ADVERTISEMENT

ಹೂಡಿಕೆದಾರರ ಸಮಾವೇಶ | 11 ತಿಂಗಳಲ್ಲಿ ₹ 4.71 ಲಕ್ಷ ಕೋಟಿ ಹೂಡಿಕೆ: ಸಚಿವ ಎಂಬಿಪಾ

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 1:31 IST
Last Updated 16 ಜನವರಿ 2026, 1:31 IST
ಎಂ.ಬಿ.ಪಾಟೀಲ
ಎಂ.ಬಿ.ಪಾಟೀಲ   

ಬೆಂಗಳೂರು: ‘2025ರ ಫೆಬ್ರುವರಿಯಲ್ಲಿ ನಡೆಸಿದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ₹ 10.27 ಲಕ್ಷ ಕೋಟಿ ಬಂಡವಾಳ ಹೂಡಿಕೆಯ ಭರವಸೆ ಸಿಕ್ಕಿತ್ತು. ಈ ಪೈಕಿ, ಡಿಸೆಂಬರ್ ಅಂತ್ಯದ ವೇಳೆಗೆ ₹ 4.71 ಲಕ್ಷ ಕೋಟಿ ಹೂಡಿಕೆ ಆಗಿದೆ’ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.

ಇದೇ 19ರಿಂದ 23ರವರೆಗೆ ದಾವೋಸ್‌ನಲ್ಲಿ ವಿಶ್ವ ಮಟ್ಟದ ಆರ್ಥಿಕ ಶೃಂಗಸಭೆ ನಡೆಯಲಿದೆ. ಆ ಶೃಂಗಸಭೆಯಲ್ಲಿ ಭಾಗವಹಿಸಲಿರುವ ಸಚಿವರು, ಕಳೆದ ಒಂದು ವರ್ಷದಲ್ಲಿ ವಿವಿಧ ಕೈಗಾರಿಕಾ ವಲಯಗಳಲ್ಲಿ ಹೂಡಿಕೆ, ಅರ್ಜಿ ಸಲ್ಲಿಕೆಯ ಪ್ರಗತಿಯ ಅಂಕಿಅಂಶಗಳನ್ನು ನೀಡಿದ್ದಾರೆ.

‘ಹೂಡಿಕೆದಾರರ ಸಮಾವೇಶದಲ್ಲಿ ಆಗಿರುವ ಒಡಂಬಡಿಕೆಗಳಲ್ಲಿ ಶೇ 46ರಷ್ಟು ಹೂಡಿಕೆ ಆಗಿದೆ. ನಾವು ಕೇವಲ ಒಡಂಬಡಿಕೆಯ ಮಟ್ಟದಲ್ಲಿ ಮಾತ್ರ ನಿಂತಿಲ್ಲ. ಹೂಡಿಕೆ ಪ್ರಸ್ತಾವ ಸಲ್ಲಿಸಿದ ಕೂಡಲೇ ಅರ್ಜಿ ಸಲ್ಲಿಕೆ, ಭೂಮಿ ಮತ್ತಿತರ ಮಂಜೂರಾತಿಗಳು, ಕಡ್ಡಾಯ ಅನುಮೋದನೆಗಳು ಇವೆಲ್ಲವನ್ನೂ ಸಂಪೂರ್ಣ ಡಿಜಿಟಲ್ ವೇದಿಕೆಯಾಗಿರುವ ಏಕಗವಾಕ್ಷಿ ವ್ಯವಸ್ಥೆ ಮೂಲಕ ಒದಗಿಸುತ್ತಿದ್ದೇವೆ’ ಎಂದು ಅವರು ವಿವರಿಸಿದ್ದಾರೆ.

ADVERTISEMENT

‘ರಾಜ್ಯದಲ್ಲಿ ಹೂಡಿಕೆ ಪ್ರಸ್ತಾವಗಳು ತ್ವರಿತವಾಗಿ ಅನುಷ್ಠಾನಗೊಳ್ಳುತ್ತಿದ್ದು, ಮೊದಲಿಗಿಂತಲೂ ಹೆಚ್ಚು ಕೈಗಾರಿಕಾಸ್ನೇಹಿಯಾಗಿದೆ. ಒಟ್ಟು ಹೂಡಿಕೆ ಪ್ರಸ್ತಾವಗಳ ಪೈಕಿ ಶೇ 50ರಷ್ಟು ಮತ್ತು ತಯಾರಿಕೆ ವಲಯದ ಹೂಡಿಕೆ ಪ್ರಸ್ತಾವಗಳಲ್ಲಿ ಶೇ 60ರಷ್ಟು ‘ಕರ್ನಾಟಕ ಉದ್ಯೋಗ ಮಿತ್ರ’ದಲ್ಲಿ ಸಲ್ಲಿಕೆಯಾಗಿವೆ’ ಎಂದಿದ್ದಾರೆ.

‘ಸಿಫ್ಲೆಕ್ಸ್ ಕಂಪನಿಯು ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಮುಖ್ಯವಾಗಿರುವ ಸಿಲಿಕಾನ್ ಬಿಡಿಭಾಗಗಳನ್ನು ತಯಾರಿಸುವ ಸ್ಥಾವರ ಸ್ಥಾಪನೆಗೆ ₹ 9,300 ಕೋಟಿ, ಎಮ್ವೀ ಎನರ್ಜಿ ಕಂಪನಿಯು ಬೆಂಗಳೂರಿನ ಐಟಿಐಆರ್ ಪ್ರದೇಶದಲ್ಲಿ ಸೌರಕೋಶ ಮತ್ತು ಮಾಡ್ಯೂಲ್ ತಯಾರಿಕೆ ವಿಸ್ತರಣೆಗೆ ₹ 5,495 ಕೋಟಿ, ಜಿಂದಾಲ್ ಸ್ಟೀಲ್ಸ್ ವಿಜಯನಗರದಲ್ಲಿ ಎಲೆಕ್ಟ್ರಿಕಲ್ ಸ್ಟೀಲ್ ಘಟಕ ಸ್ಥಾಪನೆಗೆ ₹ 7 ಸಾವಿರ ಕೋಟಿ ಹೂಡಿಕೆಯ ಪ್ರಸ್ತಾವಗಳನ್ನು ಸಲ್ಲಿಸಿವೆ’ ಎಂದು ಪಾಟೀಲ ತಿಳಿಸಿದ್ದಾರೆ.

ಜಾಗತಿಕ ಹೂಡಿಕೆದಾರರ ಸಮಾವೇಶದ ಪ್ರಗತಿ (₹ ಗಳಲ್ಲಿ) ವಲಯ;ಒಡಂಬಡಿಕೆ;ನೈಜ ಹೂಡಿಕೆ; ಶೇ ತಯಾರಿಕೆ;5.66 ಲಕ್ಷ ಕೋಟಿ;3.22 ಲಕ್ಷ ಕೋಟಿ;58 ಇಂಧನ;4.25 ಲಕ್ಷ ಕೋಟಿ;1.41 ಲಕ್ಷ ಕೋಟಿ;33 ಮೂಲಸೌಕರ್ಯ ಅಭಿವೃದ್ಧಿ;0.45 ಲಕ್ಷ ಕೋಟಿ; 0.085 ಲಕ್ಷ ಕೋಟಿ;19

ಯಾವ ಕಂಪನಿ ಎಲ್ಲಿ ಎಷ್ಟು ಹೂಡಿಕೆ?

ಸಿಮೆಂಟ್ ತಯಾರಿಕಾ ಘಟಕ ಸ್ಥಾಪನೆಗೆ ಅಲ್ಟ್ರಾ ಟೆಕ್ ಕಂಪನಿ ಕಲಬುರಗಿ ಜಿಲ್ಲೆಯಲ್ಲಿ ₹ 4819 ಕೋಟಿ ದಾಲ್ಮಿಯಾ ಸಿಮೆಂಟ್ಸ್ ಬೆಳಗಾವಿಯ ಯಾದವಾಡದಲ್ಲಿ ₹ 3 ಸಾವಿರ ಕೋಟಿ ಹಾಗೂ ವಿಸ್ತರಣೆಗೆ ₹ 3020 ಕೋಟಿ ಮರುಬಳಕೆ ಇಂಧನ ಕ್ಷೇತ್ರದಲ್ಲಿ ಟಾಟಾ ಪವರ್ ₹ 8134 ಕೋಟಿ ವೋಲ್ವೊ ತನ್ನ ಹೊಸಕೋಟೆ ಘಟಕದ ವಿಸ್ತರಣೆಗೆ ₹ 1251 ಕೋಟಿ ವಿಜಯಪುರ ಜಿಲ್ಲೆಯಲ್ಲಿ ಸುಜ್ಲಾನ್ ಎನರ್ಜಿ ಲಿಮಿಟೆಡ್ ₹ 12032 ಕೋಟಿ ಹೂಡಿಕೆ ಮಾಡಲಿವೆ ಎಂದು ಪಾಟೀಲ ತಿಳಿಸಿದ್ದಾರೆ. ಹ್ಯಾವೆಲ್ಸ್ ಇಂಡಿಯಾ ತನ್ನ ಉತ್ಪಾದನೆಯ ಹೆಚ್ಚಳ ಮತ್ತು ನೂತನ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರ ಸ್ಥಾಪನೆಗೆ ತುಮಕೂರು ಜಿಲ್ಲೆಯಲ್ಲಿ ₹ 710 ಕೋಟಿ ಬಾಲಾಜಿ ವೇಫರ್ಸ್ ₹ 550 ಕೋಟಿ ಎಎಸ್ಎಂ ಟೆಕ್ನಾಲಜೀಸ್ ₹ 490 ಕೋಟಿ ಹೂಡಿಕೆ ಮಾಡಲು ಪ್ರಸ್ತಾವ ಸಲ್ಲಿಸಿವೆ. ವೈದ್ಯಕೀಯ ಮತ್ತು ಸ್ಯಾನಿಟರಿ ಸಾಧನಗಳನ್ನು ತಯಾರಿಸುವ ಟಿಜೆಡ್ಎಂಒ ಇಂಡಿಯಾ ₹ 58 ಕೋಟಿ ಎಚ್125 ಮಾದರಿಯ ಏರ್-ಬಸ್ ಗೆ ಬೇಕಾಗುವ ಬಿಡಿಭಾಗಗಳ ತಯಾರಿಕೆ ಟಿಎಎಸ್ಎಲ್ ಕೋಲಾರದ ವೇಮಗಲ್‌ನಲ್ಲಿ ₹ 500 ಕೋಟಿ ಏವಿಯಾನಿಕ್ಸ್ ಮತ್ತು ರಕ್ಷಣಾ ಕ್ಷೇತ್ರದ ಸಾಧನಗಳ ತಯಾರಿಕೆಗೆ ಸಾಫ್ರಾನ್ ಎಲೆಕ್ಟ್ರಾನಿಕ್ಸ್ ಕಂಪನಿ ₹ 250 ಕೋಟಿ ಹೂಡಿಕೆ ಮಾಡುತ್ತಿವೆ ಎಂದು ಅವರು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.