
ಬೆಳಗಾವಿ ಅಧಿವೇಶನದ ಅವಧಿಯ ಉದ್ದಕ್ಕೂ ಸದ್ದು ಮಾಡಿದ್ದ ‘ನಾಯಕತ್ವ ಬದಲಾವಣೆ’ಯ ವಿಷಯ, ಕಲಾಪದ ಕೊನೇ ದಿನ ಮತ್ತೊಂದು ಮಜಲು ತಲುಪಿದೆ. ‘ಎರಡೂವರೆ ವರ್ಷದ ಒಪ್ಪಂದ ಆಗಿಲ್ಲ. ಹೈಕಮಾಂಡ್ ನನ್ನ ಪರ’ ಎಂದು ಸ್ಪಷ್ಟ ಧ್ವನಿಯಲ್ಲಿ ಹೇಳಿದ ಸಿದ್ದರಾಮಯ್ಯ ಅವರು ತಮ್ಮ ನಾಯಕತ್ವ ಅಬಾಧಿತ ಎಂದು ಶಾಸನ ಸಭೆಯಲ್ಲೇ ಸಾರಿದರು. ಅಂಕೋಲಾದ ಜಗದೀಶ್ವರಿ ಅಮ್ಮನವರಿಗೆ ಪ್ರಾರ್ಥನೆ ಸಲ್ಲಿಸಿದ ಬಳಿಕ ಮಾತನಾಡಿದ ಡಿ.ಕೆ.ಶಿವಕುಮಾರ್, ‘ನನ್ನ ಮತ್ತು ಸಿದ್ದರಾಮಯ್ಯ ನಡುವೆ ಒಪ್ಪಂದ ಆಗಿದೆ’ ಎಂದು ತಮ್ಮ ವಾದ ಮುಂದಿಟ್ಟರು
ಸುವರ್ಣ ವಿಧಾನಸೌಧ (ಬೆಳಗಾವಿ): ‘ಮುಖ್ಯಮಂತ್ರಿ ಸ್ಥಾನದಲ್ಲಿ ಎರಡೂವರೆ ವರ್ಷಮಾತ್ರ ಇರುತ್ತೇನೆ ಎಂದು ಹೇಳಿಲ್ಲ. ಎರಡೂವರೆ ವರ್ಷದ ಕುರಿತು ಒಪ್ಪಂದ, ತೀರ್ಮಾನವೂ ಆಗಿಲ್ಲ. ನಾನು ಐದು ವರ್ಷಕ್ಕೆ ಆಯ್ಕೆಯಾಗಿದ್ದೇನೆ. ನನ್ನ ಪ್ರಕಾರ ಹೈಕಮಾಂಡ್ ನಾಯಕರು ನನ್ನ ಪರವಾಗಿದ್ದಾರೆ. ಹೈಕಮಾಂಡ್ ತೀರ್ಮಾನಿಸಿದರೆ ಮುಂದೆಯೂ ನಾನೇ ಮುಖ್ಯಮಂತ್ರಿ’ ಎಂದು ಸಿದ್ದರಾಮಯ್ಯ ಹೇಳಿದರು.
ಇದೇ ಮೊದಲ ಬಾರಿಗೆ ಸಿದ್ದರಾಮಯ್ಯ ಅವರು ಎರಡೂವರೆ ವರ್ಷದ ಒಪ್ಪಂದವಾಗಿಲ್ಲವೆಂದು ಸ್ಪಷ್ಟ ಧ್ವನಿಯಲ್ಲಿ ಹೇಳಿದರು. ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ವಿಧಾನಸಭೆಯಲ್ಲಿ ನಡೆದ ಚರ್ಚೆಗೆ ಶುಕ್ರವಾರ ಉತ್ತರಿಸುವ ಸಂದರ್ಭದಲ್ಲಿ, ಮುಖ್ಯಮಂತ್ರಿ ಸ್ಥಾನದ ವಿಚಾರವಾಗಿ ವಿರೋಧ ಪಕ್ಷದ ಶಾಸಕರು ಮತ್ತು ಸಿದ್ದರಾಮಯ್ಯ ನಡುವೆ ಬಿಸಿಬಿಸಿ ಚರ್ಚೆ ನಡೆಯಿತು.
‘ಮುಖ್ಯಮಂತ್ರಿ ಸ್ಥಾನದ ಚರ್ಚೆ ನಮ್ಮ ಪಕ್ಷದ ವಿಚಾರ. ಅದನ್ನು ಸದನದಲ್ಲಿ ಚರ್ಚೆ ಮಾಡುವ ಇಲ್ಲವೆ ವಿರೋಧ ಪಕ್ಷದವರಿಗೆ ಹೇಳುವ ಅಗತ್ಯವಿಲ್ಲ’ ಎಂದೂ ಸಿದ್ದರಾಮಯ್ಯ ಗುಡುಗಿದರು. ‘ಮೊದಲು ನಮ್ಮನ್ನು ಜನರು ಆಯ್ಕೆ ಮಾಡುತ್ತಾರೆ. ಆನಂತರ ಶಾಸಕರು ಮುಖ್ಯಮಂತ್ರಿಯನ್ನು ಆಯ್ಕೆ ಮಾಡುತ್ತಾರೆ. ಹೈಕಮಾಂಡ್‌ನವರು ಅದನ್ನು ಒಪ್ಪುತ್ತಾರೆ. ಇನ್ನು, ನಮ್ಮಲ್ಲಿ ಎರಡೂವರೆ ವರ್ಷ ಎಂದು ಎಲ್ಲಿಯೂ ಹೇಳೇ ಇಲ್ಲ. ಆ ರೀತಿಯ ತೀರ್ಮಾನವಾಗಿಲ್ಲ. ನಾನು ಐದು ವರ್ಷಕ್ಕೆ ಆಯ್ಕೆಯಾಗಿದ್ದೇನೆ. ಇವೆಲ್ಲವೂ ನಮ್ಮ ಪಕ್ಷದ ವಿಚಾರ’ ಎಂದು ವಿಪಕ್ಷ ನಾಯಕರಿಗೆ ತಿರುಗೇಟು ಕೊಟ್ಟರು.
‘ನಾವೆಲ್ಲ ಸರಿಯಿದ್ದೇವೆ. ನಾನು ಎರಡನೇ ಬಾರಿ ಮುಖ್ಯಮಂತ್ರಿ ಆಗಿದ್ದೇನೆ. ಈಗಲೂ ನಾನೇ ಮುಖ್ಯಮಂತ್ರಿ. ಹೈಕಮಾಂಡ್ ನಾಯಕರು ತೀರ್ಮಾನಿಸುವವರೆಗೂ ನಾನೇ ಮುಖ್ಯಮಂತ್ರಿ. ಹೈಕಮಾಂಡ್‌ನವರು ತೀರ್ಮಾನದಂತೆ ನಡೆದುಕೊಳ್ಳುತ್ತೇವೆ’ ಎಂದರು. ‘ ಹೈಕಮಾಂಡ್ ತೀರ್ಮಾನ ಮಾಡಿದರೆ ಮುಂದೆಯೂ ನಾನೇ ಇರುತ್ತೇನೆ’ ಎಂದು ಅವರು ಹೇಳಿದರು.
ಕಾರವಾರ: ‘ನನ್ನ ಮತ್ತು ಸಿದ್ದರಾಮಯ್ಯ ನಡುವೆ ಒಪ್ಪಂದ ಆಗಿದೆ. ಅದರಂತೆ ಇಬ್ಬರೂ ಸೇರಿ ಹೈಕಮಾಂಡ್ ಅನ್ನು ಒಪ್ಪಿಸಿದ್ದೇವೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಅಧಿವೇಶನದ ಕೊನೆಯ ದಿನವಾದ ಶುಕ್ರವಾರ ಅಂಕೋಲಾದ ಆಂದ್ಲೆ ಗ್ರಾಮದಲ್ಲಿರುವ ಜಗದೀಶ್ವರಿ ಅಮ್ಮನವರ ದೇವಸ್ಥಾನಕ್ಕೆ ಭೇಟಿ ನೀಡಿ ಅವರು ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ, ತಮ್ಮ ಜತೆಗೆ ಬಂದಿದ್ದ ಸಚಿವರು, ಶಾಸಕರನ್ನು ಹೊರಗೆ ಉಳಿಸಲಾಗಿತ್ತು.
ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಐದು ವರ್ಷದ ಅವಧಿ ಪೂರ್ಣಗೊಳಿಸುವುದಿಲ್ಲ ಎಂದು ನಾನೆಂದೂ ಹೇಳಿಲ್ಲ. ಹೈಕಮಾಂಡ್ ಅವರ ಪರವಾಗಿದ್ದ ಕಾರಣಕ್ಕೆ ಅವರು ಮುಖ್ಯಮಂತ್ರಿ ಆಗಿದ್ದಾರೆ’ ಎಂದರು.
‘ಹೈಕಮಾಂಡ್ ಸೂಚನೆಯಂತೆ ನಾವಿಬ್ಬರೂ ಮಾತುಕತೆ ನಡೆಸಿ, ಒಟ್ಟಾಗಿ ಸಾಗುತ್ತೇವೆ’ ಎಂದು ಪ್ರತಿಪಾದಿಸಿದರು.
‘ಐದು ವರ್ಷಗಳ ಹಿಂದೆ ಆಂದ್ಲೆ ಜಗದೀಶ್ವರಿ ಅಮ್ಮನವರ ದೇವಸ್ಥಾನಕ್ಕೆ ಭೇಟಿ ನೀಡಿ, ಇಷ್ಟಾರ್ಥಕ್ಕೆ ಪ್ರಾರ್ಥಿಸಿದ್ದೆ. ಪ್ರಾರ್ಥನೆ ಫಲಿಸಿತ್ತು. ಮತ್ತೆ ಇಲ್ಲಿಗೆ ಬಂದಿದ್ದೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.