ADVERTISEMENT

ಸ್ಥಳೀಯ ಸಂಸ್ಥೆ ಚುನಾವಣೆಗೂ ಮತಪತ್ರ: ಕಾಯ್ದೆ ತಿದ್ದುಪಡಿಗೆ ಸರ್ಕಾರದ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 20:23 IST
Last Updated 5 ಫೆಬ್ರುವರಿ 2026, 20:23 IST
   

ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಇನ್ನು ಮುಂದೆ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಬದಲು ಮತಪತ್ರಗಳ (ಬ್ಯಾಲೆಟ್‌ ಪೇಪರ್‌) ಮೂಲಕವೇ ನಡೆಸಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ.

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಮತಪತ್ರ ಬಳಸಿ ಚುನಾವಣೆ ನಡೆಸಲು ಈಗಾಗಲೇ ನಿರ್ಧಾರ ತೆಗೆದುಕೊಳ್ಳಲಾಗಿದೆ. ಗ್ರಾಮೀಣ ಸೇರಿದಂತೆ ಇತರೆ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಅದೇ ಮಾದರಿ ಅನುಸರಿಸಲು ಕಾಯ್ದೆಗೆ ತಿದ್ದುಪಡಿ ತರಲು ತೀರ್ಮಾನಿಸಲಾಗಿದೆ ಎಂದು ಕಾನೂನು ಸಚಿವ ಎಚ್‌.ಕೆ.ಪಾಟೀಲ ತಿಳಿಸಿದರು.

ಸ್ಥಳೀಯ ಪ್ರಾಧಿಕಾರಗಳ ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಗೌಪ್ಯತೆ ಖಚಿತಪಡಿಸಿಕೊಳ್ಳಲು, ಸರ್ಕಾರವು ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಹಿಂದಿನಂತೆ ಮತಪತ್ರ, ಮತಪೆಟ್ಟಿಗೆ ಬಳಸಲು ನಿರ್ಧರಿಸಿದೆ. ಈ ಪ್ರಕ್ರಿಯೆಯ ವಿಶ್ವಾಸಾರ್ಹತೆ ಮತ್ತು ಪಾರದರ್ಶಕತೆಯನ್ನು ಉಚಿತಪಡಿಸಿಕೊಳ್ಳಲು ಮತದಾರರ ಪಟ್ಟಿಯನ್ನು ಸಿದ್ದಪಡಿಸುವ ಜವಾಬ್ದಾರಿಯನ್ನು ರಾಜ್ಯ ಚುನಾವಣಾ ಆಯೋಗಕ್ಕೆ ವಹಿಸಲು ತೀರ್ಮಾನಿಸಿದೆ ಎಂದರು.

ADVERTISEMENT

ಸಂಪುಟದ ಇತರ ನಿರ್ಧಾರಗಳು

  • 2025–26 ನೇ ಸಾಲಿನಲ್ಲಿ ‘ಶುಚಿ’ ಕಾರ್ಯಕ್ರಮದಡಿ ಸ್ಯಾನಿಟರಿ ನ್ಯಾಪ್ಕಿನ್‌ ಪ್ಯಾಡ್‌ಗಳು ಹಾಗೂ ಮುಟ್ಟಿನ ಕಪ್‌ಗಳನ್ನು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಸರ್ಕಾರಿ, ಅನುದಾನಿತ ಶಾಲೆಗಳು, ಕಾಲೇಜುಗಳು ಹಾಗೂ ವಿದ್ಯಾರ್ಥಿ ನಿಲಯಗಳಲ್ಲಿನ ಹೆಣ್ಣು ಮಕ್ಕಳಿಗೆ ವಿತರಿಸಲು ಹೊರಡಿಸಿರುವ ಆದೇಶಗಳಿಗೆ ಘಟನೋತ್ತರ ಅನುಮೋದನೆ

  • ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಲ್ಲಿ 2013–14 ರಿಂದ 2018–19 ನೇ ಸಾಲಿನವರೆಗೆ ವಿವಿಧ ಯೋಜನೆಯಡಿ ನೀಡಲಾಗಿರುವ ಸಾಲವನ್ನು ಒಂದು ಬಾರಿ ಇತ್ಯರ್ಥ ಯೋಜನೆಯ ಮೂಲಕ ವಸೂಲಾತಿಗೆ ಒಪ್ಪಿಗೆ

  • ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಐದು ನಗರಪಾಲಿಕೆಗಳಲ್ಲಿ ‘ಸಾರಥಿ’ ಯೋಜನೆಯಡಿ ಆಟೋ ರಿಕ್ಷಾ ಅಥವಾ ಕಾರುಗಳನ್ನು ಖರೀದಿಸಲು ಒಟ್ಟು ₹19.18 ಕೋಟಿ ಸಹಾಯಧನ ಹಾಗೂ ಇ–ವೆಂಡಿಂಗ್‌ ಯೋಜನೆಯಡಿ ಇ–ವೆಂಡಿಂಗ್‌ ವಾಹನಗಳನ್ನು ಖರೀದಿಸಲು ಒಟ್ಟು ₹42.84 ಕೋಟಿ ಸಹಾಯಧನವನ್ನು ಅರ್ಹ ಫಲಾನುಭವಿಗಳು ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ಒದಗಿಸುವ ಯೋಜನೆಗೆ ಒಪ್ಪಿಗೆ

  • ರಾಜ್ಯದ ಕಾಡಾ ಪ್ರಾಧಿಕಾರಗಳ ಅಡಿಯಲ್ಲಿ ಯೋಜನಾ ಮಾರ್ಗಸೂಚಿಗಳ ಅನ್ವಯ ಕೈಗೊಳ್ಳಬೇಕಾದ ಕೇಂದ್ರದ ಪ್ರಾಯೋಜಿತ ಅಚ್ಚುಕಟ್ಟು ಪ್ರದೇಶದ ಅಭಿವೃದ್ಧಿ ಆಧುನೀಕರಣ ಪ್ರಸ್ತಾವನೆಗಳನ್ನು (ಕೇಂದ್ರ ಶೇ 60 ಮತ್ತು ರಾಜ್ಯ ಶೇ 40) ಕೈಗೊಳ್ಳಲು ತಾತ್ವಿಕ ಅನುಮೋದನೆ

  • ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಮಾನವ– ವನ್ಯಜೀವಿ ಸಂಘರ್ಷ ತಡೆಗಟ್ಟಲು ರೈಲ್ವೆ ಬ್ಯಾರಿಕೇಡ್‌ ನಿರ್ಮಾಣ ಕಾಮಗಾರಿಯನ್ನು ₹11.65 ಕೋಟಿ ವೆಚ್ಚದಲ್ಲಿ ಕೈಗೊಳ್ಳಲು ಅನುಮೋದನೆ

  • ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ₹16 ಕೋಟಿ ಅಂದಾಜು ವೆಚ್ಚದಲ್ಲಿ ನೂತನ ಸೌಪರ್ಣಿಕಾ ಅತಿಥಿಗೃಹ ನಿರ್ಮಾಣಕ್ಕೆ ಅನುಮೋದನೆ

  • ರಾಜ್ಯದಲ್ಲಿ ಒತ್ತುವರಿಯಾಗಿರುವ 328 ದೇವಾಲಯಗಳ ಆಸ್ತಿಗಳನ್ನು ಸಂರಕ್ಷಿಸಲು ಒತ್ತುವರಿ ತೆರವುಗೊಳಿಸಿ ಭೂ ವರಾಹ ಯೋಜನೆಯಡಿ ಈ ದೇವಾಲಯಗಳ ಸ್ಥಿರಾಸ್ತಿಗಳನ್ನು ದಾಖಲೀಕರಣ ಕಾರ್ಯಕ್ಕಾಗಿ ₹15 ಕೋಟಿ ಯೋಜನೆಗೆ ಒಪ್ಪಿಗೆ

  • ಕಲಬುರಗಿಯ‌ಲ್ಲಿ ಹೊಸದಾಗಿ ಜಿಲ್ಲಾ ಪಂಚಾಯತ್‌ ಕಟ್ಟಡವನ್ನು ₹49.65 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಒಪ್ಪಿಗೆ. ಸೇಡಂ ತಾಲ್ಲೂಕಿನಲ್ಲಿ ಹೊಸ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವನ್ನು ₹73.75 ಕೋಟಿ ಅಂದಾಜು ಮೊತ್ತದಲ್ಲಿ ಸ್ಥಾಪಿಸಲು ಅನುಮೋದನೆ

  • ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಿಗೆ ₹37.80 ಕೋಟಿ ಅಂದಾಜು ವೆಚ್ಚದಲ್ಲಿ ಕಂಪ್ಯೂಟರ್‌ ಲ್ಯಾಬ್‌ಗಳನ್ನು ಸ್ಥಾಪಿಸಲು ಅನುಮೋದನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.