ADVERTISEMENT

ಯುವನಿಧಿ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ: ಇಂದಿನಿಂದಲೇ ನೋಂದಣಿ ಆರಂಭ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಡಿಸೆಂಬರ್ 2023, 9:10 IST
Last Updated 26 ಡಿಸೆಂಬರ್ 2023, 9:10 IST
<div class="paragraphs"><p>ಸಿದ್ದರಾಮಯ್ಯ</p></div>

ಸಿದ್ದರಾಮಯ್ಯ

   

ಬೆಂಗಳೂರು: ರಾಜ್ಯ ಸರ್ಕಾರದ ‘ಯುವನಿಧಿ’ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಮಂಗಳವಾರ) ಚಾಲನೆ ನೀಡಿದ್ದಾರೆ.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೋಂದಣಿಗೆ ಚಾಲನೆ ನೀಡಿದ್ದಾರೆ.

ADVERTISEMENT

ಈ ಕುರಿತು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘2022-23ನೇ ಸಾಲಿನಲ್ಲಿ ಪದವಿ ಪಡೆದು ಆರು ತಿಂಗಳಾದರೂ ಉದ್ಯೋಗ ಸಿಗದ ನಿರುದ್ಯೋಗಿ ಯುವಜನರ ಮೇಲಿನ ಆರ್ಥಿಕ ಒತ್ತಡವನ್ನು ತಗ್ಗಿಸಿ, ಇಷ್ಟದ ಉದ್ಯೋಗ ಪಡೆಯಲು ನೆರವಾಗುವ ಉದ್ದೇಶದೊಂದಿಗೆ ರೂಪಿಸಿರುವ ಯೋಜನೆಯೇ ಯುವನಿಧಿ. ಈ ಯೋಜನೆಯಡಿ 2023ರಲ್ಲಿ ತೇರ್ಗಡೆಯಾದ ಎಲ್ಲಾ ಪದವೀಧರರು ಹಾಗೂ ಡಿಪ್ಲೊಮಾ ಉತ್ತೀರ್ಣರಾದವರು ಕನಿಷ್ಠ 6 ತಿಂಗಳವರೆಗಿನ ಉದ್ಯೋಗ ದೊರೆಯದೆ ಇದ್ದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ’ ಎಂದು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ವಾಸವಿರುವವರು, ಸ್ವಯಂ ಉದ್ಯೋಗ ಹೊಂದಿಲ್ಲದವರು ಮತ್ತು ಉನ್ನತ ವಿದ್ಯಾಭ್ಯಾಸ ಮುಂದುವರಿಸದೆ ಇರುವವರಿಗೆ ಈ ಯೋಜನೆ ಅನ್ವಯವಾಗಲಿದ್ದು, ಕರ್ನಾಟಕ ಒನ್‌, ಬೆಂಗಳೂರು ಒನ್‌, ಗ್ರಾಮ ಒನ್‌ ಹಾಗೂ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಇಂದಿನಿಂದ ಉಚಿತವಾಗಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ವಿವೇಕಾನಂದ ಜಯಂತಿ ದಿನವಾದ ಜ. 12ರಂದು ಶಿವಮೊಗ್ಗದಲ್ಲಿ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಮೊತ್ತ ಬಿಡುಗಡೆ ಮಾಡಲಾಗುವುದು. ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಯೋಜನೆಯನ್ನು ಅನುಷ್ಠಾನಗೊಳಿಸಲಿದೆ ಎಂದು ಕೌಶಲಾಭಿವೃದ್ಧಿ ಸಚಿವ ಶರಣಪ್ರಕಾಶ ಪಾಟೀಲ ತಿಳಿಸಿದ್ದಾರೆ.

ಇಂದಿನಿಂದಲೇ ನೋಂದಣಿ ಆರಂಭವಾಗಿದ್ದು, ರಾಜ್ಯದಾದ್ಯಂತ 4.81 ಲಕ್ಷ ಪದವೀಧರರು ಹಾಗೂ ಡಿಪ‍್ಲೊಮಾ ಉತ್ತೀರ್ಣರಾದ 48,153 ಸೇರಿ ಒಟ್ಟು 5,29,153 ಫಲಾನುಭವಿಗಳನ್ನು ಅಂದಾಜಿಸಲಾಗಿದೆ ಎಂದು ಶರಣಪ್ರಕಾಶ ಪಾಟೀಲ ಹೇಳಿದ್ದಾರೆ.

‘ಪದವಿ, ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರುವ, 2022-23ನೇ ಶೈಕ್ಷಣಿಕ ವರ್ಷದಲ್ಲಿ ಕಲಿತು 2023ರಲ್ಲಿ ತೇರ್ಗಡೆ ಹೊಂದಿದ, ಕನಿಷ್ಠ ಆರು ವರ್ಷ ಕರ್ನಾಟಕದಲ್ಲಿ ಓದಿದವರು ಯೋಜನೆಗೆ ಅರ್ಹರು’ ಎಂದು ಸಚಿವರು ತಿಳಿಸಿದ್ದಾರೆ.

‌‘ಅರ್ಹ ಅಭ್ಯರ್ಥಿಗಳು ಸೇವಾಸಿಂಧು ಜಾಲತಾಣದಲ್ಲಿ (https://sevasindhugs.karnataka.gov.in/) ಲಾಗಿನ್ ಆಗಿ ಅರ್ಜಿ ಸಲ್ಲಿಸಬಹುದು. ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರಗಳು, ಗ್ರಾಮ-ಒನ್ ಕೇಂದ್ರಗಳನ್ನು ಬಳಸಿಕೊಂಡು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ತಮ್ಮ ಜಿಲ್ಲೆ ಮತ್ತು ತಾಲ್ಲೂಕು ಆಯ್ಕೆ ಮಾಡಿಕೊಳ್ಳಬೇಕು’ ಎಂದೂ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.