ADVERTISEMENT

56,432 ಹುದ್ದೆಗೆ ನೇಮಕ | 30 ದಿನದೊಳಗೆ ಪ್ರಕ್ರಿಯೆ: ಸಚಿವ ಸಂಪುಟ ಸಭೆ ನಿರ್ಣಯ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 23:30 IST
Last Updated 26 ಫೆಬ್ರುವರಿ 2026, 23:30 IST
   

ಬೆಂಗಳೂರು: ಮುಂದಿನ 30 ದಿನದೊಳಗೆ ನೇರ ನೇಮಕಾತಿ ಪ್ರಕ್ರಿಯೆಯಡಿ 56,432 ಹುದ್ದೆಗಳನ್ನು ಭರ್ತಿ ಮಾಡುವ ಮಹತ್ವದ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ.

ವಿವಿಧ ಇಲಾಖೆಗಳಲ್ಲಿ 2.84 ಲಕ್ಷ ಹುದ್ದೆ ಖಾಲಿ ಉಳಿದಿದ್ದು, ನೇಮಕಾತಿ ಮಾಡದೇ ಯುವಕರಿಗೆ ವಂಚಿಸಲಾಗುತ್ತಿದೆ ಎಂದು ನಿರುದ್ಯೋಗಿಗಳು ಹಲವು ಹಂತದ ಹೋರಾಟ ನಡೆಸಿದ್ದರು. ಆ ಬೆನ್ನಲ್ಲೇ, ಸರ್ಕಾರ ಈ ನಿರ್ಣಯ ಕೈಗೊಂಡಿದೆ. 

ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ. ಆದರೆ, ಶೇ 50ರಷ್ಟು ಮೀಸಲಾತಿಯ ಮಿತಿಗೊಳಪಟ್ಟು ಎಲ್ಲ ನೇಮಕಾತಿ ಪ್ರಕ್ರಿಯೆ ನಡೆಸಲು ತೀರ್ಮಾನಿಸಲಾಗಿದೆ. 

ADVERTISEMENT

ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಜಾತಿಗಳನ್ನು ಮೂರು ಗುಂಪುಗಳಾಗಿ ವರ್ಗೀಕರಿಸಿ ಒಳ ಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಹಲವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರಿಂದಾಗಿ, ಎಲ್ಲ ನೇಮಕಾತಿ ಪ್ರಕ್ರಿಯೆಗಳಿಗೂ ತಡೆ ಬಿದ್ದಿತ್ತು. 

ಇದಕ್ಕೆ ಕಾನೂನು ಬಲ ನೀಡುವ ಉದ್ದೇಶದಿಂದ ‘ಕರ್ನಾಟಕ ಅನುಸೂಚಿತ ಜಾತಿಗಳ (ಉಪ-ವರ್ಗೀಕರಣ) ಮಸೂದೆ– 2025’ ಅನ್ನು ರಾಜ್ಯ ಸರ್ಕಾರ ರೂಪಿಸಿತ್ತು.

ಬೆಳಗಾವಿಯಲ್ಲಿ ಈಚೆಗೆ ನಡೆದ ಅಧಿವೇಶನದಲ್ಲಿ ಅನುಮೋದನೆಗೊಂಡಿದ್ದ ಈ ಮಸೂದೆಯನ್ನು ಅಂಕಿತಕ್ಕಾಗಿ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರಿಗೆ ಕಳುಹಿಸಲಾಗಿತ್ತು. ಈ ಮಸೂದೆಯು ರಾಜ್ಯಪಾಲರ ಮುಂದಿದ್ದು, ಗುರುವಾರ ಅನುಮೋದನೆ ನೀಡಿದ್ದಾರೆ.

ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ. ಪಾಟೀಲ ಅವರು, ‘ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಕಲ್ಪಿಸಲು ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿರುವ ವಿಷಯವು ನ್ಯಾಯಾಲಯದಲ್ಲಿರುವ ಕುರಿತು ಸುದೀರ್ಘ ಚರ್ಚೆ ನಡೆಯಿತು. ಮೀಸಲು ಪ್ರಮಾಣ ಹೆಚ್ಚಿಸಿರುವುದಕ್ಕೆ ಸಂಬಂಧಿಸಿದಂತೆ ಹಲವು ‍ಪ್ರಕರಣಗಳು ಕೋರ್ಟ್‌ ಮುಂದಿವೆ. 2025ರಲ್ಲಿ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಕೋರ್ಟ್ ತಡೆಯಾಜ್ಞೆ ನೀಡಿದ್ದರಿಂದಾಗಿ, ಸುಮಾರು 56,432  ಹುದ್ದೆಗಳ ನೇಮಕ‌ ಸ್ಥಗಿತವಾಗಿದೆ’ ಎಂದರು.

‘ನೇಮಕಾತಿ‌ ಪ್ರಕ್ರಿಯೆಯನ್ನು ತುರ್ತಾಗಿ ಮುಂದುವರಿಸಬೇಕಾಗಿದೆ. ಹೀಗಾಗಿ, 2022ರ ಡಿಸೆಂಬರ್‌ 28ರ ಆದೇಶದ ಪೂರ್ವದಲ್ಲಿ ಜಾರಿಯಲ್ಲಿದ್ದ ಮೀಸಲಾತಿ, ರೋಸ್ಟರ್ ಬಿಂದುಗಳ ಅನ್ವಯ ಹೊಸ ನೇಮಕಕ್ಕೆ ಅಧಿಸೂಚನೆ ಹೊರಡಿಸಲಾಗುವುದು. ಒಟ್ಟು ಮೀಸಲಾತಿ ಪ್ರಮಾಣ ಅಂದು ಜಾರಿಯಲ್ಲಿದ್ದಂತೆ ಶೇ 50ಕ್ಕೆ ಸೀಮಿತವಾಗಿದ್ದು, ಅದರ ಅನ್ವಯವೇ ನೇಮಕಾತಿ ಮಾಡಲಾಗುತ್ತದೆ. ಈ ಸಂಬಂಧ ಅಡ್ವೊಕೇಟ್ ಜನರಲ್ ಅಭಿಪ್ರಾಯ ಪಡೆಯಲಾಗಿದೆ’ ಎಂದು ಹೇಳಿದರು.

ಪರಿಶಿಷ್ಟ ಜಾತಿಯ ಮೀಸಲಾತಿ ಪ್ರಮಾಣವನ್ನು ಶೇ 15ರಿಂದ ಶೇ 17ಕ್ಕೆ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ 3ರಿಂದ ಶೇ 7ಕ್ಕೆ ಹೆಚ್ಚಿಸಿ ಈ ಹಿಂದೆ ಆದೇಶ ಹೊರಡಿಸಲಾಗಿದೆ. ಅದನ್ನು ಗಮನದಲ್ಲಿಟ್ಟುಕೊಂಡೇ ನೇಮಕ ಮಾಡಲಾಗುತ್ತಿದೆ. ನೇಮಕಾತಿಗೆ ಸಂಬಂದಿಸಿದ ಅಧಿಸೂಚನೆ ಹೊರಡಿಸುವಾಗ ಇದನ್ನು ಸ್ಪಷ್ಟಪಡಿಸಲಾಗುತ್ತದೆ. ಹಣಕಾಸಿನ ಸಮಸ್ಯೆ ಉದ್ಭವಿಸುವುದಿಲ್ಲ ಎಂದು ವಿವರಿಸಿದರು. 

‘ಹಣಕಾಸು ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳಿಗೂ ನೇಮಕಾತಿ ವಿಚಾರವಾಗಿ ಮುಖ್ಯಮಂತ್ರಿಯವರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ’ ಎಂದು ಪಾಟೀಲ ಹೇಳಿದರು.

ನಿರುದ್ಯೋಗಿಗಳ ಆಕ್ರೋಶ: 

ರಾಜ್ಯದ ವಿವಿಧ ಇಲಾಖೆಗಳಲ್ಲಿ 2.84 ಲಕ್ಷ ಹುದ್ದೆ ಖಾಲಿ ಇದ್ದು, ಅವುಗಳನ್ನು ಭರ್ತಿ ಮಾಡುವಂತೆ ನಿರುದ್ಯೋಗಿಗಳು ಹಲವು ಹಂತಗಳಲ್ಲಿ ಪ್ರತಿಭಟನೆ ನಡೆಸಿದ್ದರು. ಧಾರವಾಡದಲ್ಲಿ ಮೂರು ಬಾರಿ, ಬೆಂಗಳೂರಿನಲ್ಲಿ ಒಂದು ಭಾರಿ ಬೃಹತ್ ಪ್ರತಿಭಟನೆ ನಡೆಸಿದ್ದ ನಿರುದ್ಯೋಗಿ ಯುವಕ–ಯುವತಿಯರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ ನಾಯಕರು ನಿರುದ್ಯೋಗಿಗಳ ಕೂಗಿಗೆ ಧ್ವನಿಗೂಡಿಸಿದ್ದರು.

ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ‘ಸರ್ಕಾರಿ ಉದ್ಯೋಗ ಪಡೆದು ನೆಮ್ಮದಿಯ ಬದುಕು ಕಟ್ಟಿಕೊಳ್ಳಬೇಕೆಂಬ ಕನಸು ಹೊತ್ತಿರುವ ಉದ್ಯೋಗಾಕಾಂಕ್ಷಿಗಳ ಆಸೆ - ಆಕಾಂಕ್ಷೆಯನ್ನು ರಕ್ಷಿಸಿ, ಅರ್ಹರಿಗೆ ಸೂಕ್ತ ಉದ್ಯೋಗ ಖಚಿತಪಡಿಸಲು ನಮ್ಮ ಸರ್ಕಾರ ಬದ್ಧ’ ಎಂದು ಪ್ರತಿಪಾದಿಸಿದ್ದರು.

‘ನಾವು (ಕಾಂಗ್ರೆಸ್) ಅಧಿಕಾರಕ್ಕೆ ಬಂದಾಗ 2.64 ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳು ಖಾಲಿ ಇದ್ದವು. ಹಿಂದಿನ ಬಿಜೆಪಿ ಸರ್ಕಾರ ಸಕಾಲದಲ್ಲಿ ನೇಮಕಾತಿಗಳನ್ನು ಆರಂಭಿಸದಿರುವುದು ಮತ್ತು ಹುದ್ದೆಗಳನ್ನು ಭರ್ತಿ ಮಾಡಲು ಸೂಕ್ತ ಯೋಜನೆ ರೂಪಿಸದ ಕಾರಣ ದೊಡ್ಡ ಸಂಖ್ಯೆಯಲ್ಲಿ ಹುದ್ದೆಗಳು ಖಾಲಿ ಉಳಿದಿವೆ’ ಎಂದಿದ್ದರು.

‘ಬಿಜೆಪಿ ಸರ್ಕಾರದ ಅವಧಿಯಲ್ಲಿ (2019–2023) ನೇಮಕಾತಿಯಲ್ಲಿ ನಡೆದ ಅಕ್ರಮಗಳು ಮತ್ತು ಭ್ರಷ್ಟಾಚಾರಗಳು ಇಂದಿನ ಈ ದುಸ್ಥಿತಿಗೆ ಕಾರಣ. ಒಳಮೀಸಲಾತಿ ವಿಷಯವು ನ್ಯಾಯಾಲಯದಲ್ಲಿ ಪ್ರಕರಣಗಳು ನಡೆಯುತ್ತಿದ್ದ ಕಾರಣದಿಂದ ಹಲವು ನೇಮಕಾತಿ ಪ್ರಕ್ರಿಯೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕಾಯಿತು. ಈ ವಿಳಂಬದಿಂದ ಅರ್ಹ ಅಭ್ಯರ್ಥಿಗಳು ಅನ್ಯಾಯಕ್ಕೊಳಗಾಗದಂತೆ ತಡೆಯಲು ಮುಂಬರುವ ನೇಮಕಾತಿಗಳಿಗೆ ಗರಿಷ್ಠ ವಯೋಮಿತಿಯನ್ನು 5 ವರ್ಷ ಸಡಿಲಿಸಲಾಗಿದೆ’ ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.