ADVERTISEMENT

ಬಿಜೆಪಿ ಸರ್ಕಾರ ರಚನೆಗೆ ಕಾರಣ ಯಾರು? ರೇಣುಕಾಚಾರ್ಯ– ಎಂಟಿಬಿ ವಾಗ್ವಾದ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2020, 10:30 IST
Last Updated 25 ನವೆಂಬರ್ 2020, 10:30 IST
ಎಂ.ಟಿ.ಬಿ.ನಾಗರಾಜ್‌ ಮತ್ತು ಎಂ.ಪಿ.ರೇಣುಕಾಚಾರ್ಯ
ಎಂ.ಟಿ.ಬಿ.ನಾಗರಾಜ್‌ ಮತ್ತು ಎಂ.ಪಿ.ರೇಣುಕಾಚಾರ್ಯ   

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಲ್ಲಿ ಯಾರ ಪಾತ್ರ ದೊಡ್ಡದು ಎಂಬ ಬಿಸಿ ಬಿಸಿ ಚರ್ಚೆಗೆ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ನಾಂದಿ ಹಾಡಿದ್ದಾರೆ. ಬಿಜೆಪಿ 105 ಶಾಸಕರು ಇಲ್ಲದಿದ್ದರೆ ಸರ್ಕಾರದ ರಚನೆಯೇ ಆಗುತ್ತಿರಲಿಲ್ಲ ಎಂದು ಹೇಳಿದ್ದಾರೆ.

ವಿಧಾನಸೌಧದಲ್ಲಿ ಅವರು ನೀಡಿದ ಹೇಳಿಕೆಗೆ ಬಿಜೆಪಿಯ ವಿಧಾನಪರಿಷತ್‌ ಸದಸ್ಯ ಎಂ.ಟಿ.ಬಿ.ನಾಗರಾಜ್‌ ಅವರು ತಿರುಗೇಟು ನೀಡಿದ್ದು, 105 ಶಾಸಕರು ಇದ್ದಾಗ ಸರ್ಕಾರ ರಚನೆ ಏಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದ್ದಾರೆ.

ರೇಣುಕಾಚಾರ್ಯ ಹೇಳಿದ್ದೇನು: ರಾಜ್ಯದಲ್ಲಿ ಬಿಜೆಪಿಯ 105 ಶಾಸಕರು ಇರುವುದರಿಂದಲೇ ಸರ್ಕಾರ ಅಧಿಕಾರಕ್ಕೆ ಬಂದಿದೆ. ನಮಗೆ 17 ಶಾಸಕರ ಬಗ್ಗೆ ಗೌರವವಿದೆ. ಪಕ್ಷದಲ್ಲಿ ಅವರಿಗೆ ಸೂಕ್ತ ಸ್ಥಾನಮಾನಗಳನ್ನು ನೀಡಲಾಗಿದೆ. ಆದರೆ 105 ಜನ ಇಲ್ಲದಿದ್ದರೆ ಸರ್ಕಾರ ಬರುತ್ತಿರಲಿಲ್ಲ ಎಂಬುದನ್ನು ಯಾರೂ ಮರೆಯಬಾರದು ಎಂದು ರೇಣುಕಾಚಾರ್ಯ ಹೇಳಿದ್ದಾರೆ.

ADVERTISEMENT

ಆದ್ದರಿಂದ ಯಾರೂ ನನ್ನಿಂದಲೇ ಸರ್ಕಾರ ಬಂದಿದೆ ಎಂದು ಹೇಳಿಕೊಳ್ಳಬಾರದು. 105 ಶಾಸಕರು ಮೊದಲು, ನಂತರ ಉಳಿದವರು ಎಂದು ಅವರು ತಿಳಿಸಿದ್ದಾರೆ.

ಎಂಟಿಬಿ ನಾಗರಾಜ್‌ ಹೇಳಿದ್ದೇನು?: ಪಕ್ಷದಲ್ಲಿ 105 ಶಾಸಕರು ಇದ್ದಾಗ ಸರ್ಕಾರ ರಚನೆ ಮಾಡಲು ಏಕೆ ಸಾಧ್ಯವಾಗಲಿಲ್ಲ. 17 ಶಾಸಕರು ಬಂದಿದ್ದರಿಂದಲೇ ಸರ್ಕಾರ ರಚನೆ ಮಾಡಲು ಸಾಧ್ಯವಾಗಿದೆ ಎಂಬುದನ್ನು ಮರೆಯಬಾರದು. ನಾವೆಲ್ಲ ನಮ್ಮ ಹಿಂದಿ ಪಕ್ಷಗಳಿಗೆ ರಾಜೀನಾಮೆ ನೀಡಿ ಬಿಜೆಪಿ ಪ್ರಾಥಮಿಕ ಸದಸ್ಯತ್ವ ಪಡೆದಿದ್ದೇವೆ. ಈಗ ನಾವೂ ಕೂಡ ಬಿಜೆಪಿಯವರೇ ಎಂದು ಎಂ.ಟಿ.ಬಿ.ನಾಗರಾಜ್‌ ತಿರುಗೇಟು ನೀಡಿದರು.

ನನ್ನನ್ನು ಸಂಪುಟದಿಂದ ಕೈಬಿಡಲ್ಲ: ‘ನನ್ನನ್ನು ಸಂಪುಟದಿಂದ ಕೈಬಿಡುವುದಿಲ್ಲ. ಯಡಿಯೂರಪ್ಪ ಅವರ ಸಂಪುಟದಲ್ಲಿ ಏಕೈಕ ಮಹಿಳಾ ಸಚಿವೆಯಾಗಿದ್ದೇನೆ. ಹೀಗಾಗಿ ಸಂಪುಟದಿಂದ ಕೈಬಿಡುವುದಿಲ್ಲ ಎಂಬ ವಿಶ್ವಾಸವಿದೆ. ಮಾಧ್ಯಮಗಳಲ್ಲಿ ಮಾತ್ರ ಕೈಬಿಡುತ್ತಾರೆ ಎಂಬ ಸುದ್ದಿ ಬರುತ್ತದೆ. ಯಾವ ಕಾರಣಕ್ಕೆ ಬಿಡುತ್ತಾರೆ ಎಂಬುದನ್ನು ಹೇಳಿ? ಸಚಿವ ಸ್ಥಾನ ಬಿಡಬೇಕು ಎಂಬ ಯಾವುದೆ ಸೂಚನೆ ಪಕ್ಷದ ರಾಷ್ಟ್ರೀಯ ಮಟ್ಟದ ವರಿಷ್ಠರಿಂದಾಗಲಿ, ರಾಜ್ಯ ನಾಯಕರಿಂದ ಬಂದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಹೇಳಿದರು.

ದೆಹಲಿಗೆ ತೆರಳಿದ ಜಾರಕಿಹೊಳಿ
ಜಲಸಂಲನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಬುಧವಾರ ದೆಹಲಿಗೆ ತೆರಳಿದರು. ಪಕ್ಷದ ನಾಯಕರ ಸೂಚನೆ ಮೇರೆಗೆ ದೆಹಲಿಗೆ ಹೊರಟಿದ್ದೇನೆ. ನನಗೆ ರಾಷ್ಟ್ರೀಯ ನಾಯಕರಿಂದಲೇ ಕರೆ ಬಂದಿದೆ ಎಂದು ಜಾರಕಿಹೊಳಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.