ADVERTISEMENT

ಸರ್ಕಾರದ ಕೈಗೆ ಕೋವಿಡ್‌ ವರದಿ: ದಾಖಲೆ ಕೊಟ್ಟ ನ್ಯಾ. ಮೈಕಲ್‌ ಕುನ್ಹಾ

ಸರ್ಕಾರಕ್ಕೆ ದಾಖಲೆ ಕೊಟ್ಟ ನ್ಯಾ. ಮೈಕಲ್‌ ಕುನ್ಹಾ/ ಔಷಧ, ಆಮ್ಲಜನಕ, ವೈದ್ಯಕೀಯ ಉಪಕರಣ, ಸಾಮಗ್ರಿಗಳ ಖರೀದಿ, ವಿತರಣೆಯ ಅವ್ಯವಹಾರ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 19:41 IST
Last Updated 31 ಡಿಸೆಂಬರ್ 2025, 19:41 IST
ಕೋವಿಡ್‌ 19– ಪ್ರಾತಿನಿಧಿಕ ಚಿತ್ರ
ಕೋವಿಡ್‌ 19– ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಕೋವಿಡ್‌ ಅವಧಿಯಲ್ಲಿ ಸಂಭವಿಸಿದ ಸಾವುಗಳು ಮತ್ತು ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಕುರಿತು ತನಿಖೆ ನಡೆಸಿರುವ ನ್ಯಾ. ಜಾನ್ ಮೈಕಲ್‌ ಕುನ್ಹಾ ನೇತೃತ್ವದ ತನಿಖಾ ಆಯೋಗವು ಬುಧವಾರ ತನ್ನ ಅಂತಿಮ ವರದಿ ಸಲ್ಲಿಸಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ವರದಿಯನ್ನು ಸ್ವೀಕರಿಸಿದರು. ಎರಡು ಸಂಪುಟಗಳ ಅಂತಿಮ ವರದಿಯು ಬೆಂಗಳೂರು ನಗರ ಜಿಲ್ಲೆ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ನಡೆದ ಖರೀದಿ ಅವ್ಯವಹಾರದ ಪರಿಶೋಧನೆಯ ವಿವರಗಳನ್ನು ಒಳಗೊಂಡಿದೆ.

ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಬಿಜೆಪಿ ಅಧಿಕಾರದ ಅವಧಿಯಲ್ಲಿ ಕೋವಿಡ್‌ ನಿರ್ವಹಣೆಯಲ್ಲಿ ಅಕ್ರಮ ನಡೆದಿದೆ ಎಂದು ಅಂದಿನ ವಿರೋಧ ಪಕ್ಷ ಕಾಂಗ್ರೆಸ್‌ ಆರೋಪಿಸಿತ್ತು. ಆರಂಭದಲ್ಲಿ ಬಿ. ಶ್ರೀರಾಮುಲು ಹಾಗೂ ನಂತರದಲ್ಲಿ ಡಾ.ಕೆ. ಸುಧಾಕರ್ ಅವರು ಆರೋಗ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಆ ಬಳಿಕ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದ ಕುರಿತು ತನಿಖೆಗಾಗಿ 2023ರ ಆ. 26ರಂದು ನ್ಯಾಯಮೂರ್ತಿ ಜಾನ್‌ ಮೈಕೆಲ್ ಕುನ್ಹಾ ನೇತೃತ್ವದ ವಿಚಾರಣಾ ಆಯೋಗ ರಚಿಸಿತು. ಆಯೋಗವು ಈಗಾಗಲೇ ಎರಡು ಮಧ್ಯಂತರ ವರದಿಗಳನ್ನು ಸಲ್ಲಿಸಿದೆ.

ADVERTISEMENT

ಲಾಕ್‌ಡೌನ್‌ ಆರಂಭವಾದ ದಿನದಿಂದ 2022ರ ಡಿಸೆಂಬರ್‌ 31ರವರೆಗಿನ ಅವಧಿಯಲ್ಲಿನ ಆರೋಪ, ನಿಯಮ ಉಲ್ಲಂಘನೆ, ಲೋಪಗಳ ಕುರಿತು ತನಿಖೆ ನಡೆಸುವಂತೆ ಆಯೋಗಕ್ಕೆ ಸೂಚಿಸಲಾಗಿತ್ತು. ಆಯೋಗವು 1,722 ಪುಟಗಳ ತನ್ನ ಮೊದಲ ತನಿಖಾ ವರದಿಯನ್ನು 2024ರ ಸೆಪ್ಟೆಂಬರ್‌ನಲ್ಲಿ ಸಲ್ಲಿಸಿತ್ತು. ₹3,741.36 ಕೋಟಿ ಮೊತ್ತದ ಖರೀದಿಯಲ್ಲಿ ₹769 ಕೋಟಿಯ ಅವ್ಯವಹಾರ ನಡೆದಿರುವುದನ್ನು ಆಯೋಗವು ಪತ್ತೆ ಮಾಡಿತ್ತು. 

ಎರಡನೇ ಮಧ್ಯಂತರ ವರದಿ: ಆಯೋಗ ಎರಡನೇ ಮಧ್ಯಂತರ ವರದಿಯನ್ನು 2025ನೇ ಏಪ್ರಿಲ್‌ನಲ್ಲಿ ಸಲ್ಲಿಸಿತ್ತು.

ಈ ವರದಿಯು 1,808 ಪುಟಗಳ ಏಳು ಸಂಪುಟಗಳನ್ನು ಒಳಗೊಂಡಿತ್ತು. ಅದರಲ್ಲಿನ ನಾಲ್ಕು ಸಂಪುಟಗಳು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ನಡೆದ ಹಗರಣಗಳ ಮಾಹಿತಿಯನ್ನು ಒಳಗೊಂಡಿದ್ದವು. ಬಿಬಿಎಂಪಿ ವ್ಯಾಪ್ತಿಯ ಬೊಮ್ಮನಹಳ್ಳಿ ವಲಯ, ದಕ್ಷಿಣ ವಲಯ, ಪಶ್ಚಿಮ ವಲಯ, ಯಲಹಂಕ ವಲಯಗಳ ಹಗರಣಗಳಿಗೆ ಸಂಬಂಧಪಟ್ಟ ವಿವರಗಳು ಪ್ರತ್ಯೇಕ ಸಂಪುಟಗಳಲ್ಲಿದ್ದವು. ಉಳಿದ ಮೂರು ಸಂಪುಟಗಳು ಬೆಂಗಳೂರು ನಗರ ಜಿಲ್ಲೆ, ಗ್ರಾಮಾಂತರ ಜಿಲ್ಲೆ ಮತ್ತು ಗದಗ ಹಾಗೂ ಕೊಪ್ಪಳ ಜಿಲ್ಲೆಗಳ ಹಗರಣಗಳ ಮಾಹಿತಿ ಒಳಗೊಂಡಿದ್ದವು.

ಈಗಿನ ಕಾನೂನು ಸಚಿವ ಎಚ್‌.ಕೆ. ಪಾಟೀಲ ಅಧ್ಯಕ್ಷತೆಯ ವಿಧಾನಸಭೆಯ ಸಾರ್ವಜನಿಕ ಲೆಕ್ಕ ಪತ್ರಗಳ ಸಮಿತಿ (2020–21) ಸಲ್ಲಿಸಿದ್ದ ವರದಿಯಲ್ಲಿ ಪ್ರಸ್ತಾಪಿಸಿದ ವಿಷಯಗಳು, ಸಕ್ಷಮ ಅಧಿಕಾರಿಗಳು ಕೆಟಿಪಿಪಿ ಕಾಯ್ದೆ ಮತ್ತು ನಿಯಮಗಳನ್ನು ಉಲ್ಲಂಘಿಸಿ ನೀಡಿದ್ದ ಅನುಮೋದನೆ, ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಇತರ ಇಲಾಖೆಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಸಂಸ್ಥೆಗಳಲ್ಲಿ ಔಷಧ, ಆಮ್ಲಜನಕ ಉಪಕರಣಗಳು, ಸಾಮಗ್ರಿಗಳ ಖರೀದಿ, ವಿತರಣೆಯ ನಿರ್ವಹಣೆಯಲ್ಲಿ ನಡೆದಿರುವ ಅವ್ಯವಹಾರ, ಲೋಪದೋಷಗಳ ಕುರಿತು ಆಯೋಗವು ವಿಸ್ತೃತ ತನಿಖೆ ನಡೆಸಿದೆ.

ಅಲ್ಲದೇ, ಎರಡು ಮಧ್ಯಂತರ ವರದಿಗಳ ಆಧಾರದ ಮೇಲೆ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲು ಎಸ್‌ಐಟಿ ರಚನೆ ಮಾಡಲು 2024 ನವೆಂಬರ್‌ನಲ್ಲಿ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿತ್ತು. ಆ ಬಳಿಕ ಇದರ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು. ಅಲ್ಲದೇ, ಕೋವಿಡ್‌ ಎರಡನೇ ಅಲೆಯ ಸಂದರ್ಭದಲ್ಲಿ  ಪ್ರುಡೆಂಟ್‌ ಮ್ಯಾನೇಜ್‌ಮೆಂಟ್‌ ಸೊಲ್ಯುಷನ್ಸ್‌ ಮತ್ತು ಎಲ್‌ಎಜೆ ಎಕ್ಸ್‌ಪೋರ್ಟ್ಸ್ ಲಿಮಿಟೆಡ್‌ ಕಂಪನಿ ಪಿಪಿಇ ಕಿಟ್‌ಗಳನ್ನು ದುಬಾರಿ ಬೆಲೆಗೆ ಪೂರೈಸಿವೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕುನ್ಹಾ ಆಯೋಗದ ವರದಿಯನ್ನು 2025ರ ಫೆಬ್ರುವರಿ 12ರಂದು ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್‌ಗೆ ಸಲ್ಲಿಸಿತ್ತು.

‘ಬಿಡುಗಡೆ: ಸರ್ಕಾರದ ವಿವೇಚನೆಗೆ’
‘ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇದನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿಲ್ಲ. ಆದರೂ ಈ ವಿಷಯದ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಮತ್ತು ಪಾರದರ್ಶಕತೆಯ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವೇ ವರದಿಗಳನ್ನು ಸಾರ್ವಜನಿಕರ ಅವಗಾಹನೆಗೆ ಬಿಡುಗಡೆ ಮಾಡಲು ಪರಿಶೀಲನೆ ನಡೆಸಬಹುದು’ ಎಂದು ನ್ಯಾ. ಜಾನ್‌ ಮೈಕಲ್ ಕುನ್ಹಾ ತಿಳಿಸಿದ್ದಾರೆ.

ಬಿಎಸ್‌ವೈ ಶ್ರೀರಾಮುಲು ವಿರುದ್ಧ ತನಿಖೆಗೆ ಶಿಫಾರಸು

ಬಿಜೆಪಿಯ ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಮತ್ತು ಬಿ.ಶ್ರೀರಾಮುಲು ಆರೋಗ್ಯ ಸಚಿವರಾಗಿದ್ದ ಅವಧಿಯಲ್ಲಿ ಇಬ್ಬರೂ ಅಧಿಕಾರ ದುರುಪಯೋಗದ ಮೂಲಕ ವೈಯಕ್ತಿಕ ಲಾಭ ಮಾಡಿಕೊಂಡಿದ್ದಾರೆ ಎಂದು ನ್ಯಾಯಮೂರ್ತಿ ಜಾನ್‌ ಮೈಕಲ್‌ ಕುನ್ಹಾ ಆಯೋಗವು ತನ್ನ ಮಧ್ಯಂತರ ವರದಿಯಲ್ಲಿ ಹೇಳಿತ್ತು. ಕೋವಿಡ್ ನಿರ್ವಹಣೆಗಾಗಿ ಪಿಪಿಇ ಕಿಟ್ ಖರೀದಿ ಪ್ರಕ್ರಿಯೆಯಲ್ಲಿ ಅಧಿಕಾರ ದುರುಪಯೋಗ ಹಾಗೂ ವೈಯಕ್ತಿಕ ಲಾಭ ಪಡೆದ ಬಿ.ಎಸ್. ಯಡಿಯೂರಪ್ಪ ಬಿ. ಶ್ರೀರಾಮುಲು ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಕ್ರಿಮಿನಲ್ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಆಯೋಗ ಶಿಫಾರಸು ಮಾಡಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.