ADVERTISEMENT

ರಾಜ್ಯಪಾಲರ ಅಂಗಳಕ್ಕೆ ಮತ್ತೆ 'ಒಳ ಮೀಸಲು'

ಎಜಿ ನೀಡಿದ 14 ಪುಟಗಳ ವಿವರಣೆ ಸಹಿತ ಮಸೂದೆಯನ್ನು ಅಂಕಿತಕ್ಕೆ ಕಳುಹಿಸಿದ ಸರ್ಕಾರ

ರಾಜೇಶ್ ರೈ ಚಟ್ಲ
Published 3 ಫೆಬ್ರುವರಿ 2026, 21:10 IST
Last Updated 3 ಫೆಬ್ರುವರಿ 2026, 21:10 IST
ಥಾವರಚಂದ್‌ ಗೆಹಲೋತ್‌
ಥಾವರಚಂದ್‌ ಗೆಹಲೋತ್‌   

ಬೆಂಗಳೂರು: ಪರಿಶಿಷ್ಟ ಜಾತಿಯೊಳಗೆ ಒಳ ಮೀಸಲಾತಿ ಕಲ್ಪಿಸಲು ರೂಪಿಸಿದ್ದ ಮಸೂದೆ ಕುರಿತು ರಾಜ್ಯಪಾಲರು ಎತ್ತಿದ್ದ ಪ್ರಶ್ನೆಗಳಿಗೆ ವಿವರವಾದ ಸ್ಪಷ್ಟೀಕರಣ ಕೊಟ್ಟಿರುವ ಸರ್ಕಾರ, ಅಂಕಿತಕ್ಕಾಗಿ ಮತ್ತೆ ಮಸೂದೆಯನ್ನು ಲೋಕಭವನಕ್ಕೆ ಕಳುಹಿಸಿದೆ.

ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಜಾತಿಗಳನ್ನು ಮೂರು ಗುಂಪುಗಳಾಗಿ ವರ್ಗೀಕರಿಸಿ ಒಳ ಮೀಸಲಾತಿ ಕಲ್ಪಿಸಲು ಹೊರಡಿಸಿದ್ದ ಆದೇಶಕ್ಕೆ ಕಾನೂನು ಬಲ ನೀಡುವ ಉದ್ದೇಶದಿಂದ  ‘ಕರ್ನಾಟಕ ಅನುಸೂಚಿತ ಜಾತಿಗಳ (ಉಪ-ವರ್ಗೀಕರಣ) ಮಸೂದೆ– 2025’ ಅನ್ನು ಸರ್ಕಾರ ರೂಪಿಸಿತ್ತು. ಬೆಳಗಾವಿಯಲ್ಲಿ ಈಚೆಗೆ ನಡೆದ ಅಧಿವೇಶನದಲ್ಲಿಅನುಮೋದನೆಗೊಂಡಿದ್ದ ಈ ಮಸೂದೆಯನ್ನು ಅಂಕಿತಕ್ಕಾಗಿ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರಿಗೆ ಕಳುಹಿಸಲಾಗಿತ್ತು. ಆದರೆ, ಅವರು ಕೆಲವು ಸ್ಪಷ್ಟನೆಗಳನ್ನು ಕೇಳಿ ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದರು.

‘ಅಡ್ವೊಕೇಟ್‌ ಜನರಲ್‌ (ಎಜಿ) ಶಶಿ ಕಿರಣ್ ಶೆಟ್ಟಿ ಅವರು 14 ಪುಟಗಳ ಸ್ಪಷ್ಟನೆಯನ್ನು ಸಿದ್ಧಪಡಿಸಿದ್ದು, ಅದನ್ನು ಮಸೂದೆಯ ಜೊತೆಗೆ ರಾಜ್ಯಪಾಲರಿಗೆ ಕಳುಹಿಸಲಾಗಿದೆ’ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ADVERTISEMENT

ಎಜಿ ವಿವರಣೆಯಲ್ಲಿ ಏನಿದೆ?

‘ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇ 15ರಿಂದ ಶೇ 17ಕ್ಕೆ ಹೆಚ್ಚಿಸಲು ಸಂಸತ್ತಿನ ಅನುಮೋದನೆಯ ಅಗತ್ಯದ ಬಗ್ಗೆ ರಾಜ್ಯಪಾಲರು ಕಳವಳ ವ್ಯಕ್ತಪಡಿಸಿದ್ದರು. ಅಸ್ತಿತ್ವದಲ್ಲಿರುವ ಮೀಸಲಾತಿ ಚೌಕಟ್ಟಿನೊಳಗೆ ಮಸೂದೆ ರೂಪಿಸಲಾಗಿದೆ. ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇ 17ಕ್ಕೆ, ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ 7ಕ್ಕೆ ಹೆಚ್ಚಿಸಲು ರಾಜ್ಯ ಸರ್ಕಾರ ರೂಪಿಸಿದ್ದ ‘ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳು (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಜ್ಯಾಧೀನ ಸೇವೆಗಳಲ್ಲಿನ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ) ಕಾಯ್ದೆ –2022’ಕ್ಕೆ ರಾಷ್ಟ್ರಪತಿ, ಸಂಸತ್ತಿನ ಒಪ್ಪಿಗೆ ಅಥವಾ ರಾಷ್ಟ್ರಪತಿಯ ಯಾವುದೇ ಆಕ್ಷೇಪಣೆ ಇಲ್ಲದೆ ರಾಜ್ಯಪಾಲರೇ ಅಂಕಿತ ಹಾಕಿದ್ದಾರೆ. ಈ ಕಾಯ್ದೆಯನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರೂ, ಕಾಯ್ದೆಯು ಸಂವಿಧಾನಬಾಹಿರವೆಂದು ಹೈಕೋರ್ಟ್‌ ರದ್ದುಪಡಿಸಿಲ್ಲ.‌ ಹೀಗಾಗಿ, ಪರಿಶಿಷ್ಟ ಜಾತಿಗೆ ಶೇ 17 ಮೀಸಲಾತಿ ನೀಡಲಾಗುತ್ತಿದ್ದು, ಈ ಜಾತಿಗಳಲ್ಲಿ ಸಮಾನತೆ ತರುವ ಉದ್ದೇಶದಿಂದ ಈ ಮೀಸಲಾತಿಯನ್ನು ಸರ್ಕಾರವು ಮರು ವರ್ಗೀಕರಣ ಮಾಡಿದೆ. ಇದಕ್ಕೆವಿಧಾನ ಮಂಡಲವೂ ಅನುಮೋದನೆ ನೀಡಿದೆ’ ಎಂದು ಎಜಿ ವಿವರಿಸಿದ್ದಾರೆ.  

‘ಮೀಸಲಾತಿ ಶೇಕಡಾವಾರು ಪ್ರಮಾಣ ನಿರ್ಧರಿಸುವ ಅಧಿಕಾರಕ್ಕಿಂತ ಉಪ-ವರ್ಗೀಕರಣದ ಅಧಿಕಾರವು ಭಿನ್ನವಾಗಿದೆ. ಪಂಜಾಬ್‌ ಸರ್ಕಾರ ಹಾಗೂ ದೇವಿಂದರ್‌ ಸಿಂಗ್‌ ನಡುವಿನ ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಸಂವಿಧಾನದ ವಿಧಿ 14, 15(4), ಮತ್ತು 16 (4)ರ ಅಡಿ ಒಳ ಮೀಸಲಾತಿ ಜಾರಿಗೊಳಿಸುವ ರಾಜ್ಯದ ಅಧಿಕಾರವನ್ನು ಎತ್ತಿಹಿಡಿದಿದೆ. ರಾಜ್ಯ ಅಥವಾ ಕೇಂದ್ರ ಸರ್ಕಾರ ಅಂಗೀಕರಿಸಿದ ಯಾವುದೇ ಶಾಸನ ಜಾರಿಗೊಂಡ ಬಳಿಕ ನ್ಯಾಯಾಂಗದ ಪರಿಶೀಲನೆಗೆ ಒಳಪಟ್ಟಿರುತ್ತದೆ. ಆದ್ದರಿಂದ, ಶಾಸಕಾಂಗದ ಕ್ರಮವನ್ನು ಲೆಕ್ಕಿಸದೆ ನ್ಯಾಯಾಂಗ ಮೇಲ್ವಿಚಾರಣಾ ಕಾರ್ಯವಿಧಾನವು ಹಾಗೆಯೇ ಉಳಿದಿದೆ. ಆದಾಗ್ಯೂ, ನ್ಯಾಯಾಂಗ ಪರಿಶೀಲನೆಯ ನಿರೀಕ್ಷೆಯು ರಾಜ್ಯದ ಶಾಸಕಾಂಗ ಸಾಮರ್ಥ್ಯವನ್ನು ಕಸಿದುಕೊಳ್ಳುವುದಿಲ್ಲ. ನ್ಯಾಯಾಂಗ ಪರಿಶೀಲನೆಯ ಪರಿಹಾರವು ಒಂದು ರಕ್ಷಣೆಯಾಗಿದೆ ಮತ್ತು ಶಾಸಕಾಂಗ ಪ್ರಕ್ರಿಯೆಗೆ ಅಡ್ಡಿಯಲ್ಲ’ ಎಂದೂ ಅವರು ಹೇಳಿದ್ದಾರೆ.

ಈ ಮಸೂದೆಗೆ ಸಂಬಂಧಿಸಿದಂತೆ ಅಖಿಲ ಕರ್ನಾಟಕ ಬಂಜಾರ, ಬೋವಿ, ಕೊರಚ, ಕೊರಮ ಸಮಾಜಗಳ ಕಲ್ಯಾಣ ಸಂಘ ಮತ್ತು ಇತರ ಕೆಲವು ಸಂಘಟನೆಗಳು ಎತ್ತಿದ 14 ಆಕ್ಷೇಪಣೆಗಳಿಗೆ ರಾಜ್ಯಪಾಲರು ಸರ್ಕಾರದಿಂದ ಸ್ಪಷ್ಟೀಕರಣ ಕೋರಿದ್ದರು. ಈ ಎಲ್ಲ ಆಕ್ಷೇಪಣೆಗಳನ್ನು ಉಲ್ಲೇಖಿಸಿ, ಪ್ರತಿಯೊಂದಕ್ಕೂ ವಿವರವಾದ ಸ್ಪಷ್ಟೀಕರಣವನ್ನೂ ಎಜಿ ನೀಡಿದ್ದಾರೆ.

ಪ್ರಮುಖ ಸ್ಪಷ್ಟೀಕರಣಗಳೇನು?

  • ಪರಿಶಿಷ್ಟ ಜಾತಿ ಪಟ್ಟಿಯಲ್ಲಿನ ಕೆಲವು ಜಾತಿಗಳ ಪ್ರಾತಿನಿಧ್ಯದ ಕೊರತೆ ಮನಗಂಡು, ಸುಪ್ರೀಂಕೋರ್ಟ್‌ನ ತೀರ್ಪಿನಂತೆ ಮರು ವರ್ಗೀಕರಣ ಮಾಡಲಾಗಿದೆ

  • ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನದಾಸ್‌ ನೇತೃತ್ವದ ಏಕ ಸದಸ್ಯ ಆಯೋಗವು ಪರಿಶಿಷ್ಟ ಜಾತಿಗಳ ಸಮೀಕ್ಷೆಯಡಿ ಸಂಗ್ರಹಿಸಲಾದ ದತ್ತಾಂಶಗಳನ್ನು ಪರಿಶೀಲಿಸಿ, ತಜ್ಞರ ನೆರವು ಪಡೆದು ವರದಿ ಸಲ್ಲಿಸಿದೆ. ವರದಿಯು ಯಾವುದೇ ಒಂದು ಸಮುದಾಯದ ವಿರುದ್ಧವಾಗಿಲ್ಲ

  • ಆಯೋಗದ ವರದಿಯ ಕುರಿತು ಸಚಿವ ಸಂಪುಟದ ವಿಶೇಷ ಸಭೆಯಲ್ಲಿ ಚರ್ಚಿಸಿ, ವರದಿಯಲ್ಲಿನ ಕೆಲವು ಗೊಂದಲಗಳನ್ನು ಪರಿಹರಿಸಲು ನಿರ್ಧರಿಸಿತು. ಸಂಪುಟವು ತನ್ನದೇ ವಿವೇಚನೆಯಿಂದ 101 ಪರಿಶಿಷ್ಟ ಜಾತಿಗಳ ಹಿತಾಸಕ್ತಿ ಗಮನದಲ್ಲಿಟ್ಟು ಮೂರು ಗುಂಪುಗಳಾಗಿ ವರ್ಗೀಕರಿಸಿ, ಮೀಸಲಾತಿ ಹಂಚಿಕೆಯ, ನ್ಯಾಯಯುತ ನಿರ್ಧಾರ ತೆಗೆದುಕೊಂಡಿದೆ 

  • ಸಂಪುಟದ ನಿರ್ಧಾರದಂತೆ ಎ, ಬಿ, ಸಿ ಗುಂಪುಗಳಿಗೆ ರೋಸ್ಟರ್ ಬಿಂದು ನಿಗದಿ ಪಡಿಸಲಾಗಿದೆ. 100 ಬಿಂದುಗಳ ರೋಸ್ಟರ್‌ನಲ್ಲಿ ಎಲ್ಲಾ ಸಮುದಾಯಗಳಿಗೆ ಅವಕಾಶ ನೀಡಲಾಗಿದ್ತು, ಯಾವುದೇ ಜಾತಿ, ಗುಂಪನ್ನು ಹೊರಗಿಟ್ಟಿಲ್ಲ

  • ‘ಸಿ’ ಗುಂಪಿನಲ್ಲಿರುವ 59 ಸಮುದಾಯಗಳಿಗೆ ಸರಿಯಾದ ಪ್ರಾತಿನಿಧ್ಯವನ್ನು ಖಚಿತಪಡಿಸಲು ಒಳ ಮೀಸಲಾತಿಯಲ್ಲಿ ಒಳ ಮೀಸಲು ನೀಡಲಾಗಿದೆ. ಅಲ್ಲದೆ, ಈ 59 ಜಾತಿಗಳ ಅಡಿಯಲ್ಲಿ ಯಾವುದೇ ಅರ್ಹ ಅಭ್ಯರ್ಥಿ ಲಭ್ಯ ಇಲ್ಲದಿದ್ದರೆ ಅಂತಹ ಹುದ್ದೆಗಳು ಅಥವಾ ಸ್ಥಾನಗಳನ್ನು ಗುಂಪು ‘ಸಿ’ ಯಲ್ಲಿರುವ ಇತರ 4 ಜಾತಿಗಳಿಂದ ಭರ್ತಿ ಮಾಡಬೇಕೆಂದು ಮಸೂದೆಯಲ್ಲಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.