ಬೆಂಗಳೂರು: ಬಾಕಿ ಇರುವ ₹37 ಸಾವಿರ ಕೋಟಿಯನ್ನು ಸರ್ಕಾರ ಮಾರ್ಚ್ 5 ರೊಳಗೆ ಬಿಡುಗಡೆ ಮಾಡದಿದ್ದರೆ ರಾಜ್ಯದಾದ್ಯಂತ ಎಲ್ಲ ಕಾಮಗಾರಿಗಳನ್ನು ನಿಲ್ಲಿಸಿ, ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ರಾಜ್ಯ ಗುತ್ತಿಗೆ ಸಂಘದಾರರ ಸಂಘ ನಿರ್ಧರಿಸಿದೆ.
ಮೂರು ವರ್ಷದಿಂದ ಬಿಲ್ ಪಾವತಿಯಾಗದ್ದರಿಂದ ಗುತ್ತಿಗೆದಾರರು ಆರ್ಥಿಕ ಸಂಕಷ್ಟದಲ್ಲಿದ್ದು, ಸಾಲ ಪಾವತಿಸಲಾಗದೆ ವಿಷ ಕುಡಿಯುವ ಸ್ಥಿತಿಗೆ ತಲುಪಿದ್ದಾರೆ ಎಂದು ರಾಜ್ಯ ಗುತ್ತಿಗೆದಾರ ಸಂಘದ ಅಧ್ಯಕ್ಷ ಆರ್. ಮಂಜುನಾಥ್ ಅವರು ಪತ್ರಿಕಾಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.
ಲೋಕೋಪಯೋಗಿ ಇಲಾಖೆ, ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಸಣ್ಣ ನೀರಾವರಿ, ನಗರಾಭಿವೃದ್ಧಿ, ವಸತಿ, ಕಾರ್ಮಿಕ, ಬಿಬಿಎಂಪಿ (ಜಿಬಿಎ) ನಲ್ಲಿ 2021-22, 2022-23, 2023-24 ರಿಂದ ₹37 ಸಾವಿರ ಕೋಟಿಗೂ ಹೆಚ್ಚು ಹಣ ಬಾಕಿ ಉಳಿದಿದೆ ಎಂದು ಮಾಹಿತಿ ನೀಡಿದರು.
ಹಿಂದಿನ ಸರ್ಕಾರಕ್ಕಿಂತ ಈ ಸರ್ಕಾರದಲ್ಲಿ ಕಮಿಷನ್ ಹೆಚ್ಚಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕೃತ ಸಭೆ ಕರೆದರೆ ಎಲ್ಲ ಮಾಹಿತಿಯನ್ನು ದಾಖಲೆ ಸಹಿತ ನೀಡುವುದಾಗಿ ಅವರು ಹೇಳಿದರು.
2025 ರ ಏಪ್ರಿಲ್ ನಲ್ಲಿ ಹಣ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದರು. ಅದನ್ನು ಉಳಿಸಿಕೊಂಡಿಲ್ಲ. ನಮ್ಮ ಸಮಸ್ಯೆ ಆಲಿಸಲು ಸಭೆಯನ್ನೂ ಕರೆದಿಲ್ಲ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.