ADVERTISEMENT

Karnataka Drought | ಬರ ಪರಿಹಾರ ಅಲ್ಪ: ಕಾಂಗ್ರೆಸ್‌ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2024, 15:45 IST
Last Updated 28 ಏಪ್ರಿಲ್ 2024, 15:45 IST
ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆಯ ಮುಂಭಾಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್​ ನಾಯಕರು‌ ಭಾನುವಾರ ಪ್ರತಿಭಟನೆ ನಡೆಸಿದರು
ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆಯ ಮುಂಭಾಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್​ ನಾಯಕರು‌ ಭಾನುವಾರ ಪ್ರತಿಭಟನೆ ನಡೆಸಿದರು   

ಬೆಂಗಳೂರು: ‘‌ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಅಲ್ಪ ಪ್ರಮಾಣದಲ್ಲಿ ಬರ ಪರಿಹಾರ ನೀಡಿದೆ ಎಂದು ಆರೋಪಿಸಿ ವಿಧಾನಸೌಧದ ಆವರಣದ ಗಾಂಧಿ ಪ್ರತಿಮೆ ಎದುರು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್​ ನಾಯಕರು‌ ಚೊಂಬು ಹಿಡಿದು ಭಾನುವಾರ ಪ್ರತಿಭಟನೆ ನಡೆಸಿದರು.

‘ಬರ ಪರಿಹಾರ ವಿಚಾರದಲ್ಲಿ ನಮಗೆ ಅನ್ಯಾಯವಾಗಿದೆ. ನಾವು ಭಿಕ್ಷೆ ಕೇಳುತ್ತಿಲ್ಲ. ಸುಪ್ರೀಂ ಕೋರ್ಟ್ ಚಾಟಿ ಬೀಸಿದ ಬಳಿಕ ರಾಜ್ಯಕ್ಕೆ ₹ 3,454 ಕೋಟಿ ಪರಿಹಾರ ಬಿಡುಗಡೆ ಮಾಡಿದೆ. ಇದು ಕಡಿಮೆ ಮೊತ್ತ. ಬರ ಪರಿಹಾರ ವಿಚಾರದಲ್ಲಿ ಪ್ರಧಾನಿ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಸುಳ್ಳು ಹೇಳಿದ್ದಾರೆ. ಅವರ ಜೊತೆಗೆ ಜೆಡಿಎಸ್​ ಸೇರಿಕೊಂಡಿದೆ’ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ನಾಡದ್ರೋಹಿಗಳು-ಡಿಕೆಶಿ: ‘ನಾವು ರೈತರ ಹಿತಕ್ಕಾಗಿ ಬರ ಪರಿಹಾರ ಕೇಳುತ್ತಿದ್ದೇವೆಯೇ ಹೊರತು ಸಿದ್ದರಾಮಯ್ಯ ಅಥವಾ‌ ನನಗಾಗಲಿ ವೈಯಕ್ತಿಕವಾಗಿ ಕೇಳುತ್ತಿದ್ದೇವೆಯೇ? ಕೇಂದ್ರ ಸರ್ಕಾರ ಒಕ್ಕೂಟ ವ್ಯವಸ್ಥೆಗೆ ಗೌರವ ಕೊಟ್ಟಿಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಟೀಕಿಸಿದರು.

ADVERTISEMENT

‘ನಮ್ಮ ರಾಜ್ಯಕ್ಕೆ ಬಿಜೆಪಿ, ಜೆಡಿಎಸ್‌ನವರಷ್ಟು ದ್ರೋಹ ಯಾರೂ ಬಗೆದಿಲ್ಲ. ಎರಡೂ ಪಕ್ಷಗಳ ಮುಖಂಡರು ಈ ರಾಜ್ಯದ ದ್ರೋಹಿಗಳು. ರಾಜ್ಯದ ಹಿತಕ್ಕೆ ಒಮ್ಮೆಯೂ ದನಿ ಎತ್ತದವರು. ನಮ್ಮ ಹೋರಾಟ ನಿರಂತರ. ನಾವು ಈ ವಿಚಾರದಲ್ಲಿ ರಾಜಿ ಆಗುವ ಪ್ರಶ್ನೆಯೇ ಇಲ್ಲ. ನಮ್ಮ ಹೋರಾಟ ಮುಂದುವರೆಸುತ್ತೇವೆ’ ಎಂದರು.

ಕೇಂದ್ರದಿಂದ ಲಾಲಿಪಾಪ್: ‘ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದ ಬಳಿಕ ರಾಜ್ಯ ಸರ್ಕಾರ ಕೇಳಿದ ಪರಿಹಾರದ ಪೈಕಿ ಶೇ 20ರಷ್ಟನ್ನು ಕೇಂದ್ರ ಬಿಡುಗಡೆ ಮಾಡಿದೆ. ಈ ಲಾಲಿಪಾಪ್ ​ಅನ್ನು ಮೋದಿ ಕೊಟ್ಟಿದ್ದಾರೆ’ ಎಂದು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಟೀಕಿಸಿದರು.

ಸಚಿವರಾದ ಕೃಷ್ಣ ಬೈರೇಗೌಡ, ‌ಜಿ.ಪರಮೇಶ್ವರ​​, ಕೆ.ಎಚ್.ಮುನಿಯಪ್ಪ, ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್, ಡಾ.ಎಂ.ಸಿ.ಸುಧಾಕರ್, ಎನ್‌.ಚಲುವರಾಯಸ್ವಾಮಿ, ಕಾಂಗ್ರೆಸ್ ಶಾಸಕರು ಪ್ರತಿಭಟನೆಯಲ್ಲಿದ್ದರು.

ಕೇಂದ್ರದ ವಿರುದ್ಧ ಭಿತ್ತಿಪತ್ರ ಹಿಡಿದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ‘ಖಾಲಿ ಚೊಂಬು ಕೊಟ್ಟ ಬಿಜೆಪಿ, ಚೊಂಬೇಶ್ವರ ಮೋದಿ’, ‘ಗೋ ಬ್ಯಾಕ್ ಮೋದಿ ಗೋ ಬ್ಯಾಕ್’ ಎಂದು ಘೋಷಣೆಗಳನ್ನು ಕೂಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.