
ನವದೆಹಲಿ: ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಸೇರಿದಂತೆ ಕರ್ನಾಟಕದ ರಾಜಕೀಯ ವಿಷಯಗಳ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಚರ್ಚೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೂಚಿಸಿದ್ದಾರೆ.
ಹಿರಿಯ ವಕೀಲ ಕಪಿಲ್ ಸಿಬಲ್ ಅವರ ‘ದಿಲ್ ಸೆ ವಿದ್ ಕಪಿಲ್ ಸಿಬಲ್’ ಸರಣಿಯ ನೂರನೇ ಆವೃತ್ತಿ ಬಿಡುಗಡೆಗೆ ಇಲ್ಲಿಗೆ ಬಂದಿರುವ ಸಿದ್ದರಾಮಯ್ಯ ಅವರು ರಾಹುಲ್ ಅವರನ್ನು ಶನಿವಾರ ಭೇಟಿ ಮಾಡಿ ಸುಮಾರು 15 ನಿಮಿಷ ಸಮಾಲೋಚಿಸಿದರು.
‘ನವೆಂಬರ್ ಕ್ರಾಂತಿ’ ಬಗ್ಗೆ ಪಕ್ಷದ ವಲಯದಲ್ಲಿ ತೀವ್ರ ಚರ್ಚೆ ಮುಂದುವರಿದಿದೆ. ಅದೇ ಹೊತ್ತಿನಲ್ಲಿ ಸಚಿವ ಸಂಪುಟ ಪುನರ್ ರಚನೆಗೆ ಸಿದ್ದರಾಮಯ್ಯ ಉತ್ಸುಕರಾಗಿದ್ದಾರೆ. ರಾಹುಲ್ ಭೇಟಿಯ ವೇಳೆಯಲ್ಲಿ ಸಿದ್ದರಾಮಯ್ಯ ಅವರು ಈ ವಿಷಯವನ್ನು ಪ್ರಸ್ತಾಪಿಸಿದರು.
ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ ಹಾಗೂ ಸಂಪುಟದಿಂದ ಕೆ.ಎನ್. ರಾಜಣ್ಣ ಅವರನ್ನು ವಜಾ ಮಾಡಿದ್ದರಿಂದಾಗಿ ಎರಡು ಸ್ಥಾನಗಳು ಖಾಲಿ ಇವೆ.
ವಿಧಾನ ಪರಿಷತ್‌ನ ಸದಸ್ಯ ಬಲದಲ್ಲಿ ಬಿಜೆಪಿಗೆ ಸಮನಾದ ಸ್ಥಾನಗಳನ್ನು ಕಾಂಗ್ರೆಸ್ ದಕ್ಕಿಸಿಕೊಂಡಿದೆ. ಎರಡೂ ಪಕ್ಷಗಳು ತಲಾ 37 ಸ್ಥಾನಗಳನ್ನು ಹೊಂದಿವೆ. ಪರಿಷತ್‌ನ ಪಕ್ಷೇತರ ಸದಸ್ಯ ಲಖನ್ ಜಾರಕಿಹೊಳಿ ಬೆಂಬಲವನ್ನು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಕೊಡಿಸಲಿದ್ದಾರೆ ಎಂಬ ವಿಶ್ವಾಸದಲ್ಲಿ ಕಾಂಗ್ರೆಸ್ ನಾಯಕರು ಇದ್ದಾರೆ. ಬೆಳಗಾವಿಯಲ್ಲಿ ಡಿಸೆಂಬರ್ 8ರಿಂದ ಆರಂಭವಾಗಲಿರುವ ಚಳಿಗಾಲದ ಅಧಿವೇಶನದಲ್ಲಿ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಉಪಸಭಾಪತಿ ಎಂ.ಕೆ. ಪ್ರಾಣೇಶ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಕಾಂಗ್ರೆಸ್ ವಲಯದಲ್ಲಿ ತೀವ್ರ ಚರ್ಚೆ ನಡೆದಿದೆ. ಸಭಾಪತಿ ಸ್ಥಾನಕ್ಕೆ ಪಕ್ಷದಲ್ಲಿ ತೀವ್ರ ಲಾಬಿ ಆರಂಭವಾಗಿದೆ. ಪುಟ್ಟಣ್ಣ, ನಸೀರ್ ಅಹ್ಮದ್, ಉಮಾಶ್ರೀ, ಸಲೀಂ ಅಹ್ಮದ್ ಮತ್ತಿತರರು ಈ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಕೆಳಗಿಳಿಸಲು ಸಿದ್ದರಾಮಯ್ಯ ಬಣ ವರ್ಷದಿಂದ ಕಸರತ್ತು ನಡೆಸುತ್ತಿದೆ. ಕೆಲವೇ ತಿಂಗಳಲ್ಲೇ ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಐದು ಪಾಲಿಕೆಗಳಿಗೆ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಘೋಷಣೆಯಾಗಲಿದೆ. ಅದಕ್ಕೆ ಮುನ್ನ ಬೇರೆಯವರಿಗೆ ಪಕ್ಷದ ಹೊಣೆ ವಹಿಸಿ ಸಂಘಟನೆಯಲ್ಲಿ ಬದಲಾವಣೆ ಮಾಡಬೇಕು ಎಂಬುದು ಸಿದ್ದರಾಮಯ್ಯ ಅವರ ಆಲೋಚನೆ. ಅದಕ್ಕಾಗಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅಥವಾ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರನ್ನು ಕೆಪಿಸಿಸಿ ಅಧ್ಯಕ್ಷರಾಗಿ ಮಾಡಬೇಕು ಎಂದು ಯೋಚಿಸಿದ್ದಾರೆ. ಅಧ್ಯಕ್ಷ ಸ್ಥಾನ ನೀಡಿದರೆ ಸಚಿವ ಸ್ಥಾನ ತ್ಯಾಗಕ್ಕೆ ಸಿದ್ದ ಎಂದು ಜಾರಕಿಹೊಳಿ ಅವರು ಹೈಕಮಾಂಡ್ ನಾಯಕರಲ್ಲಿ ಸ್ಪಷ್ಟಪಡಿಸಿದ್ದಾರೆ ಎಂದು ಗೊತ್ತಾಗಿದೆ.
ಡಿಕೆಶಿ ನಿಲುವೇನು?:
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ತಮ್ಮ ಬಳಿ ಇರುವ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಶೀಘ್ರದಲ್ಲೇ ತೊರೆಯಲು ಮಾನಸಿಕವಾಗಿ ಸಜ್ಜಾಗಿದ್ದಾರೆ. ಆದರೆ, ಅದಕ್ಕೆ ಮೊದಲು ಅಧಿಕಾರ ಹಸ್ತಾಂತರ ವಿಷಯದ ಬಗ್ಗೆ ರಾಷ್ಟ್ರೀಯ ನಾಯಕರಿಂದ ಸ್ಪಷ್ಟ ಚಿತ್ರಣ ಬೇಕು ಎಂಬುದು ಅವರ ಬೇಡಿಕೆ. ಇದಕ್ಕಾಗಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲು ಬಯಸಿದ್ದಾರೆ.
‘ಐದೂವರೆ ವರ್ಷಗಳಿಂದ ಅಧ್ಯಕ್ಷನಾಗಿದ್ದೇನೆ. ರಾಜ್ಯದಲ್ಲಿ ಕುಸಿದು ಹೋಗಿದ್ದ ಪಕ್ಷಕ್ಕೆ ಹೊಸ ಚೈತನ್ಯ ನೀಡಿ ಅಧಿಕಾರಕ್ಕೆ ತರುವಲ್ಲಿ ಯಶಸ್ಸು ಕಂಡಿದ್ದೇನೆ. ಬೇರೆಯವರು ಹೊಣೆ ನಿಭಾಯಿಸಲು ಸಿದ್ಧರಿದ್ದರೆ ಬಿಟ್ಟುಕೊಡಲು ಸಿದ್ದನಿದ್ದೇನೆ. ಆದರೆ, ಅದಕ್ಕೆ ಮುನ್ನ ಅಧಿಕಾರ ಹಸ್ತಾಂತರ ಗೊಂದಲ ಪರಿಹಾರ ಆಗಬೇಕು’ ಎಂದು ಶಿವಕುಮಾರ್ ಅವರು ಆಪ್ತರಲ್ಲಿ ಹೇಳಿಕೊಂಡಿದ್ದಾರೆ.
ಖರ್ಗೆ ಭೇಟಿ ನಾಳೆ:
ಕಬ್ಬು ಬೆಳೆಗಾರರಿಗೆ ವೈಜ್ಞಾನಿಕ ಬೆಲೆ ನೀಡಬೇಕು, ಬೆಳೆಹಾನಿಗೆ ಪರಿಹಾರ ನೀಡಬೇಕು, ನೀರಾವರಿ ಯೋಜನೆಗಳಿಗೆ ಅನುಮೋದನೆ ನೀಡಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗಾಗಿ ಸಿದ್ದರಾಮಯ್ಯ ಕಾಲಾವಕಾಶ ಕೋರಿದ್ದಾರೆ. ಸೋಮವಾರ ಸಂಜೆ 5ಕ್ಕೆ ಭೇಟಿಗೆ ಅವಕಾಶ ನೀಡುವುದಾಗಿ ಪ್ರಧಾನಿ ಕಚೇರಿ ಭರವಸೆ ನೀಡಿದೆ. ಪ್ರಧಾನಿ ಭೇಟಿಯ ಜತೆಗೆ ಪಕ್ಷದ ಹೈಕಮಾಂಡ್ ನಾಯಕರನ್ನು ಕಾಣಲು ಸಿದ್ದರಾಮಯ್ಯ ಉದ್ದೇಶಿಸಿದ್ದಾರೆ. ಸಚಿವ ಸಂಪುಟ ಪುನರ್ ರಚನೆ ಬಗ್ಗೆ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್, ರಾಜ್ಯದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರೊಂದಿಗೆ ಸಮಾಲೋಚಿಸಲಿದ್ದಾರೆ. ಆ ಬಳಿಕ ಈ ವಿಷಯದಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಸಂಪುಟ ಪುನರ್ ರಚನೆಗೆ ರಾಹುಲ್ ಅವರಿಂದ ಹಸಿರು ನಿಶಾನೆ ಸಿಕ್ಕಿದೆ. ಸಂಪುಟದಿಂದ ಕನಿಷ್ಠ ಎಂಟು ಸಚಿವರನ್ನು ಕೈಬಿಟ್ಟು, ಹಿಂದಿನ ಅವಧಿಯಲ್ಲಿ ಸಚಿವರಾಗಿರುವವರು ಹಾಗೂ ಕೆಲವು ಹೊಸ ಮುಖಗಳನ್ನು ಸೇರ್ಪಡೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಸಿದ್ದರಾಮಯ್ಯ ಆಪ್ತ ಮೂಲಗಳು ತಿಳಿಸಿವೆ.
‘ಸಂಪುಟ ಪುನರ್ ರಚನೆ–ಚರ್ಚೆ ಆಗಿಲ್ಲ‘
ಬಿಹಾರ ಚುನಾವಣೆಯ ಸೋಲಿನ ಬಗ್ಗೆ ರಾಹುಲ್ ಗಾಂಧಿ ಜತೆಗೆ ಚರ್ಚಿಸಿದ್ದೇನೆ. ಈ ಸೋಲಿನಿಂದ ಅವರು ಧೃತಿಗೆಟ್ಟಿಲ್ಲ. ನಾವೆಲ್ಲ ನಿಮ್ಮ ಇದ್ದೇವೆ ಎಂದು ತಿಳಿಸಿದ್ದೇನೆ. ಸಚಿವ ಸಂಪುಟ ಪುನರ್ ರಚನೆ ಬಗ್ಗೆ ಚರ್ಚೆ ಆಗಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
‘ನವೆಂಬರ್ ಕ್ರಾಂತಿ ಏನೂ ಇಲ್ಲ. ಸಚಿವ ಸಂಪುಟ ಪುನರ್ ರಚನೆ ಆಗಬೇಕು ಎಂದು ಯಾರೂ ಒತ್ತಾಯಿಸಿಲ್ಲ. ಬೆಳೆ ಹಾನಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಸಲ್ಲಿಸಲು ಅವಕಾಶ ಕೋರಿದ್ದೆ. ಅವರು ಸಿಗಲಿಲ್ಲ’ ಎಂದರು. ಕೋಟ್ಸ್ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಬೇಕೆಂದು ಇದೆ. ಅವರು ಭಾನುವಾರ ಸಿಗುತ್ತಾರೋ ಇಲ್ಲವೋ ಗೊತ್ತಿಲ್ಲ. ಪಕ್ಷದ ಕೆಲವು ವಿಷಯಗಳ ಬಗ್ಗೆ ಮಾತನಾಡಲು ಇದೆ. ಅವಕಾಶ ಸಿಕ್ಕರೆ ಅವರ ಬಳಿ ಪ್ರಸ್ತಾಪಿಸುತ್ತೇನೆ. ಡಿ.ಕೆ. ಶಿವಕುಮಾರ್ ಉಪಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.