ಸಿದ್ದರಾಮಯ್ಯ , ಮುಖ್ಯಮಂತ್ರಿ
ಬೆಂಗಳೂರು: ‘ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಚಾಮರಾಜನಗರದ ಆರ್‌ಎಸ್‌ಎಸ್ ಸಂಘಟನೆಯವರು ಪಾಲ್ಗೊಂಡು, ಶಾಂತಿ ಕದಡುವ ಕೆಲಸ ಮಾಡುತ್ತಾರೆಂಬ ಕಾರಣಕ್ಕೆ ಚಾಮುಂಡಿ ಬೆಟ್ಟ ಚಲೊ ಕಾರ್ಯಕ್ರಮಕ್ಕೆ ಪೊಲೀಸರು ಅನುಮತಿ ನೀಡಲಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ಸಮಾಜದಲ್ಲಿ ಶಾಂತಿ ಕದಡುವುದೇ ಬಿಜೆಪಿಯ ಉದ್ದೇಶವಾಗಿದೆ. ಮದ್ದೂರಿನ ಪ್ರಕರಣಕ್ಕೆ ಸಂಬಂಧಿಸಿದಂತೆ, 21 ಜನರನ್ನು ಈಗಾಗಲೇ ಬಂಧಿಸಿದ್ದು, ಯಾವುದೇ ಜಾತಿ ಧರ್ಮಗಳನ್ನು ಸರ್ಕಾರ ಪರಿಗಣಿಸದೇ, ತಪ್ಪು ಮಾಡಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು’ ಎಂದರು.
‘ಬಿಜೆಪಿಯವರು ಮದ್ದೂರಿನಲ್ಲಿ ಬಂದ್ ಮಾಡಲು ಕರೆ ನೀಡಿದ್ದರು. ಗಲಭೆಯಲ್ಲಿ ನಿರತರಾಗಿದ್ದ ಯಾವುದೇ ಪಕ್ಷ, ಸಮುದಾಯವರೇ ಆಗಿದ್ದರೂ, ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಬಿಜೆಪಿಯವರು ಧ್ವನಿ ಎತ್ತುವುದಿಲ್ಲ: ‘ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ ಎಂದು ಬಿಜೆಪಿಯವರು ಕೇಂದ್ರ ಗೃಹ ಸಚಿವರಿಗೆ ದೂರು ನೀಡಿದ್ದಾರೆ’ ಎಂಬುದಕ್ಕೆ ಪ್ರತಿಕ್ರಿಯಿಸಿ, ‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯ ಜವಾಬ್ದಾರಿ ರಾಜ್ಯ ಸರ್ಕಾರದ್ದು. ಕೇಂದ್ರದಲ್ಲಿ ರೈತ ಚಳವಳಿಯಲ್ಲಿ ಅನೇಕ ರೈತರು ಪ್ರಾಣ ಕಳೆದುಕೊಂಡ ಸಂದರ್ಭದಲ್ಲಿ ಬಿಜೆಪಿಯವರು ಎಲ್ಲಿದ್ದರು? ಮಣಿಪುರದಲ್ಲಿ ನಡೆದ ಹಿಂಸಾಚಾರದ ಬಗ್ಗೆ ಯಾವುದೇ ಬಿಜೆಪಿಯವರು ಧ್ವನಿ ಎತ್ತಲಿಲ್ಲ ಏಕೆ? ಮಣಿಪುರದಲ್ಲಿ ಹಿಂಸಾಚಾರ ನಡೆದರೂ, ಪ್ರಧಾನಿಯವರು ಮಣಿಪುರಕ್ಕೆ ಭೇಟಿ ನೀಡಲೇ ಇಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.