
ಕೇಂದ್ರ ಸರ್ಕಾರದ ವಿರುದ್ಧ ಬೆಳಗಾವಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ , ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಭಾಗಿ
- ಪ್ರಜಾವಾಣಿ ಚಿತ್ರ/ ರಂಜು ಪಿ
ಬೆಳಗಾವಿ: ಕಾಂಗ್ರೆಸ್ ನಾಯಕರ ವಿರುದ್ಧ ದಾಖಲಾಗಿದ್ದ 'ನ್ಯಾಷನಲ್ ಹೆರಾಲ್ಡ್' ಪ್ರಕರಣವನ್ನು ನ್ಯಾಯಾಲಯ ವಜಾಗೊಳಿಸಿದ ಬೆನ್ನಲ್ಲೇ, ಇಲ್ಲಿನ ಸುವರ್ಣ ವಿಧಾನಸೌಧ ಬಳಿಯ ಗಾಂಧಿ ಪ್ರತಿಮೆ ಎದುರು ಬುಧವಾರ ರಾಜ್ಯ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕೆಲವು ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಒಂದೂವರೆ ತಾಸು ಪ್ರತಿಭಟನೆ ನಡೆಸಿದರು. ಸದನ ಕಲಾಪಗಳಿಂದ ಹೊರಗುಳಿದು ಧರಣಿ ಕುಳಿತರು. ಬೆಳಿಗ್ಗೆ 11.40ರ ನಂತರ ಸದನದೊಳಗೆ ಹೋದರು.
ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ ಹಾಗೂ ಜಾರಿ ನಿರ್ದೇಶನಾಲಯ (ಇ.ಡಿ) ವಿರುದ್ಧ ಧಿಕ್ಕಾರ ಕೂಗಿದರು.
ನ್ಯಾಷನಲ್ ಹೆರಾಲ್ಡ್ ಪತ್ರಿಕೆಯಲ್ಲಿ ಅಕ್ರಮ ಎಸಗಿದ್ದಾರೆ ಎಂದು ಎಐಸಿಸಿ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರೂ ಸೇರಿದಂತೆ ಹಲವರ ಮೇಲೆ ಬಿಜೆಪಿ ಸರ್ಕಾರ ಸುಳ್ಳು ಪ್ರಕರಣ ದಾಖಲಿಸಿತು. ನಮ್ಮ ನಾಯಕರಿಗೆ ಕಿರುಕುಳ ನೀಡಿತು. ಆದರೆ, ದೆಹಲಿ ವಿಶೇಷ ನ್ಯಾಯಾಲಯ ಈ ಪ್ರಕರದಲ್ಲಿ ಸತ್ಯಾಂಶ ಇಲ್ಲ ಎಂದು ವಜಾಗೊಳಿಸಿದೆ. ಕೇಂದ್ರ ಸರ್ಕಾರದ ಕೆನ್ನೆಗೆ ಬಾರಿಸಿ ಬುದ್ಧಿ ಕಲಿಸಿದೆ. ಇ.ಡಿ, ಸಿಬಿಐ ಸಂಸ್ಥೆಗಳು ಕೇಂದ್ರ ಸರ್ಕಾರದ ಸೀಳು ನಾಯಿಗಳ ಹಾಗೆ ವರ್ತಿಸುತ್ತಿವೆ. ವಿರೋಧ ಪಕ್ಷದ ನಾಯಕರನ್ನು ಮಾತ್ರ ಗುರಿಯಾಗಿಸಿ ಸುಳ್ಳು ಪ್ರಕರಣ ದಾಖಲಿಸುತ್ತಿವೆ ಎಂದು ಆಕ್ತೋಶ ವ್ಯಕ್ತಪಡಿಸಿದರು.
ಸತ್ಯಕ್ಕೆ ಸಾವಿಲ್ಲ- ಸುಳ್ಳಿಗೆ ಆಯಸ್ಸಿಲ್ಲ, ಇ.ಡಿ ಆಯ್ತು ಕೇಡಿ- ಬಿಜೆಪಿ ಮಾನಗೇಡಿ, ಕಾಂಗ್ರೆಸ್ಸಿನ ನ್ಯಾಷನಲ್ ಹೆರಾಲ್ಡ್- ಬಿಜೆಪಿ ಕ್ಲೀನ್ ಬೋಲ್ಡ್, ಯಂಗ್ ಇಂಡಿಯಾಗೆ ಜಯ... ಎಂಬ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು.
'ಲಜ್ಜೆಗೇಡಿ ಪ್ರಧಾನಿ ಮೋದಿಗೆ ಧಿಕ್ಕಾರ, ಗಡಿಪಾರು ಅಮಿತ್ ಶಾಗೆ ಛೀಮಾರಿ, ದಮನಕಾರಿ ನೀತಿಯ ಸರ್ಕಾರ ಮತಿಗೇಡಿ' ಎಂದೂ ಶಾಸಕರು, ಸಚಿವರು ನಿರಂತರ ಘೋಷಣೆ ಕೂಗಿದರು.
'ದೇಶದಲ್ಲಿ ಬಿಜೆಪಿ ಮಾತ್ರ ಇರಬೇಕು ಉಳಿದೆಲ್ಲ ಪಕ್ಷಗಳನ್ನು ನಾಶ ಮಾಡಬೇಕು ಎಂಬುದು ಕೇಂದ್ರ ಸರ್ಕಾರದ ಅಜೆಂಡ. ದುರುದ್ದೇಶದಿಂದ ಕಾಂಗ್ರೆಸ್ ನಾಯಕರ ಮೇಲೆ ಪ್ರಕರಣ ದಾಖಲಿಸಿ ಹಿಂಸೆ ನೀಡಿದ್ದಾರೆ. ಇವರು ಎಂಥ ದೇಶದ್ರೋಹಿಗಳು ಎಂಬುದನ್ನು ನ್ಯಾಯಾಲಯದ ಆದೇಶವೇ ಬಹಿರಂಗ ಮಾಡಿದೆ. ಇವತ್ತಿನಿಂದ ಬಿಜೆಪಿ ಅವನತಿ ಆರಂಭವಾಗಿದೆ' ಎಂದು ಡಿ.ಕೆ.ಶಿವಕುಮಾರ್ ಕಿಡಿ ಕಾರಿದರು.
'ಬಿಜೆಪಿಯವರಿಗೆ ಮಹಾತ್ಮ ಗಾಂಧಿ ಅವರನ್ನು ಕಂಡರೆ ಆಗಿಬರುವುಯದಿಲ್ಲ. ಅಂಬೇಡ್ಕರ್ ಅವರನ್ನು ಸಹಿಸಿಕೊಳ್ಳಲು ಆಗುವುದಿಲ್ಲ. ಗಾಂಧಿ ಪರಿವಾರವನ್ನು ನಾಶ ಮಾಡಲು ಇನ್ನಿಲ್ಲದ ಸುಳ್ಳು ಆರೋಪ ಹೊರೆಸಿದ್ದಾರೆ. ಈಗ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಹೆಸರನ್ನು ಜಿ ರಾಮ್ ಜಿ ಎಂದು ಬದಲಾಯಿಸಿದ್ದಾರೆ. ಗಾಂಧೀಜಿ ವಿರುದ್ಧವೂ ಸರ್ವಾಧಿಕಾರಿ ಧೋರಣೆ ತಾಳಿದ್ದಾರೆ. ಮುಂದಿನ ದಿನಗಳಲ್ಲಿ ಜಿ ರಾಮ್ ಜಿ ಕೂಡ ಬದಲಾಗಿ ಜಿ ಮೋದಿ ಜಿ... ಅಗುವುದರಲ್ಲಿ ಸಂದೇಹವಿಲ್ಲ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದರು.
ಇದರಿಂದಾಗಿ ಬೆಳಿಗ್ಗೆ 10ಕ್ಕೆ ಆರಂಭವಾಗಬೇಕಿದ್ದ ಚಳಿಗಾಲದ ಅಧಿವೇಶನ ಕಲಾಪಗಳು ಒಂದೂವರೆ ತಾಸು ವಿಳಂಬವಾದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.