ADVERTISEMENT

ವಿದ್ಯುತ್ ದರ ಏರಿಕೆ ಕೆಇಆರ್‌ಸಿಗೆ ಪ್ರಸ್ತಾವನೆ

ಬೆಸ್ಕಾಂನಿಂದ ಪ್ರತಿ ಯೂನಿಟ್‌ಗೆ 49 ಪೈಸೆ ಹೆಚ್ಚಳಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2024, 0:37 IST
Last Updated 7 ಜನವರಿ 2024, 0:37 IST
   

ಬೆಂಗಳೂರು: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ(ಬೆಸ್ಕಾಂ) ಸೇರಿದಂತೆ ರಾಜ್ಯದ ಐದು ಎಸ್ಕಾಂಗಳು ವಿದ್ಯುತ್ ದರ ಏರಿಸುವಂತೆ ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗಕ್ಕೆ(ಕೆಇಆರ್‌ಸಿ) ಪ್ರಸ್ತಾವನೆ ಸಲ್ಲಿಸಿವೆ.

ಬೆಸ್ಕಾಂ, ಪ್ರತಿ ಯೂನಿಟ್‌ಗೆ 49 ಪೈಸೆ ಹೆಚ್ಚಿಸುವಂತೆ ಮನವಿ ಮಾಡಿದೆ. ಇದೇ ರೀತಿ ಮೆಸ್ಕಾಂ, ಜೆಸ್ಕಾಂ, ಸೆಸ್ಕ್‌, ಹೆಸ್ಕಾಂಗಳು 40 ರಿಂದ 60 ಪೈಸೆ ದರ ಪರಿಷ್ಕರಿಸುವಂತೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ತಿಳಿದುಬಂದಿದೆ. ಏಪ್ರಿಲ್‌ನಿಂದ ದರ ಹೆಚ್ಚಿಸುವಂತೆ ಪ್ರಸ್ತಾವನೆಯಲ್ಲಿ ಮನವಿ ಮಾಡಲಾಗಿದೆ. ನಿಗದಿತ ಶುಲ್ಕದಲ್ಲಿ ಏರಿಕೆ ಇಲ್ಲ. ಕೈಗಾರಿಕೆ ಬಳಕೆದಾರರಿಗೆ ಮಾತ್ರ ಡಿಮ್ಯಾಂಡ್ ಶುಲ್ಕ ಮತ್ತು ವಿದ್ಯುತ್‌ ಬಳಕೆ ಶುಲ್ಕ ಎರಡನ್ನೂ ಹೆಚ್ಚಿಸಲು ಮನವಿ ಮಾಡಲಾಗಿದೆ.

ಪ್ರತಿ ವರ್ಷ ಡಿಸೆಂಬರ್ ಅಥವಾ ಜನವರಿಯಲ್ಲಿ ಎಸ್ಕಾಂಗಳು ವಿದ್ಯುತ್ ದರ ಪರಿಷ್ಕರಣೆಗೆ ಪ್ರಸ್ತಾವನೆ ಸಲ್ಲಿಸುತ್ತವೆ. ಪ್ರಸ್ತಾವನೆ ಸಲ್ಲಿಕೆ ನಂತರ, ಕೆಇಆರ್‌ಸಿ ಪ್ರತಿ ಕಂಪನಿಯ ಅರ್ಜಿ ಪರಿಶೀಲಿಸಿ ಸಾರ್ವಜನಿಕ ವಿಚಾರಣೆ ನಡೆಸಿ ದರ ಪರಿಷ್ಕರಣೆ ಮಾಡಲಿದ್ದು ಏಪ್ರಿಲ್‌ನಿಂದ ಹೊಸ ದರ ಜಾರಿಗೆ ಬರಲಿದೆ.

ADVERTISEMENT

ಇಂಧನ ಹೊಂದಾಣಿಕೆ ವೆಚ್ಚ ಆಧರಿಸಿ ಇತ್ತೀಚೆಗಷ್ಟೇ ಪ್ರತಿ ಯೂನಿಟ್‌ಗೆ 37 ಪೈಸೆಯಿಂದ 51 ಪೈಸೆಯವರೆಗೆ  ದರ ಕಡಿಮೆ ಮಾಡಿ ವಿದ್ಯುತ್ ಸರಬರಾಜು ಕಂಪನಿಗಳು ಆದೇಶ ಹೊರಡಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.