ADVERTISEMENT

ಕೇಂದ್ರದಿಂದ ರಾಜ್ಯಕ್ಕೆ ಅನುದಾನ: ಶ್ವೇತಪತ್ರಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 16:27 IST
Last Updated 21 ಆಗಸ್ಟ್ 2025, 16:27 IST
ಕೆ.ಎಂ. ಶಿವಲಿಂಗೇಗೌಡ
ಕೆ.ಎಂ. ಶಿವಲಿಂಗೇಗೌಡ   

ಬೆಂಗಳೂರು: ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ನಿರಂತರ ಅನ್ಯಾಯವಾಗುತ್ತಿದ್ದು, ರಾಜ್ಯದ ಯೋಜನೆಗಳಿಗೆ ಕೇಂದ್ರ ಸರ್ಕಾರ ಈವರೆಗೆ ನೀಡಿರುವ ಅನುದಾನ ಬಗ್ಗೆ ಶ್ವೇತಪತ್ರ ಮಂಡಿಸಬೇಕು ಎಂದು ಕಾಂಗ್ರೆಸ್‌ ಸದಸ್ಯರು ಸರ್ಕಾರವನ್ನು ಒತ್ತಾಯಿಸಿದರು.

ವಿಧಾನಸಭೆಯಲ್ಲಿ ಈ ಕುರಿತು ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಕಾಂಗ್ರೆಸ್‌ನ ಕೆ.ಎಂ.ಶಿವಲಿಂಗೇಗೌಡ, ಜಿಎಸ್‌ಟಿ ವ್ಯವಸ್ಥೆ ಜಾರಿಗೆ ಬಂದ ಮೇಲೆ ರಾಜ್ಯಕ್ಕೆ ಹೆಚ್ಚು ಅನ್ಯಾಯವಾಗುತ್ತಿದೆ.  ಕಾಂಗ್ರೆಸ್ ಮತ್ತು ಬಿಜೆಪಿ ಸೇರಿ ರಾಜ್ಯದ ಪಾಲು ಪಡೆದುಕೊಳ್ಳಲು ಹೋರಾಡಬೇಕು ಎಂದು ಮನವಿ ಮಾಡಿದರು.

ಜಿಎಸ್‌ಟಿ ಜಾರಿಗೆ ಬರುವುದಕ್ಕೂ ಮೊದಲು ರಾಜ್ಯದಲ್ಲಿ ವ್ಯಾಟ್‌ ವ್ಯವಸ್ಥೆ ಜಾರಿಯಲ್ಲಿ ಇತ್ತು. ಜಿಎಸ್‌ಟಿ ಜಾರಿ ಮಾಡುವಾಗ ತೆರಿಗೆ ಸಂಗ್ರಹದಲ್ಲಿ ಕೊರತೆಯಾದರೆ ಆ ಮೊತ್ತವನ್ನು ತುಂಬಿ ಕೊಡುವುದಾಗಿ ಕೇಂದ್ರ ಭರವಸೆ ನೀಡಿತ್ತು. 2022 ರವರೆಗೆ ಕೊರತೆಯನ್ನು ತುಂಬಿ ಕೊಟ್ಟಿತು ಆದರೆ, ಆ ಬಳಿಕ ಕೊರತೆಯನ್ನು ತುಂಬಿ ಕೊಡುತ್ತಿಲ್ಲ ಎಂದು ಶಿವಲಿಂಗೇಗೌಡ ಟೀಕಾ ಪ್ರಹಾರ ನಡೆಸಿದರು.

ADVERTISEMENT

ಇದಕ್ಕೆ ಬಿಜೆಪಿ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದೂ ಅಲ್ಲದೇ, ಶಿವಲಿಂಗೇಗೌಡರ ಮಾತಿಗೆ ಅಡ್ಡಿಪಡಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಅವರು, ‘ನಾನು ಇಲ್ಲಿ ಸಂತೆ ಭಾಷಣ ಮಾಡಲು ಬಂದಿಲ್ಲ. ಗಂಭೀರ ವಿಷಯ ಪ್ರಸ್ತಾಪಿಸಲು ಬಂದಿದ್ದೇನೆ’ ಎಂದು ತಿರುಗೇಟು ನೀಡಿದರು.

‘ರಾಜ್ಯ ಸರ್ಕಾರ ನಮ್ಮ ಕ್ಷೇತ್ರಗಳಿಗೆ ಸರಿಯಾಗಿ ಅನುದಾನ ನೀಡುತ್ತಿಲ್ಲ, ಕ್ಷೇತ್ರ– ಕ್ಷೇತ್ರಗಳ ಮಧ್ಯೆ ತಾರತಮ್ಯ ಮಾಡಲಾಗುತ್ತಿದೆ. ನಾವೂ ಕರ್ನಾಟಕದಲ್ಲಿ ಇದ್ದೇವೆ, ನಿಮ್ಮ ಸರ್ಕಾರ ಹೀಗೆ ಏಕೆ ಮಾಡುತ್ತಿದೆ’ ಎಂದು ಬಿಜೆಪಿಯ ವೇದವ್ಯಾಸ ಕಾಮತ್‌ ಪ್ರಶ್ನಿಸಿದರು.

ಈ ವೇಳೆ, ಕಾಂಗ್ರೆಸ್‌ನ ಶರತ್‌ ಬಚ್ಚೇಗೌಡ ಅವರು ಪ್ರಧಾನಿ ಮೋದಿ ಅವರ ಕುರಿತು ಆಡಿದ ಮಾತನ್ನು ಕಡತದಿಂದ ತೆಗೆಯುವಂತೆ ವಿರೋಧಪಕ್ಷದ ನಾಯಕ ಆರ್‌.ಅಶೋಕ ಒತ್ತಾಯಿಸಿದರು. ಬಳಿಕ ಆ ಮಾತುಗಳನ್ನು ಕಡತದಿಂದ ತೆಗೆದುಹಾಕಲು ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.