ಆರ್. ಅಶೋಕ
ಬೆಂಗಳೂರು: ಜಾತಿಗಳನ್ನು ಒಡೆಯುವ ಉದ್ದೇಶದ ಸಾಮಾಜಿಕ– ಶೈಕ್ಷಣಿಕ ಸಮೀಕ್ಷೆಯನ್ನು ಮುಂದೂಡುವುದು ಉತ್ತಮ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿದ್ದಾರೆ.
ಪ್ರಧಾನ ನರೇಂದ್ರ ಮೋದಿ ಅವರ ಜನ್ಮದಿನದ ಪ್ರಯುಕ್ತ ಜಯನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ‘ಜಾತಿಗಳ ಮಧ್ಯೆ ಸಂಘರ್ಷ ಸೃಷ್ಟಿಸುವ ಸಮೀಕ್ಷೆಗೆ ಹಣವನ್ನು ಹಾಳು ಮಾಡುವುದು ಬೇಡ’ ಎಂದು ತಿಳಿಸಿದರು.
ದಸರಾ ಹಬ್ಬ ಇರುವುದರಿಂದ ಸಮೀಕ್ಷೆ ಮುಂದೂಡಬೇಕು. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ. ಆರ್ಥಿಕ ಸ್ಥಿತಿ ಹಾಳಾಗಿ ಹೋಗಿದೆ. ಬೆಳೆ ಹಾನಿ ಪರಿಹಾರಕ್ಕೆ ಹಣ ಕೊಡಲು ಗತಿ ಇಲ್ಲ. ಅನುದಾನ ನೀಡುವುದರಲ್ಲೂ ತಾರತಮ್ಯ ಮಾಡಲಾಗುತ್ತಿದೆ. ಇಂತಹ ದುಸ್ಥಿತಿಯಲ್ಲಿ ಸಮೀಕ್ಷೆಯ ಅಗತ್ಯವಿದೆಯೇ ಎಂದು ಪ್ರಶ್ನಿಸಿದರು.
ಕುಲ ಕುಲವೆಂದು ಹೊಡೆದಾಡದಿರಿ ಎಂದು ಕನಕದಾಸರು ಹೇಳಿದ್ದರು. ಆದರೆ ಸಿದ್ದರಾಮಯ್ಯ ಆ ತತ್ವಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಕುಲ– ಕುಲಗಳ ನಡುವೆ ಸಂಘರ್ಷ ತಂದಿಡುವ ಕೆಲಸ ಮಾಡುತ್ತಿದ್ದಾರೆ. ಅದಕ್ಕಾಗಿ ಕ್ರೈಸ್ತರಲ್ಲೂ ಹಿಂದೂ ಜಾತಿಗಳನ್ನು ತಂದಿದ್ದಾರೆ. ಹಿಂದೆ ವೀರಶೈವ–ಲಿಂಗಾಯತರನ್ನು ಒಡೆದಿದ್ದರು. ಮತ್ತೆ ಅದೇ ಕೆಲಸ ಮಾಡಲು ಹೊರಟರೆ ಕಾಂಗ್ರೆಸ್ ಪಕ್ಷವೇ ಒಡೆದು ಹೋಗುತ್ತದೆ ಎಂದು ಹೇಳಿದರು.
ಮತ ಕಳವಿನ ಕುರಿತ ಕಾಂಗ್ರೆಸ್ ಆರೋಪ ಅವರಿಗೆ ತಿರುಗುಬಾಣವಾಗುತ್ತಿದೆ. ಅದಕ್ಕೆ ಮಾಲೂರು ಶಾಸಕರ ಪ್ರಕರಣವೇ ಸಾಕ್ಷಿ ಎಂದು ಅಶೋಕ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.