ADVERTISEMENT

ಲಾಕ್‌ಡೌನ್‌ ಮುಂದುವರಿದರೆ ಸಂಬಳ ಕಡಿತ: ಸಿ.ಎಂ ಸುಳಿವು

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸುಳಿವು

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2020, 21:58 IST
Last Updated 6 ಏಪ್ರಿಲ್ 2020, 21:58 IST
   

ಬೆಂಗಳೂರು: ‘ಕೊರೊನಾ ಸೋಂಕು ತಡೆಗಾಗಿ ಇದೀಗ ಜಾರಿಯಲ್ಲಿರುವ ಲಾಕ್‌ಡೌನ್ ಇದೇ 14ರ ನಂತರವೂ ಮುಂದುವರಿದರೆ ಮುಂದಿನ ತಿಂಗಳು ಸರ್ಕಾರಿ ನೌಕರರ ಸಂಬಳದಲ್ಲಿ ಕಡಿತ ಮಾಡಬೇಕಾಗಿ ಬರಬಹುದು‘ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ಸೋಮವಾರ ಖಾಸಗಿ ಟಿವಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಅವರು ಈ ಸುಳಿವು ನೀಡಿದ್ದು, ‘ಲಾಕ್‌ಡೌನ್‌ನಿಂದಾಗಿ ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ನೌಕರರ ಹಿತ ಕಾಪಾಡುವ ಸಲುವಾಗಿ ಏಪ್ರಿಲ್‌ ತಿಂಗಳಲ್ಲಿ ಯಾರಿಗೂ ಸಂಬಳ ಕಡಿತ ಮಾಡುವುದಿಲ್ಲ. ಲಾಕ್‌ಡೌನ್‌ ಇದೇ 14ಕ್ಕೆ ಕೊನೆಗೊಂಡರೆ ಆರ್ಥಿಕ ಚಟುವಟಿಕೆ ಸಹಜ ಸ್ಥಿತಿಗೆ ಮರಳಿ ಸಂಬಳ ಕೊಡುವುದಕ್ಕೆ ಯಾವ ತೊಂದರೆಯೂ ಆಗಲಾರದು, ಆದರೆ ಲಾಕ್‌ಡೌನ್‌ ಮುಂದುವರಿದರೆ ಮಾತ್ರ ಮುಂದಿನ ತಿಂಗಳ ಸಂಬಳದಲ್ಲಿ ಎಷ್ಟು ಕಡಿತ ಮಾಡ
ಬೇಕು ಎಂಬುದರ ಬಗ್ಗೆ ಚರ್ಚಿಸುವ ಅಗತ್ಯ ಬೀಳಬಹುದು’ ಎಂದರು.

ರಾಜ್ಯ ಸರ್ಕಾರ 2020–21ನೇ ಸಾಲಿನಲ್ಲಿ ₹ 33 ಸಾವಿರ ಕೋಟಿಗಳನ್ನು ಸಂಬಳಕ್ಕಾಗಿಯೇ ವಿನಿಯೋಗಿಸಬೇಕಿದ್ದು, ಒಟ್ಟು ವರಮಾನದ ಶೇ 90 ಭಾಗ ಇದಕ್ಕೇ ಖರ್ಚಾಗುತ್ತದೆ. ಹೀಗಾಗಿ ಮುಖ್ಯಮಂತ್ರಿ ಅವರಿಂದ ಈ ಎಚ್ಚರಿಕೆಯ ಸಂದೇಶ ಬಂದಿದೆ.

ADVERTISEMENT

‘ನಮ್ಮ ರಾಜ್ಯವಷ್ಟೇ ಅಲ್ಲ, ಇತರ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರದ ಹಣಕಾಸು ಸ್ಥಿತಿಯೂ ಉತ್ತಮವಾಗಿಲ್ಲ. ನಮ್ಮ ವರಮಾನ ಕುಸಿದಿರುವುದರಿಂದ ಎಲ್ಲ ಅಭಿವೃದ್ಧಿ ಚಟುವಟಿಕೆಗಳೂ ಸ್ಥಗಿತಗೊಂಡಿವೆ’ ಎಂದರು.

‘ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆ ಕಡಿಮೆ ಇರುವ ಜಿಲ್ಲೆಗಳಲ್ಲಿ 14ರ ನಂತರ ಲಾಕ್‌ಡೌನ್‌ ಸಡಿಲಿಕೆ ಸಾಧ್ಯವಾಗಬಹುದು’ ಎಂದ ಅವರು, ‘ಲಾಕ್‌ಡೌನ್‌ನ ಯಶಸ್ಸು ಜನರ ಕೈಯಲ್ಲೇ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.