಷಾಂಗ ಕುಲ ಸಚಿವರು ತಿಳಿಸಿದ್ದಾರೆ.

ತುಮಕೂರು: ಕೆಎಸ್ಆರ್ ಟಿಸಿ ನೌಕರರ ಮುಷ್ಕರ- ಬಸ್ ಸಂಚಾರ ವಿರಳ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕೆಎಸ್ಆರ್ ಟಿಸಿ ನೌಕರರು ಮುಷ್ಕರ ಆರಂಭಿಸಿದ್ದು, ಜಿಲ್ಲೆಯಲ್ಲಿ ಬಸ್ ಗಳ ಸಂಚಾರ ವಿರಳವಾಗಿದೆ.

ಬೆಂಗಳೂರು- ತುಮಕೂರು ಮಧ್ಯೆ ಕೆಕ ಬಸ್ ಗಳು ಸಂಚರಿಸುತ್ತಿವೆ. ಗ್ರಾಮೀಣ ಭಾಗದ ಕಡೆಗೆ ಹೋಗುವ ಬಸ್ ಗಳ ಸಂಖ್ಯೆ ತೀರಾ ಕಡಿಮೆಯಾಗಿದೆ. ಹಳ್ಳಿಗಳಿಗೆ ಹೋಗುವ ಪ್ರಯಾಣಿಕರು ನಗರದ ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾಯುತ್ತಿದ್ದಾರೆ.

ಬೆಳಗಾವಿ: ಶೇ 30ರಷ್ಟು ಬಸ್ಸುಗಳು ಮಾತ್ರ ಕಾರ್ಯಾಚರಣೆ

ಬೆಳಗಾವಿ: ವೇತನ ಪರಿಷ್ಕರಣೆಯೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸ್ಟಾಫ್ ಅಂಡ್ ವರ್ಕರ್ಸ್ ಯೂನಿಯನ್ ವತಿಯಿಂದ ಮಂಗಳವಾರ ಬಸ್ ಮುಷ್ಕರಕ್ಕೆ ಕರೆ ನೀಡಿದ್ದರಿಂದ ಬಹುಪಾಲು ಬಸ್ಸುಗಳೂ ಘಟಕದಿಂದ ಹೊರಬರಲಿಲ್ಲ. ಬೆಳಿಗ್ಗೆಯೇ ಶಾಲೆ, ಕಾಲೇಜು, ನೌಕರಿಗೆ ತೆರಳಬೇಕಾದ ಪ್ರಯಾಣಿಕರು ಪರದಾಡುವಂತಾಗಿದೆ.

ಹಾವೇರಿ: ಸ್ಥಳೀಯ ಬಸ್‌ ಸಂಚಾರ ಯಥಾಪ್ರಕಾರ, ಹೊರ ಜಿಲ್ಲೆ ವ್ಯತ್ಯಯ

ಹಾವೇರಿ: ವೇತನ ಹಿಂಬಾಕಿ ಪಾವತಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನಿಗಮಗಳ ನೌಕರರು ಮುಷ್ಕರಕ್ಕೆ ಕರೆ ನೀಡಿದ್ದು, ಹಾವೇರಿಯಲ್ಲಿ ಮಾತ್ರ ಸ್ಥಳೀಯ ಬಸ್‌ಗಳ ಸಂಚಾರ ಯಥಾಪ್ರಕಾರ ಮುಂದುವರಿದಿದೆ.

ಮಂಗಳವಾರ ಬೆಳಿಗ್ಗೆಯಿಂದ ಬಸ್‌  ಸಂಚಾರ  ಸ್ಥಗಿತಗೊಳಿಸಿ ಮುಷ್ಕರ ನಡೆಸುವುದಾಗಿ ರಾಜ್ಯ ಮಟ್ಟದ ಸಂಘಟನೆ ಮುಖಂಡರು ತಿಳಿಸಿದ್ದರು. ಆದರೆ, ಹಾವೇರಿ ಜಿಲ್ಲೆಯ ಬಹುತೇಕ ನೌಕರರು ಬೆಳಿಗ್ಗೆಯೇ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ರಾಯಚೂರು | ಸಾರಿಗೆ ನೌಕರರ ಮುಷ್ಕರ: ಪ್ರಯಾಣಿಕರ ಪರದಾಟ

ರಾಯಚೂರು: ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶೇ 50ರಷ್ಟು ಬಸ್ ಗಳು ಮಾತ್ರ ಸಂಚಾರಕ್ಕೆ ಇಳಿದಿವೆ. ರಾಯಚೂರಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇದೆ. ಆಂಧ್ರಪ್ರದೇಶ ಹಾಗೂ ತೆಲಂಗಾಣದ ಬಸ್‌ಗಳು ಓಡಾಡುತ್ತಿವೆ.

ರಸ್ತೆ ಸಾರಿಗೆ ನೌಕರರ ಮುಷ್ಕರ ಇದೆ ಎಂದು ಮೊದಲೇ ತಿಳಿದ ಕಾರಣ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿಲ್ಲ. ಪ್ರೌಢಶಾಲೆ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ.

ಧಾರವಾಡ: ಬಸ್ ಸಂಚಾರ ಸಂಪೂರ್ಣ ಸ್ಥಗಿತ

ಧಾರವಾಡ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಸ್ತೆ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದು, ಹುಬ್ಬಳ್ಳಿ-ಧಾರವಾಡ ಅವಳಿನಗರ ಸಂಪರ್ಕದ ಬಿಆರ್ ಟಿಎಸ್ ಚಿಗರಿ ಬಸ್ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ.

ನಗರ ಸಾರಿಗೆ ಮತ್ತು ರಸ್ತೆ ಸಾರಿಗೆ ಕೆಲವು ಬಸ್ ಗಳು ಸಂಚರಿಸುತ್ತಿವೆ. ವಿದ್ಯಾರ್ಥಿಗಳು ಮತ್ತು ಕಚೇರಿಗಳಿಗೆ ತೆರಳುವ ನೌಕರರು, ಪ್ರಯಾಣಿಕರು ಬಸ್ ಗಾಗಿ ಕಾಯುತ್ತಿದ್ದಾರೆ.

ಸರ್ಕಾರಿ ಬಸ್‌ಗೆ ಕಲ್ಲು ತೂರಿದ ಕಿಡಿಗೇಡಿಗಳು  

ಕೊಪ್ಪಳ: ಸಾರಿಗೆ ನೌಕರರ ಸಂಘಟನೆಗಳು ಮುಷ್ಕರಕ್ಕೆ ಕರೆ ಕೊಟ್ಟಿದ್ದರೂ ಕೆಲ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದರಿಂದ ಆಕ್ರೋಶಗೊಂಡ ಕಿಡಿಗೇಡಿಗಳು ಜಿಲ್ಲೆಯ ಕುಕನೂರು ಬಳಿ ಬಸ್‌ಗೆ ಕಲ್ಲು ತೂರಿದ್ದಾರೆ. ಸೋಮವಾರ ರಾತ್ರಿ ಯಲಬುರ್ಗಾ ಡಿಪೊದ ಬಸ್‌ ಯಲಬುರ್ಗಾದಿಂದ ಬೆಂಗಳೂರಿಗೆ ತೆರಳುವಾಗ ಈ ಘಟನೆ ನಡೆದಿದೆ. ಕಲ್ಲು ತೂರಿದ್ದರಿಂದ ಬಸ್‌ನ ಮುಂಭಾಗದ ಗಾಜಿಗೆ ಹಾನಿಯಾಗಿದೆ.

ಯಾದಗಿರಿ | ಸಾರಿಗೆ ನೌಕರರ ಮುಷ್ಕರ: ಪ್ರಯಾಣಿಕರ ಪರದಾಟ

ಯಾದಗಿರಿ: ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಂಗಳವಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಕರೆ ನೀಡಿದ್ದ ಮುಷ್ಕರಕ್ಕೆ ಯಾದಗಿರಿಯಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ.

ಹೊಸ ಬಸ್ ನಿಲ್ದಾಣ ಹಾಗೂ ಹಳೇ ಬಸ್ ನಿಲ್ದಾಣದಲ್ಲಿ ಬೆರಳೆಣಿಕೆಯಷ್ಟು ಬಸ್‌ಗಳು ಮಾತ್ರವೇ ಕಾರ್ಯಚರಣೆ ನಡೆಸುತ್ತಿವೆ. ಮುಷ್ಕರದ ಬಗ್ಗೆ ತಿಳಿಯದೆ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರು ಪರದಾಡುತ್ತಿದ್ದಾರೆ.

ಮೈಸೂರು | ಸಾರಿಗೆ ಮುಷ್ಕರ: ಬಸ್ ಸಂಚಾರ ಬಹುತೇಕ ಸ್ತಬ್ಧ

ಸಾರಿಗೆ ಮುಷ್ಕರ: ಬಸ್ ಸಂಚಾರ ಬಹುತೇಕ ಸ್ತಬ್ಧ, ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಹಮ್ಮಿಕೊಂಡಿರುವ ಮುಷ್ಕರದ ಹಿನ್ನೆಲೆಯಲ್ಲಿ ಸಾರಿಗೆ ಬಸ್ ಗಳ‌ ಓಡಾಟ ಬಹುತೇಕ ಸ್ತಬ್ಧಗೊಂಡಿದೆ. ಮೈಸೂರಿನ ಸುಬರ್ಬ್ ಬಸ್ ನಿಲ್ದಾಣದಲ್ಲಿ‌ ಖಾಸಗಿ ಬಸ್‌ಗಳನ್ನು ಕರೆಯಿಸಿ ಪ್ರಯಾಣಿಕರಿಗೆ ಅನುಕೂಲ ‌ಮಾಡಿ‌ ಕೊಡಲಾಗಿದೆ.

ಮೈಸೂರಿನ ಸುಬರ್ಬ್ ಬಸ್ ನಿಲ್ದಾಣ

ಮುಷ್ಕರಕ್ಕೆ ದೊರೆಯದ ಉತ್ತಮ ಪ್ರತಿಕ್ರಿಯೆ: ಎಂದಿನಂತೆ ಬಸ್ ಸಂಚಾರ; ಪ್ರಯಾಣಿಕರ ಸಂಖ್ಯೆ ಕಡಿಮೆ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪು ಜಿಲ್ಲೆಯಲ್ಲಿ ಕೆಎಸ್ ಆರ್ ಟಿಸಿ ಸಿಬ್ಬಂದಿ ಮುಷ್ಕರಕ್ಕೆ ದೊಡ್ಡ ಪ್ರಮಾಣದಲ್ಲಿ ಬೆಂಬಲ ವ್ಯಕ್ತವಾಗಿಲ್ಲ. ಶೇ 70ರಷ್ಟು ಬಸ್ ಗಳು ಈಗಾಗಲೇ ಸಂಚಾರಕ್ಕೆ ಇಳಿದಿವೆ. ಆದರೆ ಪ್ರಯಾಣಿಕರ ಸಂಖ್ಯೆ ಕಡಿಮೆ ಇದೆ. ಬಂದ್ ಇದೆ ಎನ್ನುವುದನ್ನು ತಿಳಿದು ಬಹಳಷ್ಟು ಪ್ರಯಾಣಿಕರು ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ರಸ್ತೆಗಿಳಿಯದ ಬಸ್‌ಗಳು; ಪರೀಕ್ಷೆ ಇರುವ ಕೊಪ್ಪಳ ವಿ.ವಿ. ವಿದ್ಯಾರ್ಥಿಗಳಿಗೆ ಸಂಕಷ್ಟ

ಸಾರಿಗೆ ನೌಕರರ ಮುಷ್ಕರ: ಹುಬ್ಬಳ್ಳಿಯಲ್ಲಿ ಪ್ರಯಾಣಿಕರ ಪರದಾಟ

ಹುಬ್ಬಳ್ಳಿ: ವೇತನ ಪರಿಷ್ಕರಣೆ ಹಾಗೂ ಇತರ ಬೇಡಿಕೆ ಈಡೇರಿಕೆಗಾಗಿ ಸಾರಿಗೆ ನೌಕರರು ಹಮ್ಮಿಕೊಂಡಿರುವ ಮುಷ್ಕರಕ್ಕೆ ಹುಬ್ಬಳ್ಳಿಯಲ್ಲಿ ಬೆಂಬಲ ವ್ಯಕ್ತವಾಗಿದೆ.

ಹುಬ್ಬಳ್ಳಿ:

ಬಾಗಲಕೋಟೆ: ವೇತನ ಪರಿಷ್ಕರಣೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಂಗಳವಾರ ಬೆಳಿಗ್ಗೆಯಿಂದ ಮುಷ್ಕರ ಆರಂಭಿಸಿದ್ದಾರೆ. ಪ್ರಯಾಕ್ಕೆ ಬಸ್ ಗಳಿಲ್ಲದೆ ಪ್ರಯಾಣಿಕರು ಪರದಾಡುತ್ತಿದ್ದಾರೆ.

ಪ್ರಯಾಣಕ್ಕೆ ತೊಂದರೆ...

ಬೆಂಗಳೂರು: ರಾಜ್ಯದ ನಾಲ್ಕು ಸಾರಿಗೆ ನಿಗಮಗಳು (ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಮತ್ತು ಕೆಕೆಆರ್‌ಟಿಸಿ)ಗಳ ಸಾರಿಗೆ ನೌಕರರು ಮುಷ್ಕರ ಆರಂಭಿಸಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಪ್ರಯಾಣಕ್ಕೆ ತೊಂದರೆಯಾಗಿದೆ...

ವಿಜಯನಗರ ಜಿಲ್ಲೆಯಲ್ಲಿ ಬಸ್‌ ಸಂಚಾರಕ್ಕೆ ಧಕ್ಕೆ ಇಲ್ಲ

ಹೊಸಪೇಟೆ  (ವಿಜಯನಗರ): ವೇತನ ಹಿಂಬಾಕಿ ಪಾವತಿ,  ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಸಾರಿಗೆ ನಿಗಮಗಳ ನೌಕರರು ಮಂಗಳವಾರ ಬೆಳಿಗ್ಗೆಯಿಂದ ಬಸ್‌  ಸಂಚಾರ  ಸ್ಥಗಿತಗೊಳಿಸಿ ಮುಷ್ಕರ ನಡೆಸುವುದಾಗಿ ತಿಳಿಸಿದ್ದರೂ, ನಗರದಲ್ಲಿ ಹಾಗೂ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಬೆಳಿಗ್ಗೆಯಿಂದಲೇ ಬಸ್‌ ಸಂಚಾರ ಸಹಜವಾಗಿದೆ.

ಹೊಸಪೇಟೆ  ಬಸ್‌ ನಿಲ್ದಾಣ

ಕಲಬುರಗಿ | ಸಾರಿಗೆ ಮುಷ್ಕರ: ಬಸ್ ಸಂಚಾರ ಬಹುತೇಕ ಸ್ತಬ್ಧ

ಕಲಬುರಗಿ: ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಹಮ್ಮಿಕೊಂಡಿರುವ ಮುಷ್ಕರದ ಹಿನ್ನೆಲೆಯಲ್ಲಿ ಸಾರಿಗೆ ಬಸ್ ಗಳ‌ ಓಡಾಟ ಬಹುತೇಕ ಸ್ತಬ್ಧ ಸ್ತಬ್ಧಗೊಂಡಿದೆ.

ನಗರದಿಂದ ವಿವಿಧೆಡೆ ಹೋಗಬೇಕಿದ್ದ ನೂರಾರು ಬಸ್‌ಗಳ ಪೈಕಿ ಕೆಲವೇ ಕೆಲವು ಬಸ್‌ಗಳು ಸಂಚರಿಸಿದವು. ಬಸ್‌ ಚಾಲಕರು ಬಸ್‌ಗಳ ಮಾರ್ಗದ‌ ಬೋರ್ಡ್ ತೆಗೆದು ಸಂಚರಿಸಿದವು. ಆದರೆ, ಸಾಮಾನ್ಯ ‌ದಿನಗಳಲ್ಲಿ ಇದ್ದಂತೆ ಬಸ್ ನಿಲ್ದಾಣದಲ್ಲಿ ಬಸ್ ಗಳು ಸಾಲುಗಟ್ಟಿಲ್ಲ. ಬಸ್‌ಗಳ ಕೊರತೆಯಿಂದ ಪ್ರಯಾಣಿಕರು ಪರದಾಡುತ್ತಿದ್ದಾರೆ. ಹಲವು ಪ್ರಯಾಣಿಕರು ಬಸ್ ಇಲ್ಲದ್ದರಿಂದ‌ ಖಾಸಗಿ ವಾಹನ ಗಳ ಮೊರೆ ಹೋದರೆ, ಮತ್ತೆ ಕೆಲವರು ಮನೆಗಳತ್ತ ಹೆಜ್ಜೆ ಹಾಕಿದರು.

 ಶಿವಮೊಗ್ಗದಲ್ಲಿ ಮಿಶ್ರ ಪ್ರತಿಕ್ರಿಯೆ, ksrtc ದೈನಂದಿನ ಕಾರ್ಯಾಚರಣೆಯಲ್ಲಿ ವ್ಯತ್ಯಯ

ವೇತನ ಪರಿಷ್ಕರಣೆ ಸೇರಿದಂತೆ ಬೇರೆ ಬೇರೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸಾರಿಗೆ ಒಕ್ಕೂಟಗಳ ಜಂಟಿ ಕ್ರಿಯಾ ಸಮಿತಿ ಕರೆ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಶಿವಮೊಗ್ಗ ಜಿಲ್ಲೆಯಲ್ಲಿ ಸಾರಿಗೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಂಸ್ಥೆಯ ಕಾಯಂ ನೌಕರರು ಕರ್ತವ್ಯಕ್ಕೆ ಹಾಜರಾಗದ ಕಾರಣ ಶೇ 60 ರಷ್ಟು ಕೆಎಸ್ ಆರ್ ಟಿಸಿ ಬಸ್ ಗಳು ರಸ್ತೆಗೆ ಇಳಿಯಲಿಲ್ಲ.

 ಶಿವಮೊಗ್ಗ ಬಸ್‌ ನಿಲ್ದಾಣ

ವೇತನ ಪರಿಷ್ಕರಣೆ ಸೇರಿದಂತೆ ಬೇರೆ ಬೇರೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸಾರಿಗೆ ಒಕ್ಕೂಟಗಳ ಜಂಟಿ ಕ್ರಿಯಾ ಸಮಿತಿ ಕರೆ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರದಿಂದ ರಾಜ್ಯದೆಲ್ಲಡೆ ಬಸ್ ಸಂಚಾರ ಸ್ಥಗಿತಗೊಂಡಿದೆ. ದಿನದ ಎಲ್ಲಾ ಬೆಳವಣಿಗೆಗಳ ಅಪ್‌ಡೇಟ್‌ ಇಲ್ಲಿ ಕೊಡಲಾಗುತ್ತದೆ.

ಬೆಂಗಳೂರು: ವೇತನ ಪರಿಷ್ಕರಣೆ ಸೇರಿದಂತೆ ಬೇರೆ ಬೇರೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸಾರಿಗೆ ಒಕ್ಕೂಟಗಳ ಜಂಟಿ ಕ್ರಿಯಾ ಸಮಿತಿ ಕರೆ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರದಿಂದ ಸಾರಿಗೆ ಬಸ್‌ಗಳ ಸಂಚಾರ ಬಹುತೇಕ ಸ್ತಬ್ಧ ಸ್ತಬ್ಧಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.