ADVERTISEMENT

ಭಾವನಾತ್ಮಕ ವಿಚಾರಕ್ಕೆ ಯುವಜನರು ಬಲಿಪಶು: ಸಿದ್ದರಾಮಯ್ಯ ಬೇಸರ

ಡಾ. ರಾಮಮನೋಹರ ಲೋಹಿಯಾ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2022, 19:31 IST
Last Updated 23 ಮಾರ್ಚ್ 2022, 19:31 IST
ಬಸವರಾಜ ಹೊರಟ್ಟಿ ಅವರು ‘ಡಾ. ರಾಮಮನೋಹರ ಲೋಹಿಯಾ ಪ್ರಶಸ್ತಿ’ಯನ್ನು ಸಿದ್ದರಾಮಯ್ಯ ಅವರಿಗೆ ಪ್ರದಾನ ಮಾಡಿದರು.  ಸಮಾಜವಾದಿ ಚಿಂತಕ ಪ್ರೊ. ಆನಂದಕುಮಾರ್, ಲೇಖಕಿ ಡಾ. ವಸುಂಧರಾ ಭೂಪತಿ ಇದ್ದಾರೆ –ಪ್ರಜಾವಾಣಿ ಚಿತ್ರ
ಬಸವರಾಜ ಹೊರಟ್ಟಿ ಅವರು ‘ಡಾ. ರಾಮಮನೋಹರ ಲೋಹಿಯಾ ಪ್ರಶಸ್ತಿ’ಯನ್ನು ಸಿದ್ದರಾಮಯ್ಯ ಅವರಿಗೆ ಪ್ರದಾನ ಮಾಡಿದರು.  ಸಮಾಜವಾದಿ ಚಿಂತಕ ಪ್ರೊ. ಆನಂದಕುಮಾರ್, ಲೇಖಕಿ ಡಾ. ವಸುಂಧರಾ ಭೂಪತಿ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಬಲಪಂಥಿಯರು ಭಾವನಾತ್ಮಕ ವಿಚಾರಗಳನ್ನು ಜನರ ಮುಂದಿಟ್ಟು, ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಅನೇಕ ಯುವಕರು ಸಮಾಜದಲ್ಲಿ ಬಲಿಪಶು ಆಗುತ್ತಿದ್ದಾರೆ’ ಎಂದುವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.

ಭಾರತ ಯಾತ್ರಾ ಕೇಂದ್ರ, ಲೋಕನಾಯಕ ಜಯಪ್ರಕಾಶ್ ನಾರಾಯಣ್ ವಿಚಾರ ವೇದಿಕೆ, ಎಂ.ಪಿ. ಪ್ರಕಾಶ್ ಸಮಾಜಮುಖಿ ಟ್ರಸ್ಟ್ ಹಾಗೂ ಡಾ. ರಾಮಮನೋಹರ ಲೋಹಿಯಾ ವಿಚಾರ ವೇದಿಕೆ ಜಂಟಿಯಾಗಿ ನಗರದಲ್ಲಿ ಬುಧವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ‘ಡಾ. ರಾಮಮನೋಹರ ಲೋಹಿಯಾ ಪ್ರಶಸ್ತಿ’ ಸ್ವೀಕರಿಸಿದರು. ಈ ಪ್ರಶಸ್ತಿ ₹ 25 ಸಾವಿರ ನಗದು ಒಳಗೊಂಡಿದೆ.

‘ಸಂವಿಧಾನದ ಬಗ್ಗೆ ಗೌರವ ಇಲ್ಲದವರ ಕೈಗೆ ದೇಶ ಸಿಲುಕಿಕೊಂಡಿದೆ. ದೇಶದ ಯುವಶಕ್ತಿಯನ್ನು ಬಿಜೆಪಿ ಹಾಳು ಮಾಡುತ್ತಿದೆ. ಅವರಿಗೆವೈಚಾರಿಕತೆ, ತತ್ವ-ಸಿದ್ಧಾಂತ ಇಲ್ಲವಾಗಿದೆ. ಭಾವನಾತ್ವಕ ರಾಜಕಾರಣದ ಮೂಲಕ ನೈಜ ಸಮಸ್ಯೆಗಳನ್ನು ಮೂಲೆಗುಂಪು ಮಾಡುತ್ತಿದ್ದಾರೆ. ಈ ಸಮಾಜ ದಾರಿ ತಪ್ಪುತ್ತಿರುವಂತೆ ಭಾಸವಾಗುತ್ತಿದೆ’ ಎಂದುಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದರು.

ADVERTISEMENT

‘ಕಾನೂನು ಕಾಲೇಜಿನಲ್ಲಿ ಓದುತ್ತಿರುವಾಗ ಪ್ರಾಧ್ಯಾಪಕ ಪ್ರೊ.ನಂಜುಂಡಸ್ವಾಮಿ ನೀಡಿದ ಪ್ರೇರಣೆಯಿಂದ ಅನೇಕ ಹೋರಾಟಗಳಲ್ಲಿ ತೊಡಗಿ, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಪೊಲೀಸ್ ಠಾಣೆಗೂ ಹೋಗಬೇಕಾಯಿತು. ಈ ಮೊದಲು ಜನತಾ ಪರಿವಾರದಲ್ಲಿದ್ದ ನನಗೆ, ರಾಜಕೀಯದಲ್ಲಿ ನಿರೀಕ್ಷೆಗೂ ಮೀರಿ ಅವಕಾಶಗಳು ಸಿಕ್ಕಿತು. ಪ್ರಶಸ್ತಿ ಮೊತ್ತವನ್ನು ಗಾಂಧಿ ಭವನಕ್ಕೆ ನೀಡುತ್ತೇನೆ’ ಎಂದು ಹೇಳಿದರು.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ‘ಕಹಳ್ಳಿಯಿಂದ ಬಂದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಹೀಗಾಗಿ, ಅವರು ಇರುವಲ್ಲಿ ಈಗಲೂ ಜನ ಸೇರುತ್ತಾರೆ.ಕರ್ನಾಟಕ ಕಂಡಂತಹ ಅತ್ಯಂತ ಶ್ರೇಷ್ಠ ರಾಜಕಾರಣಿ ಅವರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷಬಿ.ಎಲ್. ಶಂಕರ್, ‘ಮಹಿಳೆಯರಿಗೆ ಸಮಾನ ಅವಕಾಶ ಸಿಗಲು ಲೋಹಿಯಾ ಕಾರಣ.ಈ ಪ್ರಪಂಚದ ಮೂಲ ತತ್ವ, ಸಿದ್ಧಾಂತ ನೀಡಿದವರಲ್ಲಿ ಲೋಹಿಯಾ ಅವರೂ ಒಬ್ಬರಾಗಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.