ADVERTISEMENT

ಮುಸ್ಲಿಮರೊಂದಿಗೆ ವಿಶ್ವಾಸದ ಹೆಜ್ಜೆ, ಪ್ರಧಾನಿ ಮೋದಿ ಸೂಚನೆ ಪಾಲನೆ: ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 18 ಜನವರಿ 2023, 14:23 IST
Last Updated 18 ಜನವರಿ 2023, 14:23 IST
ಬಿ.ಎಸ್.ಯಡಿಯೂರಪ್ಪ
ಬಿ.ಎಸ್.ಯಡಿಯೂರಪ್ಪ   

ಶಿವಮೊಗ್ಗ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಬಂಧುಗಳನ್ನು ವಿಶ್ವಾಸದಿಂದ ಜೊತೆಗೆ ಕರೆದೊಯ್ಯಲು ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ. ಅದನ್ನು ಪಾಲನೆ ಮಾಡಲಾಗುವುದು ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ತಮ್ಮ ದೆಹಲಿ ಭೇಟಿಯ ಬಗ್ಗೆ ಬುಧವಾರ ಇಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ’ನಮ್ಮೊಂದಿಗೆ ಅಲ್ಪಸಂಖ್ಯಾತರು ಚೆನ್ನಾಗಿದ್ದಾರೆ. ಮೊದಲಿನಿಂದಲೂ ವಿಶ್ವಾಸದಿಂದ ಇದ್ದೇವೆ. ನಮ್ಮ ಬಗ್ಗೆ ಅವರಿಗೆ ಗೌರವವಿದೆ. ನಮಗೂ ಅವರ ಬಗ್ಗೆ ವಿಶ್ವಾಸವಿದೆ. ಪ್ರಧಾನಿ ಸಲಹೆಯಂತೆ ಬರುವ ದಿನಗಳಲ್ಲಿ ಅವರೊಂದಿಗೆ ಹೆಚ್ಚಿನ ವಿಶ್ವಾಸದಿಂದ ಹೆಜ್ಜೆ ಇಡುವ ಪ್ರಯತ್ನ ಮಾಡಲಿದ್ದೇವೆ‘ ಎಂದರು.

ಮುಂದಿನ ಚುನಾವಣೆ ಗೆಲ್ಲಲು ಏನೇನು ತಂತ್ರ ಮಾಡಬೇಕು ಎಂಬುದರ ಒಂದೂವರೆ ಗಂಟೆ ಕಾಲ ಪ್ರಧಾನಮಂತ್ರಿ ಮಾರ್ಗದರ್ಶನ ಮಾಡಿದ್ದಾರೆ. ಮನೆ ಮನೆಗೆ ಹೋಗಿ ಮತದಾರರ ಭೇಟಿಗೆ ಸೂಚನೆ ನೀಡಿದ್ದಾರೆ. ನರೇಂದ್ರ ಮೋದಿ, ಅಮಿತ್‌ ಶಾ, ನಡ್ಡಾ ರಾಜ್ಯದ ಚುನಾವಣೆಗೆ ಹೆಚ್ಚಿನ ಸಮಯ ಕೊಡಲಿದ್ದಾರೆ ಎಂದರು.

ADVERTISEMENT

ಸಂಪುಟ ವಿಸ್ತರಣೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಶಿವಮೊಗ್ಗ ಬಳಿಯ ಸೋಗಾನೆಯ ವಿಮಾನ ನಿಲ್ದಾಣವನ್ನು ಫೆ.27ಕ್ಕೆ ಪ್ರಧಾನಿ ನರೇಂದ್ರ ಮೋದಿ ಬಂದು ಉದ್ಘಾಟನೆ ಮಾಡಲಿದ್ದಾರೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.