ADVERTISEMENT

ರಾಜ್ಯದಲ್ಲಿ ಬೆಂಕಿ ಹಚ್ಚಲು ಮುಂದಾಗಿರುವ ಬೊಮ್ಮಾಯಿ: ಕಾಂಗ್ರೆಸ್ ಆಕ್ರೋಶ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಮಾರ್ಚ್ 2022, 13:32 IST
Last Updated 25 ಮಾರ್ಚ್ 2022, 13:32 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ಅಭಿವೃದ್ಧಿ ಕೆಲಸಗಳನ್ನು ತೋರಿಸಿ ಮತ ಕೇಳಲು ಮುಖವಿಲ್ಲದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದಲ್ಲಿ ಬೆಂಕಿ ಹಚ್ಚಲು ಮುಂದಾಗಿದ್ದಾರೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಸವರಾಜ ಬೊಮ್ಮಾಯಿ ವಿರುದ್ಧ ವಾಗ್ದಾಳಿ ನಡೆಸಿದೆ.

‘ಬೊಮ್ಮಾಯಿ ಅವರು ಉತ್ತರ ಪ್ರದೇಶ ಮಾದರಿ ಅನುಸರಿಸಿ ರಾಜ್ಯದಲ್ಲಿ ಬೆಂಕಿ ಹಚ್ಚಲು ಮುಂದಾಗಿದ್ದಾರೆ. ಅಧಿಕಾರಕ್ಕೆ ಬಂದ ನಂತರ ಅಭಿವೃದ್ಧಿ ಪರ ಚರ್ಚೆಯ ಬದಲು ಧರ್ಮದ ಆಧಾರದ ಅನಗತ್ಯ ಕಲಹಗಳನ್ನು ಸೃಷ್ಟಿಸುತ್ತಿದ್ದಾರೆ. ‘ದಾರಿ ತಪ್ಪಿದ ಮಗ’ನನ್ನು ನೋಡಿ ದಿವಂಗತ ಎಸ್.ಆರ್. ಬೊಮ್ಮಾಯಿಯವರ ಆತ್ಮ ಅದೆಷ್ಟು ಕೊರಗುತ್ತಿದೆಯೋ’ ಎಂದು #ಬಿಲ್ಡಪ್‌ಬೊಮ್ಮಾಯಿ ಹ್ಯಾಷ್‌ಟ್ಯಾಗ್‌ನೊಂದಿಗೆ ಕಾಂಗ್ರೆಸ್ ಟ್ವೀಟ್ ಮಾಡಿದೆ.

‘ಬೊಮ್ಮಾಯಿಯವರು ತಮ್ಮ ಅಭಿವೃದ್ಧಿ ಕೆಲಸಗಳನ್ನು ತೋರಿಸಿ ಮತ ಕೇಳಲು ಮುಖವಿಲ್ಲದೆ ಚುನಾವಣೆಗೆ ಮತೀಯ ವಿಷಯಗಳನ್ನು ಮುಂದಿಡಲು ನೆಲ ಹದಗೊಳಿಸುತ್ತಿದ್ದಾರೆ. ಆಕ್ಷನ್‌ಗೆ ರಿಯಾಕ್ಷನ್ ಎಂದಾಗಲೇ ಅವರೊಳಗಿನ ಕ್ರೌರ್ಯದ ಮುಖ ಅನಾವರಣವಾಯ್ತು. ಅಲ್ಲಿಂದ ಇಲ್ಲಿಯವರೆಗೂ ರಾಜ್ಯದಲ್ಲಿ ಅಭಿವೃದ್ಧಿ ಆಧಾರಿತ ಚರ್ಚೆಯೇ ನಡೆದಿಲ್ಲ’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಕಾಂಗ್ರೆಸ್ ಉಲ್ಲೇಖಿಸಿದೆ.

‘ಕ್ರಿಯೆಗೆ ಪ್ರತಿಕ್ರಿಯೆ ಎಂದು ಗೂಂಡಾಗಿರಿಗೆ ಒಪ್ಪಿಗೆ, ಮತಾಂತರ ನಿಷೇಧ ಮಸೂದೆ, ತ್ರಿವರ್ಣಧ್ವಜಕ್ಕೆ ಅವಮಾನ, ಹಿಜಾಬ್ – ಕೇಸರಿ ಶಾಲು, ಹರ್ಷ ಕೊಲೆ ಪ್ರಕರಣದ ವೈಭವೀಕರಣ, ಕಾಶ್ಮೀರ್ ಫೈಲ್ಸ್ ಪ್ರಚಾರ, ವ್ಯಾಪಾರಕ್ಕೂ ಕೋಮುದ್ವೇಷದ ಲೇಪ, ಬೊಮ್ಮಾಯಿ ಅವರೇ, ಇದೇ ಅಲ್ಲವೇ ನಿಮ್ಮ ಸಾಧನೆಯ ಪಟ್ಟಿ, ಇದಲ್ಲದೆ ಬೇರೆನಿದೆ’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.