ADVERTISEMENT

ವರ್ಷಾಂತ್ಯದಲ್ಲಿ ಸರ್ಕಾರದಲ್ಲಿ ಸಣ್ಣಪುಟ್ಟ ಬದಲಾವಣೆ: ಸತೀಶ ಜಾರಕಿಹೊಳಿ‌ ಸುಳಿವು

​ಪ್ರಜಾವಾಣಿ ವಾರ್ತೆ
Published 26 ಜೂನ್ 2025, 6:49 IST
Last Updated 26 ಜೂನ್ 2025, 6:49 IST
<div class="paragraphs"><p>ಸತೀಶ ಜಾರಕಿಹೊಳಿ</p></div>

ಸತೀಶ ಜಾರಕಿಹೊಳಿ

   

– ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಸರ್ಕಾರದಲ್ಲಿ ವರ್ಷಾಂತ್ಯದಲ್ಲಿ ಸಣ್ಣಪುಟ್ಟ ಬದಲಾವಣೆ ಆಗಲಿದೆ. ಯಾವುದೇ ದೊಡ್ಡ ಬದಲಾವಣೆ ಆಗುವುದಿಲ್ಲ’ ಎಂದು  ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ‌ ಹೇಳಿದರು. ಆ ಮೂಲಕ, ಮುಖ್ಯಮಂತ್ರಿ ಬದಲಾವಣೆ ಇಲ್ಲ ಎನ್ನುವುದನ್ನು ಪರೋಕ್ಷವಾಗಿ ಹೇಳಿದರು.

ADVERTISEMENT

ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನು ಪ್ರಯತ್ನ ನಡೆಸಿಲ್ಲ. ಪ್ರಯತ್ನ ನಡೆಸಿದರೆ ಮುಂದುವರೆಸಬಹುದು. ನಾನು ಎಲ್ಲಿದ್ದೆನೋ ಅಲ್ಲೇ ಇದ್ದೇನೆ. ನನ್ನನ್ನು ಹಿಂದಿನಿಂದ ಬೆಂಬಲಿಸುವವರು ಯಾರೂ ಇಲ್ವಲ್ಲ’ ಎಂದರು.

‘ಸಚವ ಕೆ.ಎನ್‌. ರಾಜಣ್ಣ ನಾವು ಆಗಾಗ  ಸೇರುತ್ತಲೇ ಇರುತ್ತೇವೆ. ಹುಲಿ ಯಾವತ್ತಿದ್ರೂ ಹುಲಿನೇ, ವಯಸ್ಸಾದ್ರೂ ಹುಲಿ ಹುಲಿನೇ’ ಎಂದರು.

‘ಜಲಸಂಪನ್ಮೂಲ ಇಲಾಖೆಯಿಂದ ಅನುದಾನ ಸಿಕ್ಕಿಲ್ಲ’ ಎಂಬ ಶಾಸಕರ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನೀರಾವರಿ ಸಮಸ್ಯೆ ಬಗ್ಗೆ ಶಾಸಕ ರಾಜು ಕಾಗೆ ಮೊದಲಿನಿಂದಲೂ ಹೇಳುತ್ತಲೇ ಇದ್ದಾರೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೂ ಬಂದಿದೆ. ಈ ಬಗ್ಗೆ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಕರೆದು ಮುಖ್ಯಮಂತ್ರಿ ಹೇಳುತ್ತಾರೆ’ ಎಂದರು.

‘ಜಲಸಂಪನ್ಮೂಲ ಇಲಾಖೆಯಲ್ಲಿ ಹಣ ಇಲ್ಲ ಎಂದವರು ಯಾರು? ಇಲಾಖೆಯಲ್ಲಿ ₹ 25 ಸಾವಿರ ಕೋಟಿ ಹಣ ಇದೆ. ಬಾಕಿ ಬಿಲ್‌ಗಳೂ ಕೂಡ ಇವೆ. ಯಾವ ಸರ್ಕಾರ ಬಂದರೂ ಆರಂಭದ ಮೂರು ವರ್ಷದಷ್ಟು ಬಿಲ್ ಬಾಕಿ ಇದ್ದೆ ಇರುತ್ತದೆ’ ಎಂದರು.

‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರ ಬದಲಾವಣೆ ನೋಡಿಕೊಂಡು ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗಲಿದೆಯೇ’ ಎಂಬ ಪ್ರಶ್ನೆಗೆ, ‘ಬಿಜೆಪಿ ಫಾರ್ಮುಲಾ ಬೇರೆ ನಮ್ಮದು ಬೇರೆ. ಅವರ ತತ್ವ, ಸಿದ್ಧಾಂತ ಬೇರೆ ನಮ್ಮದು ಬೇರೆ. ಬಿಜೆಪಿಗೂ ನಮಗೂ ವ್ಯತ್ಯಾಸ ಇದೆ’ ಎಂದರು.

ಸಿಎಂ, ಆಪ್ತ ಸಚಿವರ ದೆಹಲಿ ಭೇಟಿ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಇದರಲ್ಲಿ ವಿಶೇಷ ಏನೂ ಇಲ್ಲ. ಮುಖ್ಯಮಂತ್ರಿ ಜೊತೆ ದೆಹಲಿಗೆ ಹೋಗಿದ್ದೆವು ಅಷ್ಟೆ. ರಾಷ್ಟ್ರಪತಿಯವರನ್ನು ಭೇಟಿ ಮಾಡಿದ್ದೆವು. ದೆಹಲಿಗೆ ಹೋದಾಗಲೆಲ್ಲಾ ವರಿಷ್ಠರನ್ನು ಭೇಟಿ ಮಾಡುತ್ತೇವೆ. ಮುಖ್ಯಮಂತ್ರಿಯವರು ವೈಯಕ್ತಿಕವಾಗಿ ಭೇಟಿಯಾಗಿದ್ದಾರೆ. ನಾವು ಎಲ್ಲರನ್ನೂ ಒಟ್ಟಿಗೆ ಭೇಟಿ ಮಾಡಿದೆವು’ ಎಂದರು.

‘ದೆಹಲಿಗೆ ಹೋದ ಮೇಲೆ ಸಕ್ರಿಯವಾಗುವುದು ಸ್ವಾಭಾವಿಕ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಚರ್ಚೆ ಆಗಿಲ್ಲ. ಯುದ್ಧ ಇದ್ದಾಗ ಶಸ್ತ್ರ ಹಿಡಿಯಬೇಕು. ಯುದ್ಧ ಇಲ್ಲದೇ ಇರುವಾಗ ಶಸ್ತ್ರ ಹಿಡಿಯುವ ಅಗತ್ಯ ಇಲ್ಲ’ ಎಂದೂ ಹೇಳಿದರು

‘ವರಿಷ್ಠರು ಎಲ್ಲವನ್ನೂ ಗಮನಿಸುತ್ತಾರೆ. ಯಾರಿಗೆ ಏನು ಕೊಡಬೇಕೆಂದು ಹೈಕಮಾಂಡ್‌ಗೆ ಗೊತ್ತದೆ’ ಎಂದರು. 

‘ಶಾಸಕ ಬಿ.ಆರ್. ಪಾಟೀಲ ಅವರ ಹೇಳಿಕೆ ವಿಚಾರವೂ ದೆಹಲಿಯಲ್ಲಿ ಚರ್ಚೆ ಆಗಿದೆ. ಈ ಬಗ್ಗೆ ಮುಖ್ಯಮಂತ್ರಿ ಜೊತೆ ವರಿಷ್ಠರು ಮಾತನಾಡಿದ್ದಾರೆ. 

‘ಅನುದಾನ, ವರ್ಗಾವಣೆ ಎಂದು ಹೇಳಲು ಆಗುವುದಿಲ್ಲ. ಕ್ಷೇತ್ರದಲ್ಲಿ ಬೇರೆ ಬೇರೆ ಸಮಸ್ಯೆಗಳು ಇರುತ್ತದೆ. ಶಾಸಕ ರಾಜು ಕಾಗೆ ಅವರು ಒಂದು ವರ್ಷದಿಂದ ನನ್ನ ಬಳಿಯೂ ಸಾಕಷ್ಟು ಹೇಳಿದ್ದಾರೆ. ಹಾಗೆಂದು, ಅವರು ರಾಜೀನಾಮೆ ನೀಡುವ ಅಗತ್ಯವಿಲ್ಲ.‌ ಮುಖ್ಯಮಂತ್ರಿ ಎಲ್ಲವನ್ನೂ ಸರಿ ಮಾಡುತ್ತಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.