ADVERTISEMENT

ಸಂಪುಟ ವಿಸ್ತರಣೆಗೆ ಮುನ್ನವೇ ‘ಅರ್ಹ’ರು–ಸೋತವರ ನಡುವೆ ಒಡಕಿನ ಮಾತು

​ಪ್ರಜಾವಾಣಿ ವಾರ್ತೆ
Published 25 ಜನವರಿ 2020, 19:42 IST
Last Updated 25 ಜನವರಿ 2020, 19:42 IST
   

ಬೆಂಗಳೂರು/ಮೈಸೂರು: ಈವರೆಗೆ ಒಗ್ಗಟ್ಟಿನ ಮಂತ್ರ ಜಪಿಸುತ್ತಲೇ ಬಂದಿದ್ದ ‘ಅರ್ಹ’ ಶಾಸಕರು ಮತ್ತು ಸೋತ ಶಾಸಕರ ಮಧ್ಯೆ ಮೊದಲ ಬಾರಿಗೆ ಒಡಕಿನ ಧ್ವನಿ ಶುರುವಾಗಿವೆ.

ಉಪಚುನಾವಣೆಯಲ್ಲಿ ಗೆದ್ದು ‘ಅರ್ಹ’ರಾದ 11 ಶಾಸಕರ ಪೈಕಿ ಸಚಿವ ಸಂಪುಟ ವಿಸ್ತರಣೆ ವೇಳೆ ಆರು ಮಂದಿಗೆ ಮಾತ್ರ ಸಚಿವ ಸ್ಥಾನ ನೀಡಲಾಗುತ್ತದೆ ಎಂದು ಬಿಜೆಪಿ ವರಿಷ್ಠರು ಸಂದೇಶ ರವಾನಿಸಿದ್ದರು. ಇದೀಗ ಸೋತವರಿಗೆ ಮಂತ್ರಿ ಸ್ಥಾನ ಇಲ್ಲ ಎಂದೂ ಹೇಳಲಾಗುತ್ತಿದೆ.

ಈ ಬೆಳವಣಿಗೆ ಮಧ್ಯೆಯೇ, ಎಲ್ಲ 17 ಮಂದಿಯೂ ಒಗ್ಗಟ್ಟಾಗಿದ್ದೇವೆ ಎಂದು ರಾಜೀನಾಮೆ ಕೊಟ್ಟು ಬಿಜೆಪಿ ಸೇರಿದವರು ಸಾರಿ ಸಾರಿ ಹೇಳಿದ್ದರು.

ADVERTISEMENT

ಒಗ್ಗಟ್ಟಿನ ಮಾತು ಹೇಳಿದ ಮಾರನೇ ದಿನವೇ ಸುತ್ತೂರಿನಲ್ಲಿ ಶಾಸಕ ಎಸ್‌.ಟಿ.ಸೋಮಶೇಖರ್‌ ಮತ್ತು ಮಾಜಿ ಶಾಸಕ ಎಚ್‌.ವಿಶ್ವನಾಥ್‌ ಮಧ್ಯೆ ಮಾತು–ಪ್ರತಿಮಾತು ನಡೆದಿವೆ.

‘ಉಪಚುನಾವಣೆಯಲ್ಲಿ ಈಗ ಸೋತಿರುವವರಿಗೆ ಯಡಿಯೂರಪ್ಪ ಅವರು ಸ್ಪರ್ಧಿಸುವುದು ಬೇಡ. ಸೋತರೆ ಮಂತ್ರಿ ಸ್ಥಾನ ಸಿಗುವುದಿಲ್ಲ ಎಂದಿದ್ದರು. ಚುನಾವಣೆ ನಿಲ್ಲದಿದ್ದರೆ ವಿಧಾನಪರಿಷತ್‌ ಸದಸ್ಯರನ್ನಾಗಿ ಮಾಡಿ ಸಚಿವ ಸ್ಥಾನ ನೀಡುವುದಾಗಿ ಹೇಳಿದ್ದರು. ಅದನ್ನು ಕೇಳದೇ ಚುನಾವಣೆ ಸ್ಪರ್ಧಿಸಿ ಸೋತರು’ ಎಂದು ಸೋಮಶೇಖರ್‌ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಎಚ್‌.ವಿಶ್ವನಾಥ್‌, ‘ಚುನಾವಣೆಗೆ ನಿಲ್ಲಬೇಡಿ ಎಂದು ಯಡಿಯೂರಪ್ಪ ಹೇಳಿದ್ದು ನಿಜ. ಕ್ಷೇತ್ರ ಉಳಿಸಿಕೊಳ್ಳಲು ಚುನಾವಣೆಗೆ ಸ್ಪರ್ಧಿಸಲಾಯಿತು. ಕೊಟ್ಟ ಮಾತು ಏನು ಎಂಬುದು ಅವರಿಗೆ ಗೊತ್ತಿದೆ. ಅದನ್ನು ಉಳಿಸಿಕೊಂಡರೆ ಸಾಕು’ ಎಂದು ತಿರುಗೇಟು ನೀಡಿದ್ದಾರೆ. ‘ಲಕ್ಷ್ಮಣ ಸವದಿ ಅವರನ್ನು ಉಪಮುಖ್ಯ
ಮಂತ್ರಿ ಮಾಡಿದ್ದಾರೆ. ನಾವೇನು ಆ ಸ್ಥಾನ ಕೇಳುತ್ತಿಲ್ಲ’ ಎಂದೂ ಹೇಳಿದರು.

***

ನಾವೇನು ಭಿಕ್ಷೆ ಕೇಳುತ್ತಿಲ್ಲ. ಸೋತವರು ಎಂಬ ಒಂದೇ ಕಾರಣಕ್ಕೆ ಯಾರೂ ಅವಕಾಶಗಳಿಂದ ವಂಚಿತರಾಗಬಾರದು. ನಮ್ಮ ಹಿರಿತನವನ್ನು ಬಳಸಿಕೊಳ್ಳಬೇಕು

– ಎಚ್‌.ವಿಶ್ವನಾಥ್‌, ಮಾಜಿ ಶಾಸಕ

***

ಸೋತವರಿಗೂ ಸಚಿವ ಸ್ಥಾನ ಕೊಡಬೇಕೇ ಬೇಡವೇ ಎಂಬುದು ಮುಖ್ಯಮಂತ್ರಿಯವರ ಪರಮಾಧಿಕಾರ. ಇಂತಹವರಿಗೇ ಸಚಿವ ಸ್ಥಾನ ನೀಡಿ ಅಂತ ಹೇಳಲಾಗದು

– ಎಸ್‌.ಟಿ.ಸೋಮಶೇಖರ್‌, ಶಾಸಕ

ಮುಹೂರ್ತ ಇನ್ನೂ ಅನಿಶ್ಚಿತ

ಸಂಪುಟ ವಿಸ್ತರಣೆ ತಿಂಗಳಾಂತ್ಯಕ್ಕೆ ನಡೆಯಲಿದೆ ಎಂದು ಯಡಿಯೂರಪ್ಪ ಹೇಳಿದ್ದರೂ ಈ ವಿಷಯದಲ್ಲಿ ಬಿಜೆಪಿ ನಾಯಕರಿಗೆ ಇನ್ನೂ ಸ್ಪಷ್ಟತೆ ಇಲ್ಲ. ‘ಅರ್ಹ’ರಿಗೆ ಎಷ್ಟು ಸ್ಥಾನ, ಮೂಲ ಬಿಜೆಪಿಗರಿಗೆ ಎಷ್ಟು ಸ್ಥಾನ ಎಂಬ ವಿಚಾರದಲ್ಲೂ ಗೊಂದಲ ಮುಂದುವರಿದಿದೆ. ಇದು ಬಗೆಹರಿದ ಬಳಿಕವಷ್ಟೇ ದಿನಾಂಕ ನಿಗದಿಯಾಗಲಿದೆ ಎಂದು ಪಕ್ಷದ ಮೂಲಗಳು ಹೇಳಿವೆ.

ಯಡಿಯೂರಪ್ಪ ಅವರನ್ನು ಶನಿವಾರ ಭೇಟಿಯಾದ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಸಂಭಾವ್ಯ ಸಚಿವರ ಪಟ್ಟಿ ಸಿದ್ಧಪಡಿಸುವ ಕುರಿತು ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.