ಬೆಂಗಳೂರು: ‘ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ದ್ವೇಷಪೂರಿತ ಭಾಷಣಗಳನ್ನು ತಿರಸ್ಕರಿಸಿ, ಸುಳ್ಳು ಪ್ರಚಾರಗಳಿಗೆ ಒಳಗಾಗದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ನಾಯಕತ್ವಕ್ಕೆ ಮತದಾರರು ಮನ್ನಣೆ ನೀಡಿದ್ದಾರೆ’ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಹೇಳಿದ್ದಾರೆ.
ಉಪ ಚುನಾವಣೆಯ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿರುವ ಅವರು, ರಾಜ್ಯ ಬಿಜೆಪಿಯಲ್ಲಿ ಗುಂಪುಗಾರಿಕೆ ಮಿತಿಮೀರಿದ್ದು, ಉಪ ಚುನಾವಣೆಯ ಫಲಿತಾಂಶ ಬಂಡಾಯ ನಾಯಕರಿಗೆ ಮತ್ತಷ್ಟು ಶಕ್ತಿ ನೀಡಿದೆ. ದೆಹಲಿ ದಂಡಯಾತ್ರೆಯ ಮೂಲಕ ಕುರ್ಚಿ ಉಳಿಸಿಕೊಳ್ಳುವ ವಿಜಯೇಂದ್ರ ಅವರ ಪ್ರಯತ್ನ ವಿಫಲವಾಗಿದ್ದು, ಬೆಳಗಾವಿ ಅಧಿವೇಶನಕ್ಕೆ ಮೊದಲೇ ಅವರು ರಾಜೀನಾಮೆ ನೀಡುವ ಅನಿವಾರ್ಯ ಉಂಟಾಗಿದೆ’ ಎಂದಿದ್ದಾರೆ.
‘ಈ ಫಲಿತಾಂಶ ವಿರೋಧ ಪಕ್ಷದ ನಾಯಕ ಆರ್. ಅಶೋಕ ಮತ್ತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತಮ್ಮ ಸ್ಥಾನ ತ್ಯಜಿಸಲು ಮುನ್ನುಡಿ ಬರೆದಿದೆ. ಚುನಾವಣೆಯಲ್ಲಿ ರಾಜ್ಯದ ಅಭಿವೃದ್ಧಿ ಅಥವಾ ಕ್ಷೇತ್ರದ ಅಭಿವೃದ್ಧಿ ವಿಷಯಗಳನ್ನು ಮುನ್ನೆಲೆಗೆ ತರುವ ಬದಲು ಧಾರ್ಮಿಕ ಮತ್ತು ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು ಎಳಸುತನದೊಂದಿಗೆ ಉಪ ಚುನಾವಣೆ ನಡೆಸಿದ ಬಿಜೆಪಿ– ಜೆಡಿಎಸ್ ನಾಯಕರಿಗೆ ಮತದಾರರು ತಮ್ಮ ತೀರ್ಪಿನ ಮೂಲಕ ಮತ್ತೊಮ್ಮೆ ಸರಿಯಾದ ಸಂದೇಶ ನೀಡಿದ್ದಾರೆ’ ಎಂದೂ ಅವರು ಹೇಳಿದ್ದಾರೆ.
‘ತನ್ನ ಆಡಳಿತ ಅವಧಿಯಲ್ಲಿ ಅನೇಕ ಹಗರಣಗಳಿಗೆ ಒಳಗಾಗಿರುವ ಬಿಜೆಪಿ, ನ್ಯಾಯಾಂಗ ತನಿಖೆಯನ್ನು ಒಪ್ಪಿಕೊಂಡು ಆರೋಪಿತರ ಮೇಲೆ ಕ್ರಮ ಕೈಗೊಳ್ಳಲಿ. ಧಾರ್ಮಿಕ ವಿಷಯದ ಮೇಲೆ ಜನರ ದಾರಿ ತಪ್ಪಿಸುವ ಬದಲು ಸರ್ಕಾರದ ಪ್ರಗತಿಪರ ಕಾರ್ಯಕ್ರಮಗಳನ್ನು ಒಪ್ಪಿಕೊಂಡು ಅಭಿವೃದ್ಧಿಯ ನಿಟ್ಟಿನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಸಹಕಾರ ನೀಡಲಿ’ ಎಂದೂ ಅವರು ಸಲಹೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.