ADVERTISEMENT

Karnataka Election 2023 | ಚುನಾವಣಾ ಪ್ರಚಾರಕ್ಕೆ ಕಾಂಗ್ರೆಸ್ ‘ಪಂಚ ಅಂಶ’

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2023, 0:15 IST
Last Updated 1 ಮಾರ್ಚ್ 2023, 0:15 IST
   

ಬೆಂಗಳೂರು: ‘ಮುಂಬರುವ ಚುನಾವಣೆಯಲ್ಲಿ ಅನ್ನ, ಅಕ್ಷರ, ಆರೋಗ್ಯ, ಆಶ್ರಯ, ಅಭಿವೃದ್ಧಿ ಈ ಪಂಚ ಅಂಶಗಳನ್ನು ಇಟ್ಟುಕೊಂಡು ನಾವು ಪ್ರಚಾರ ಮಾಡುತ್ತೇವೆ. ಜೊತೆಗೆ, ಈಗಾಗಲೇ ಘೋಷಿಸಿದ ಗ್ಯಾರಂಟಿ ಯೋಜನೆಗಳನ್ನೂ ಪ್ರಚಾರ ಮಾಡುತ್ತೇವೆ’ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ತಿಳಿಸಿದರು.

ಸಮಿತಿಯ ಸಭೆಯ ಬಳಿಕ ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ನಾವು ಜನರ ಭಾವನೆ ಕೆರಳಿಸುವ ಬದಲು, ಬದುಕು ಕಟ್ಟಿಕೊಡುವ ಭರವಸೆಗಳನ್ನು ನೀಡಲಿದ್ದೇವೆ’ ಎಂದರು.

‘ಪಕ್ಷದ ಎಲ್ಲ ಮುಖಂಡರು ಸಭೆಯಲ್ಲಿ ಉತ್ತಮ ಸಲಹೆಗಳನ್ನು ನೀಡಿದ್ದಾರೆ. ಪದಾಧಿಕಾರಿಗಳಿಗೆ ನಿರ್ದಿಷ್ಟ ಜವಾಬ್ದಾರಿ ನೀಡುತ್ತೇವೆ. ಕೆಪಿಸಿಸಿ ಮತ್ತು ಪ್ರಚಾರ ಸಮಿತಿ ಒಂದು ತಂಡವಾಗಿ ಕೆಲಸ ಮಾಡಲಿದೆ. ಕಾಂಗ್ರೆಸ್ ಪಕ್ಷದ ಸಾಧನೆ, ಬಿಜೆಪಿ ಸರ್ಕಾರದ ವೈಫಲ್ಯಗಳ ಮಾಹಿತಿಯ ಕಿರುಹೊತ್ತಿಗೆ ಬಿಡುಗಡೆ ಮಾಡಿ, ಅದನ್ನು ಜಿಲ್ಲಾ ಸಮಿತಿಯಿಂದ ಬೂತ್ ಸಮಿತಿವರೆಗೆ ಸದಸ್ಯರನ್ನು ಹೊಂದಾಣಿಕೆ ಮಾಡಿ ಮನೆ ಮನೆಗೆ ತಲುಪಿಸುತ್ತೇವೆ’ ಎಂದೂ ಹೇಳಿದರು.

ADVERTISEMENT

‘ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಸೇರಿದಂತೆ ನಮ್ಮಲ್ಲಿ ಸಾಕಷ್ಟು ಸ್ಟಾರ್ ಪ್ರಚಾರಕರಿದ್ದಾರೆ. ಇಷ್ಟು ದಿನ ಸ್ಟಾರ್ ಪ್ರಚಾರಕರನ್ನು ಮಾತ್ರ ಇಟ್ಟುಕೊಂಡು ಪ್ರಚಾರ ಕೆಲಸ ಮಾಡಲಾಗುತ್ತಿತ್ತು. ಅವರ ಜೊತೆಗೆ, ಇದೇ ಮೊದಲ ಬಾರಿಗೆ ಪದಾಧಿಕಾರಿಗಳನ್ನು ಒಳಗೊಂಡಂತೆ ಜಿಲ್ಲಾಮಟ್ಟದಲ್ಲಿ ತಂಡ ರಚಿಸಲಾಗಿದೆ’ ಎಂದರು.

‘ಬಿಜೆಪಿಯವರು ರಾಜ್ಯದಲ್ಲಿ ದಿವಾಳಿಯಾಗಿದ್ದಾರೆ. ಅವರಿಗೆ ರಾಜ್ಯದಲ್ಲಿ ನಾಯಕತ್ವವಿಲ್ಲ. ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಿರುವ ಕಾರಣ ಮೋದಿ, ಅಮಿತ್ ಶಾ, ನಡ್ಡಾ ಅವರನ್ನು ಕರೆಸಬೇಕಿದೆ. ನಮ್ಮಲ್ಲಿ ಮೋದಿ ಮ್ಯಾಜಿಕ್ ನಡೆಯುವುದಿಲ್ಲ’ ಎಂದರು.

‘ಕಾಂಗ್ರೆಸ್ ನಿಜಲಿಂಗಪ್ಪ, ವೀರೇಂದ್ರ ಪಾಟೀಲ, ಖರ್ಗೆ ಅವರಿಗೆ ಅಪಮಾನ ಮಾಡಿದೆ’ ಎಂಬ ಮೋದಿ ಹೇಳಿಕೆ ಬಗ್ಗೆ ಕೇಳಿದಾಗ, ‘ಇದು ಮೋದಿ ಅವರ ಕೀಳುಮಟ್ಟದ ಗಿಮಿಕ್’ ಎಂದು ಪ್ರತಿಕ್ರಿಯಿಸಿದರು.

ಮಾರ್ಚ್‌ 5ರಿಂದ ಪ್ರಚಾರ ಅಖಾಡಕ್ಕೆ ಖರ್ಗೆ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇದೇ 5ರಂದು ಪಕ್ಷದ ಚುನಾವಣಾ ಪ್ರಚಾರದ ಅಖಾಡಕ್ಕೆ ಇಳಿಯಲಿದ್ದಾರೆ. ಅಂದು ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ನಡೆಯಲಿರುವ ಪಕ್ಷದ ‘ಪ್ರಜಾಧ್ವನಿ’ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೆ, ಅಲ್ಲಿ ಅವರು ಪಕ್ಷದ ಕಚೇರಿಯನ್ನೂ ಉದ್ಘಾಟಿಸಲಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಮತದಾರರ ಓಲೈಕೆಗಾಗಿ ಈಗಾಗಲೇ ಆಕರ್ಷಕ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿರುವ ಕೆಪಿಸಿಸಿ, ‘ಸ್ಟಾರ್‌ ಪ್ರಚಾರಕರ’ ಮೂಲಕ ಈ ಘೋಷಣೆಗಳಿಗೆ ಭರ್ಜರಿ ಪ್ರಚಾರ ನೀಡಲು ಮುಂದಾಗಿದೆ. ಖರ್ಗೆಯವರ ಮೂಲಕ ಚುನಾವಣಾ ಪ್ರಚಾರಕ್ಕೆ ಇನ್ನಷ್ಟು ಮೆರುಗು ನೀಡಲು ರಾಜ್ಯ ‘ಕೈ’ ನಾಯಕರು ನಿರ್ಧರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.