ADVERTISEMENT

ಶಿಕ್ಷಣ ಬಿಟ್ಟು ಭಿಕ್ಷೆ ಬೇಡಿದ ಮೋದಿ: ಪ್ರಧಾನಿ ವಿರುದ್ಧ ಕೆಪಿಸಿಸಿ ವಾಗ್ದಾಳಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಅಕ್ಟೋಬರ್ 2021, 6:43 IST
Last Updated 19 ಅಕ್ಟೋಬರ್ 2021, 6:43 IST
ಕಾಂಗ್ರೆಸ್ ಚಿಹ್ನೆ ಮತ್ತು ಪ್ರಧಾನಿ ಮೋದಿ (ಸಂಗ್ರಹ ಚಿತ್ರ)
ಕಾಂಗ್ರೆಸ್ ಚಿಹ್ನೆ ಮತ್ತು ಪ್ರಧಾನಿ ಮೋದಿ (ಸಂಗ್ರಹ ಚಿತ್ರ)   

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಾಂಗ್ರೆಸ್‌ನ ಕರ್ನಾಟಕ ಘಟಕವು ಟ್ವಿಟರ್‌ನಲ್ಲಿ ಟೀಕಾ ಪ್ರಹಾರ ಮುಂದುವರಿಸಿದೆ.

ಬೆಲೆ ಏರಿಕೆ, ಭ್ರಷ್ಟಾಚಾರ ಸೇರಿದಂತೆ ವಿವಿಧ ವಿಷಯಗಳನ್ನು ಪ್ರಸ್ತಾಪಿಸಿ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ‘ಹೆಬ್ಬೆಟ್ಟು ಗಿರಾಕಿ ಮೋದಿ’ಯಿಂದ ದೇಶ ನರಳುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದೆ.

‘ಕಾಂಗ್ರೆಸ್ ಶಾಲೆಗಳನ್ನು ಕಟ್ಟಿಸಿತ್ತು, ಆದರೂ ಮೋದಿ ಓದಲಿಲ್ಲ, ವಯಸ್ಕರ ಶಿಕ್ಷಣ ಯೋಜನೆಯನ್ನೂ ಮಾಡಿತ್ತು ಆದರೂ ಓದಲಿಲ್ಲ. ಭಿಕ್ಷಾಟನೆ ನಿಷೇಧವಿದ್ದರೂ ಭಿಕ್ಷೆ ಬೇಡುವ ಸೋಂಬೇರಿ ಜೀವನದ ಗೀಳಿಗೆ ಬಿದ್ದವರು ಇಂದು ದೇಶವಾಸಿಗಳನ್ನು ಬಿಕ್ಷುಕರನ್ನಾಗಿಸಿದ್ದಾರೆ’ ಎಂದು ಕಾಂಗ್ರೆಸ್ ಕುಹಕವಾಡಿದೆ.

‘ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ಇಂದು ಪೆಟ್ರೋಲ್ ₹66, ಡೀಸೆಲ್ ₹55ಕ್ಕೆ ದೊರೆಯುತ್ತಿತ್ತು. ಜನರನ್ನು ದೋಚಿ, ಉದ್ಯಮಿಗಳ ಹೊಟ್ಟೆ ತುಂಬಿಸುವ ಯೋಜನೆ ಹೊಂದಿರುವ ಬಿಜೆಪಿ ಸರ್ಕಾರದ ತೆರಿಗೆ ಭಯೋತ್ಪಾದನೆಯಿಂದ ಎಲ್ಲಾ ಅಗತ್ಯ ವಸ್ತುಗಳು ದುಬಾರಿಯಾಗಿವೆ. ಜನರ ಕಷ್ಟಗಳನ್ನು ತಿಳಿಯದ ಮೋದಿಯಿಂದ ದೇಶ ನಲುಗುತ್ತಿದೆ. ವಾಸ್ತವಗಳ ಬಗ್ಗೆ ಮಾತನಾಡದ ಪ್ರಧಾನಿ ತಮ್ಮ ಹೆಸರನ್ನು 'ಮೌನೇಂದ್ರ ಮೋದಿ' ಎಂದು ಬದಲಿಸಿಕೊಳ್ಳಲಿ’ ಎಂದು ಟ್ವೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

‘ಅದೇನು ಮಾಯವೋ! ಅತ್ಯಾಚಾರಿ ಬಾಬಾಗಳು, ಡ್ರಗ್ಸ್ ದಂಧೆಕೋರರು, ವಂಚಕರು ಎಲ್ಲರಿಗೂ ಮೋದಿಯೊಂದಿಗೆ ನಂಟಿರುತ್ತದೆ. ಅವರೆಲ್ಲರ ಹಗರಣದಲ್ಲಿ ಮೋದಿಯ ಪಾಲೆಷ್ಟು? ಅದಾನಿ ಪೋರ್ಟ್ ಡ್ರಗ್ಸ್ ಪ್ರಕರಣದಲ್ಲಿ ಮೋದಿಗೆ ಸಿಕ್ಕ ಕಿಕ್ ಬ್ಯಾಕ್ ಎಷ್ಟು? ಬಸ್ ಡ್ರೈವರ್ ಉಮೇಶನ ಲೂಟಿಯಲ್ಲಿ ಬಿಜೆಪಿ ನಾಯಕರಿಗಾದ ಹಂಚಿಕೆ ಎಷ್ಟು’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

‘ಟೆಲಿಪ್ರಾಂಪ್ಟರ್ ಇಲ್ಲದೆ ಮಾತೇ ಹೊರಡುವುದಿಲ್ಲ. ವಿದೇಶಾಂಗ ವ್ಯವಹಾರಗಳಲ್ಲಿ ಭಾಷಾಂತರಕಾರರಿಲ್ಲದೆ ಆಟವೇ ನಡೆಯುವುದಿಲ್ಲ. ವಿದ್ಯಾಭ್ಯಾಸ ಬಿಟ್ಟು ಭಿಕ್ಷೆ ಬೇಡಿದವನಿಗೆ ಆರ್ಥಿಕತೆಯ ಗಂಧಗಾಳಿಯೇ ತಿಳಿದಿಲ್ಲ. ಬಟ್ಟೆ ಶೋಕಿ, ಬಿಟ್ಟಿ ಪ್ರಚಾರ, ಸುಳ್ಳಿನ ಭಾಷಣಗಳೇ ಅವರ ಬಂಡವಾಳ!’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಪ್ರಸ್ತಾಪಿಸಿದೆ.

‘ಮೋದಿ ಅವರು ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿಮಾನಗಳ ಮುಂದೆ ಬೈಕು, ಕಾರುಗಳಿಗೆ ‘ಮಾನ’ ತಂದುಕೊಟ್ಟರು. ಬಹುಶಃ ಬಿಜೆಪಿಗರು ‘ಮೋದಿ ಹೈ ತೊ ಮುಮ್ಕಿನ್ ಹೈ (ಮೋದಿ ಇದ್ದರೆ ಎಲ್ಲವೂ ಸಾಧ್ಯ)’ ಎನ್ನುವುದು ಇದಕ್ಕಾಗಿಯೇ ಇರಬಹುದು!ಹಾರಾಟಕ್ಕಿಂತ ಸಾಗಾಟವನ್ನು ದುಬಾರಿ ಮಾಡಿದ್ದಕ್ಕಾಗಿ ಧನ್ಯವಾದಗಳು ಮೋದಿ ಜೀ ಎನ್ನುವುದಿಲ್ಲವೇ’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಕಾಂಗ್ರೆಸ್ ಟ್ವೀಟ್‌ಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.