ADVERTISEMENT

ಜಿ.ಟಿ.ದೇವೇಗೌಡರ ನಡೆ ನಿಗೂಢ: ಬೆಂಬಲ ಗಿಟ್ಟಿಸಲು ಮೂರೂ ಪಕ್ಷಗಳ ಪ್ರಯತ್ನ

ಹುಣಸೂರು ಕ್ಷೇತ್ರ

ಕೆ.ಓಂಕಾರ ಮೂರ್ತಿ
Published 16 ನವೆಂಬರ್ 2019, 23:14 IST
Last Updated 16 ನವೆಂಬರ್ 2019, 23:14 IST
ಜಿ.ಟಿ.ದೇವೇಗೌಡ
ಜಿ.ಟಿ.ದೇವೇಗೌಡ   

ಮೈಸೂರು: ಹುಣಸೂರು ಉಪಚುನಾವಣೆಗೆ ವೇದಿಕೆ ಸಜ್ಜಾಗಿದ್ದು, ಈ ಭಾಗದ ಪ್ರಭಾವಿ ಮುಖಂಡ, ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡರ ಬೆಂಬಲ ಗಿಟ್ಟಿಸಲು ಮೂರೂ ಪಕ್ಷಗಳು ಪ್ರಯತ್ನ ನಡೆಸಿವೆ.

ಸದ್ಯಕ್ಕೆ ತಟಸ್ಥ ನಿಲುವು ತಳೆದಿರುವ ಅವರ ನಡೆ ನಿಗೂಢವಾಗಿದೆ. ಮಾತೃಪಕ್ಷ ಜೆಡಿಎಸ್‌ ಚಟುವಟಿಕೆಗಳಿಂದ ದೂರವೇ ಉಳಿದಿದ್ದು, ಮೈಸೂರಿಗೆ ಭೇಟಿ ನೀಡಿದ ಪಕ್ಷದ ವರಿಷ್ಠರಾದ ಎಚ್‌.ಡಿ.ದೇವೇಗೌಡ, ಎಚ್‌.ಡಿ.ಕುಮಾರಸ್ವಾಮಿ ಅವರ ಸಂಪರ್ಕಕ್ಕೂ ಸಿಗುತ್ತಿಲ್ಲ. ಈ ಉಪಚುನಾವಣೆ ಬಳಿಕ ಪ್ರಮುಖ ನಿರ್ಧಾರವೊಂದನ್ನು ತೆಗೆದುಕೊಳ್ಳಲಿದ್ದಾರೆ ಎಂಬುವುದ ಅವರ ಆಪ್ತ ವಲಯದ ಮಾತು.

ಬಿಜೆಪಿ ಪರ ತುಸು ಮೃದು ಧೋರಣೆ ತಳೆದಿರುವುದರಿಂದ, ಅವರ ಬೆಂಬಲ ಗಿಟ್ಟಿಸಲು ಸಂಸದರಾದ ವಿ.ಶ್ರೀನಿವಾಸಪ್ರಸಾದ್‌, ಪ್ರತಾಪಸಿಂಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಪ್ರಯತ್ನ ನಡೆಸಿದ್ದಾರೆ.

ADVERTISEMENT

ಸಿ.ಎಚ್‌.ವಿಜಯಶಂಕರ್‌ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರುತ್ತಿದ್ದಂತೆ, ಚಾಮುಂಡೇಶ್ವರಿ ಕ್ಷೇತ್ರದ ತಮ್ಮ ಎದುರಾಳಿ ಜಿ.ಟಿ.ದೇವೇಗೌಡರ ಬೆಂಬಲ ಗಿಟ್ಟಿಸಲು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ತಂತ್ರಗಾರಿಕೆ ನಡೆಸಿದ್ದಾರೆ ಎನ್ನಲಾಗಿದೆ.

ಒಕ್ಕಲಿಗ ಸಮುದಾಯದ ಪ್ರಾಬಲ್ಯವಿರುವ ಹುಣಸೂರು ಕ್ಷೇತ್ರದಲ್ಲಿ 1998 (ಉಪಚುನಾವಣೆ), 2004ರಲ್ಲಿ ಜಿ.ಟಿ.ದೇವೇಗೌಡ ಗೆಲುವು ಸಾಧಿಸಿದ್ದರು. ಈಗಲೂ ಪ್ರಭಾವ ಉಳಿಸಿಕೊಂಡಿದ್ದಾರೆ. ಅವರ ಪತ್ನಿ ಕೂಡ ಈ ಭಾಗದಲ್ಲಿ ಗೆದ್ದು ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದರು.

‘ಹುಣಸೂರು ನನ್ನ ಇಷ್ಟದ ಕ್ಷೇತ್ರ. ನನ್ನ ಮಾತು ನಡೆಯುತ್ತದೆ ಎಂಬುದೂ ಗೊತ್ತು. ಹೀಗಾಗಿ, ಎಲ್ಲಾ ಪಕ್ಷಗಳು ನನ್ನ
ಬೆಂಬಲ ಕೋರುತ್ತಿವೆ. ಎಲ್ಲರಿಗೂ ಶುಭವಾಗಲಿ ಎಂದಷ್ಟೇ ಹೇಳಿ ಕಳಿಸಿದ್ದೇನೆ. ಜೆಡಿಎಸ್‌ ಪರ ಪ್ರಚಾರ ನಡೆಸುವುದಿಲ್ಲವೆಂದು ದೊಡ್ಡಗೌಡರಿಗೆ ಹೇಳಿದ್ದೇನೆ. ಮುಂದೆ ಸುಧಾರಿಸಿಕೊಂಡು ಉತ್ತಮ ನಿರ್ಧಾರ ತೆಗೆದುಕೊಳ್ಳುತ್ತೇನೆ’ ಎಂದು ಜಿ.ಟಿ.ದೇವೇಗೌಡ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

2018ರ ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ಪುತ್ರ ಜಿ.ಡಿ.ಹರೀಶ್‌ ಗೌಡಗೆ ಟಿಕೆಟ್‌ ತಪ್ಪಿದ ಅಸಮಾಧಾನವಿದೆ. ಈ ಬಾರಿಯೂ ಸ್ಪರ್ಧೆ ಸಂಬಂಧ ತಮ್ಮನ್ನು ಜೆಡಿಎಸ್‌ನ ಯಾರೂ ಸಂಪರ್ಕಿಸಿಲ್ಲವೆಂದು ಹಲವು ವೇದಿಕೆಗಳಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಅವರು, ‘ಈ ಕ್ಷೇತ್ರದಲ್ಲಿ ಜೆಡಿಎಸ್‌ ಸೋಲುತ್ತದೆ; ಕಾಂಗ್ರೆಸ್‌ ಗೆಲ್ಲುತ್ತದೆ’ ಎಂಬ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ.

ಈ ಬಾರಿ ಹುಣಸೂರಿನಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಬಿಜೆಪಿಯಿಂದ ಅನರ್ಹ ಶಾಸಕ ಎಚ್‌.ವಿಶ್ವನಾಥ್‌, ಕಾಂಗ್ರೆಸ್‌ನಿಂದ ಮಾಜಿ ಶಾಸಕ ಎಚ್‌.ಪಿ.ಮಂಜುನಾಥ್‌ ಹಾಗೂ ಜೆಡಿಎಸ್‌ನಿಂದ ಗುತ್ತಿಗೆದಾರ ದೇವರಹಳ್ಳಿ ಸೋಮಶೇಖರ್‌ ಕಣದಲ್ಲಿದ್ದಾರೆ. 2018ರ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಮೂರೂ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ಗೆಲುವು ಸಾಧಿಸುವಲ್ಲಿ ಜೆಡಿಎಸ್‌ ಯಶಸ್ವಿಯಾಗಿತ್ತು.

*
ಕೆಲವರ ವರ್ತನೆಯಿಂದ ತುಂಬಾ ನೊಂದಿದ್ದೇನೆ. ರಾಜಕೀಯವೇ ಬೇಡ ಎಂಬ ಸ್ಥಿತಿಯಲ್ಲಿದ್ದೇನೆ. ಉಪಚುನಾವಣೆಯಲ್ಲಿ ಪೂರ್ಣ ತಟಸ್ಥವಾಗಿರುತ್ತೇನೆ
-ಜಿ.ಟಿ.ದೇವೇಗೌಡ, ಜೆಡಿಎಸ್‌ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.