
ಬೆಂಗಳೂರು: ಬಿಹಾರ ಚುನಾವಣೆಯ ಫಲಿತಾಂಶ ಹೊರಬಿದ್ದ ಬೆನ್ನಲ್ಲೆ ರಾಜ್ಯ ಸಚಿವ ಸಂಪುಟ ಪುನರ್ ರಚನೆಯ ಸಾಧ್ಯತೆಗಳ ಕುರಿತು ಕಾಂಗ್ರೆಸ್ ಪಾಳಯದಲ್ಲಿ ಚರ್ಚೆ ನಡೆಯುತ್ತಿದೆ. ಇದರ ಬೆನ್ನಲ್ಲೇ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೆಲವು ಸಚಿವರು, ಶಾಸಕರು ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಸದಾಶಿವನಗರದಲ್ಲಿರುವ ಖರ್ಗೆ ಅವರ ನಿವಾಸಕ್ಕೆ ಪೌರಾಡಳಿತ ಸಚಿವ ರಹೀಂ ಖಾನ್, ಅರಣ್ಯ ಸಚಿವ ಈಶ್ವರ ಖಂಡ್ರೆ, ಶಾಸಕ ಆರ್.ವಿ. ದೇಶಪಾಂಡೆ ಸೇರಿದಂತೆ ಕೆಲವು ಸಚಿವರು, ಶಾಸಕರು ಮಂಗಳವಾರ ಭೇಟಿ ನೀಡಿ ಕೆಲಹೊತ್ತು ವಿಚಾರವಿನಿಮಯ ನಡೆಸಿದರು.
ಸಂಪುಟದಲ್ಲಿ ಹೊಸಬರಿಗೆ ಅವಕಾಶ ಮಾಡಿಕೊಡಬೇಕೆಂಬ ಕಾರಣಕ್ಕೆ, ಕೆಲವರನ್ನು ಕೈಬಿಡುವ ಕುರಿತು ಕಾಂಗ್ರೆಸ್ ವರಿಷ್ಠರ ಮಟ್ಟದಲ್ಲಿ ಹಲವು ತಿಂಗಳುಗಳಿಂದ ಚರ್ಚೆ ನಡೆಯುತ್ತಿದೆ. ಸಂಪುಟ ಪುನರ್ ರಚನೆಯಾದರೆ ಹೊರಗುಳಿಯಬಹುದೆಂಬ ಆತಂಕದಿಂದ ಖರ್ಗೆ ಅವರನ್ನು ಕೆಲವು ಸಚಿವರು ಭೇಟಿ ಮಾಡಿದರೆ, ಸಂಪುಟ ಸೇರುವ ನಿರೀಕ್ಷೆಯಲ್ಲಿರುವ ಕೆಲವು ಶಾಸಕರೂ ಖರ್ಗೆಯವರ ಮನೆಯ ಕದ ತಟ್ಟುತ್ತಿದ್ದಾರೆ.
ಖರ್ಗೆಯವರ ಭೇಟಿ ಬಳಿಕ ಮಾತನಾಡಿದ ಆರ್.ವಿ. ದೇಶಪಾಂಡೆ, ‘ನಾನು ಖರ್ಗೆಯವರ ಜೊತೆ ರಾಜಕೀಯ ಮಾಡಿದವನು. ಬೆಂಗಳೂರಿನಲ್ಲಿ ಇದ್ದಾಗಲೆಲ್ಲ ಅವರನ್ನು ನಾನು ಭೇಟಿ ಮಾಡುತ್ತೇನೆ. ಈ ಭೇಟಿಯಲ್ಲಿ ವಿಶೇಷ ಏನೂ ಇಲ್ಲ’ ಎಂದರು
ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ದೇಶಪಾಂಡೆ, ‘ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಯಾರು ಹೇಳಿದ್ದಾರೆ. ಸಂಪುಟಕ್ಕೆ ನಾನು ಸೇರಲಿದ್ದೇನೆ ಎನ್ನುವುದು ನಿಮಗೆ (ಮಾಧ್ಯಮ) ಹೇಗೆ ಗೊತ್ತು. ಈ ಬಗ್ಗೆ ನನಗೇನು ಗೊತ್ತಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.