ADVERTISEMENT

ವಿದ್ಯುತ್‌: ಯೂನಿಟ್‌ಗೆ 50 ಪೈಸೆ ಹೆಚ್ಚಳ ಖಚಿತ–ಏಪ್ರಿಲ್‌ ಒಂದರಿಂದ ಜಾರಿ ಸಾಧ್ಯತೆ

ಮಾರ್ಚ್‌ನಲ್ಲಿ ದರ ಏರಿಕೆ ಪ್ರಕಟ: ಏಪ್ರಿಲ್‌ ಒಂದರಿಂದ ಜಾರಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 23:30 IST
Last Updated 20 ಫೆಬ್ರುವರಿ 2026, 23:30 IST
   

ಬೆಂಗಳೂರು: ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗವು (ಕೆಇಆರ್‌ಸಿ) ದರ ಏರಿಕೆಗೆ ಸಿದ್ಧತೆ ನಡೆಸಿದ್ದು, ಬರುವ ಏಪ್ರಿಲ್‌ನಿಂದ ಗೃಹ ಬಳಕೆ ವಿದ್ಯುತ್‌ ದರ ಯೂನಿಟ್‌ಗೆ ಸುಮಾರು 50 ಪೈಸೆ ಹೆಚ್ಚಳವಾಗುವುದು ಬಹುತೇಕ ಖಚಿತವಾಗಿದೆ.

ಐದು ವಿದ್ಯುತ್‌ ಸರಬರಾಜು ಕಂಪನಿಗಳು 2025–26ನೇ ಸಾಲಿನ ವಿದ್ಯುತ್‌ ದರವನ್ನು ಪರಿಷ್ಕರಿಸಿ ಯೂನಿಟ್‌ಗೆ ಸರಾಸರಿ 68 ಪೈಸೆ ಹೆಚ್ಚಳ ಮಾಡುವಂತೆ ಕೋರಿದ್ದು, ಆಯೋಗವು 14ರಿಂದ 18 ಪೈಸೆ ಹೆಚ್ಚಳ ಮಾಡುವ ಉದ್ದೇಶವನ್ನು ಹೊಂದಿದೆ.

ಇದಲ್ಲದೆ ಬಹುವಾರ್ಷಿಕ ದರ ಪದ್ಧತಿಗೆ ಅನುಗುಣವಾಗಿ 2026–27ನೇ ಸಾಲಿನ ದರ ಹೆಚ್ಚಳವನ್ನು ಕಳೆದ ವರ್ಷದ ಮಾರ್ಚ್‌ನಲ್ಲಿ ಪ್ರಕಟಿಸಲಾಗಿದೆ. ಆ ಪ್ರಕಾರ ಬರುವ ಏಪ್ರಿಲ್‌ ಒಂದರಿಂದ ಅದು ಯೂನಿಟ್‌ಗೆ 35 ಪೈಸೆ ಹೆಚ್ಚಳವಾಗಲಿದೆ. ಈ 35 ಪೈಸೆ ಹಾಗೂ ಈಗ ಪರಿಷ್ಕರಣೆಯಾಗಲಿರುವ ದರ ಏರಡೂ ಸೇರಿ ಯೂನಿಟ್‌ಗೆ 50 ಪೈಸೆ ಹೆಚ್ಚಳವಾಗಬಹುದು ಎಂದು ಆಯೋಗದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ADVERTISEMENT

ಆದಾಯದಲ್ಲಿ ಖೋತಾ ಆಗಿರುವುದರಿಂದ, ಇದನ್ನು ಸರಿದೂಗಿಸಿಕೊಡಬೇಕು ಎಂದು ಎಸ್ಕಾಂಗಳು ಆಯೋಗದ ಮೊರೆ ಹೋಗಿದ್ದು, ಆಯೋಗವು ಅಹವಾಲುಗಳನ್ನು ಆಲಿಸುವ ಪ್ರಕ್ರಿಯೆ ಪ್ರಾರಂಭಿಸಿದೆ. ಬೆಸ್ಕಾಂ ಮತ್ತು ಕೆಪಿಟಿಸಿಎಲ್‌ ಸಲ್ಲಿಸಿರುವ ವಾರ್ಷಿಕ ಕಾರ್ಯಕ್ಷಮತೆ ವರದಿಯ ಆಧಾರದ ಮೇಲೆ ಆಯೋಗ ಶುಕ್ರವಾರ ಅಹವಾಲುಗಳನ್ನು ಆಲಿಸಿತು.

ಇದಲ್ಲದೆ ಕೈಗಾರಿಕೆ ಮತ್ತು ವಾಣಿಜ್ಯ ಬಳಕೆಯ ವಿದ್ಯುತ್‌ ದರ ಯೂನಿಟ್‌ಗೆ 99 ಪೈಸೆ ಹೆಚ್ಚಳವಾಗುವ ಸಾಧ್ಯತೆ ಇದೆ. ಐದು ವಿದ್ಯುತ್‌ ಸರಬರಾಜು ಕಂಪನಿಗಳು(ಎಸ್ಕಾಂ) 2024–25ನೇ ಸಾಲಿನ ವಾರ್ಷಿಕ ಕಾರ್ಯಕ್ಷಮತೆ ವರದಿಯನ್ನು ಆಯೋಗಕ್ಕೆ ಸಲ್ಲಿಸಿದ್ದು ಆದಾಯದಲ್ಲಿ ಸುಮಾರು ₹4,900 ಕೋಟಿ ಖೋತಾ ಆಗಿರುವುದನ್ನು ಪ್ರಸ್ತಾಪಿಸಲಾಗಿದೆ.

ಐದು ಕಂಪನಿಗಳ ಅಹವಾಲುಗಳ ಸಭೆ ಮುಗಿದ ನಂತರ ಆಯೋಗ ಮಾರ್ಚ್‌ ಮಧ್ಯ ಭಾಗದಲ್ಲಿ ದರ ಹೆಚ್ಚಳ ಮಾಡಲಿದೆ. ಪರಿಷ್ಕೃತ ದರ ಏಪ್ರಿಲ್‌ ಒಂದರಿಂದ ಜಾರಿಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ.

ಆಯೋಗಕ್ಕೆ ಸಲ್ಲಿಸಿರುವ ಮಾಹಿತಿ ಪ್ರಕಾರ ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿಗೆ (ಬೆಸ್ಕಾಂ) ಅತಿ ಹೆಚ್ಚು, ಅಂದರೆ 2,802.82 ಕೋಟಿ ಖೋತಾ ಆಗಿದೆ. ಉಳಿದೆಲ್ಲ ಎಸ್ಕಾಂಗಳ ಆದಾಯದಲ್ಲೂ ಎರಡು ಸಾವಿರ ಕೋಟಿಗೂ ಅಧಿಕ ಖೋತಾ ಆಗಿದೆ. ದರ ಪರಿಷ್ಕರಣೆ ಮಾಡದಿದ್ದರೆ ಕಂಪನಿಗಳ ನಿರ್ವಹಣೆ ಕಷ್ಟವಾಗಲಿದೆ. ಆರ್ಥಿಕವಾಗಿ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ ಎಂದು ವಿವರಿಸಲಾಗಿದೆ.

ಕೃಷಿಗೆ ಕಡಿಮೆ:

ಈ ಮಧ್ಯೆ ಕೃಷಿ ಪಂಪ್‌ಸೆಟ್‌ಗಳಿಗೆ ನಿಗದಿ ಮಾಡಿರುವ ವಿದ್ಯುತ್‌ ದರವನ್ನು ಕಡಿಮೆ ಮಾಡಿ, ವಾಣಿಜ್ಯ ಸಂಸ್ಥೆಗಳು ಮತ್ತು ಕೈಗಾರಿಕೆಗಳಿಗೆ ನಿಗದಿ ಮಾಡಿರುವ ದರವನ್ನು ಜಾಸ್ತಿ ಮಾಡುವಂತೆ ಎಸ್ಕಾಂಗಳು ಪ್ರತ್ಯೇಕ ಅರ್ಜಿ ಸಲ್ಲಿಸಿದ್ದು, ಈ ತಿಂಗಳ 25ರಂದು ಆ ಅರ್ಜಿಗಳ ವಿಚಾರಣೆಯನ್ನು ಆಯೋಗ ನಡೆಸಲಿದೆ.

ಕೃಷಿ ಪಂಪ್‌ಸೆಟ್‌ಗಳಿಗೆ ಪೂರೈಸುವ ಪ್ರತಿ ಯೂನಿಟ್‌ ವಿದ್ಯುತ್‌ಗೆ ₹6.80 ಇದ್ದ ದರವನ್ನು ಆಯೋಗವು ₹8.25ಕ್ಕೆ ಹೆಚ್ಚಿಸಿತ್ತು. ಪಂಪ್‌ಸೆಟ್‌ಗಳಿಗೆ ಉಚಿತವಾಗಿ ವಿದ್ಯುತ್‌ ನೀಡುವ ಕಾರಣ, ಇದರ ವೆಚ್ಚವನ್ನು ಸಹಾಯಧನದ ರೂಪದಲ್ಲಿ ಸರ್ಕಾರ ಎಸ್ಕಾಂಗಳಿಗೆ ತುಂಬಿಕೊಡಬೇಕು.

ಕಳೆದ ವರ್ಷ ದರ ಪರಿಷ್ಕರಣೆ ಆಗುವ ಮುನ್ನ ಸರ್ಕಾರ ಸುಮಾರು ₹18 ಸಾವಿರ ಕೋಟಿ ಸಹಾಯಧನಯನ್ನು ನೀಡುತ್ತಿತ್ತು. ಪರಿಷ್ಕರಣೆ ನಂತರ ಇದು ಸುಮಾರು ₹21 ಸಾವಿರ ಕೋಟಿಗೆ ಹೆಚ್ಚಾಗಿದೆ. ಇಷ್ಟೊಂದು ಹಣವನ್ನು ಸಹಾಯಧನ ರೂಪದಲ್ಲಿ ನೀಡುವುದು ಕಷ್ಟ ಎಂಬ ಕಾರಣಕ್ಕಾಗಿ ಸರ್ಕಾರದ ಸೂಚನೆಯಂತೆ ಎಸ್ಕಾಂಗಳು ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಸಿವೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.