
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
(ಸಂಗ್ರಹ ಚಿತ್ರ)
ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ‘ಅಧಿಕಾರ’ಕ್ಕಾಗಿ ನಡೆಯುತ್ತಿರುವ ಇಬ್ಬಣಗಳ ಪಟ್ಟು–ಪ್ರತಿಪಟ್ಟಿನ ರಾಜಕೀಯ ಮತ್ತಷ್ಟು ರಂಗೇರಿದೆ. ‘ವಾಗ್ದಾನ’ದಂತೆ ಅಧಿಕಾರ ಹಸ್ತಾಂತರ ನಡೆಯಲೇಬೇಕು ಎಂದು ಡಿ.ಕೆ. ಶಿವಕುಮಾರ್ ಹಕ್ಕೊತ್ತಾಯ ಮಂಡಿಸಲು ಮುಂದಾಗಿದ್ದರೆ, ಅವಧಿಪೂರ್ಣಗೊಳಿಸಲೇಬೇಕೆಂಬ ಉಮೇದಿನಲ್ಲಿರುವ ಸಿದ್ದರಾಮಯ್ಯ ಅವರು, ಸಂಪುಟ ಪುನರ್‌ರಚನೆಯ ಅಸ್ತ್ರ ಹಿಡಿದು, ಎದುರಾಳಿ ಬಣವನ್ನು ಹಿಮ್ಮೆಟ್ಟಿಸುವ ತಯಾರಿಯಲ್ಲಿದ್ದಾರೆ.
ನವದೆಹಲಿ: ‘ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಗೆ ಮುನ್ನ ನೀಡಿದ್ದ ವಾಗ್ದಾನದಂತೆ ಅಧಿಕಾರ ಹಸ್ತಾಂತರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸ್ಪಷ್ಟ ನಿರ್ದೇಶನ ನೀಡಬೇಕು’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ತಮ್ಮ ಡಿ.ಕೆ. ಸುರೇಶ್ ಅವರು ಹೈಕಮಾಂಡ್ ಮೇಲೆ ನಿರಂತರ ಒತ್ತಡ ಹೇರುವತ್ತ ತಮ್ಮ ಲಕ್ಷ್ಯ ಕೊಟ್ಟಿದ್ದಾರೆ.
ಇದೇ 20ಕ್ಕೆ ಎರಡೂವರೆ ವರ್ಷ ಪೂರೈಸುತ್ತಿರುವ ಸಿದ್ದರಾಮಯ್ಯ ಅವರು ಸಂಪುಟ ಪುನರ್ ರಚನೆಯ ದಾಳ ಉರುಳಿಸುವ ಮೂಲಕ ‘ಐದು ವರ್ಷಗಳ ಅವಧಿಗೆ ನಾನೇ ಮುಖ್ಯಮಂತ್ರಿ’ ಎಂಬ ಸಂದೇಶ ರವಾನಿಸಲು ಹೊರಟಿದ್ದಾರೆ. ಸಿದ್ದರಾಮಯ್ಯ ಬಣದ ‘ಆಟ’ಕ್ಕೆ ಪ್ರತಿತಂತ್ರ ಹೆಣೆದಿರುವ ಡಿ.ಕೆ. ಸಹೋದರರು ಅಧಿಕಾರ ಹಸ್ತಾಂತರ ವಿಷಯ ಈಗಲೇ ಇತ್ಯರ್ಥವಾಗಬೇಕು ಎಂದು ಪಟ್ಟು ಹಿಡಿದಿದ್ದಾರೆ. ‘ನಿಮ್ಮ ಮಾತಿಗೆ ಒಪ್ಪಿ ಎರಡೂವರೆ ವರ್ಷ ಸಂಯಮದಿಂದ ಕಾದಿದ್ದೇವೆ. ಕೆಲಸಕ್ಕೆ ನ್ಯಾಯಯುತ ‘ಕೂಲಿ’ ನೀಡುವ ಸರದಿ ನಿಮ್ಮದು’ ಎಂಬ ಪ್ರಬಲವಾದವನ್ನು ಹೈಕಮಾಂಡ್ ಮುಂದಿಟ್ಟಿದ್ದಾರೆ.
ರಾಹುಲ್ ಅವರನ್ನು ಶನಿವಾರ ಭೇಟಿ ಮಾಡಿದ್ದ ಸಿದ್ದರಾಮಯ್ಯ ಅವರು ಸಂಪುಟ ಪುನರ್ ರಚನೆ ಬಗ್ಗೆ ಪ್ರಸ್ತಾಪಿಸಿದ್ದರು. ರಾಹುಲ್ ಸೂಚನೆಯಂತೆ ಮಲ್ಲಿಕಾರ್ಜುನ ಖರ್ಗೆಯವರನ್ನೂ ಭೇಟಿ ಮಾಡಿದ್ದರು. ಸಂಪುಟ ಪುನರ್ ರಚನೆಗೆ ವರಿಷ್ಠರು ತಾತ್ವಿಕ ಒಪ್ಪಿಗೆ ನೀಡಿದ್ದಾರೆ ಎಂಬ ಸುದ್ದಿ ಹರಡುತ್ತಿದ್ದಂತೆ ಡಿ.ಕೆ. ಸುರೇಶ್ ಭಾನುವಾರ ದೆಹಲಿಗೆ ಧಾವಿಸಿದ್ದರು. ಸಹೋದರರಿಬ್ಬರು ಅಂದು ಸಂಜೆಯೇ ಎಐಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿ ಸುದೀರ್ಘವಾಗಿ ಸಮಾಲೋಚಿಸಿದ್ದರು.
ಕರ್ನಾಟಕ ಭವನದಲ್ಲಿ ಸೋಮವಾರ ಉಳಿದಿದ್ದ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದ ಸುರೇಶ್ ಕೆಲ ಹೊತ್ತು ಚರ್ಚಿಸಿದ್ದರು. ಖರ್ಗೆ ಅವರನ್ನು ಸಿದ್ದರಾಮಯ್ಯ ಸಂಜೆ ಭೇಟಿ ಮಾಡಿ ಸಂಪುಟ ಪುನರ್ ರಚನೆಗೆ ಒಪ್ಪಿಗೆಯನ್ನು ಕೋರಿದ್ದರು. ಸಿದ್ದರಾಮಯ್ಯ ಬೆಂಗಳೂರಿಗೆ ತೆರಳಿದ ಬೆನ್ನಲ್ಲೇ ಸುರೇಶ್ ಅವರೂ ಎಐಸಿಸಿ ಅಧ್ಯಕ್ಷರನ್ನು ಕಂಡು ಅರ್ಧ ಗಂಟೆ ಮಾತುಕತೆ ನಡೆಸಿದ್ದರು.
‘ಐದು ವರ್ಷಗಳ ಪೈಕಿ ಮೊದಲ ಎರಡೂವರೆ ವರ್ಷಗಳಿಗೆ ಸಿದ್ದರಾಮಯ್ಯ ಹಾಗೂ ಎರಡನೇ ಅವಧಿಗೆ ಶಿವಕುಮಾರ್ ಮುಖ್ಯಮಂತ್ರಿ ಎಂದು ಸರ್ಕಾರ ರಚನೆಗೆ ಮುನ್ನವೇ ಒಪ್ಪಂದವಾಗಿತ್ತು. ನಿಮ್ಮ ಸಮ್ಮುಖದಲ್ಲೇ ಈ ಮಾತುಕತೆ ನಡೆದಿತ್ತು. ನಮ್ಮ ಬೇಡಿಕೆಗೆ ಒಪ್ಪಿದ ಬಳಿಕವೇ ನಮ್ಮ ಪಟ್ಟು ಸಡಿಲಿಸಿದ್ದೆವು. ಎರಡೂವರೆ ವರ್ಷಗಳಲ್ಲಿ ಯಾವುದೇ ತಕರಾರು ಮಾಡದೆ ಸಿದ್ದರಾಮಯ್ಯ ಅವರಿಗೆ ಸಂಪೂರ್ಣ ಸಹಕಾರ ನೀಡಿದ್ದೇವೆ. ಈಗ ಸಿದ್ದರಾಮಯ್ಯ ಅವರ ಸರದಿ. ಯಾವುದೇ ನೆಪ ಹೇಳದೆ ಅಧಿಕಾರ ಹಸ್ತಾಂತರ ಮಾಡಬೇಕು. ಈ ಬಗ್ಗೆ ಹೈಕಮಾಂಡ್ ಸೂಚನೆ ನೀಡಬೇಕು’ ಎಂದು ಸಹೋದರರು ಖರ್ಗೆ ಅವರಲ್ಲಿ ಒತ್ತಾಯಿಸಿದ್ದರು. ಸಂಪುಟ ಪುನರ್ ರಚನೆಗೆ ಸುತಾರಾಂ ಅವಕಾಶ ನೀಡಬಾರದು ಎಂದು ಆಗ್ರಹಿಸಿದ್ದರು. ‘ಈ ವಿಷಯದ ಬಗ್ಗೆ ರಾಹುಲ್ ಗಾಂಧಿ ಅವರೊಂದಿಗೆ ಚರ್ಚಿಸಿ’ ಎಂದು ಖರ್ಗೆ ಅವರು ಡಿ.ಕೆ. ಸಹೋದರರಿಗೆ ತಿಳಿಸಿದ್ದರು ಎಂದು ಮೂಲಗಳು ತಿಳಿಸಿವೆ.
‘ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನದ ಬಳಿಕ ಕಾಂಗ್ರೆಸ್ ಪಕ್ಷ ಸಂಪೂರ್ಣ ದುರ್ಬಲಗೊಂಡಿತ್ತು. ಸಂಘಟನೆಯೇ ಇರಲಿಲ್ಲ. ಕೋವಿಡ್ ಸಂದರ್ಭದಲ್ಲಿ ಎಲ್ಲ ಸವಾಲುಗಳನ್ನು ಮೆಟ್ಟಿನಿಂತು ಶಿವಕುಮಾರ್ ಅವರು ಪಕ್ಷಕ್ಕೆ ನವ ಚೈತನ್ಯ ನೀಡಿದ್ದರು. ಸಂಘಟನೆಗೆ ಹೊಸ ರೂಪ ನೀಡಿದ್ದರು. ಅವರ ಹೋರಾಟದಿಂದ ಪಕ್ಷ ಮೇಲೆದ್ದು ನಿಂತಿತ್ತು. ಅಧಿಕಾರ ಹಸ್ತಾಂತರದ ಸೂತ್ರವನ್ನು ಈಗಲಾದರೂ ಪಾಲಿಸಬೇಕು. ರಾಹುಲ್ ಗಾಂಧಿ ಅವರೊಂದಿಗೆ ಸಮಾಲೋಚಿಸಿ ಸ್ಪಷ್ಟ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಸುರೇಶ್ ಒತ್ತಾಯಿಸಿದ್ದರು’ ಎಂದು ಮೂಲಗಳು ಹೇಳಿವೆ.
ಸೋಮವಾರ ಸಂಜೆ ರಾಷ್ಟ್ರ ರಾಜಧಾನಿಯಿಂದ ವಾಪಸ್ ಆಗಿದ್ದ ಶಿವಕುಮಾರ್ ಅವರು ರಾಹುಲ್ ಗಾಂಧಿ ಭೇಟಿಗಾಗಿ ಬುಧವಾರ ಮತ್ತೆ ದೆಹಲಿಗೆ ಬರಲಿದ್ದಾರೆ.
ಬೆಂಗಳೂರು: ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ರಾಜ್ಯ ಸಚಿವ ಸಂಪುಟ ಪುನರ್‌ರಚನೆಗೆ ಪಟ್ಟು ಹಿಡಿದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಆ ಮೂಲಕ ‘ಅಧಿಕಾರ ಹಸ್ತಾಂತರ’ ಕುರಿತ ಚರ್ಚೆಗೆ ಕೊನೆಹಾಡುವ ಶತಪ್ರಯತ್ನ ನಡೆಸಿದ್ದಾರೆ.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಸಲಹೆಯಂತೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಜೊತೆ ದೆಹಲಿಯಲ್ಲಿ ಒಂದು ತಾಸು ಚರ್ಚೆ ನಡೆಸಿರುವ ಮುಖ್ಯಮಂತ್ರಿ, ಸಂಪುಟ ಪುನರ್‌ರಚನೆಯ ಅಗತ್ಯವನ್ನು ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಕೆಲವು ಸಚಿವರ ಕಾರ್ಯವೈಖರಿ ತೃಪ್ತಿಕರವಾಗಿಲ್ಲದ ಕಾರಣ, ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡದವರನ್ನು ಕೈಬಿಟ್ಟು, ಹೊಸಬರಿಗೆ ಅವಕಾಶ ನೀಡುವ ಮೂಲಕ ಸರ್ಕಾರ ಮತ್ತು ಪಕ್ಷಕ್ಕೆ ಹೊಸ ಚೈತನ್ಯ ತುಂಬುವ ಅನಿವಾರ್ಯ ಇದೆ ಎಂದೂ ಪ್ರತಿಪಾದಿಸಿದ್ದಾಗಿ ಮೂಲಗಳು ಖಚಿತಪಡಿಸಿವೆ. ಬಿ. ನಾಗೇಂದ್ರ ಮತ್ತು ಕೆ.ಎನ್. ರಾಜಣ್ಣ ಅವರ ರಾಜೀನಾಮೆಯಿಂದ ತೆರವಾದ ಎರಡು ಸ್ಥಾನಗಳನ್ನು ತುಂಬುವ ಜೊತೆಗೆ, 10ರಿಂದ 12 ಸಚಿವರನ್ನು ಬದಲಿಸಲು ಮುಖ್ಯಮಂತ್ರಿ ಅವರು ಮುಂದಾಗಿದ್ದಾರೆ.
ತಮ್ಮ ಇಂಗಿತವನ್ನು ರಾಹುಲ್ ಗಾಂಧಿ ಜೊತೆ ಹಂಚಿಕೊಂಡಾಗ, ಈ ವಿಚಾರವಾಗಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಚರ್ಚಿಸುವಂತೆ ಸೂಚಿಸಿದ್ದರು.
ಮುಖ್ಯಮಂತ್ರಿಯ ವಾದವನ್ನು ಆಲಿಸಿದ ಖರ್ಗೆ, ಸಂಪುಟ ಪುನರ್‌ರಚನೆಗೆ ವಿರೋಧವಿಲ್ಲ. ಈ ಕುರಿತು ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜೊತೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆಂದು ಗೊತ್ತಾಗಿದೆ.
ಡಿಸೆಂಬರ್ 8ರಿಂದ ಬೆಳಗಾವಿಯಲ್ಲಿ ವಿಧಾನ ಮಂಡಲ ಅಧಿವೇಶನ ಆರಂಭವಾಗಲಿದೆ. ಅಧಿವೇಶನ
ಮುಗಿದ ನಂತರ ಅಥವಾ ಅದಕ್ಕೂ ಮೊದಲೇ ಸೂಕ್ತ ಸಮಯ ನೋಡಿಕೊಂಡು ಈ ಕುರಿತು ಮತ್ತೊಮ್ಮೆ ಹೈಕಮಾಂಡ್ ಜತೆ ಸಮಾಲೋಚನಾ ಸಭೆ ನಡೆಸಲು ಮತ್ತು ಅನಗತ್ಯ ಗೊಂದಲಗಳಿಗೆ ಅವಕಾಶ ಕೊಡದೆ, ಸಂಪುಟ ಪುನರ್‌ರಚನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕಾಂಗ್ರೆಸ್ ವರಿಷ್ಠರು ಚಿಂತನೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.