ಬೆಂಗಳೂರು: ರಾಜ್ಯ ಪೊಲೀಸ್ ಮಹಾನಿರ್ದೇಶಕರ (ಡಿಜಿ–ಐಜಿಪಿ) ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಕಾನ್‌ಸ್ಟೆಬಲೊಬ್ಬರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು, ಅವರನ್ನು ಭಾನುವಾರವೇ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
‘ನಗರದ ಪೊಲೀಸರು ಸರದಿ ಪ್ರಕಾರ ವೈದ್ಯಕೀಯ ಪರೀಕ್ಷೆಗೆ ಒಳಪಡುತ್ತಿದ್ದಾರೆ. ಇತ್ತೀಚೆಗೆ ಕಾನ್‌ಸ್ಟೆಬಲ್ ಅವರ ಗಂಟಲಿನ ದ್ರವವನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಅದು ಪಾಸಿಟಿವ್ ಬಂದಿದ್ದು, ಈ ಕಾನ್‌ಸ್ಟೆಬಲ್ ‘ರೋಗಿ–3195’ ಆಗಿದ್ದಾರೆ’ ಎಂದು ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.
‘ಕಾನ್‌ಸ್ಟೆಬಲ್ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗುತ್ತಿದೆ. ಅವರ ಜೊತೆ ಸಂಪರ್ಕದಲ್ಲಿದ್ದ ಹಲವರನ್ನು ಕ್ವಾರಂಟೈನ್ ಮಾಡಲಾಗಿದೆ. ದ್ವಿತೀಯ ಸಂಪರ್ಕದಲ್ಲಿದ್ದವರ ಪಟ್ಟಿ ಮಾಡಿ ಅವರನ್ನೂ ಕ್ವಾರಂಟೈನ್ ಮಾಡಲು ಕ್ರಮ ಕೈಗೊಳ್ಳಲಾಗಿದೆ’ ಎಂದೂ ಅವರು ಹೇಳಿದ್ದಾರೆ.
ಶಿವಾಜಿನಗರದಲ್ಲಿ ವಾಸ: ನೃಪತುಂಗ ರಸ್ತೆಯಲ್ಲಿರುವ ಡಿಜಿಪಿ ಕಚೇರಿಯ ಭದ್ರತಾ ವಿಭಾಗದಲ್ಲಿ ಕಾನ್‌ಸ್ಟೆಬಲ್ ಕೆಲಸ ಮಾಡುತ್ತಿದ್ದರು. ಶಿವಾಜಿನಗರದ ಪೊಲೀಸ್ ವಸತಿಗೃಹದಲ್ಲಿ ನೆಲೆಸಿದ್ದರು.
ಮುಖ್ಯ ಕಟ್ಟಡದಲ್ಲಿ ಡಿಜಿಪಿ ಪ್ರವೀಣ್ ಸೂದ್, ಎಡಿಜಿಪಿಗಳು ಹಾಗೂ ಹಲವು ಅಧಿಕಾರಿಗಳ ಕಚೇರಿಗಳು ಇವೆ. ಮುಖ್ಯ ಕಟ್ಟಡದ ಸಮೀಪದಲ್ಲೇ ಮತ್ತೊಂದು ಕಟ್ಟಡದಲ್ಲಿ ಭದ್ರತಾ ವಿಭಾಗದ ಕಚೇರಿ ಇದ್ದು, ಅಲ್ಲಿಯೇ ಕಾನ್‌ಸ್ಟೆಬಲ್ ಕೆಲಸ ಮಾಡುತ್ತಿದ್ದರು.
‘ಕಾನ್‌ಸ್ಟೆಬಲ್ ಅವರು ಮುಖ್ಯ ಕಟ್ಟಡಕ್ಕೆ ಬಂದಿರಲಿಲ್ಲ. ಹೀಗಾಗಿ ಯಾವುದೇ ಆತಂಕವಿಲ್ಲ. ಆದರೂ ಪೂರ್ತಿ ಕಟ್ಟಡ ಹಾಗೂ ಆವರಣವನ್ನು ಸ್ಯಾನಿಟೈಸ್ ಮಾಡಿಸಲಾಗುತ್ತಿದೆ’ ಎಂದು ಕಚೇರಿ ಅಧಿಕಾರಿಯೊಬ್ಬರು ಹೇಳಿದರು.
ಲಾಕ್‌ಡೌನ್ ಆದಾಗಿನಿಂದಲೂ ಪೊಲೀಸರು, ಯೋಧರಂತೆ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಇಬ್ಬರು ಕಾನ್‌ಸ್ಟೆಬಲ್‌ಗಳಿಗೂ ಸೋಂಕು ತಗುಲಿತ್ತು. ಈಗಾಗಲೇ ಒಬ್ಬರು ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಇನ್ನೊಬ್ಬರ ಆರೋಗ್ಯದಲ್ಲೂ ಚೇತರಿಕೆ ಕಂಡುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.