ADVERTISEMENT

ಕರ್ನಾಟಕ ಸರ್ಕಾರದ ಐದು ಗ್ಯಾರಂಟಿಗಳು ಪರಿಣಾಮಕಾರಿ, ಗಮನಾರ್ಹ ಬದಲಾವಣೆ: ಕಾಂಗ್ರೆಸ್

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2025, 12:00 IST
Last Updated 3 ಅಕ್ಟೋಬರ್ 2025, 12:00 IST
<div class="paragraphs"><p>ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳು</p></div>

ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳು

   

ಪ್ರಜಾವಾಣಿ ಚಿತ್ರ

ನವದೆಹಲಿ: ‘ಕರ್ನಾಟಕದಲ್ಲಿ ಕಳೆದ ಎರಡು ವರ್ಷಗಳಿಂದ ಜಾರಿಯಲ್ಲಿರುವ ಐದು ಪ್ರಮುಖ ಗ್ಯಾರಂಟಿಗಳಿಂದ ಸಮಾಜದಲ್ಲಿ ಗಮನಾರ್ಹ ಬದಲಾವಣೆಯಾಗಿದೆ. ಸ್ಥಳೀಯ ಆರ್ಥಿಕತೆ ಉತ್ತಮವಾಗಿದೆ. ಸೌಲಭ್ಯ ಪಡೆಯುತ್ತಿರುವ ಕುಟುಂಬಗಳು ದೀರ್ಘಕಾಲದಲ್ಲಿ ಆರೋಗ್ಯ ಮತ್ತು ಶಿಕ್ಷಣದಲ್ಲಿ ಉತ್ತಮ ಹೂಡಿಕೆ ಮಾಡಲಿವೆ’ ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.

ADVERTISEMENT

‘ಗ್ಯಾರಂಟಿ ಜಾರಿಯಿಂದಾಗಿ ಕರ್ನಾಟಕದ ಮಹಿಳೆಯರು ಆರೋಗ್ಯವಂತರಾಗಿದ್ದಾರೆ. ಹೆಚ್ಚು ಓಡಾಟ ನಡೆಸುವ ಮೂಲಕ ಸಬಲರಾಗಿದ್ದಾರೆ ಮತ್ತು ಕುಟುಂಬ ಹಾಗೂ ಸಮಾಜದಲ್ಲಿ ಗಮನಾರ್ಹ ಬದಲಾವಣೆ ತಂದಿದ್ದಾರೆ. ಗ್ಯಾರಂಟಿಗಳ ಉಂಟು ಮಾಡಿರುವ ಪರಿಣಾಮಗಳ ಕುರಿತು ನಾಲ್ಕು ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳು ಮತ್ತು ಅಕಾಡೆಮಿಗಳು ಅಧ್ಯಯನ ನಡೆಸಿವೆ’ ಎಂದಿದ್ದಾರೆ.

‘ಉಚಿತ ಬಸ್‌ ಪ್ರಯಾಣದಿಂದ ಶೇ 19ರಷ್ಟು ಉದ್ಯೋಗಸ್ಥ ಮಹಿಳೆಯರು ಲಾಭ ಪಡೆದಿದ್ದಾರೆ ಅಥವಾ ಉತ್ತಮ ನೌಕರಿಯನ್ನೂ ಪಡೆದಿದ್ದಾರೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಇದರ ಪ್ರಮಾಣ ಶೇ 34ರಷ್ಟು ಹೆಚ್ಚಳವಾಗಿದೆ. ಆರೋಗ್ಯ ಸೌಲಭ್ಯ ಪಡೆಯುತ್ತಿರುವವರ ಸಂಖ್ಯೆ ಶೇ80ರಷ್ಟು ಹೆಚ್ಚಳವಾಗಿದೆ. ಸರ್ಕಾರದ ಯೋಜನೆಗಳಿಂದ ಸಬಲೀಕರಣ ಮತ್ತು ಆತ್ಮವಿಶ್ವಾಸ ಹೆಚ್ಚಳವಾಗಿದೆ ಎಂದು ಶೇ 72ರಷ್ಟು ಮಹಿಳೆಯರು ಹೇಳಿದ್ದಾರೆ’ ಎಂದು ಜೈರಾಮ್ ಹೇಳಿದ್ದಾರೆ.

‘ಗೃಹಲಕ್ಷ್ಮಿ ಯೋಜನೆಯಲ್ಲಿ ಪ್ರತಿ ಮನೆಯ ಯಜಮಾನಿಗೆ ಮಾಸಿಕ ₹2 ಸಾವಿರ ನೀಡಲಾಗುತ್ತಿದ್ದು, ಇದು ಅವರ ಪೌಷ್ಟಿಕ ಆಹಾರಕ್ಕೆ ಬಳಕೆಯಾಗುತ್ತಿದೆ ಎಂದು ಶೇ 94ರಷ್ಟು ಮಹಿಳೆಯರು ಹೇಳಿದ್ದಾರೆ. ಶೇ 90ರಷ್ಟು ಮಹಿಳೆಯರು ವೈದ್ಯಕೀಯ ವೆಚ್ಚಕ್ಕೆ ಬಳಸುತ್ತಿರುವುದಾಗಿ ಮತ್ತು ಶೇ 50ರಷ್ಟು ಮಹಿಳೆಯರು ಶಿಕ್ಷಣಕ್ಕೆ ಬಳಸುತ್ತಿರುವುದಾಗಿ ಹೇಳಿದ್ದಾರೆ’ ಎಂದಿದ್ದಾರೆ.

‘ಕುಟುಂಬದ ಕಲ್ಯಾಣಕ್ಕಾಗಿ ದೀರ್ಘಕಾಲದ ಹೂಡಿಕೆ ಮೇಲೂ ಮಹಿಳೆಯರು ಸರ್ಕಾರದ ಯೋಜನೆಯ ಹಣವನ್ನು ಹೂಡಿಕೆ ಮಾಡುತ್ತಿರುವುದನ್ನು ಈ ಅಧ್ಯಯನ ದಾಖಲಿಸಿದೆ. ಅನ್ನ ಭಾಗ್ಯ ಯೋಜನೆಯು ಶೇ 94ರಷ್ಟು ಜನರಿಗೆ ತಲುಪಿದೆ. ತಿಂಗಳಿಗೆ 200 ಯೂನಿಟ್‌ವರೆಗೂ ನೀಡುವ ಉಚಿತ ವಿದ್ಯುತ್ ಯೋಜನೆ ಮೂಲಕ ಶೇ 72ರಷ್ಟು ಮಹಿಳೆಯರು ಪರಿಣಾಮಕಾರಿಯಾಗಿ ವಿದ್ಯುತ್ ಬಳಕೆ ಮಾಡುತ್ತಿದ್ದಾರೆ ಎಂದಿದ್ದಾರೆ. ಶೇ 43ರಷ್ಟು ಕುಟುಂಬಗಳು ತಮ್ಮ ಮನೆಗೆ ಅತ್ಯಗತ್ಯವಾದ ಹಾಗೂ ಜೀವನ ಬದಲಿಸಬಲ್ಲ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಿರುವುದಾಗಿ ತಿಳಿಸಿದ್ದಾರೆ’ ಎಂದು ಜೈರಾಮ್ ರಮೇಶ್ ವಿವರಿಸಿದ್ದಾರೆ.

ಯುವ ನಿಧಿ ಯೋಜನೆಯ ಆರ್ಥಿಕ ನೆರವನ್ನು ಶೇ 42ರಷ್ಟು ಯುವಕರು ಕೌಶಲಾಭಿವೃದ್ಧಿಗೆ ಮತ್ತು ಉದ್ಯೋಗ ಕಂಡುಕೊಳ್ಳಲು ಬಳಕೆ ಮಾಡಿರುವುದಾಗಿ ಅಧ್ಯಯನ ನಡೆಸಿದ ಸಂಸ್ಥೆಗಳಿಗೆ ತಿಳಿಸಿದ್ದಾರೆ. ಹೀಗಾಗಿ ಸರ್ಕಾರದ ಸೌಲಭ್ಯಗಳಿಂದ ಮಹಿಳೆಯರು ಆರೋಗ್ಯವಂತರಾಗಿದ್ದಾರೆ. ಓಡಾಡುತ್ತಿದ್ದಾರೆ. ಕುಟುಂಬ ಹಾಗೂ ಸಮಾಜದಲ್ಲಿ ಉತ್ತಮ ಸ್ಥಾನ ಪಡೆದಿದ್ದಾರೆ. ದೀರ್ಘಕಾಲದಲ್ಲಿ ನೆರವಾಗಬಲ್ಲ ಶಿಕ್ಷಣ ಮತ್ತು ಆರೋಗ್ಯದಲ್ಲಿ ಕುಟುಂಬಗಳು ಹೆಚ್ಚಿನ ಹಣ ಹೂಡಿಕೆ ಮಾಡುತ್ತಿರುವುದರಲ್ಲಿ ಯಾವುದೇ ಸಂದೇಹವಿಲ್ಲ’ ಎಂದು ತಿಳಿಸಿದ್ದಾರೆ.

‘ಬೇರುಮಟ್ಟದಲ್ಲಿ ಬೇಡಿಕೆ ಹೆಚ್ಚಳವಾಗಿರುವುದರಿಂದ ಸ್ಥಳೀಯ ಆರ್ಥಿಕತೆ ಇನ್ನಷ್ಟು ಸದೃಢವಾಗಿದೆ’ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.