ಬೆಂಗಳೂರು: ಭ್ರಷ್ಟಾಚಾರ ನಿಯಂತ್ರಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳದೇ ಇದ್ದರೆ ರಾಜ್ಯದಾದ್ಯಂತ ಒಂದು ತಿಂಗಳ ಕಾಲ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಎಚ್ಚರಿಕೆ ನೀಡಿದೆ.
ಗುತ್ತಿಗೆದಾರ ಸಂತೋಷ್ ಪಾಟೀಲ ಆತ್ಮಹತ್ಯೆ ಪ್ರಕರಣದ ಕುರಿತು ಬುಧವಾರ ನಡೆದ ಸಂಘದ ಆಡಳಿತ ಮಂಡಳಿ ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾ ಡಿದ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಈ ವಿಷಯ ತಿಳಿಸಿದರು.
ಪ್ರಧಾನಿ, ಮುಖ್ಯಮಂತ್ರಿ, ರಾಜ್ಯಪಾಲರಿಗೆ ದೂರು ನೀಡಿದರೂ ಭ್ರಷ್ಟಾಚಾರ ನಿಯಂತ್ರಣಕ್ಕೆ ಬಂದಿಲ್ಲ. ಸರ್ಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದಿಂದಾಗಿಯೇ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಸಾವಿಗೆ ಸರ್ಕಾರವೇ ಹೊಣೆ. ಮುಂದಿನ ವಾರ ನಡೆಯಲಿರುವ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸರ್ಕಾರದಲ್ಲಿನ ಭ್ರಷ್ಟಾ ಚಾರ ಕುರಿತು ಚರ್ಚಿಸಲಾಗುವುದು.ಸರ್ಕಾರದ ಧೋರಣೆ ವಿರೋಧಿಸಿ ಒಂದು ತಿಂಗಳ ಕಾಲ ಎಲ್ಲ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಹೇಳಿದರು.
ರಾಜ್ಯ ಸರ್ಕಾರದ ಐದಾರು ಮಂದಿ ಸಚಿವರು ಮತ್ತು 20ಕ್ಕೂ ಹೆಚ್ಚು ಶಾಸಕರು ಭ್ರಷ್ಟಾಚಾರದಲ್ಲಿ ನಿರತರಾಗಿರುವ ಕುರಿತು ದಾಖಲೆಗಳಿವೆ. 15 ದಿನಗಳ ಬಳಿಕ ಅವುಗಳನ್ನು ಬಹಿರಂಗಪಡಿಸಲಾಗುವುದು ಎಂದು ತಿಳಿಸಿದರು.
ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ನಮ್ಮ ಬಳಿ ಸ್ಪಷ್ಟ ದಾಖಲೆಗಳಿವೆ. ಉನ್ನತಮಟ್ಟದ ತನಿಖಾ ಆಯೋಗ ರಚಿಸಿದರೆ ಹಾಜರುಪಡಿಸಲು ಸಿದ್ಧ. ನಾವು ಯಾವುದೇ ಪಕ್ಷದ ಸದಸ್ಯರೂ ಅಲ್ಲ. ಗುತ್ತಿಗೆದಾರರ ಹಿತ ಕಾಯುವುದಕ್ಕೆ ಹೋರಾಟ ಮಾಡುತ್ತಿದ್ದೇವೆ ಎಂದರು.
ಭ್ರಷ್ಟಾಚಾರ ಮತ್ತು ಗುತ್ತಿಗೆದಾರರಿಗೆ ನೀಡುತ್ತಿರುವ ಕಿರುಕುಳ ವಿರೋಧಿಸಿ ಮೇ 25ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗುವುದು. 50 ಸಾವಿರ ಗುತ್ತಿಗೆದಾರರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದೂ ಕೆಂಪಣ್ಣ ಅವರು ತಿಳಿಸಿದರು.
ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಭ್ರಷ್ಟಾಚಾರ ನಿಯಂತ್ರಣಕ್ಕೆ ಮುಖ್ಯಮಂತ್ರಿಯವರಿಗೆ 15 ದಿನಗಳ ಕಾಲ ಅವಕಾಶ ನೀಡಲಾಗುವುದು. ಅಷ್ಟರೊಳಗೆ ಅವರು ಸಭೆ ನಡೆಸಿ, ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ತಪ್ಪಿದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದರು.
ರಾಜೀನಾಮೆಗೆ ಆಗ್ರಹ: ಸಂತೋಷ್ ಆತ್ಮಹತ್ಯೆಗೆ ಸಚಿವ ಕೆ.ಎಸ್. ಈಶ್ವರಪ್ಪ ನೇರ ಹೊಣೆ. ಅವರಿಂದ ತಕ್ಷಣ ರಾಜೀನಾಮೆ ಪಡೆಯಬೇಕು ಎಂದು ಕೆಂಪಣ್ಣ ಒತ್ತಾಯಿಸಿದರು.
ಪ್ರಕರಣದ ಕುರಿತು ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು. ಇಲ್ಲವೇ ಸಿಬಿಐ ತನಿಖೆಗೆ ಆದೇಶಿಸಬೇಕು. ಸಂತೋಷ್ ಮಾಡಿದ್ದ ಕೆಲಸದ ಬಾಬ್ತು ₹ 4 ಕೋಟಿ ಮತ್ತು ₹ 2 ಕೋಟಿ ಪರಿಹಾರವನ್ನು ಅವರ ಕುಟುಂಬಕ್ಕೆ ನೀಡಬೇಕು ಎಂದು ಆಗ್ರಹಿಸಿದರು.
ಸಂಘದ ಉಪಾಧ್ಯಕ್ಷರಾದ ಎಂ.ಎಸ್. ಸಂಕಾಗೌಡಶಾನಿ, ಆರ್. ಮಂಜುನಾಥ್, ಆರ್. ಅಂಬಿಕಾಪತಿ, ಬಿ.ಸಿ. ದಿನೇಶ್ ಮತ್ತು ಪ್ರಧಾನ ಕಾರ್ಯದರ್ಶಿ ಜಿ.ಎಂ. ರವೀಂದ್ರ ಪತ್ರಿಕಾಗೋಷ್ಠಿಯಲ್ಲಿದ್ದರು.
‘ಆರೋಗ್ಯ ಇಲಾಖೆ ಭ್ರಷ್ಟಾಚಾರದ ರಾಜ’
‘ರಾಜ್ಯ ಸರ್ಕಾರದಲ್ಲಿ ಆರೋಗ್ಯ ಇಲಾಖೆ ಭ್ರಷ್ಟಾಚಾರದ ರಾಜನಿದ್ದಂತೆ. ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಭಾರಿ ಭ್ರಷ್ಟಾಚಾರ ನಡೆಸುತ್ತಿದ್ದಾರೆ’ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಆರೋಪಿಸಿದರು.
‘ಆರೋಗ್ಯ ಇಲಾಖೆಯಲ್ಲಿ ಲಂಚವಿಲ್ಲದೆ ಏನೂ ನಡೆಯುತ್ತಿಲ್ಲ. ಇದರಿಂದ ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಸರ್ಕಾರದಲ್ಲಿ ಅತ್ಯಧಿಕ ಪ್ರಮಾಣದ ಭ್ರಷ್ಟಾಚಾರ ಮಾಡುತ್ತಿರುವ ಸಚಿವ ಸುಧಾಕರ್’ ಎಂದರು.
ಆರೋಗ್ಯ ಇಲಾಖೆಯಲ್ಲಿ ₹2,000 ಕೋಟಿ ಮೊತ್ತದ ಕಟ್ಟಡ ನಿರ್ಮಾಣ ಕಾಮಗಾರಿಗಳು ನಡೆಯುತ್ತಿವೆ. ಟೆಂಡರ್‌ಗಳಿಗೆ ಅನುಮೋದನೆ ನೀಡಲು ಸಚಿವರು ಶೇಕಡ 5ರಷ್ಟು ಲಂಚ ಪಡೆಯುತ್ತಾರೆ. ಲಂಚ ಕೊಡದವರ ಬಿಡ್‌ಗಳನ್ನು ತಿರಸ್ಕರಿಸುತ್ತಾರೆ ಎಂದು ಆರೋಪಿಸಿದರು.
ಕುಟುಂಬದಿಂದಲೇ ಗುತ್ತಿಗೆ ಕೆಲಸ: ಸುಧಾಕರ್ ಕುಟುಂಬದವರು ಮತ್ತು ಸಂಬಂಧಿಕರೇ ಆರೋಗ್ಯ ಇಲಾಖೆಯಲ್ಲಿ ಕಾಮಗಾರಿಗಳ ಗುತ್ತಿಗೆ ಪಡೆದಿದ್ದಾರೆ. ಶೇ 60ರಷ್ಟು ಕಾಮಗಾರಿಗಳನ್ನು ಅವರ ಕುಟುಂಬದವರೇ ಮಾಡುತ್ತಿದ್ದಾರೆ. ಸಚಿವರ ಪತ್ನಿಯ ಸಹೋದರ ಗುತ್ತಿಗೆ ನಿರ್ವಹಿಸುತ್ತಿದ್ದು, ಸಚಿವರ ಪತ್ನಿಯೇ ಚೆಕ್ ಮೂಲಕ ಹಣ ಪಾವತಿಸಿರುವ ದಾಖಲೆಗಳಿವೆ ಎಂದು ಕೆಂಪಣ್ಣ ದೂರಿದರು.
ಲೋಕೋಪಯೋಗಿ, ಜಲ ಸಂಪನ್ಮೂಲ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ನಗರಾಭಿವೃದ್ಧಿ ಇಲಾಖೆ ಹಾಗೂ ಬಿಬಿಎಂಪಿಯಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ. ಹಲವು ಇಲಾಖೆಗಳಲ್ಲಿ ಲಂಚದ ಹಣ ಸಂಗ್ರಹಕ್ಕೆ ಏಜೆಂಟರನ್ನು ನೇಮಿಸಲಾಗಿದೆ ಎಂದು ಆರೋಪಿಸಿದರು.
‘ಮೌನಿ ಮುಖ್ಯಮಂತ್ರಿ’: ‘ಕಾಮಗಾರಿಗಳ ಗುತ್ತಿಗೆಯಲ್ಲಿನ ಭ್ರಷ್ಟಾಚಾರದ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೌನಿಯಾಗಿದ್ದಾರೆ. ನಾಲ್ಕು ಬಾರಿ ಪತ್ರ ಬರೆದರೂ ಸ್ಪಂದಿಸಿಲ್ಲ. ಮುಖ್ಯಮಂತ್ರಿ ಕಚೇರಿಯಲ್ಲೂ ಕಾಮಗಾರಿಗಳ ಗುತ್ತಿಗೆಗೆ ಸಂಬಂಧಿಸಿದ ಭ್ರಷ್ಟಾಚಾರ ನಡೆಯುತ್ತಿದೆ’ ಎಂದು ದೂರಿದರು.
ಕಪ್ಪುಪಟ್ಟಿಗೆ ಸೇರಿಸಲು ಸುಧಾಕರ್ ಆಗ್ರಹ
ಚಿಕ್ಕಬಳ್ಳಾಪುರ: ‘ನನ್ನ ವಿರುದ್ಧ ಆಧಾರರಹಿತ ಆರೋಪ ಮಾಡಿರುವ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಮುಖ್ಯಮಂತ್ರಿಯವರನ್ನು ಒತ್ತಾಯಿಸುತ್ತೇನೆ’ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
‘ಕೆಂಪಣ್ಣ ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದಾರೆ. ಪುರಾವೆ ಇಟ್ಟುಕೊಂಡು ಸರ್ಕಾರದ ವಿರುದ್ಧ ಆರೋಪ ಮಾಡಬೇಕು. ಆಧಾರ ರಹಿತವಾಗಿ ಆರೋಪ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತೇನೆ’ ಎಂದರು.
‘ಕೆಂಪಣ್ಣ ವಿರುದ್ಧ ವೈಯಕ್ತಿಕವಾಗಿ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ. ಇಂತಹವರನ್ನು ಮುಂದೆ ಇಟ್ಟುಕೊಂಡು ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ. ಎಲ್ಲ ಶಾಸಕರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಗುತ್ತಿಗೆದಾರರು ಹೇಳಿದ್ದಾರೆ. ಇದು ಕಾಂಗ್ರೆಸ್‍ನವರಿಗೂ ಅನ್ವಯ ಆಗುವುದಿಲ್ಲವೇ’ ಎಂದು ಪ್ರಶ್ನಿಸಿದರು.
‘ಗುತ್ತಿಗೆದಾರ ಸಂತೋಷ್ ಪಾಟೀಲ ಸಾವಿನಲ್ಲಿ ರಾಜಕೀಯ ಬೆರೆಸಿ, ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ರಾಜ್ಯ ಸರ್ಕಾರದ ತೇಜೋವಧೆ ಮಾಡುವ ಪ್ರಯತ್ನ ನಡೆಸಲಾಗುತ್ತಿದೆ. ಕೆಂಪಣ್ಣ ದಾಳವಾಗಿ ಬಳಕೆ ಆಗಿದ್ದಾರೆ. ಕಾಂಗ್ರೆಸ್‍ನವರ ಈ ರೀತಿಯ ಟೊಳ್ಳು ಬೆದರಿಕೆಗೆ ಯಾವುದೇ ಸಚಿವರು ಅಂಜುವುದಿಲ್ಲ’ ಎಂದರು.
‘ಸಂತೋಷ್‌ಗೆ ಬೆದರಿಕೆ ಇತ್ತು’
‘ಪ್ರಧಾನಿಗೆ ದೂರು ನೀಡಿದ ದಿನಗಳಿಂದಲೂ ಸಂತೋಷ್ ಪಾಟೀಲ ಅವರಿಗೆ ಬೆದರಿಕೆ ಇತ್ತು. ಅವರು ಮನೆಯಲ್ಲಿ ಇರುತ್ತಿರಲಿಲ್ಲ. ಜಿಲ್ಲೆಯಿಂದ ಜಿಲ್ಲೆಗೆ ತಿರುಗುತ್ತಲೇ ಇದ್ದರು’ ಎಂದು ಕೆಂಪಣ್ಣ ಹೇಳಿದರು.
‘ನಮಗೂ ಪರೋಕ್ಷವಾಗಿ ಬೆದರಿಕೆಗಳಿವೆ. ಸರ್ಕಾರ, ಸಚಿವರ ವಿರುದ್ಧ ಮಾತನಾಡದಂತೆ ಪರೋಕ್ಷ ಎಚ್ಚರಿಕೆ ನೀಡಲಾಗುತ್ತಿದೆ. ಭಯಪಡುವುದಿಲ್ಲ, ಎಲ್ಲವನ್ನೂ ಎದುರಿಸಲು ಸಿದ್ಧ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.