ADVERTISEMENT

ಕೆಪಿಜೆಪಿ ವಿಲೀನ: ತೀವ್ರ ಚರ್ಚೆಗೆ ಗ್ರಾಸ

ಸ್ಪೀಕರ್‌ ಕಚೇರಿಯಲ್ಲಿ ಯಾವುದೇ ದಾಖಲೆಗಳಿಲ್ಲ: ‘ಸುಪ್ರಿಂಗೆ’ ಸಾಲಿಸಿಟರ್ ಜನರಲ್ ಮನವರಿಕೆ

ಸಿದ್ದಯ್ಯ ಹಿರೇಮಠ
Published 26 ಸೆಪ್ಟೆಂಬರ್ 2019, 20:08 IST
Last Updated 26 ಸೆಪ್ಟೆಂಬರ್ 2019, 20:08 IST
   

ನವದೆಹಲಿ: ರಾಣೆಬೆನ್ನೂರು ಕ್ಷೇತ್ರದ ಶಾಸಕರಾಗಿದ್ದ ಆರ್.ಶಂಕರ್ ತಮ್ಮ ಪಕ್ಷ (ಕೆಪಿಜೆಪಿ)ವನ್ನು ಕಾಂಗ್ರೆಸ್ ಜತೆ ವಿಲೀನ ಮಾಡಿದ್ದರೋ ಇಲ್ಲವೇ ಎಂಬ ವಿಷಯ ಗುರುವಾರ ಸುಪ್ರೀಂ ಕೋರ್ಟ್‌ನಲ್ಲಿ ತೀವ್ರ ಚರ್ಚೆಗೆ ಗ್ರಾಸವಾಯಿತು.

‘ಕಾಂಗ್ರೆಸ್‌ನೊಂದಿಗೆ ವಿಲೀನಗೊಳ್ಳದೇ ಇದ್ದರೂ ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿದೆ’ ಎಂದು ಶಂಕರ್‌ ಪರ ವಕೀಲ ಆರ್‌.ಗಿರಿ ವಾದ ಮಂಡಿಸಿದರು.

ವಿಲೀನ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರವೇ ಶಂಕರ್‌ ಅವರು ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದರು. ಅವರು ಯಾವುದೇ ರೀತಿಯ ದಾಖಲೆ ಸಲ್ಲಿಸಿಲ್ಲ. ಆದರೆ, ಸ್ಪೀಕರ್ ಅವರೇ ತೃಪ್ತಿದಾಯಕ ದಾಖಲೆ ಒದಗಿಸುವಂತೆ ಹೇಳಿದ್ದರು. ಆದರೂ ಪಕ್ಷ ವಿಲೀನಗೊಂಡಿಲ್ಲ ಎಂದು ಶಂಕರ್ ಹೇಳುತ್ತಿರುವುದು ಸರಿಯಲ್ಲ ಎಂದು ಕಾಂಗ್ರೆಸ್ ಪರ ವಕೀಲ ಕಪಿಲ್‌ ಸಿಬಲ್ ಆಕ್ಷೇಪಿಸಿದರು.

ADVERTISEMENT

‘ಕೆಪಿಜೆಪಿ ವಿಲೀನದ ಕುರಿತು ಸ್ಪೀಕರ್ ಅಧಿಸೂಚನೆ ಹೊರಡಿಸಿದ್ದರೇ’ ಎಂಬ ನ್ಯಾಯಮೂರ್ತಿ ಎನ್‌.ವಿ. ರಮಣ ಪ್ರಶ್ನೆಗೆ ಉತ್ತರಿಸಿದ ಸಿಬಲ್, ‘ವಿಲೀನಗೊಂಡಿದ್ದರಿಂದಲೇ ಶಂಕರ್ ಅವರಿಗೆ ವಿಧಾನಸಭೆಯಲ್ಲಿ ಕಾಂಗ್ರೆಸ್ ಸಾಲಿನಲ್ಲೇ ಆಸನ ವ್ಯವಸ್ಥೆ ಮಾಡಲಾಗಿತ್ತು’ ಎಂದರು.

‘ವಾಸ್ತವದಲ್ಲಿ ವಿಲೀನ ಪ್ರಕ್ರಿಯೆಯೇ ಪೂರ್ಣಗೊಳ್ಳದ್ದರಿಂದ ಅವರನ್ನು ಕಾಂಗ್ರೆಸ್ ಸದಸ್ಯ ಎಂದು ಪರಿಗಣಿಸಿದ್ದಾದರೂ ಹೇಗೆ’ ಎಂದು ವಿ.ಗಿರಿ ಪ್ರಶ್ನಿಸಿದರು.

‘ಕೆಪಿಜೆಪಿಯಿಂದ ಗೆದ್ದಿದ್ದು ಶಂಕರ್‌ ಒಬ್ಬರೇ. ಅವರೇ ಒಪ್ಪಿದ್ದರಿಂದ ವಿಲೀನ ಪ್ರಕ್ರಿಯೆ ಪೂರ್ಣಗೊಂಡಿದೆ’ ಎಂಬ ಸಿಬಲ್ ವಾದವನ್ನು ತೀವ್ರವಾಗಿ ವಿರೋಧಿಸಿದ ಗಿರಿ, ‘ಸ್ಪೀಕರ್ ಅವರ ಪರಮಾಧಿಕಾರ ಬೆಂಬಲಿಸುವ ನೀವು ವಿಲೀನ ಕುರಿತ ಅವರ ನಿರ್ಧಾರವನ್ನು ಬೆಂಬಲಿಸುತ್ತಿಲ್ಲ. ಸ್ವತಃ ಸ್ಪೀಕರ್‌ ಅವರೇ ಪತ್ರ ಬರೆದು ಪಕ್ಷದ ಅಧ್ಯಕ್ಷರಿಂದ ಈ ಕುರಿತ ಪ್ರಮಾಣಪತ್ರ ನೀಡುವವರೆಗೆ ವಿಲೀನ ಪ್ರಕ್ರಿಯೆ ಪೂರ್ಣಗೊಳ್ಳದೆಂದೇ ಸ್ಪಷ್ಟಪಡಿಸಿದ್ದಾರೆ’ ಎಂದು ಹೇಳಿದರು.

ಈ ವೇಳೆ ಸ್ಪೀಕರ್‌ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕೆಪಿಜೆಪಿ ವಿಲೀನ ಪ್ರಕ್ರಿಯೆ ಪೂರ್ಣಗೊಂಡ ಬಗ್ಗೆ ಸ್ಪೀಕರ್‌ ಕಚೇರಿಯಲ್ಲಿ ಯಾವುದೇ ದಾಖಲೆಗಳಿಲ್ಲ- ಎಂದು ವಿವರಿಸಿದರು.

‘ಕಾಗವಾಡದ ಶಾಸಕ ಶ್ರೀಮಂತ ಪಾಟೀಲ ಅವರು ಹೃದಯಾಘಾತ ಆಗಿದೆ ಎಂದು ಮುಂಬೈಗೆ ತೆರಳಿದ್ದರು. ಅವರು ಸಲ್ಲಿಸಿದ ವೈದ್ಯಕೀಯ ಪ್ರಮಾಣಪತ್ರದಲ್ಲಿ ವೈದ್ಯರ ಹೆಸರು, ಸಹಿ, ಆಸ್ಪತ್ರೆಯ ಹೆಸರು ಇರಲಿಲ್ಲ. ವಿಶ್ವಾಸಮತ ಯಾಚನೆ ವೇಳೆ ಕಲಾಪದಲ್ಲಿ ಭಾಗವಹಿಸದೇ ನುಣುಚಿಕೊಂಡವರು ಸಮರ್ಪಕ ಉತ್ತರ ನೀಡದಾಗ ಸ್ಪೀಕರ್‌ ಕ್ರಮ ಕೈಗೊಳ್ಳಬಾರದೇ’ ಎಂದೂ ಸಿಬಲ್‌ ಪ್ರಶ್ನಿಸಿದರು.

‘ನನ್ನ ಕಕ್ಷಿದಾರ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಪಾಲ್ಗೊಳ್ಳದಿದ್ದರೂ, ಅವರನ್ನು ಅನರ್ಹಗೊಳಿಸಿ ಸ್ಪೀಕರ್‌ ಆದೇಶ ಹೊರಡಿಸಿದ್ದಾರೆ’ ಎಂದು ಸುಧಾಕರ್ ಪರ ವಕೀಲ ಸಿ.ಎ. ಸುಂದರಂ ದೂರಿದರು. ಪ್ರಕರಣದ ಇತ್ಯರ್ಥ ಆಗುವವರೆಗೆ ಚುನಾವಣೆಯನ್ನು ಮುಂದೂಡಬೇಕು ಎಂದು ಅವರು ಬುಧವಾರ ಆಗ್ರಹಿಸಿದ್ದರು.

ಅನರ್ಹತೆ ಎಲ್ಲಿಯವರೆಗೆ ಊರ್ಜಿತ?
ಸಂವಿಧಾನದ 10ನೇ ಪರಿಚ್ಛೇದದಡಿ ಕೈಗೊಳ್ಳುವ ಅನರ್ಹತೆ ಆದೇಶದ ವ್ಯಾಪ್ತಿಯ ಕುರಿತು ಸಾಂವಿಧಾನಿಕ ಪೀಠ ಚರ್ಚೆ ನಡೆಸುವ ಅಗತ್ಯವಿದೆ ಎಂದು ಕಪಿಲ್‌ ಸಿಬಲ್‌ ಸಲಹೆ ನೀಡಿದರು.ಶಾಸಕರ ಅನರ್ಹತೆಯ ಆದೇಶದ ಅವಧಿ ಎಲ್ಲಿಯವರೆಗೆ ಜಾರಿಯಲ್ಲಿರಲಿದೆ, ಅದರ ವ್ಯಾಪ್ತಿ ಯಾವುದು ಎಂಬ ಕುರಿತು ಸ್ಪಷ್ಟನೆ ನೀಡುವಂತೆ ನ್ಯಾಯಪೀಠ ಕೇಳಿದಾಗ ಅವರು ಈ ಸಲಹೆ ನೀಡಿದರು.

ರಾಜಕಾರಣದ ಮೇಲೆ ಅಗಾಧ ಮತ್ತು ಗಂಭೀರ ಪರಿಣಾಮ ಬೀರುವ ಈ ಅಂಶದ ಕುರಿತು ಸಂವಿಧಾನ ಮತ್ತು ಕಾನೂನು ಬೆಳಕು ಚೆಲ್ಲಬೇಕಿದೆ. ಸಾಂವಿಧಾನಿಕ ಪೀಠವೇ ಈ ಬಗ್ಗೆ ವಿಚಾರಣೆ ನಡೆಸಿ ತೀರ್ಪು ಹೊರಡಿಸಬೇಕಿದೆ ಎಂದು ಅವರು ಹೇಳಿದರು.

ಸಂವಿಧಾನದ 190 (3) (ಬಿ) ವಿಧಿಯನ್ನು ಪ್ರಸ್ತಾಪಿಸಿದ ಕಪಿಲ್‌ ಸಿಬಲ್, ಶಾಸಕರು ನೀಡುವ ರಾಜೀನಾಮೆಯು ಸ್ವಯಂ ಪ್ರೇರಿತವೂ, ನೈಜವೂ ಆಗಿದೆ ಎಂಬ ಬಗ್ಗೆ ತೃಪ್ತರಾದ ನಂತರವೇ ಸ್ಪೀಕರ್ ಅದನ್ನು ಅಂಗೀಕರಿಸಬಹುದು ಎಂದರು. ‘ವಿಧಾನಸಭೆಯ ಮಿಕ್ಕ ಅವಧಿಯವರೆಗೆ ಅನರ್ಹಗೊಳಿಸುವ ಅವಕಾಶವನ್ನು ಸಂವಿಧಾನ ನೀಡಿದೆಯೇ’ ನ್ಯಾಯಪೀಠ ಮತ್ತೆ ಪ್ರಶ್ನಿಸಿತು.

ಕಪಿಲ್‌ ಸಿಬಲ್‌ ವಾದ
* ಸ್ಪೀಕರ್‌ ನೋಟಿಸ್‌ಗೆ ಜಾರಕಿಹೊಳಿ, ಕುಮಟಳ್ಳಿ ಪ್ರತಿಕ್ರಿಯೆ ನೊಟೀಸ್ ನೀಡಿಲ್ಲ ಎಂಬ ಹೇಳಿಕೆ ಅಪ್ರಾಮಾಣಿಕತೆ ದ್ಯೋತಕ
* ಸ್ಪೀಕರ್ ಕಾರ್ಯದಲ್ಲಿ ಕೋರ್ಟ್‌ ಹಸ್ತಕ್ಷೇಪ ಮಾಡುವಂತಿಲ್ಲ
* ವಿಶ್ವಾಸಮತ ಯಾಚನೆ ವೇಳೆ ಶಾಸಕರ ಹಾಜರಿ ಕಡ್ಡಾಯ
* ಸರ್ಕಾರದ ಅಳಿವು– ಉಳಿವಿನ ಪ್ರಶ್ನೆಯಿಂದಾಗಿ ವಿಪ್‌ ಜಾರಿ
* ಸ್ಪೀಕರ್‌ಗೆ ರಾಜೀನಾಮೆ ಮಾಹಿತಿ ನೀಡದೆ ಶಾಸಕರೇ ಪರಾರಿ
* ಆಸ್ಪತ್ರೆಗೆ ಹೋಗಿದ್ದ ಸ್ಪೀಕರ್‌ ವಿರುದ್ಧವೇ ಪರಾರಿ ಆರೋಪ
* ಸ್ಪೀಕರ್ ಅಧಿಕಾರ ಸಾಂವಿಧಾನಿಕ ಪೀಠದ ವಿಚಾರಣೆಗೊಳಪಡಲಿ
* ವಿಚಾರಣೆಗೆ ಅಯೋಗ್ಯವಾದ ಅನರ್ಹರ ಅರ್ಜಿ ವಜಾಗೊಳ್ಳಲಿ
* ಅನರ್ಹತೆ ಆದೇಶ ನಿಯಮಬದ್ಧ ಹಾಗಾಗಿ ವಿಚಾರಣೆ ಬೇಡ
* ರಿಟ್ ಅರ್ಜಿ ಸಲ್ಲಿಸಲು ಮಾನದಂಡ ಅನುಸರಿಸಲಾಗಿಲ್ಲ
* ಶಾಸಕರಾದವರು ಸರ್ಕಾರದ ರಕ್ಷಣೆಗೆ ಮುಂದಾಗಬೇಕು
* ಸರ್ಕಾರ ಪತನಗೊಳ್ಳುವ ವೇಳೆ ಕಲಾಪಕ್ಕೆ ಗೈರಾದ ಅನರ್ಹರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.