ADVERTISEMENT

ಪಿಯು ಪರೀಕ್ಷಾ ವೆಚ್ಚ ಹೆಚ್ಚಳ: ಶುಲ್ಕ ಪರಿಷ್ಕರಣೆ

ಮೂರು ಪರೀಕ್ಷೆಗಳ ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡಿದ ಎಲ್ಲರಿಗೂ ಸಿಗದ ಗೌರವ ಸಂಭಾವನೆ

ಚಂದ್ರಹಾಸ ಹಿರೇಮಳಲಿ
Published 1 ಸೆಪ್ಟೆಂಬರ್ 2025, 23:30 IST
Last Updated 1 ಸೆಪ್ಟೆಂಬರ್ 2025, 23:30 IST
<div class="paragraphs"><p> ಕಾಲೇಜು ವಿದ್ಯಾರ್ಥಿಗಳು</p></div>

ಕಾಲೇಜು ವಿದ್ಯಾರ್ಥಿಗಳು

   

ಬೆಂಗಳೂರು: ದ್ವಿತೀಯ ಪಿಯು ಪರೀಕ್ಷೆಗಳಿಗೆ ತಗಲುವ ವೆಚ್ಚ ಹಾಗೂ ವಿದ್ಯಾರ್ಥಿಗಳಿಂದ ಸಂಗ್ರಹಿಸುವ ಶುಲ್ಕದ ಮಧ್ಯೆ ಇರುವ ಅಂತರ ಸರಿದೂಗಿಸಲು ಪರೀಕ್ಷಾ ಶುಲ್ಕ ಪರಿಷ್ಕರಿಸುವಂತೆ ಶಾಲಾ ಶಿಕ್ಷಣ ಇಲಾಖೆಯು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಗೆ ಸೂಚಿಸಿದೆ. 

ದ್ವಿತೀಯ ಪಿಯು ಪರೀಕ್ಷೆ ನಡೆಸಲು ಮಂಡಳಿ ಪ್ರತಿ ವಿದ್ಯಾರ್ಥಿಗೆ ₹675 ವೆಚ್ಚ ಮಾಡುತ್ತಿದೆ. ಪದವಿಪೂರ್ವ ಶಿಕ್ಷಣ ಇಲಾಖೆಯು ಪ್ರತಿ ವಿದ್ಯಾರ್ಥಿಯಿಂದ ₹400 ಪರೀಕ್ಷಾ ಶುಲ್ಕ ಸಂಗ್ರಹಿಸುತ್ತಿದ್ದು, ಈ ಹಣವನ್ನು ಪರೀಕ್ಷಾ ಮಂಡಳಿಯ ಖಾತೆಗೆ ಜಮೆ ಮಾಡುತ್ತದೆ. ಪರೀಕ್ಷೆಗಳನ್ನು ನಡೆಸಲು ತಗಲುತ್ತಿರುವ ತಲಾ ₹275 ಹೆಚ್ಚುವರಿ ವೆಚ್ಚವನ್ನು ಪ್ರತಿ ವರ್ಷ ಸರ್ಕಾರವೇ ಮಂಡಳಿಗೆ ನೀಡುತ್ತಿದೆ. ಈ ವ್ಯತ್ಯಾಸ ಸರಿಪಡಿಸಲು ಪರೀಕ್ಷಾ ಶುಲ್ಕ ಪರಿಷ್ಕರಣೆ ಮಾಡುವಂತೆ ಶಾಲಾ ಶಿಕ್ಷಣ ಇಲಾಖೆ ಪರೀಕ್ಷಾ ಮಂಡಳಿಗೆ ಪತ್ರ ಬರೆದಿದೆ.

ADVERTISEMENT

ಮೌಲ್ಯಮಾಪಕರ ಸಂಭಾವನೆ ವಿಳಂಬ:  2024–25ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆ–1, ಪರೀಕ್ಷೆ–2 ಮತ್ತು ಪರೀಕ್ಷೆ–3ರ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯದಲ್ಲಿ ಭಾಗವಹಿಸಿದ ಹಲವರಿಗೆ ಗೌರವ ಸಂಭಾವನೆ ಪಾವತಿಯಾಗಿಲ್ಲ. ಗೌರವ ಸಂಭಾವನೆ ಸೇರಿ ₹97.50 ಕೋಟಿ ಪರೀಕ್ಷಾ ವೆಚ್ಚ ನೀಡುವಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಶಾಲಾ ಶಿಕ್ಷಣ ಇಲಾಖೆಗೆ ಪ್ರಸ್ತಾವ ಸಲ್ಲಿಸಿತ್ತು. ಆದರೆ, ಬಿಡುಗಡೆಯಾದ ಹಣ ₹78 ಕೋಟಿ.

‘ಬೇಡಿಕೆ ಸಲ್ಲಿಸಿದ್ದಕ್ಕಿಂತ ₹19.50 ಕೋಟಿ ಕಡಿಮೆ ಅನುದಾನ ಬಿಡುಗಡೆಯಾಗಿರುವುದು, ಹಲವು ಉಪನ್ಯಾಸಕರು ನೇರ ನಗದು ಪಾವತಿ ವ್ಯವಸ್ಥೆಗೆ ಅಗತ್ಯವಾದ ಆಧಾರ್‌ ಲಿಂಕ್‌, ಕೆವೈಸಿ ಅಪ್‌ಡೇಟ್‌ ಮಾಡದೆ ಇರುವುದು ಸಂಭಾವನೆ ಪಾವತಿಗೆ ವಿಳಂಬವಾಗಿದೆ’ ಎನ್ನುವುದು ಪರೀಕ್ಷಾ ಮಂಡಳಿ ಅಧಿಕಾರಿಗಳ ಹೇಳಿಕೆ. 

‘₹97.50 ಕೋಟಿ ಪರೀಕ್ಷಾ ವೆಚ್ಚ ಬಿಡುಗಡೆಗೆ ಕೋರಿ ಪರೀಕ್ಷಾ ಮಂಡಳಿ ಪ್ರಸ್ತಾವ ಸಲ್ಲಿಸಿತ್ತು. ಪ್ರಸ್ತಾವನೆ ಕೋಷ್ಠಕದ ಮೊತ್ತಕ್ಕೂ, ಸಲ್ಲಿಕೆಯಾದ ಬೇಡಿಕೆಯ ಮೊತ್ತಕ್ಕೂ ವ್ಯತ್ಯಾಸವಿದ್ದ ಕಾರಣ ಶೇ 80ರಷ್ಟು ಹಣ ಬಿಡುಗಡೆ ಮಾಡಲಾಗಿದೆ. ಮರುಪ್ರಸ್ತಾವ ಸಲ್ಲಿಸಿದ ತಕ್ಷಣ ಬಿಡುಗಡೆ ಮಾಡಲು ಸಮ್ಮತಿಸಲಾಗಿದೆ. ಪರೀಕ್ಷಾ ವೆಚ್ಚ, ಪರೀಕ್ಷಾ ಶುಲ್ಕದ ನಡುವಣ ವ್ಯತ್ಯಾಸ ಸರಿಪಡಿಸಲು ಶುಲ್ಕ ಪರಿಷ್ಕರಣೆಗೆ ಸೂಚಿಸಲಾಗಿದೆ’ ಎನ್ನುವುದು ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳ ಪ್ರತಿಕ್ರಿಯೆ. 

ಪರೀಕ್ಷಾ ಕಾರ್ಯದ ಹಣವೂ ವಿಳಂಬ

ದ್ವಿತೀಯ ಪಿಯು ಪರೀಕ್ಷಾ ಕಾರ್ಯಗಳಲ್ಲಿ ಜಾಗೃತ ದಳ, ವಿಶೇಷ ಜಾಗೃತ ದಳದ ಸದಸ್ಯರಿಗೆ, ಪರೀಕ್ಷಾ ಕೇಂದ್ರಗಳಲ್ಲಿ ಉಸ್ತುವಾರಿ ಅಧಿಕಾರಿಗಳಾಗಿ ಕೆಲಸ ಮಾಡಿದವರಿಗೆ ಎರಡು ವರ್ಷಗಳಿಂದ ಗೌರವ ಸಂಭಾವನೆ ನೀಡಿಲ್ಲ. ಈಗ 2023–2024ನೇ ಸಾಲಿನ ಬಾಕಿಯಲ್ಲಿ ಶೇ 50ರಷ್ಟು ಅನುದಾನ ಬಿಡುಗಡೆ ಮಾಡಲಾಗಿದೆ.

‘ಉಳಿದ ಶೇ 50ರಷ್ಟು ಬಾಕಿಯನ್ನು (₹4.63 ಕೋಟಿ) ನೀಡಲಾಗಿದೆ. 2024–2025ನೇ ಸಾಲಿನ ಮೂರು ಪರೀಕ್ಷೆಗಳಲ್ಲಿ ಕಾರ್ಯನಿರ್ವಹಿಸಿದವರಿಗೆ ಸಂಭಾವನೆ, ಪ್ರಯಾಣ ಭತ್ಯೆ ನೀಡಿಲ್ಲ. ಹಲವು ಉಪನ್ಯಾಸಕರ ಮೌಲ್ಯಮಾಪನದ ಹಣ ಜಮೆಯಾಗಿಲ್ಲ. ತಕ್ಷಣ ಹಣ ನೀಡುವಂತೆ ಮಂಡಳಿಗೆ ಮನವಿ ಮಾಡಿದ್ದೇವೆ’ ಎನ್ನುತ್ತಾರೆ ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ನಿಂಗೇಗೌಡ ಎ.ಎಚ್‌.

ರದ್ದಾದ ಖಾತೆಗೂ ಹಣ ಜಮೆ

ದ್ವಿತೀಯ ಪಿಯು ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯದಲ್ಲಿ ಭಾಗವಹಿಸುವ ಉಪನ್ಯಾಸಕರಿಗೆ ನೇರ ನಗದು ಪಾವತಿಯ ಮೂಲಕ ಹಣ ಸಂದಾಯ ಮಾಡಲಾಗುತ್ತಿದೆ. ಆದರೆ, 3,000ಕ್ಕೂ ಹೆಚ್ಚು ಉಪನ್ಯಾಸಕರು ತಮ್ಮ ಬ್ಯಾಂಕ್‌ ಖಾತೆಗಳಿಗೆ ಆಧಾರ್‌, ಕೆವೈಸಿ ಲಿಂಕ್‌ ಮಾಡಿಲ್ಲ. ಕೆಲವರು ವರ್ಗಾವಣೆಯಾದ ನಂತರ ಹಿಂದಿನ ಸ್ಥಳದ ಬ್ಯಾಂಕ್‌ಗಳ ಖಾತೆಗಳನ್ನು ರದ್ದು ಮಾಡಿಕೊಂಡಿದ್ದರೂ, ಅಂತಹ ಖಾತೆಗಳಿಗೆ ಹಣ ಜಮೆಯಾಗಿದೆ. ಈ ಕುರಿತು ಪರೀಕ್ಷಾ ಮಂಡಳಿಗೆ ಸಾಕಷ್ಟು ದೂರುಗಳು ಸಲ್ಲಿಕೆಯಾಗಿವೆ.

ಶಾಲಾ ಶಿಕ್ಷಣ ಇಲಾಖೆಯ ಸೂಚನೆಯಂತೆ ದ್ವಿತೀಯ ಪಿಯು ಪರೀಕ್ಷಾ ಶುಲ್ಕ ಪರಿಷ್ಕರಣೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಎಸ್‌ಎಸ್‌ಎಲ್‌ಸಿ, ಪಿಯು ಮಧ್ಯೆ ಹೆಚ್ಚಿನ ಅಂತರವಿಲ್ಲದಂತೆ ಪರಿಷ್ಕರಣೆ ಮಾಡಲಾಗುವುದು.
-ಪ್ರಕಾಶ್‌ ನಿಟ್ಟಾಲಿ, ಅಧ್ಯಕ್ಷ, ಪರೀಕ್ಷಾ ಮಂಡಳಿ 
ಮೌಲ್ಯಮಾಪನದ ಸಂಭಾವನೆ ನೀಡುವಲ್ಲಿ ಪರೀಕ್ಷಾ ಮಂಡಳಿಯ ವಿಳಂಬ ಸರಿಯಲ್ಲ. ಮೌಲ್ಯಮಾಪನಕ್ಕೆ ಹಾಜರಾಗದಿದ್ದರೆ ಅಮಾನತು ಮಾಡುವ ಮಂಡಳಿ, ಭಾಗಿಯಾದವರಿಗೆ ತಕ್ಷಣ ಹಣ ನೀಡುವ ಹೊಣೆಗಾರಿಕೆಯನ್ನೂ ತೋರಬೇಕು.
-ನಿಂಗೇಗೌಡ ಎ.ಎಚ್‌, ಅಧ್ಯಕ್ಷ, ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.