ADVERTISEMENT

ಪಟಾಕಿಗೆ ‘ಹಸಿರು’ ನಿಶಾನೆ: ಮುಖ್ಯಮಂತ್ರಿ ಹೇಳಿಕೆ ಬದಲು, ಮೂಡಿದ ಗೊಂದಲ

ಮುಖ್ಯಮಂತ್ರಿ ಹೇಳಿಕೆ ಬದಲು: ಮೂಡಿದ ಗೊಂದಲ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2020, 19:31 IST
Last Updated 6 ನವೆಂಬರ್ 2020, 19:31 IST
ಬಿ.ಎಸ್‌ ಯಡಿಯೂರಪ್ಪ
ಬಿ.ಎಸ್‌ ಯಡಿಯೂರಪ್ಪ    

ಬೆಂಗಳೂರು: ‘ಕೋವಿಡ್‌ ರೋಗಿಗಳ ಮೇಲೆ ಗಂಭೀರ ಪರಿಣಾಮಗಳು ಬೀರು ವ ಸಾಧ್ಯತೆ ಇರುವುದರಿಂದ ದೀಪಾವಳಿ ಸಂದರ್ಭದಲ್ಲಿ ಪಟಾಕಿ ಬಳಕೆ ನಿಷೇಧಿಸಲಾಗುವುದು’ ಎಂದು ಶುಕ್ರವಾರ ಬೆಳಿಗ್ಗೆ ಹೇಳಿದ್ದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಹಸಿರು ಪಟಾಕಿಗೆ ಅವಕಾಶ ನೀಡುವುದಾಗಿ ಸಂಜೆ ಹೊತ್ತಿಗೆ ನೀಡಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ಈ ಹೇಳಿಕೆಯಿಂದ ಗೊಂದಲ ಸೃಷ್ಟಿಯಾಗಿದೆ. ‘ಹಸಿರು ಪಟಾಕಿ ಎಂದರೇನು? ಇದಕ್ಕೂ ಬೇರೆ ಪಟಾಕಿಗೂ ಇರುವ ವ್ಯತ್ಯಾಸವೇನು? ಇದಕ್ಕೆ ಅವಕಾಶ ನೀಡಿದರೆ ಎಲ್ಲ ಬಗೆಯ ಪಟಾಕಿಗೂ ಅವಕಾಶ ನೀಡಿದಂತಾಗುತ್ತದೆ. ಕೋವಿಡ್‌ ರೋಗಿಗಳ ಪಾಡೇನು’ ಎಂಬ ಚರ್ಚೆಯೂ ಆರಂಭವಾಗಿದೆ.

ಬೆಳಿಗ್ಗೆ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಮಾತನಾಡಿದ ಯಡಿಯೂರಪ್ಪ, ‘ಈ ಬಾರಿ ರಾಜ್ಯದಲ್ಲಿ ಎಲ್ಲ ರೀತಿಯ ಪಟಾಕಿ ಗಳ ಮಾರಾಟ ಮತ್ತು ಬಳಕೆ ನಿಷೇಧಿಸ ಲಾಗುವುದು. ಈ ಬಗ್ಗೆ ಶೀಘ್ರದಲ್ಲೇ ಆದೇಶ ಹೊರಡಿಸಲಾಗುವುದು’ ಎಂದಿದ್ದರು. ಸಂಜೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ‘ಸಾರ್ವಜನಿಕರು ಮತ್ತು ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ದೀಪಾವಳಿಯನ್ನು ಸರಳ ಮತ್ತು ಭಕ್ತಿಪೂರ್ವಕವಾಗಿ ಆಚರಿಸುವುದು ಸೂಕ್ತ. ಹಸಿರು ಪಟಾಕಿ ಮಾತ್ರ ಬಳಸಿ, ದೀಪಾವಳಿ ಆಚರಿಸಿ’ ಎಂದು ಮನವಿ ಮಾಡಿದ್ದಾರೆ.

ADVERTISEMENT

ವರದಿಯಲ್ಲೇನಿದೆ: ಕೋವಿಡ್ ಕಾಲದಲ್ಲಿ ಪಟಾಕಿ ಸಿಡಿಸುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ತಜ್ಞರ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಅದರ ವಿವರ ಹೀಗಿದೆ. ‘ಕೋವಿಡ್‌ ವಿಶೇಷವಾಗಿ ಶ್ವಾಸಕೋಶಕ್ಕೆ ಹೆಚ್ಚು ಘಾಸಿ ಉಂಟು ಮಾಡುವ ಕಾಯಿಲೆಯಾಗಿದೆ. ಈವರೆಗೆ ಶ್ವಾಸಕೋಶದ ಸಮಸ್ಯೆಯಿಂದಲೇ ಬಹಳಷ್ಟು ಕೋವಿಡ್ ರೋಗಿಗಳು ಸಾವಿ ಗೀಡಾಗಿದ್ದಾರೆ. ರಕ್ತದೊತ್ತಡ, ಮಧು ಮೇಹ ಇದ್ದವರು ಕೊರೊನಾ ಸೋಂಕಿಗೆ ಒಳಗಾದರೆ ಅಪಾಯಕ್ಕೆ ಸಿಲುಕುತ್ತಾರೆ. ವಾತಾವರಣದಲ್ಲಿ ಶಬ್ದ ಹೆಚ್ಚಾದಾಗ ಇವರು ಸಹಜವಾಗಿ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ವಯೋವೃದ್ಧರೂ ಸಮಸ್ಯೆ ಎದುರಿಸಬೇಕಾಗುತ್ತದೆ’ ಎಂದು ಪಟಾಕಿ ಪರಿಣಾಮ ಕುರಿತು ಸರ್ಕಾರಕ್ಕೆ ಸಲ್ಲಿಸಿರುವ ತಜ್ಞರ ವರದಿ ವಿವರಿಸಿದೆ.

‘ಕೋವಿಡ್‌ ಉಲ್ಬಣಿಸಿದ ರೋಗಿಗಳು ಆಮ್ಲಜನಕದ ಕೊರತೆ ಎದುರಿಸುತ್ತಾರೆ. ಪಟಾಕಿ ಸಿಡಿಸುವುದರಿಂದ ವಾತಾವರಣದಲ್ಲಿರುವ ಆಮ್ಲಜನಕದ ಗುಣಮಟ್ಟವೂ ಕುಸಿಯುತ್ತದೆ. ಮಾಲಿನ್ಯವೂ ಹೆಚ್ಚಾಗುತ್ತದೆ. ಕೋವಿಡ್ ಪಾಸಿಟಿವ್‌ ಇದ್ದವರ ಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಹೆಚ್ಚು. ಶೇ 99 ರಷ್ಟು ಪ್ರಮಾಣದಲ್ಲಿ ಚೇತರಿಸಿಕೊಂಡವರಲ್ಲಿ ಕೋವಿಡ್‌ ಪುನಃ ಮರುಕಳಿಸುವ ಸಾಧ್ಯತೆ ಇರುತ್ತದೆ’ ಎಂದು ಹೇಳಿದೆ.

‘ಆಸ್ಪತ್ರೆಗಳ ವೆಂಟಿಲೇಟರ್‌ಗಳಲ್ಲಿ ಚಿಕಿತ್ಸೆ ಪಡೆದು ಈಗ ಮನೆಗಳಲ್ಲಿ ಚೇತರಿಸಿಕೊಳ್ಳುತ್ತಿರುವವರ ಶ್ವಾಸಕೋಶಕ್ಕೂ ಪಟಾಕಿ ಹೊಗೆಯಿಂದ ಹಾನಿ ಉಂಟಾಗುವ ಸಾಧ್ಯತೆ ಇದೆ. ಶ್ವಾಸಕೋಶದ ಆಳದಲ್ಲಿ ಗಾಳಿಯಾಡುವ ಜಾಗ ಮುಚ್ಚಿ ಹೋಗಿ, ಲಂಗ್ಸ್‌ ಫೈಬ್ರೋಸಿಸ್‌ ಆಗಬಹುದು. ಇವರೆಲ್ಲ ವಾತಾವರಣದಲ್ಲಿರುವ ಆಮ್ಲಜನಕದಿಂದ ಸಾಮಾನ್ಯ ಜೀವನ ನಡೆಸುತ್ತಿದ್ದಾರೆ. ಒಂದು ವೇಳೆ ವಾತಾವರಣದಲ್ಲಿನ ಆಮ್ಲಜನಕದ ಪ್ರಮಾಣ ಕಡಿಮೆಯಾದರೆ ಉಸಿರಾಟಕ್ಕೆ ತೊಂದರೆ ಆಗುತ್ತದೆ. ಮತ್ತೆ ಆಸ್ಪತ್ರೆಗೆ ದಾಖಲಿಸಬೇಕಾಗುತ್ತದೆ’ ಎಂದೂ ಎಚ್ಚರಿಸಿದೆ.

ಚಳಿಗಾಲದಲ್ಲಿ ಪಟಾಕಿ ಸಿಡಿಸುವುದರಿಂದ ಆಗುವ ಮಾಲಿನ್ಯ ಅಷ್ಟು ಬೇಗ ನಿವಾರಣೆ ಆಗುವುದಿಲ್ಲ. ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲು ಕಾರಣವಾಗುತ್ತದೆ. ಶೇ 70 ಕ್ಕೂ ಹೆಚ್ಚು ಕೋವಿಡ್‌ ರೋಗಿಗಳು ಹೋಂ ಐಸೊಲೇಷನ್‌ನಲ್ಲಿದ್ದಾರೆ ಎಂದು ವರದಿ ತಿಳಿಸಿದೆ.

ಹಸಿರು ಪಟಾಕಿಗೆ ವ್ಯಾಪಾರಿಗಳ ಸ್ವಾಗತ

ರಾಜ್ಯದಲ್ಲಿ ಪಟಾಕಿಯನ್ನು ಸಂಪೂರ್ಣ ನಿಷೇಧ ಮಾಡುವ ನಿರ್ಣಯ ಕೈಬಿಟ್ಟು, ‘ಹಸಿರು ಪಟಾಕಿ’ಗೆ ಅನುಮತಿ ನೀಡಿರುವ ಸರ್ಕಾರದ ನಿರ್ಧಾರ ಸ್ವಾಗತಾರ್ಹ ಎಂದು ಪಟಾಕಿ ವ್ಯಾಪಾರಿಗಳು ಹೇಳಿದ್ದಾರೆ.

'ಈ ಬಾರಿ ಮಾರುಕಟ್ಟೆಗೆ ಶೇ 70ರಷ್ಟು ಹಸಿರು ಪಟಾಕಿಗಳು ಬಂದಿವೆ. ಹಸಿರು ಪಟಾಕಿ ಮಾರಾಟಕ್ಕೆ ಅವಕಾಶ ಕೇಳುವ ನಿಲುವನ್ನು ವರ್ತಕರೂ ವ್ಯಕ್ತಪಡಿಸಿದ್ದರು. ಈಗ ಸರ್ಕಾರವೂ ಹಸಿರು ಪಟಾಕಿಗೆ ಸಮ್ಮತಿ ನೀಡಿರುವುದನ್ನು ವರ್ತಕರು ಸ್ವಾಗತಿಸುತ್ತೇವೆ' ಎಂದುಬೆಂಗಳೂರು ಚಿಲ್ಲರೆ ಪಟಾಕಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಆರ್.ಚಂದ್ರಶೇಖರ್ ತಿಳಿಸಿದರು.

'ಮಾಲಿನ್ಯ ಉಂಟು ಮಾಡುವ ಪಟಾಕಿಗಳ ತಯಾರಿ ಹಾಗೂ ಮಾರಾಟವನ್ನು ನಿಷೇಧಿಸಿ, 2018ರಲ್ಲಿ ಸುಪ್ರೀಂಕೋರ್ಟ್ ಆದೇಶಿಸಿತ್ತು. ಆದರೆ, ಹಸಿರು ಪಟಾಕಿ ತಯಾರಿಯಲ್ಲಿ ಹಿನ್ನೆಡೆಯಾಗಿದ್ದರಿಂದ ಕಳೆದ ದೀಪಾವಳಿಯಲ್ಲಿ ಹಸಿರು ಪಟಾಕಿಗಳು ಸದ್ದು ಮಾಡಲಿಲ್ಲ. ಈ ಬಾರಿ ಹಸಿರು ಪಟಾಕಿಗಳು ಹಬ್ಬಕ್ಕೆ ಮೆರುಗು ತರಲಿವೆ' ಎಂದರು.


‘ಹೊಗೆಯಿಂದ ಕಾಯಿಲೆ ವಾಸಿ ವಿಳಂಬ’

‘ಕೋವಿಡ್‌ ಪ್ರಕರಣಗಳು ಇಳಿಮುಖವಾಗುತ್ತಿರುವ ಸಂದರ್ಭದಲ್ಲಿ ಪಟಾಕಿ ಹಚ್ಚಿದರೆ ಅದರ ನಕಾರಾತ್ಮಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಪಟಾಕಿ ಹೊರ ಸೂಸುವ ನೈಟ್ರಸ್ ಆಕ್ಸೈಡ್ ಹಾಗೂ ಸಲ್ಫರ್ ಡೈ ಆಕ್ಸೈಡ್‌ನಿಂದಾಗಿ ವಾತಾವರಣದಲ್ಲಿ ಮಾಲಿನ್ಯದ ಮಟ್ಟ ಹೆಚ್ಚಳವಾಗಲಿದೆ. ಇದರಿಂದ ಅಸ್ತಮಾ ಸೇರಿದಂತೆ ಶ್ವಾಸಕೋಶದ ಸಮಸ್ಯೆಗಳು ಹೆಚ್ಚಾಗಬಹುದು. ಪಟಾಕಿ ಹೊಗೆ ಸೇವಿಸಿದಲ್ಲಿ ಶ್ವಾಸಕೋಶದ ನಾಳಗಳು ಸಂಕುಚಿತವಾಗುವ ಜತೆಗೆ ಅವುಗಳಿಗೆ ಹಾನಿಯಾಗುವ ಸಾಧ್ಯತೆಯೂ ಇದೆ. ನ್ಯುಮೋನಿಯ ಸೇರಿದಂತೆ ವಿವಿಧ ಸಮಸ್ಯೆಗಳೂ ಕಾಣಿಸಿಕೊಳ್ಳಬಹುದು. ಹೊಗೆಯಿಂದ ಕೊರೊನಾ ಸೋಂಕಿತರ ಕಾಯಿಲೆ ಉಲ್ಬಣಿಸುವ ಸಾಧ್ಯತೆ ಇರುತ್ತದೆ’.

ಡಾ. ವಾಸುನೇತ್ರ ಕಾಸರಗೋಡು, ವಿಕ್ರಮ್ ಆಸ್ಪತ್ರೆಯ ಶ್ವಾಸಕೋಶ ಶಾಸ್ತ್ರಜ್ಞ

***

ಪಟಾಕಿ ಹೊಗೆಯು ಅಸ್ತಮಾ ಸೇರಿದಂತೆ ಉಸಿರಾಟ ಸಂಬಂಧಿ ವಿವಿಧ ಕಾಯಿಲೆ ಇರುವವರಿಗೆ ಇನ್ನಷ್ಟು ಸಮಸ್ಯೆ ಉಂಟು ಮಾಡುತ್ತದೆ. ಶ್ವಾಸನಾಳದಲ್ಲಿ ಊತ ಉಂಟಾಗಬಹುದು. ಗಾಳಿಯಲ್ಲಿನ ಪಿಎಂ 2.5 ಕಣಗಳು ಶ್ವಾಸಕೋಶಕ್ಕೆ ಹಾನಿ ಮಾಡುತ್ತವೆ. ಮಕ್ಕಳು ಮತ್ತು ವೃದ್ಧರಿಗೆ ಪಟಾಕಿ ಹೊಗೆಯು ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಕ್ಯಾನ್ಸರ್ ಕಾರಕ ಕಣಗಳು ಕೂಡ ಪಟಾಕಿಯ ಹೊಗೆಯಲ್ಲಿ ಇರುತ್ತವೆ. ಕೊರೊನಾ ಕಾಲದಲ್ಲಿ ಪಟಾಕಿ ಸಿಡಿಸಿದರೆ ಸೋಂಕಿತರ ಶ್ವಾಸಕೋಶಕ್ಕೆ ಇನ್ನಷ್ಟು ಹಾನಿಯಾಗಿ, ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚು

ಡಾ.ಸಿ. ನಾಗರಾಜ್, ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆ ನಿರ್ದೇಶಕ

ಅಂಕಿ ಅಂಶ

₹8 ಲಕ್ಷ:ಪ್ರತಿ ಪಟಾಕಿ ಅಂಗಡಿಗೆ ಕನಿಷ್ಠ ಬಂಡವಾಳ

₹80 ಕೋಟಿ:ರಾಜ್ಯದಲ್ಲಿ ಪಟಾಕಿ ವಾರ್ಷಿಕ ವಹಿವಾಟು

15 ಲಕ್ಷ ಮಂದಿ:ರಾಜ್ಯದಲ್ಲಿ ಪಟಾಕಿ ಉದ್ದಿಮೆ ಮೇಲೆ ಅವಲಂಬನೆ

5,000:ರಾಜ್ಯದಾದ್ಯಂತ ಇರುತ್ತಿದ್ದ ಪಟಾಕಿ ಮಳಿಗೆಗಳು (ಅಂದಾಜು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.