ADVERTISEMENT

ನಾಮಪತ್ರ ವಾಪಸ್‌: ಶರತ್‌ಗೆ ಗಡುವು

ಬಿಜೆಪಿ ಚುನಾವಣಾ ಉಸ್ತುವಾರಿಗಳ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಲಿಂಬಾವಳಿ ಮಾಹಿತಿ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 13:41 IST
Last Updated 1 ಡಿಸೆಂಬರ್ 2019, 13:41 IST

ಬೆಂಗಳೂರು: ‘ಉಪಚುನಾವಣೆ ನಡೆಯುವ ಕ್ಷೇತ್ರಗಳಲ್ಲಿದ್ದ ಸಣ್ಣ– ಪುಟ್ಟ ಗೊಂದಲಗಳು ನಿವಾರಣೆಯಾಗಿವೆ. ಹೊಸಕೋಟೆ ಬಂಡಾಯ ಅಭ್ಯರ್ಥಿ ಶರತ್‌ ಬಚ್ಚೇಗೌಡ ಅವರಿಗೆ ಗುರುವಾರ ಸಂಜೆಯೊಳಗೆ ನಾಮಪತ್ರ ಹಿಂದಕ್ಕೆ ಪಡೆಯಲು ಸೂಚನೆ ನೀಡಲಾಗಿದೆ’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಹೇಳಿದರು.

ಬಿಜೆಪಿ ಕಚೇರಿಯಲ್ಲಿ ಬುಧವಾರ 15 ಕ್ಷೇತ್ರಗಳ ಚುನಾವಣಾ ಉಸ್ತುವಾರಿಗಳ ಸಭೆಯ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ‘ಶರತ್‌ ನಾಮಪತ್ರ ಹಿಂದಕ್ಕೆ ಪಡೆಯದೇ ಇದ್ದರೆ ಅವರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಹೇಳಿದರು.

‘ಸಭೆಯಲ್ಲಿ ಉಸ್ತುವಾರಿಗಳು ತಮ್ಮ ಕ್ಷೇತ್ರಗಳ ಕುರಿತು ವರದಿ ನೀಡಿದ್ದಾರೆ. ವರದಿಗಳಂತೆ ಬಿಜೆ‍ಪಿ ಎಲ್ಲ 15 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಪೂರಕ ವಾತಾವರಣವಿದೆ. ಇದೇ 22 ರಿಂದ ಎಲ್ಲ ಉಸ್ತುವಾರಿಗಳೂ ತಮ್ಮ ಕ್ಷೇತ್ರಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಪ್ರಚಾರದಲ್ಲಿ ತೊಡಗಲಿದ್ದಾರೆ’ ಎಂದರು.

ADVERTISEMENT

‘ಮುಖ್ಯಮಂತ್ರಿ, ಸಚಿವರು, ತಾರಾ ಪ್ರಚಾರಕರು ಈ ತಿಂಗಳ 23 ರಿಂದ 15 ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ನಡೆಸುವರು’ ಎಂದರು.

15 ಕ್ಷೇತ್ರಗಳ ಗೆಲುವಿಗೆ ತಂತ್ರ: ‘ಚುನಾವಣೆ ನಿರ್ವಹಣೆ, ಗೆಲ್ಲುವ ಕಾರ್ಯತಂತ್ರದ ಬಗ್ಗೆ ಚರ್ಚಿಸಲಾಗಿದೆ. ಉಪಚುನಾವಣೆಯಲ್ಲಿ ಹೊಸಕೋಟೆ ಸೇರಿದಂತೆ ಎಲ್ಲ 15 ಕ್ಷೇತ್ರಗಳಲ್ಲೂ ಗೆಲುವು ಸಾಧಿಸಲಿದೆ’ ಎಂದು ಕಂದಾಯ ಸಚಿವ ಆರ್‌. ಅಶೋಕ ಹೇಳಿದರು.

‘ಇತ್ತೀಚೆಗೆ ನಡೆದ ಮಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ವಿವಿಧ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಅತ್ಯುತ್ತಮ ಸಾಧನೆ ತೋರಿಸಿದೆ. ಉಪಚುನಾವಣೆಯಲ್ಲೂ ಆ ಸಾಧನೆ ಪುನರಾವರ್ತನೆಯಾಗಲಿದೆ’ ಎಂದರು.

ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌, ಸಚಿವರಾದ ಜಗದೀಶ ಶೆಟ್ಟರ್‌, ಕೆ.ಎಸ್‌.ಈಶ್ವರಪ್ಪ, ಎಸ್.ಸುರೇಶ್‌ ಕುಮಾರ್‌, ಕೋಟಾ ಶ್ರೀನಿವಾಸಪೂಜಾರಿ, ಸಿ.ಟಿ.ರವಿ, ಸಂಸದೆ ಶೋಭಾ ಕರಂದ್ಲಾಜೆ ಮುಂತಾದವರು ಇದ್ದರು.

ಪಾಲಿಕೆ ಸದಸ್ಯರಿಗೆ ಬಿಎಸ್‌ವೈ ಪಾಠ

ಬೆಂಗಳೂರು ನಗರದಲ್ಲಿ ನಾಲ್ಕು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಬಿಎಂಪಿಯ ಪಕ್ಷದ ಎಲ್ಲ ಸದಸ್ಯರೂ ಸಕ್ರಿಯವಾಗಿ ಪಾಲ್ಗೊಂಡು, ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೂಚಿಸಿದ್ದಾರೆ.

ಬೆಂಗಳೂರು ನಗರ ಬಿಜೆಪಿ ಕಚೆರಿಯಲ್ಲಿ ಸಭೆ ಕರೆದಿದ್ದ ಅವರು, ‘ಕೇವಲ ನಾಲ್ಕು ವಿಧಾನಸಭಾ ಕ್ಷೇತ್ರಗಳ ಬಿಬಿಎಂಪಿ ಸದಸ್ಯರು ಮಾತ್ರವಲ್ಲ, ಅಕ್ಕಪಕ್ಕದ ವಿಧಾನಸಭಾ ಕ್ಷೇತ್ರಗಳಲ್ಲಿರುವ ಬಿಬಿಎಂಪಿ ಸದಸ್ಯರು ಸಹ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಕೆಲಸ ಮಾಡಬೇಕು’ ಎಂದರು.

ಬಿಜೆಪಿ ಸೇರಿದ ಬೇಗ್ ಆಪ್ತರು

ಅನರ್ಹ ಶಾಸಕ ರೋಷನ್‌ ಬೇಗ್‌ ಬಿಜೆಪಿ ಸೇರಲಾಗದಿದ್ದರೂ, ಅವರ ಬೆಂಬಲಿಗರು ಬುಧವಾರ ಬಿಜೆಪಿ ಸೇರಿದರು. ಶಿವಾಜಿನಗರ ಕ್ಷೇತ್ರದ ತಮ್ಮ ನಿಷ್ಠಾವಂತ ಬೆಂಬಲಿಗರು ಮತ್ತು ಆಪ್ತರನ್ನು ಬಿಜೆಪಿಗೆ ಸೇರಿಸುವಲ್ಲಿ ಬೇಗ್‌ ಅವರೇ ಮುಂದಾಳತ್ವ ವಹಿಸಿದ್ದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಡಾಲರ್ಸ್‌ ಕಾಲೊನಿಯ ನಿವಾಸಕ್ಕೆ ಬೇಗ್‌ ಭೇಟಿ ನೀಡಿದ ಸಂದರ್ಭದಲ್ಲಿ ತಮ್ಮ ಆಪ್ತರನ್ನು ಕರೆತಂದಿದ್ದರು. ಬಿಎಸ್‌ವೈ ಮತ್ತು ಶಿವಾಜಿನಗರ ಕ್ಷೇತ್ರದ ಅಭ್ಯರ್ಥಿ ಸರವಣ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯೂ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.