ನವದೆಹಲಿ: ಕಾಂಗ್ರೆಸ್–ಬಿಜೆಪಿ ನಾಯಕರ ಹೊಂದಾಣಿಕೆ ರಾಜಕಾರಣದ ಬಗ್ಗೆ ರಾಜ್ಯ ರಾಜಕಾರಣದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲೇ, ಬಿಜೆಪಿ ರಾಜ್ಯ ಘಟಕದ ಮಾಜಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಜಿ–ಕೆಟಗರಿ ಕೋಟಾದಲ್ಲಿ 50X80 ಅಡಿ ಅಳತೆಯ ನಿವೇಶನಕ್ಕೆ ಶುದ್ಧ ಕ್ರಯಪತ್ರ ಮಾಡಿಕೊಡಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅನುಮೋದನೆಯ ಮೇರೆಗೆ ಈ ಟಿಪ್ಪಣಿಯನ್ನು ಶುಕ್ರವಾರ ನಡೆಯಲಿರುವ ಸಚಿವ ಸಂಪುಟ ಸಭೆಗೆ ಮಂಡಿಸಲು ನಗರಾಭಿವೃದ್ಧಿ ಇಲಾಖೆ ಸಿದ್ಧತೆ ನಡೆಸಿದೆ. ಬೆಂಗಳೂರಿನ ಎಚ್‌ಎಸ್‌ಆರ್ ಬಡಾವಣೆಯಲ್ಲಿ ಚದರ ಅಡಿಗೆ ₹23 ಸಾವಿರದಿಂದ ₹30 ಸಾವಿರದ ವರೆಗೆ ಇದೆ. ಈ ನಿವೇಶನದ ಮೌಲ್ಯ ₹12 ಕೋಟಿಯಷ್ಟು ಎಂದು ಅಂದಾಜಿಸಲಾಗಿದೆ.
ಬೆಂಗಳೂರಿನಲ್ಲಿ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಿದ ಬಡಾವಣೆಗಳಲ್ಲಿ ರಾಜಕಾರಣಿಗಳಿಗೆ ಕಾನೂನುಬಾಹಿರವಾಗಿ ಬದಲಿ ನಿವೇಶನಗಳನ್ನು ಹಂಚಿಕೆ ಮಾಡಿದ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಸುಪ್ರೀಂ ಕೋರ್ಟ್, ಈ ಬದಲಿ ನಿವೇಶನಗಳನ್ನು ವಾಪಸ್ ಪಡೆಯುವಂತೆ ಪ್ರಾಧಿಕಾರಕ್ಕೆ ಅಕ್ಟೋಬರ್ 11ರಂದು ನಿರ್ದೇಶನ ನೀಡಿತ್ತು. ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ಸಮಿತಿ ನೀಡಿರುವ ವರದಿಯನ್ನು ಪರಿಗಣಿಸಿ ಈ ಸೂಚನೆ ನೀಡಿತ್ತು.
‘ಸುಪ್ರೀಂ ಕೋರ್ಟ್ 2021ರ ಅಕ್ಟೋಬರ್‌ನಲ್ಲಿ ನೀಡಿರುವ ಆದೇಶವನ್ನು ಉಲ್ಲಂಘಿಸಿ ಪ್ರಾಧಿಕಾರವು ಆರ್‌ಎಂವಿ ಎರಡನೇ ಹಂತದಲ್ಲಿ ರಾಜಕಾರಣಿಗಳಿಗೆ ಪರ್ಯಾಯ ನಿವೇಶನಗಳನ್ನು ಹಂಚಿಕೆ ಮಾಡಿದೆ. ಇದು 1984ರ ನಿವೇಶನ ಹಂಚಿಕೆ ನಿಯಮದ ಸೆಕ್ಷನ್ 11 ಎ ಯ ಉಲ್ಲಂಘನೆ’ ಎಂದು ಸಮಿತಿ ವರದಿ ಸಲ್ಲಿಸಿತ್ತು. ಮರು ಸ್ವಾಧೀನ ಪಡೆದಿರುವ ಅಥವಾ ಪೂರ್ಣ ಅಭಿವೃದ್ಧಿ ಹೊಂದಿದ ಬಡಾವಣೆಗಳಲ್ಲಿ ಸಾರ್ವಜನಿಕ ಹರಾಜಿನ ಮೂಲಕ ಮಾತ್ರ ನಿವೇಶನಗಳನ್ನು ಹಂಚಿಕೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ 2021ರ ಅಕ್ಟೋಬರ್ 29ರಂದು ಆದೇಶಿಸಿತ್ತು. ನಳಿನ್ ಅವರಿಗೆ ನಿವೇಶನ ನೀಡಲು ಮುಂದಾಗಿರುವುದು ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆ ಎಂಬ ಆಕ್ಷೇಪ ವ್ಯಕ್ತವಾಗಿದೆ.
ಪ್ರಕರಣವೇನು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಕಟೀಲ್ ಅವರಿಗೆ ಜಿ–ಕೆಟಗರಿಯಡಿ ಬನಶಂಕರಿ ಆರನೇ ಹಂತ ಏಳನೇ ಬಡಾವಣೆಯಲ್ಲಿ 15X24 ಮೀಟರ್ ಅಳತೆಯ ನಿವೇಶನ (ಸಂಖ್ಯೆ 204) ಹಂಚಿಕೆ ಮಾಡಿ 2009ರ ನವೆಂಬರ್ 2ರಂದು ಹಂಚಿಕೆ ಪತ್ರ ನೀಡಲಾಗಿತ್ತು. ನಂತರ ಕಟೀಲ್ ಮನವಿಯ ಮೇರೆಗೆ ಎಚ್ಎಸ್‌ಆರ್ ಬಡಾವಣೆಯ ಸೆಕ್ಟರ್ 3ರಲ್ಲಿ ನಿವೇಶನ (ಸಂಖ್ಯೆ 13/ಬಿ1) ಹಂಚಿಕೆ ಮಾಡಿ 2011ರ ಜೂನ್‌ನಲ್ಲಿ ಹಂಚಿಕೆ ಪತ್ರ ನೀಡಲಾಗಿತ್ತು. ಹೆಚ್ಚುವರಿ ವಿಸ್ತೀರ್ಣದ ಮೌಲ್ಯ ಹಾಗೂ ಬಡ್ಡಿಯನ್ನು ಪಾವತಿಸಿದ್ದ ಕಟೀಲ್ ಅವರು ನಿವೇಶನವನ್ನು ನೋಂದಾಯಿಸಿಕೊಡುವಂತೆ ಮನವಿ ಮಾಡಿದ್ದರು. ಆದರೆ, ಜಿ–ಕೆಟಗರಿಯ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿದ್ದರಿಂದ ಪ್ರಾಧಿಕಾರವು ನಿವೇಶನದ ನೋಂದಣಿ ಮಾಡಿಕೊಟ್ಟಿರಲಿಲ್ಲ.
ನ್ಯಾಯಮೂರ್ತಿ ಡಿ.ವಿ.ಶೈಲೇಂದ್ರ ಕುಮಾರ್ ವಿಚಾರಣಾ ಸಮಿತಿಯ ಆದೇಶದ ಪ್ರಕಾರ, ಪ್ರಾಧಿಕಾರವು ಗುತ್ತಿಗೆ ಹಾಗೂ ಮಾರಾಟ ಪತ್ರವನ್ನು ನೋಂದಾಯಿಸಿ 2020ರಲ್ಲಿ ಸ್ವಾಧೀನಪತ್ರ ನೀಡಿತ್ತು. ‘ಪೂರ್ಣ ಮೌಲ್ಯ ಪಾವತಿಸಿದ್ದರೂ ನಿವೇಶನವನ್ನು ತಡವಾಗಿ ನೋಂದಣಿ ಮಾಡಲಾಗಿದೆ. ವಿಶೇಷ ಪ್ರಕರಣವೆಂದು ಪರಿಗಣಿಸಿ ನಿವೇಶನದ ಗುತ್ತಿಗೆ ಅವಧಿ ಸಡಿಲಿಸಿ ಶುದ್ಧ ಕ್ರಯಪತ್ರ ಮಾಡಿಕೊಡಬೇಕು’ ಎಂದು ನಳಿನ್ ಅವರು ಪ್ರಾಧಿಕಾರಕ್ಕೆ ಮನವಿ ಮಾಡಿದ್ದರು.
ಈ ಪ್ರಸ್ತಾವನೆ ತಿರಸ್ಕರಿಸಬಹುದು ಅಥವಾ ಶುದ್ಧ ಕ್ರಯಪತ್ರ ನೋಂದಾಯಿಸಲು ಅನುಮತಿ ನೀಡಬಹುದು ಎಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್ ಅವರು ಟಿಪ್ಪಣಿಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.