ಬೆಂಗಳೂರು: ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಶಕ್ತಿ ಯೋಜನೆಯಡಿ 500 ಕೋಟಿ ಬಾರಿ ಮಹಿಳೆಯರು ಪ್ರಯಾಣಿಸಿದ ಸಂಭ್ರಮದ ಅಂಗವಾಗಿ 500ನೇ ಕೋಟಿ ಉಚಿತ ಟಿಕೆಟ್ ಪಡೆದ ಮಹಿಳೆ ಲತಾ ವಿ.ಎನ್. ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟಿಕೆಟ್ ವಿತರಿಸಿ, ಮರದ ಆನೆ ನೀಡಿ, ಹಾರ ಹಾಕಿ ಸನ್ಮಾನಿಸಿದರು.
‘ಶಕ್ತಿ ಯೋಜನೆಯ ಮೈಲುಗಲ್ಲಿನ ಟಿಕೆಟ್ ಪಡೆದವಳು ನಾನು ಎಂಬುದು ನನಗೆ ಹೆಮ್ಮೆ ಉಂಟು ಮಾಡಿದೆ. ಅಲ್ಲದೇ ಮುಖ್ಯಮಂತ್ರಿಯವರೇ ಬಂದು ಸನ್ಮಾನಿಸಿದ್ದನ್ನು ಯಾವತ್ತೂ ಮರೆಯಲು ಸಾಧ್ಯವಿಲ್ಲ’ ಎಂದು ಲತಾ ಪ್ರತಿಕ್ರಿಯಿಸಿದರು.
ವಿಜಯಪುರದ ಒಡಲ ಧ್ವನಿ ಸ್ತ್ರೀಶಕ್ತಿ ಸಂಘದ ಸದಸ್ಯರು ರೊಟ್ಟಿ, ಹೋಳಿಗೆ ತಯಾರಿಸಿ ಬಸ್‌ಗಳಲ್ಲಿ ಉಚಿತವಾಗಿ ಬೆಂಗಳೂರಿಗೆ ಬಂದು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದು, ಅವರು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಾರಿಗೆ ಸಚಿವರಿಗೆ ಖಡಕ್ ರೊಟ್ಟಿ, ಶೇಂಗಾ ಹೋಳಿಗೆ ನೀಡಿ ಕೃತಜ್ಞತೆ ಸಲ್ಲಿಸಿದರು.
ಬಸ್‌ನಲ್ಲಿದ್ದ ಎಲ್ಲ ಮಹಿಳೆಯರಿಗೆ ಇಳಕಲ್ ಸೀರೆ, ಸಿಹಿ ವಿತರಿಸಲಾಯಿತು. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸಮಾಜ ಕಲ್ಯಾಣ ಸಚಿವ ಎಚ್. ಸಿ. ಮಹದೇವಪ್ಪ, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ, ಗ್ಯಾರಂಟಿ ಯೋಜನೆಗಳ ರಾಜ್ಯಮಟ್ಟದ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ, ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ, ರಾಜ್ಯ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಸೌಮ್ಯಾ ರೆಡ್ಡಿ, ಸಾರಿಗೆ ಇಲಾಖೆ ಮತ್ತು ನಿಗಮಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ‘2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಲಾಗಿತ್ತು. ಅದರಂತೆ ಶಕ್ತಿ ಯೋಜನೆಗೆ ಆ ವರ್ಷ ಜೂನ್ 11ಕ್ಕೆ ಚಾಲನೆ ನೀಡಲಾಗಿತ್ತು. ಇಲ್ಲಿವರೆಗೆ ಈ ಯೋಜನೆಯಡಿ ಈವರೆಗೆ 500 ಕೋಟಿ ಉಚಿತ ಟಿಕೆಟ್‌ಗಳನ್ನು ಪ್ರಯಾಣಿಕರು ಪಡೆದಿದ್ದಾರೆ’ ಎಂದು ತಿಳಿಸಿದರು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ‘ಶಕ್ತಿ ಯೋಜನೆ ದೇಶಕ್ಕೇ ಮಾದರಿಯಾಗಿದೆ. ಎಲ್ಲಿಯವರೆಗೆ ದೇವರು ಶಕ್ತಿ ಹಾಗೂ ಜನ ಅಧಿಕಾರ ನೀಡುತ್ತಾರೋ ಅಲ್ಲಿಯ ತನಕ ಗ್ಯಾರಂಟಿ ಯೋಜನೆಗಳು ಮುಂದುವರಿಯುತ್ತವೆ. ಯಾವುದೇ ಕಾರಣಕ್ಕೂ ಯೋಜನೆಗಳನ್ನು ನಿಲ್ಲಿಸುವುದಿಲ್ಲ’ ಎಂದರು.
‘ನಾವು ಕೊಟ್ಟ ಮಾತನ್ನು ಉಳಿಸಿಕೊಂಡಿರುವ ಕಾರಣಕ್ಕೆ ನಮಗೆ ಹೆಚ್ಚು ಸಂತೋಷವಾಗಿದೆ. ಇವೆಲ್ಲವನ್ನೂ ಜಾರಿ ಮಾಡಲು ಜನ ನೀಡಿರುವ ಶಕ್ತಿಯಿಂದ ನಮಗೆ ಬಲ ಬಂದಿದೆ’ ಎಂದು ಹೇಳಿದರು.
‘ಶಕ್ತಿ ಯೋಜನೆಯಡಿ 500 ಕೋಟಿ ಬಾರಿ ಮಹಿಳೆಯರು ಪ್ರಯಾಣಿಸುವ ಮೂಲಕ ಹೊಸ ಮೈಲುಗಲ್ಲು ಸ್ಥಾಪನೆಯಾಗಿದೆ. ಎಲ್ಲ ಮಹಿಳೆಯರು ಸಂಭ್ರಮ ಪಟ್ಟಿದ್ದಾರೆ. ಆದರೆ ಬಿಜೆಪಿ ಐಟಿ ಸೆಲ್ ಮಾತ್ರ ಆರಂಭದಿಂದಲೂ ನಕಾರಾತ್ಮಕ ಪ್ರಚಾರ ಮಾಡಿಕೊಂಡು ಬಂದಿದೆ. ಅದನ್ನು ಈಗಲೂ ಮುಂದುವರಿಸಿದೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.