ರಾಯಚೂರು: ಶಾಲಾ ದಿನಗಳು ತುಂಬಾ ಕಡಿತವಾಗುವ ಸಾಧ್ಯತೆ ಇರುವುದರಿಂದ ಮಕ್ಕಳಿಗೆ ಹೊರೆಯಾಗದ ರೀತಿಯಲ್ಲಿ ಪಠ್ಯಗಳನ್ನು ಸಂಕ್ಷಿಪ್ತಗೊಳಿಸಲಾಗುವುದು ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದರು.
ಶನಿವಾರ ಆಯೋಜಿಸಿದ್ದ ಅಧಿಕಾರಿಗಳ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಮುಂದಿನ ತರಗತಿಗೆ ಹೋಗಲು ಅನುಕೂಲವಾಗುವ ರೀತಿಯಲ್ಲಿ ಪಠ್ಯಗಳನ್ನು ಸಿದ್ದಪಡಿಸುವ ಕೆಲಸವನ್ನು ಡಿಎಸ್‌ಇಆರ್‌ಟಿ ಈಗಾಗಲೇ ಮಾಡುತ್ತಿದೆ ಎಂದರು.
ಆರೋಗ್ಯ ತಪಾಸಣೆ: ಎಸ್ಸೆಸ್ಸೆಲ್ಸಿ ಪರೀಕ್ಷೆ ವೇಳೆ ಕೋವಿಡ್ ಸೋಂಕು ತಡೆ ಮುನ್ನಚ್ಚರಿಕೆ ನಿಯಾಮಗಳಿಗೆ ಒಳಪಟ್ಟು ನಡೆಸಲಾಗುವುದು. ಅಂತರ ಕಾಯ್ದುಕೊಳ್ಳುವುದು ಮೊದಲ ಆದ್ಯತೆ. ಪರೀಕ್ಷಾರ್ಥಿಯ ಆರೋಗ್ಯ ತಪಾಸಣೆ ನಡೆಸಲಾಗುವುದು. ಪರೀಕ್ಷೆ ಬರೆಯುವುದರಿಂದ ಯಾವುದೇ ವಿದ್ಯಾರ್ಥಿ ವಂಚಿತವಾಗಬಾರದು. ಎಲ್ಲರಿಗೂ ಉಚಿತ ಸಾರಿಗೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಕೆಲವು ಕಡೆ ಮಕ್ಕಳು ಪಾಲಕರೊಂದಿಗೆ ವಲಸೆ ಹೋಗಿದ್ದು, ತಾವಿರುವ ಹತ್ತಿರದ ಪರೀಕ್ಷಾ ಕೇಂದ್ರದಲ್ಲಿಯೇ ಪರೀಕ್ಷೆ ಬರೆಯಲು ಅನುವು ಮಾಡಲಾಗುವುದು. ವಸತಿ ನಿಲಯಗಳಲ್ಲಿದ್ದ ವಿದ್ಯಾರ್ಥಿಗಳು ತಮ್ಮ ಊರು ಸಮೀಪದ ಪರೀಕ್ಷಾ ಕೇಂದ್ರದಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ರಾಜ್ಯದಲ್ಲಿ 16 ಸಾವಿರ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳ ಬದಲಾವಣೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಹೇಳಿದರು.
ಸದ್ಯಕ್ಕೆ ಶಾಲೆ ಆರಂಭಿಸುವ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಪೋಷಕರ, ಶಿಕ್ಷಣ ಕ್ಷೇತ್ರದ ತಜ್ಞರ ಅಭಿಪ್ರಾಯ ಸಂಗ್ರಹಿಸಿ ದಿನಾಂಕವನ್ನು ಪ್ರಕಟಿಸಲಾಗುವುದು. ಸದ್ಯಕ್ಕೆ ಎಲ್‌ಕೆಜಿ, ಯುಕೆಜಿ, ಪ್ರಾಥಮಿಕ ಹಂತದಲ್ಲಿರುವ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಪೋಷಕರು ಹೇಳುತ್ತಿದ್ದಾರೆ. ಅವರ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.