ADVERTISEMENT

ಚುನಾವಣೆಯಲ್ಲಿ ಬಿಜೆಪಿ–ಜೆಡಿಎಸ್‌ ಒಳ ಒಪ್ಪಂದ: ಸಿದ್ದರಾಮಯ್ಯ

ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 20 ಜನವರಿ 2023, 12:32 IST
Last Updated 20 ಜನವರಿ 2023, 12:32 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಮೈಸೂರು: ‘ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ–ಜೆಡಿಎಸ್‌ ಒಳ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ತಾಲ್ಲೂಕಿನ ಲಿಂಗದೇವರಕೊಪ್ಪಲು ಗ್ರಾಮದಲ್ಲಿ ಶುಕ್ರವಾರ ‘ಸ್ವಾಭಿಮಾನಿ ಪಡೆ ಕಾಂಗ್ರೆಸ್‌ ಸೇರ್ಪಡೆ’ ಹಾಗೂ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿ, ‘ಬಿಜೆಪಿ–ಜೆಡಿಎಸ್‌ನವರು ಏನೇ ಮಾಡಿದರೂ, ಕಾಂಗ್ರೆಸ್ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲಾಗದು. ರಾಜ್ಯದಾದ್ಯಂತ ಪಕ್ಷದ ಪರ ವಾತಾವರಣವಿದೆ’ ಎಂದರು.

‘ಜೆಡಿಎಸ್‌ನಲ್ಲಿ 37 ಶಾಸಕರಷ್ಟೇ ಇದ್ದರೂ ಎಚ್‌.ಡಿ.ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಿದ್ದೆವು. ಅವರು, ನಮ್ಮನ್ನು ಕಸಕ್ಕಿಂತ ಕಡೆಯಾಗಿ ಕಂಡರು. ಯಾವ ನೇಮಕಾತಿ ಸಂದರ್ಭದಲ್ಲೂ ಕೇಳುತ್ತಿರಲಿಲ್ಲ. ಆಪರೇಷನ್ ಕಮಲ ನಡೆಯುತ್ತಿದ್ದರೂ ಅಮೆರಿಕಕ್ಕೆ ಹೋಗಿ ಕುಳಿತರು. ಇಲ್ಲಿಯೇ ಇದ್ದಿದ್ದರೆ, ಇನ್ನೊಂದು ವರ್ಷವಾದರೂ ಮುಖ್ಯಮಂತ್ರಿಯಾಗಿರಬಹುದಾಗಿತ್ತು’ ಎಂದರು.

ADVERTISEMENT

‘ಕಾರ್ಯಕರ್ತರಿಗೆ ನನ್ನ ಮೇಲೆ ಗೌರವವಿದ್ದರೆ ಜೆಡಿಎಸ್‌ನ ಜಿ.ಟಿ.ದೇವೇಗೌಡರನ್ನು ಸೋಲಿಸಬೇಕು. ಇದು ಸೇಡಿನ ರಾಜಕಾರಣವೇನಲ್ಲ. ಮುಖಂಡರು ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಪಕ್ಷವನ್ನು ಗೆಲ್ಲಿಸಬೇಕು’ ಎಂದರು.

‘ಅನೇಕ ಸಂದರ್ಭಗಳಲ್ಲಿ ಕಾಂಗ್ರೆಸ್ ಅನ್ನು ಕಾಂಗ್ರೆಸ್ಸೇ ಸೋಲಿಸಿದೆ. ಮುಂಬರುವ ಚುನಾವಣೆಯಲ್ಲಿ ಇದಾಗಬಾರದು. ಕೆಪಿಸಿಸಿ ಸದಸ್ಯ ಕೆ.ಮರೀಗೌಡ, ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್‌ ಸೇರಿದಂತೆ 11 ಮಂದಿ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಪಕ್ಷಕ್ಕೆ ಸೇರಿರುವ ಮಾವಿನಹಳ್ಳಿ ಸಿದ್ದೇಗೌಡ, ಬೀರಿಹುಂಡಿ ಬಸವಣ್ಣ ಆಕಾಂಕ್ಷಿಗಳಾಗಿರಬಹುದು. ಗೆಲ್ಲುವ ಸಾಮರ್ಥ್ಯವನ್ನು ನೋಡಿ ಟಿಕೆಟ್‌ ಕೊಡಲಾಗುತ್ತದೆ. ಯಾರಿಗೇ ಕೊಟ್ಟರೂ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು’ ಎಂದರು.

ಮಾಜಿ ಶಾಸಕಿ ಸುನೀತಾ ವೀರಪ್ಪಗೌಡ ಬಿಜೆಪಿ ತೊರೆದು ಅಪಾರ ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರ್ಪಡೆಯಾದರು. ಜಿಟಿಡಿ ವಿರುದ್ಧ ತಿರುಗಿ ಬಿದ್ದಿರುವ ಅವರ ಬೆಂಬಲಿಗರಾದ ಮಾವಿನಹಳ್ಳಿ ಸಿದ್ದೇಗೌಡ, ಬೀರಿಹುಂಡಿ ಬಸವಣ್ಣ, ಸಿದ್ದೇಗೌಡ, ಕೆಂಪ ನಾಯಕ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರ್ಪಡೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.