ADVERTISEMENT

PMAY-G: ಕುಂಟುತ್ತಿದೆ ಪ್ರಧಾನಮಂತ್ರಿ ವಸತಿ ಯೋಜನೆ

ಪಕ್ಕಾ ಮನೆ ನಿರ್ಮಾಣ ಸಹಾಯಧನ ಪಡೆಯಲು ಜನರ ನಿರಾಸಕ್ತಿ

ಜಯಸಿಂಹ ಆರ್.
Published 19 ಜನವರಿ 2025, 0:30 IST
Last Updated 19 ಜನವರಿ 2025, 0:30 IST
<div class="paragraphs"><p>ಪ್ರಧಾನಮಂತ್ರಿ ವಸತಿ ಯೋಜನೆ</p></div>

ಪ್ರಧಾನಮಂತ್ರಿ ವಸತಿ ಯೋಜನೆ

   

(ಸಂಗ್ರಹ ಚಿತ್ರ)

ಬೆಂಗಳೂರು: ಗ್ರಾಮೀಣ ಪ್ರದೇಶದಲ್ಲಿ ಮನೆ ಇಲ್ಲದವರಿಗೆ ವಸತಿ ಒದಗಿಸುವ ಪ್ರಧಾನ ಮಂತ್ರಿ ವಸತಿ ಯೋಜನೆ ಅಡಿಯಲ್ಲಿ ಈ ಆರ್ಥಿಕ ವರ್ಷದಲ್ಲಿ 2.26 ಲಕ್ಷ ಫಲಾನುಭವಿಗಳನ್ನು ಗುರುತಿಸಿ, ಮನೆ ನಿರ್ಮಿಸುವ ಗುರಿಯನ್ನು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ನೀಡಿತ್ತು. ಆರ್ಥಿಕ ವರ್ಷದ ಮೊದಲ ಒಂಬತ್ತು ತಿಂಗಳ ಅಂತ್ಯದವರೆಗೂ ರಾಜ್ಯ ಸರ್ಕಾರವು ಗುರುತಿಸಿದ್ದು ಸುಮಾರು 66 ಸಾವಿರ ಫಲಾನುಭವಿಗಳನ್ನು ಮಾತ್ರ.

ADVERTISEMENT

ಈ ಅವಧಿಯಲ್ಲಿ ಮನೆ ನಿರ್ಮಾಣದ ಸಂಖ್ಯೆಯೂ 5 ಸಾವಿರದ ಆಸುಪಾಸಿನಲ್ಲಿದೆ. ಅಂಥದ್ದರಲ್ಲಿ ಇದೇ ಆರ್ಥಿಕ ವರ್ಷದಲ್ಲಿ ಇನ್ನೂ ಹೆಚ್ಚುವರಿ 4.76 ಲಕ್ಷ ಫಲಾನುಭವಿಗಳನ್ನು ಗುರುತಿಸಿ ಎಂದು ಗುರಿಯನ್ನು ಮತ್ತಷ್ಟು ಹೆಚ್ಚಿಸಿದೆ.

ಯೋಜನೆಯ ಪ್ರಗತಿ ದಾಖಲಿಸಲು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ನಿರ್ವಹಣೆ ಮಾಡುತ್ತಿರುವ ‘ರಿಯಲ್‌ ಟೈಂ ಡ್ಯಾಶ್‌ಬೋರ್ಡ್‌’ ರಾಜ್ಯದಲ್ಲಿ ಯೋಜನೆಯ ಸ್ಥಿತಿಗತಿಯನ್ನು ವಿವರಿಸಿದೆ. 

ಕೇಂದ್ರ ಸರ್ಕಾರವು ಮನೆ ನಿರ್ಮಾಣದ ಗುರಿಯನ್ನೇನೋ ಎಲ್ಲ ರಾಜ್ಯಗಳಂತೆ, ಕರ್ನಾಟಕಕ್ಕೂ ನೀಡುತ್ತಿದೆ. ಆದರೆ ಇಲ್ಲಿ ಯೋಜನೆಯ ಪ್ರಯೋಜನ ಪಡೆಯುವಲ್ಲಿ ಜನರಲ್ಲೇ ನಿರಾಸಕ್ತಿ ಇದೆ ಎಂಬುದನ್ನು ದತ್ತಾಂಶಗಳು ಹೇಳುತ್ತವೆ. 

ಈ ಆರ್ಥಿಕ ವರ್ಷದಲ್ಲಿ 2.26 ಲಕ್ಷ ಮನೆಗಳ ನಿರ್ಮಾಣ ಗುರಿ ನೀಡಿದ್ದರೂ, ಯೋಜನೆಯ ಪ್ರಯೋಜನ ಪಡೆಯಲು ಅರ್ಜಿ ಸಲ್ಲಿಸಿದವರು 75 ಸಾವಿರ ಮಂದಿ ಮಾತ್ರ. ಯೋಜನೆ ಕುಂಠಿತವಾಗಲು ಇದೂ ಒಂದು ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗಿದೆ. ಸಲ್ಲಿಕೆಯಾದ ಅರ್ಜಿಗಳಲ್ಲಿ ಶೇ 85ರಷ್ಟು ಒಪ್ಪಿತವಾಗಿವೆ ಮತ್ತು ಸಹಾಯಧನ ಮಂಜೂರಾಗಿವೆ. ಹೀಗಿದ್ದೂ ನಿರ್ಮಾಣ ಪೂರ್ಣಗೊಂಡು, ಪೂರ್ಣ ಪ್ರಮಾಣದ ಸಹಾಯಧನ ದೊರಕಿದ್ದು ಶೇ 2.35 ಮನೆಗಳಿಗಷ್ಟೆ.

‘ರಾಜ್ಯದಲ್ಲಿ ಯೋಜನೆ ಅಡಿ ಮಂಜೂರಾದ ಮನೆಗಳ ನಿರ್ಮಾಣವು ಸರಾಸರಿ 10 ತಿಂಗಳಲ್ಲಿ ಪೂರ್ಣಗೊಳ್ಳುತ್ತಿವೆ. ಆರ್ಥಿಕ ವರ್ಷದ ಬೇರೆ–ಬೇರೆ ತ್ರೈಮಾಸಿಕಗಳಲ್ಲಿ ಮಂಜೂರಾದ ಮನೆಗಳ ನಿರ್ಮಾಣ ಇನ್ನೂ ಪೂರ್ಣವಾಗಿಲ್ಲ. ಅವುಗಳ ನಿರ್ಮಾಣ ಪೂರ್ಣಗೊಂಡ ನಂತರ, ಫಲಾನುಭವಿಗಳ ಸಂಖ್ಯೆಯಲ್ಲಿ ಏರಿಕೆಯಾಗಲಿದೆ’ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆಯ ಮೂಲಗಳು ತಿಳಿಸಿವೆ.

ಗುರಿ 7.02 ಲಕ್ಷ ವಸತಿಗಳಿಗೆ ಏರಿಕೆ

2024ರ ಡಿಸೆಂಬರ್ ಅಂತ್ಯಕ್ಕೆ ಕೊನೆಗೊಳ್ಳಬೇಕಿದ್ದ ಈ ಯೋಜನೆಯನ್ನು ಕೇಂದ್ರ ಸರ್ಕಾರವು 2029ರ ಅಂತ್ಯದವರೆಗೂ ವಿಸ್ತರಿಸಿದೆ. ಈ ಯೋಜನೆ ಅಡಿ 2024–25ರ ಆರ್ಥಿಕ ವರ್ಷದಲ್ಲಿ ರಾಜ್ಯವು ನಿರ್ಮಿಸಬೇಕಿದ್ದ ಮನೆಗಳ ಸಂಖ್ಯೆಯನ್ನು 2.26 ಲಕ್ಷದಿಂದ 7.02 ಲಕ್ಷಕ್ಕೆ ಏರಿಕೆ ಮಾಡಿದೆ.

ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಶನಿವಾರ ಪತ್ರ ಬರೆದಿದ್ದಾರೆ. ‘ಈ ಆರ್ಥಿಕ ವರ್ಷದಲ್ಲಿ ಕರ್ನಾಟಕಕ್ಕೆ ಇನ್ನೂ ಹೆಚ್ಚುವರಿ 4.76 ಲಕ್ಷ ಮನೆಗಳ ನಿರ್ಮಾಣದ ಗುರಿ ನೀಡಲಾಗಿದೆ. ಫಲಾನುಭವಿಗಳನ್ನು ಗುರುತಿಸಿ, ಯೋಜನೆಯ ಪ್ರಯೋಜನ ಪಡೆಯಬೇಕು’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.