ADVERTISEMENT

ಕಾಂಗ್ರೆಸ್‌ನಲ್ಲಿ ಹಳಬರು, ಹೊಸಬರೆಂಬ ಪ್ರಶ್ನೆ ಇಲ್ಲ: ಡಿ.ಕೆ. ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 12 ಜುಲೈ 2021, 19:05 IST
Last Updated 12 ಜುಲೈ 2021, 19:05 IST
ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್   

ಬೆಂಗಳೂರು: ‘ಕಾಂಗ್ರೆಸ್‌ನಲ್ಲಿ ಇನ್ನು ಹಳಬರು, ಹೊಸಬರು ಎಂಬ ಪ್ರಶ್ನೆ ಇಲ್ಲ. ಬೇಷರತ್ ಆಗಿ ದುಡಿಯಲು ಬಯಸುವವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗುವುದು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ತ್ಯಜಿಸಿ ಬಂದವರನ್ನು ಪಕ್ಷಕ್ಕೆ ಸೋಮವಾರ ಬರಮಾಡಿಕೊಂಡ ಬಳಿಕ ಮಾತನಾಡಿದ ಅವರು, ‘ಕಾಂಗ್ರೆಸ್ ದೇವಾಲಯಕ್ಕೆ ಬಂದು ಪಕ್ಷ ಸೇರಿರುವುದು ನಿಮ್ಮ ಭಾಗ್ಯ’ ಎಂದರು.

‘ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲೂ ಪಕ್ಷವನ್ನು ಗೆಲ್ಲಿಸಬೇಕು. ಅದೇ ನಮ್ಮ ಗುರಿ. ಮುಂದಿನ ಚುನಾವಣೆಯಲ್ಲಿ 130 ಕ್ಷೇತ್ರ ಗೆಲ್ಲುವುದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗುರಿ. ಅದರೆ, ನಮ್ಮದು ರಾಜ್ಯದ ಎಲ್ಲ 224 ಕ್ಷೇತ್ರಗಳನ್ನೂ ಗೆಲ್ಲುವುದು ಗುರಿ’ ಎಂದರು.

ADVERTISEMENT

‘ನನ್ನ ಕ್ಷೇತ್ರದಲ್ಲಿ ಬಿಜೆಪಿ ನಾಯಕರು ಗೆಲ್ಲಲು ಪ್ರಯತ್ನಿಸಿದರೆ ತಪ್ಪಿಲ್ಲ. ಜೆಡಿಎಸ್‌ನವರು ಪ್ರಯತ್ನಿಸಿದರೂ ತಪ್ಪಿಲ್ಲ. ಹಾಗೆಂದು, ನಾವು ಯಡಿಯೂರಪ್ಪ, ಜಗದೀಶ ಶೆಟ್ಟರ್, ಉಪ ಮುಖ್ಯಮಮಂತ್ರಿಗಳ ಕ್ಷೇತ್ರಗಳಲ್ಲಿ ನಮ್ಮ ಕಾರ್ಯಕರ್ತರನ್ನು ಬಿಟ್ಟುಕೊಡಲು ಸಾಧ್ಯವೇ? ಅಲ್ಲಿ ನಾವ್ಯಾಕೆ ಗೆಲ್ಲಬಾರದು? ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು’ ಎಂದರು.

ದೇವನಹಳ್ಳಿ ವಿವಿಧ ಪಕ್ಷಗಳ ಮುಖಂಡರಾದ ಚಿದಾನಂದ, ತುಂಗಭದ್ರಾ, ನಾಗರಾಜ್, ಮಂಜುನಾಥ್, ದೇವರಾಜ್, ಚೊಕ್ಕರೆಡ್ಡಿ, ರವಿ, ಬಸವರಾಜ್, ಪಿಳ್ಳಪ್ಪ, ಮುರಳೀಧರ ಮತ್ತಿತರ ಕಾಂಗ್ರೆಸ್ ಸೇರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.