ADVERTISEMENT

Karnataka Caste Census | ಇದೇ 17ಕ್ಕೆ ಜಾತಿಗಣತಿ ಭವಿಷ್ಯ?

ಸಂಪುಟ ಸಭೆಯಲ್ಲಿ ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆ ಮಂಡನೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2025, 23:30 IST
Last Updated 11 ಏಪ್ರಿಲ್ 2025, 23:30 IST
<div class="paragraphs"><p>ವಿಧಾನಸೌಧ</p></div>

ವಿಧಾನಸೌಧ

   

ಬೆಂಗಳೂರು: ಪರ–ವಿರೋಧ ವಾಗ್ವಾದಗಳ ಅಡಕತ್ತರಿಯಲ್ಲಿ ಸಿಲುಕಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ (ಜಾತಿ ಗಣತಿ) ಕೊನೆಗೂ ‘ಮೋಕ್ಷ’ ಸಿಗುವ ಲಕ್ಷಣಗಳು ಕಾಣಿಸಿದ್ದು, ಇದೇ 17ರ ಗುರುವಾರ ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಸಮೀಕ್ಷೆಯ ಭವಿಷ್ಯ ನಿರ್ಧಾರವಾಗಲಿದೆ.

ಸಿದ್ದರಾಮಯ್ಯನವರು ಹಿಂದೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅಂದಿನ ಎಚ್. ಕಾಂತರಾಜ ನೇತೃತ್ವದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಈ ಸಮೀಕ್ಷೆಯ ಹೊಣೆಯನ್ನು ವಹಿಸಿದ್ದರು. ಜಯಪ್ರಕಾಶ ಹೆಗ್ಡೆ ನೇತೃತ್ವದ ಆಯೋಗವು, ಸಮೀಕ್ಷೆಯ ದತ್ತಾಂಶಗಳ ಅಧ್ಯಯನ ವರದಿಯನ್ನು 2024ರ ಫೆಬ್ರುವರಿಯಲ್ಲಿ ಈಗಿನ ಸರ್ಕಾರಕ್ಕೆ ಸಲ್ಲಿಸಿತ್ತು. ಈ ವರದಿ ಹಾಗೂ ಸಮೀಕ್ಷೆಯ ಮಾಹಿತಿಗಳನ್ನು ಒಳಗೊಂಡ ಸಮಗ್ರ ದಾಖಲೆಗಳನ್ನು ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಯಿತು.

ADVERTISEMENT

ವರದಿಯ ಮುಖ್ಯಾಂಶ ಹಾಗೂ ಶಿಫಾರಸುಗಳಿರುವ ಮುಚ್ಚಿದ ಲಕೋಟೆಯನ್ನು ಸಚಿವ ಸಂಪುಟ ಸಭೆಯಲ್ಲಿ ತೆರೆದು, ವಿವರಿಸುವ ಪ್ರಕ್ರಿಯೆ ನಡೆಯಿತು. ಬಳಿಕ, ವರದಿಯನ್ನು ಅಂಗೀಕರಿಸುವ ನಿರ್ಣಯವನ್ನು ಸಂಪುಟ ಸಭೆ ಕೈಗೊಂಡಿತು. ಮುಂದಿನ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸುವ ತೀರ್ಮಾನ ತೆಗೆದುಕೊಳ್ಳಲಾಯಿತು.

ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ, ‘ಎಲ್ಲ ಸಚಿವರಿಗೂ ವರದಿಯ ಮುಖ್ಯಾಂಶಗಳನ್ನು ಒಳಗೊಂಡ ಮಾಹಿತಿಯ ಪ್ರತಿ ನೀಡಲಾಗಿದೆ. ವಿಶೇಷ ಸಂಪುಟ ಸಭೆಗೆ ಬರುವ ಮುನ್ನ ಅಧ್ಯಯನ ಮಾಡಿಕೊಂಡು ಬಂದು ಚರ್ಚೆಯಲ್ಲಿ ಭಾಗವಹಿಸುವಂತೆ ಮುಖ್ಯಮಂತ್ರಿ ಸೂಚಿಸಿದರು‌’ ಎಂದು ಹೇಳಿದರು.

ರಾಜ್ಯದ 6.35 ಕೋಟಿ ಜನಸಂಖ್ಯೆಯಲ್ಲಿ 5.98 ಕೋಟಿ ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. 1.35 ಕೋಟಿ ಕುಟುಂಬಗಳು ಅಂದರೆ, ಶೇ 94.17ರಷ್ಟು ಮಾಹಿತಿ ಸಂಗ್ರಹಣೆಯಲ್ಲಿ ಪಾಲ್ಗೊಂಡಿವೆ. 37 ಲಕ್ಷ ಜನ ಮಾತ್ರ ಸಮೀಕ್ಷೆಯಲ್ಲಿ ಒಳಗೊಂಡಿಲ್ಲ. ಎಚ್‌.ಕಾಂತರಾಜ ನೇತೃತ್ವದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು 2015 ನೇ ಏ.11ರಿಂದ ಸಮೀಕ್ಷೆ ಆರಂಭಿಸಿ 2015 ರ ಮೇ 30ರಂದು ಪೂರ್ಣಗೊಳಿಸಿತು. 2015ರ ದತ್ತಾಂಶ ಬಳಸಿಕೊಂಡು ಕೆ.ಜಯಪ್ರಕಾಶ್ ಹೆಗ್ಡೆ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗವು ವರದಿಯನ್ನು ಸಿದ್ಧಪಡಿಸಿ, 2024ರ ಫೆಬ್ರುವರಿ 29ರಂದು ಸರ್ಕಾರಕ್ಕೆ ಸಲ್ಲಿಸಿತು ಎಂದರು.

ಈ ಸಮೀಕ್ಷೆಯಡಿ ಪ್ರತಿಯೊಂದು ಕುಟುಂಬದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ ಪ್ರಾತಿನಿಧ್ಯ ಮತ್ತು ಔದ್ಯೋಗಿಕ ಸ್ಥಿತಿಗಳ ಬಗ್ಗೆ 54 ಮಾನದಂಡಗಳನ್ನು ಒಳಗೊಂಡ ಕುಟುಂಬದ ಅನುಸೂಚಿ–3ರಲ್ಲಿ ಮಾಹಿತಿ ಸಂಗ್ರಹಿಸಲಾಯಿತು. ಸಮೀಕ್ಷೆಯಲ್ಲಿ ಲಭ್ಯವಾಗಿರುವ ಅಂಕಿ–ಅಂಶಗಳನ್ನು ಆಯಾ ಜಿಲ್ಲೆಯಲ್ಲಿಯೇ ಗಣಕೀಕರಣಗೊಳಿಸಲಾಗಿದೆ. ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ (ಬಿಇಎಲ್) ಸಂಸ್ಥೆಯ ಮೂಲಕ ಗಣಕೀಕರಣಕ್ಕಾಗಿ ₹43.09 ಕೋಟಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಸಮೀಕ್ಷೆಗಾಗಿ ₹192.79 ಕೋಟಿ ಬಿಡುಗಡೆ ಮಾಡಿದ್ದು, ₹165.51 ಕೋಟಿ ವೆಚ್ಚ ಮಾಡಲಾಗಿದೆ. ಕೇಂದ್ರ ಸರ್ಕಾರ ₹7 ಕೋಟಿ ನೀಡಿದೆ ಎಂದು ತಂಗಡಗಿ ಹೇಳಿದರು.

ಸಭೆಯ ಆರಂಭಕ್ಕೂ ಮುನ್ನ 50 ಸಂಪುಟಗಳನ್ನು ಒಳಗೊಂಡ ಮುಚ್ಚಿದ ಪೆಟ್ಟಿಗೆಗಳನ್ನು ಸಚಿವ ಸಂಪುಟ ಸಭೆಯಲ್ಲಿ ತೆರೆಯಲಾಯಿತು ಎಂದರು.

‘ಸಭೆಯಲ್ಲಿ ಯಾವುದೇ ಸಚಿವರು ವರದಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಲಿಲ್ಲ. ಈ ಹಿಂದೆ ಹೊರಗೆ ಆಕ್ಷೇಪ ವ್ಯಕ್ತಪಡಿಸಿದ್ದ ಪ್ರಬಲ ಸಮುದಾಯಗಳ ಸಚಿವರೂ ಸುಮ್ಮನೇ ಇದ್ದರು. ರಾಹುಲ್‌ಗಾಂಧಿ ಅವರ ಸೂಚನೆ ಇತ್ತು. ಹೀಗಾಗಿ ಯಾವುದೇ ಸಚಿವರು ಬಾಯಿ ಬಿಡುವ ಸಾಹಸ ತೋರಲಿಲ್ಲ’ ಎಂದು ಮೂಲಗಳು ತಿಳಿಸಿವೆ.

ಇಂದಿನ ಸಂಪುಟ ಸಭೆಗೆ ಆರು ಸಚಿವರು ಗೈರಾಗಿದ್ದರು.

ವರದಿ ಮಂಡನೆಯಾಗಿದೆ. ಎಲ್ಲ ಸಚಿವರಿಗೂ ಪ್ರತಿ ನೀಡಲಾಗಿದೆ. ಅದರಲ್ಲಿನ ಮಾಹಿತಿ ತಿಳಿದುಕೊಳ್ಳಲಾಗುವುದು, ಸಂಪುಟ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಲಾಗುವುದು
ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ
ಎಲ್ಲರ ಮನೆಗೂ ಭೇಟಿ ನೀಡಿ ವರದಿ ಸಿದ್ಧಪಡಿಸಿಲ್ಲ. ಯಾರಿಗೋ ಅನುಕೂಲ ಮಾಡಿಕೊಡಲು, ಜಾತಿಜಾತಿಗಳ ನಡುವೆ ವಿಷಬೀಜ ಬಿತ್ತಲು ಸಿದ್ದರಾಮಯ್ಯ ಹೇಳಿ ಮಾಡಿಸಿರುವ ವರದಿ
ಆರ್‌. ಅಶೋಕ, ವಿಧಾನಸಭೆ ವಿರೋಧ ಪಕ್ಷದ ನಾಯಕ
ವರದಿ ಪರಿಶೀಲನೆ ನಡೆಸದೆ ಊಹೆಯ ಆಧಾರದ ಮೇಲೆ ಪರ–ವಿರೋಧ ಚರ್ಚೆ ನಡೆಸುವುದು ಸರಿಯಲ್ಲ. ಅದಕ್ಕಾಗಿಯೇ ಮುಖ್ಯಮಂತ್ರಿ ವಿಶೇಷ ಸಂಪಟ ಸಭೆ ಕರೆದಿದ್ದಾರೆ
–ಕೆ.ಎನ್‌. ರಾಜಣ್ಣ, ಸಹಕಾರ ಸಚಿವ
ವರದಿ ಜಾರಿಗೆ ಕೊನೆಗೂ ಮುಹೂರ್ತ ನಿಗದಿಯಾಗಿದೆ. ಎಲ್ಲರೂ ಒಟ್ಟಾಗಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ವರದಿ ಜಾರಿ ಬಳಿಕ ಏನಾಗುತ್ತದೆಯೋ ನೋಡೋಣ
–ಸತೀಶ ಜಾರಕಿಹೊಳಿ, ಲೋಕೋಪಯೋಗಿ ಸಚಿವ
ವರದಿಯನ್ನು ಸಂಪಟ ಸಭೆಯಲ್ಲಿ ಚರ್ಚಿಸಿದ ನಂತರ ಸಾರ್ವಜನಿಕ ಚರ್ಚೆಗೆ ಬಿಡಬೇಕಾ? ಒಳ ಮೀಸಲಾತಿ ಸಮೀಕ್ಷೆಯ ಜತೆಗೆ ಇದನ್ನು ಪರಿಗಣಿಸಬೇಕಾ ಎನ್ನುವ ಕುರಿತು ನಿರ್ಧಾರಕ್ಕೆ ಬರಬೇಕಿದೆ.
–ಪ್ರಿಯಾಂಕ್‌ ಖರ್ಗೆ, ಗ್ರಾಮೀಣಾಭಿವೃದ್ಧಿ ಸಚಿವ
ಈ ಜಾತಿ ಜನಗಣತಿ ವೈಜ್ಞಾನಿಕವಾಗಿ ನಡೆದಿಲ್ಲ. ನಮ್ಮ ಮನೆಗಾಗಲಿ, ನಮ್ಮ ಅಜ್ಜ ದೇವೇಗೌಡರ ಮನೆಗಾಗಲಿ ಯಾರೂ ಬಂದು ಗಣತಿ ಮಾಡಿಲ್ಲ.
–ನಿಖಿಲ್‌ ಕುಮಾರಸ್ವಾಮಿ, ಜೆಡಿಎಸ್‌ ಯುವ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.