ADVERTISEMENT

ಬಸವಣ್ಣ, ಅಂಬೇಡ್ಕರ್, ಪಂಪ, ರನ್ನರು ಮತಾಂತರ ಆಗಿಲ್ಲವೇ: ಸಿದ್ದರಾಮಯ್ಯ ಪ್ರಶ್ನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಡಿಸೆಂಬರ್ 2021, 15:05 IST
Last Updated 23 ಡಿಸೆಂಬರ್ 2021, 15:05 IST
ಮಾಜಿ ಸಿಎಂ ಸಿದ್ದರಾಮಯ್ಯ
ಮಾಜಿ ಸಿಎಂ ಸಿದ್ದರಾಮಯ್ಯ   

ಬೆಂಗಳೂರು: ರಾಜ್ಯ ಸರ್ಕಾರ ಜಾರಿ ಮಾಡಲುಹೊರಟಿರುವ ‘ಮತಾಂತರ ನಿಷೇಧ ಕಾಯ್ದೆ’ವಿರೋಧಿಸಿ ಮಾಜಿ ಸಿಎಂ ಸಿದ್ದರಾಮಯ್ಯ ಗುರುವಾರ ಸರಣಿ ಟ್ವೀಟ್‌ ಮಾಡಿದ್ದಾರೆ.

ಹೊಸ ಮತಾಂತರ ನಿಷೇಧ ಕಾಯ್ದೆಯ ಅಗತ್ಯವೇನಿದೆ ಎಂದು ಪ್ರಶ್ನಿಸಿರುವ ಅವರು, ‘ಬಲವಂತವಾಗಿ, ಆಸೆ ಆಮಿಷ ಒಡ್ಡಿ ಅಥವಾ ಮೋಸದಿಂದ ಮತಾಂತರ ಮಾಡಿದರೆ ಅದು ಶಿಕ್ಷಾರ್ಹ ಅಪರಾಧ ಎಂದು ನಮ್ಮ ಸಂವಿಧಾನದಲ್ಲೇ ಸ್ಪಷ್ಟವಾಗಿ ಇರುವುದರಿಂದ ರಾಜ್ಯ ಬಿಜೆಪಿಸರ್ಕಾರದ ಹೊಸ ಮತಾಂತರ ನಿಷೇಧ ಕಾಯ್ದೆಯ ಅಗತ್ಯವೇನಿದೆ? ಇದೇ ಕಾರಣಕ್ಕೆ ನಾವು ಕಾಯ್ದೆಯನ್ನು ವಿರೋಧ ಮಾಡುತ್ತಿದ್ದೇವೆ’ ಎಂದು ಟ್ವೀಟಿಸಿದ್ದಾರೆ.

‘ನಮ್ಮ ಸರ್ಕಾರದ ಅವಧಿಯಲ್ಲಿ ಮತಾಂತರ ನಿಷೇಧ ಕಾಯ್ದೆಯ ಕರಡು ಸಂಪುಟದಲ್ಲಿ ಚರ್ಚೆಯೂ ಆಗಿಲ್ಲ, ಅನುಮೋದನೆಯೂ ಆಗಿಲ್ಲ. ಕೇವಲ ಸಂಪುಟದ ಚರ್ಚೆಗೆ ತನ್ನಿ ಎಂದು ಸಹಿ ಹಾಕಿದ ಕಡತಗಳೆಲ್ಲವೂ ಸರ್ಕಾರದ ನಿಲುವು ಆಗುವುದಿಲ್ಲ’ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ADVERTISEMENT

‘ಸಂಸದೀಯ ವ್ಯವಸ್ಥೆಯಲ್ಲಿ ಮುಖ್ಯಮಂತ್ರಿ ಎಂದರೆ ಸಮಾನರಲ್ಲಿ ಮೊದಲಿಗ ಎಂಬ ವ್ಯಾಖ್ಯಾನವಿದೆ. ಮುಖ್ಯಮಂತ್ರಿಯಾಗಿ ನಾನೊಬ್ಬನೇ ಏಕಪಕ್ಷೀಯ ನಿರ್ಧಾರ ಕೈಗೊಳ್ಳಲು ಬರಲ್ಲ, ಕರಡು ಪ್ರತಿ ಸಂಪುಟ ಸಭೆಯಲ್ಲಿ ಚರ್ಚೆಯಾಗಲಿ ಎಂಬ ಕಾರಣಕ್ಕೆ ಸಹಿ ಮಾಡಿದ್ದೆ. ಸಹಿ ಮಾಡಿದ ಮಾತ್ರಕ್ಕೆ ಒಪ್ಪಿದ್ದೆ ಎಂದಲ್ಲ’ ಎಂದು ಮಾಜಿ ಸಿಎಂ ಹೇಳಿದ್ದಾರೆ.

‘ನಾನು ಮತಾಂತರ ನಿಷೇಧ ಕಾಯಿದೆಯ ಕಡತವನ್ನು ಸಂಪುಟದ ಮುಂದೆ ತರುವಂತೆ ಸಹಿ ಹಾಕಿದ್ದು 2015 ರ ನವೆಂಬರ್ ತಿಂಗಳಿನಲ್ಲಿ. ಇದಾಗಿ ಎರಡೂವರೆ ವರ್ಷ ನಾವು ಅಧಿಕಾರದಲ್ಲಿ ಇದ್ದರೂ ಒಮ್ಮೆಯೂ ಅದನ್ನು ಸಂಪುಟದ ಮುಂದೆ ತರುವ ಪ್ರಯತ್ನ ಮಾಡಲಿಲ್ಲ. ಕಾರಣ ನಮ್ಮ ಸರ್ಕಾರಕ್ಕೆ ಇಂಥಾ ಮಸೂದೆಯ ಬಗ್ಗೆ ಆಸಕ್ತಿ ಇರಲಿಲ್ಲ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

‘ಮತಾಂತರ ನಿಷೇಧ ಕುರಿತ ಈ ಹಿಂದಿನ ಕರಡು ಪ್ರತಿಗೂ, ಈಗಿನ ಮಸೂದೆಗೂ ಇರುವ ಪ್ರಮುಖ ವ್ಯತ್ಯಾಸಗಳೆಂದರೆ. ಮೊದಲನೆಯದು ಹಿಂದಿನ ಕರಡು ಪ್ರತಿಯ ನಿಯಮ 3ರಲ್ಲಿ ವಿವಾಹ ಎಂಬ ಪದ ಬಳಕೆ ಇರಲಿಲ್ಲ.ಬಿಜೆಪಿ ಸರ್ಕಾರತನ್ನ ಕಾಯ್ದೆಯಲ್ಲಿ ವಿವಾಹವನ್ನು ಹೊಸದಾಗಿ ಸೇರಿಸಿದೆ’ ಎಂದು ಕಾಂಗ್ರೆಸ್‌ ನಾಯಕ ಹರಿಹಾಯ್ದಿದ್ದಾರೆ.

‘ಭಾರತೀಯ ದಂಡ ಸಂಹಿತೆಯ ಪ್ರಕಾರ ಸಾಕ್ಷಾಧಾರಗಳ ಕೊರತೆ ಕಂಡುಬಂದರೆ ಆರೋಪಿಯನ್ನು ತಪ್ಪಿತಸ್ಥ ಎಂದು ಪರಿಗಣಿಸಲು ಸಾಧ್ಯವಿಲ್ಲ. ಆದರೆ ಈ ಹೊಸ ಮಸೂದೆಯ ನಿಯಮ 12ರ ಪ್ರಕಾರ ಸಾಕ್ಷಾಧಾರ ಕೊರತೆ ಇದ್ದರೂ ಅದು ದೂರುದಾರನಿಗೆ ಅನುಕೂಲ ಮಾಡಿಕೊಡಲಿದೆ. ಹೀಗಾಗಿ ಇದು ಕಾನೂನಿನ ನಿಯಮಗಳಿಗೆ ವಿರುದ್ಧವಾಗಿದೆ’ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಸಂವಿಧಾನದ 21 ಮತ್ತು 25ನೇ ವಿಧಿಯನ್ವಯ ಒಬ್ಬ ವ್ಯಕ್ತಿ ತನಗಿಷ್ಟವಾದ (ಯಾವುದೇ ಧರ್ಮಕ್ಕೆ ಸೇರಿದವರಾದರೂ ಸರಿ) ವ್ಯಕ್ತಿಯನ್ನು ಪ್ರೀತಿಸಿ ಮದುವೆಯಾಗಲು ಸಂಪೂರ್ಣ ಸ್ವಾತಂತ್ರ್ಯ ನೀಡಿರುವಾಗ, ಅದನ್ನು ಬೇಡ ಎನ್ನಲು ಸರ್ಕಾರಕ್ಕೇನು ಹಕ್ಕಿದೆ?' ಎಂದು ವಿರೋಧ ಪಕ್ಷದ ನಾಯಕ ಪ್ರಶ್ನಿಸಿದ್ದಾರೆ.

‘ಇದೇ ಕಾರಣಕ್ಕೆ ಗುಜರಾತ್ ಸರ್ಕಾರ ಜಾರಿಗೊಳಿಸಲು ಹೊರಟಿದ್ದ ಮತಾಂತರ ನಿಷೇಧ ಕಾಯ್ದೆಗೆ ತಡೆಯಾಜ್ಞೆ ನೀಡಿರುವ ಗುಜರಾತ್ ಹೈಕೋರ್ಟ್, ಅಲ್ಲಿನ ಸರ್ಕಾರಕ್ಕೆ ಛೀಮಾರಿ ಹಾಕಿದೆ’ ಎಂದೂ ಅವರು ಹೇಳಿದ್ದಾರೆ.

‘ಗುಜರಾತ್, ಉತ್ತರ ಪ್ರದೇಶ ಸರ್ಕಾರಗಳ ಮತಾಂತರ ನಿಷೇಧ ಕಾಯ್ದೆಯಲ್ಲಿ ಬಳಕೆ ಮಾಡಿರುವ ಪದಗಳು, ವಾಕ್ಯಗಳೇ ಇಲ್ಲಿಯೂ ಯಥಾವತ್ತಾಗಿವೆ. ಈ ಎಲ್ಲಾ ಸರ್ಕಾರಗಳ ಕರಡು ತಯಾರಿಕೆಯ ಹಿಂದೆ ಯಾವುದೋ ಒಂದು ಕಾಣದ ಕೈ ಇದೆ ಎಂಬ ಅನುಮಾನ ನನಗಿದೆ. ಅದು ಯಾವುದು ಎಂದು ರಾಜ್ಯ ಬಿಜೆಪಿ ಸರ್ಕಾರಬಹಿರಂಗಪಡಿಸಬೇಕು’ ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

‘ದೇಶದಲ್ಲಿ ಶತಮಾನಗಳ ಹಿಂದಿನಿಂದಲೂ ಮತಾಂತರ ನಡೆದುಕೊಂಡು ಬಂದಿದೆ. ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದ ಪಂಪ, ರನ್ನರು ಜೈನ ಧರ್ಮಕ್ಕೆ ಮತಾಂತರಗೊಂಡರು. ಸಾಮ್ರಾಟ್ ಆಶೋಕ ಹಿಂದೂ ಧರ್ಮದಿಂದ ಬೌದ್ಧ ಧರ್ಮಕ್ಕೆ ಹೋಗಿಲ್ಲವೇ? ಇದಕ್ಕೆ ಕಾರಣವೇನು ಎಂಬುದು ಯಾರಿಗೂ ತಿಳಿಯದ ವಿಷಯವಲ್ಲ’ ಎಂದು ಮಾಜಿ ಸಿಎಂ ಹೇಳಿದ್ದಾರೆ.

‘ಸಾಮಾಜಿಕ ನ್ಯಾಯದ ಹರಿಕಾರ ಬಸವಣ್ಣ ಬ್ರಾಹ್ಮಣರಾಗಿ ಹುಟ್ಟಿ ಲಿಂಗಾಯತ ಧರ್ಮ ಸ್ಥಾಪನೆ ಮಾಡಿಲ್ಲವೇ? ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಲಕ್ಷಾಂತರ ಜನರ ಜೊತೆಗೆ ಬೌದ್ಧ ಧರ್ಮಕ್ಕೆ ಮತಾಂತರ ಆಗಿಲ್ಲವೇ? ಇವರ್ಯಾರು ಅಧಿಕಾರವೋ ಅಥವಾ ಇನ್ಯಾವುದೋ ಕಾರಣಕ್ಕೆ ಮತಾಂತರಗೊಂಡವರಲ್ಲ’ ಎಂದು ಸಿದ್ದರಾಮಯ್ಯ ಟ್ವೀಟಿಸಿದ್ದಾರೆ.

‘ರಾಜ್ಯದಲ್ಲಿ ಹಿಂದೂಗಳ ಸಂಖ್ಯೆ ಕಡಿಮೆಯಾಗುತ್ತಿದೆ.ಕ್ರಿಶ್ಚಿಯನ್ ಮತ್ತು ಮುಸ್ಲಿಂಮರ ಜನಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ ಎಂದು ಬಿಜೆಪಿ ನಾಯಕರು ಅಪಪ್ರಚಾರ ಮಾಡುತ್ತಿದ್ದಾರೆ. 2001 ಮತ್ತು 2011 ರ ಜನಗಣತಿಯನ್ನು ನೋಡಿದರೆ ಸತ್ಯ ಏನೆಂದು ಅರಿವಾಗುತ್ತದೆ’ ಎಂದು ತಿಳಿಸಿದ್ದಾರೆ.

‘2001 ರ ಜನಗಣತಿ ಪ್ರಕಾರ ರಾಜ್ಯದ ಜನಸಂಖ್ಯೆಯಲ್ಲಿ ಶೇ 83.86ಹಿಂದೂಗಳ ಪ್ರಮಾಣ ಇತ್ತು.ಅದು 2011 ಕ್ಕೆ ಶೇ. 84 ಕ್ಕೆ ಏರಿಕೆಯಾಗಿದೆ. ಮುಸ್ಲಿಮರ ಪ್ರಮಾಣ ಶೇ 12.23ಇಂದ12.92 ಕ್ಕೆ ಹೆಚ್ಚಾಗಿದೆ. ಕ್ರೈಸ್ತರ ಪ್ರಮಾಣ ಶೇ 1.91ಇಂದ 1.87ಕ್ಕೆಇಳಿಕೆಯಾಗಿದೆ. ಇದು ನಮ್ಮ ರಾಜ್ಯದ ವಾಸ್ತವ ಸ್ಥಿತಿ’ ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.

‘ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬುದು ಸಂವಿಧಾನದ ಮೂಲ ನಿಯಮ. ಆದರೆ ರಾಜ್ಯ ಸರ್ಕಾರದ ಮತಾಂತರ ನಿಷೇಧ ಕಾಯ್ದೆಯಲ್ಲಿ ಮಹಿಳೆಯರು, ಅಪ್ರಾಪ್ತರು, ಬುದ್ಧಿಭ್ರಮಣೆಯಾದವರು, ಪರಿಶಿಷ್ಟ ಜಾತಿ ಮತ್ತು ವರ್ಗದವರನ್ನು ಕಾನೂನು ಬಾಹಿರವಾಗಿ ಮತಾಂತರ ಮಾಡಿದರೆ ಮಾತ್ರ ಗರಿಷ್ಠ ಶಿಕ್ಷೆ ವಿಧಿಸಲಾಗಿದೆ. ಈ ಅಸಮಾನತೆಗೆ ಸಂವಿಧಾನದಲ್ಲಿ ಅವಕಾಶವಿಲ್ಲ’ ಎಂದು ಅವರು ಹೇಳಿದ್ದಾರೆ.

‘ಹಿಂದೂ ಧರ್ಮದ ಜಾತಿಯತೆ, ಅಸ್ಪೃಶ್ಯತೆ, ಅಸಮಾನತೆಗಳನ್ನು ಕಿತ್ತುಹಾಕಲು ಪ್ರಯತ್ನ ಮಾಡಿದ ಬಾಬಾ ಸಾಹೇಬರು, ಅದು ಸಾಧ್ಯವಾಗದಿದ್ದಾಗ ‘ಹಿಂದೂವಾಗಿ ಹುಟ್ಟಿದ್ದೇನೆ, ಹಿಂದೂವಾಗಿ ಸಾಯಲಾರೆ’ಎಂದು ಬೌದ್ಧ ಧರ್ಮಕ್ಕೆ ಮತಾಂತರ ಗೊಂಡರು. ಜೊತೆಗೆ ಲಕ್ಷಾಂತರ ಜನರಿಗೆ ಸ್ವ ಇಚ್ಛೆಯಿಂದ ಮತಾಂತರಗೊಳ್ಳಲು ಕರೆನೀಡಿದ್ದು ನಿಜವಲ್ಲವೇ?’ ಎಂದು ಪ್ರಶ್ನಿಸಿದ್ದಾರೆ.

‘ಬಲವಂತದಿಂದ, ಆಸೆ ಆಮಿಷ ಒಡ್ಡಿ, ಹೆದರಿಸಿ ಬೆದರಿಸಿ, ಮೋಸದ ಮೂಲಕ ಮತಾಂತರ ಮಾಡುವುದನ್ನು ನಾನು ವಿರೋಧಿಸುತ್ತೇನೆ. ಇದರ ಜೊತೆಗೆ ಜಾತೀಯತೆ, ಅಸ್ಪೃಶ್ಯತೆ ಅನುಸರಿಸುತ್ತಿರುವವರಿಗೂ ಕಠಿಣ ಶಿಕ್ಷೆಯಾಗಬೇಕು ಎಂಬುದು ನನ್ನ ಒತ್ತಾಯ’ ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

‘ಮತಾಂತರವನ್ನು ದೂಷಿಸುವ ಬದಲು, ಮತಾಂತರವಾಗಲು ನಮ್ಮಲ್ಲಿರುವ ದೋಷಗಳೇನು ಎಂಬುದನ್ನು ಗುರುತಿಸಿ ಸರಿಪಡಿಸುವ ಕೆಲಸವನ್ನು ಮಾಡಬೇಕು ಎಂದು ಮಹಾತ್ಮ ಗಾಂಧಿ, ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಇದು ನಾವು ಮಾಡಲೇಬೇಕಾದ ಕೆಲಸ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

‘ರಾಜ್ಯ ಸರ್ಕಾರದ ಮತಾಂತರ ನಿಷೇಧ ಕಾಯ್ದೆ ಅಮಾನವೀಯ, ಸಂವಿಧಾನ ಬಾಹಿರ ಮತ್ತು ವ್ಯಕ್ತಿ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದ್ದು, ಇದನ್ನು ನಾನು ಬಲವಾಗಿ ಖಂಡಿಸುತ್ತೇನೆ. ಕೂಡಲೇ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಒತ್ತಾಯ ಮಾಡುತ್ತೇನೆ’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.