ADVERTISEMENT

‘ಕಲ್ಯಾಣ’ದ ಕೈ ಶಾಸಕರಿಗೆ ತಲಾ ₹5 ಕೋಟಿ ಸಿ.ಎಂ ‘ಪ್ರಸಾದ’

ಕೆಕೆಆರ್‌ಡಿಬಿ ಅನುದಾನದ ಮುಖ್ಯಮಂತ್ರಿ ವಿವೇಚನಾ ನಿಧಿ ₹90 ಕೋಟಿ, ಬಡ್ಡಿ ಹಣ ₹10 ಕೋಟಿ ಹಂಚಿಕೆ

ರಾಜೇಶ್ ರೈ ಚಟ್ಲ
Published 28 ಜನವರಿ 2024, 23:30 IST
Last Updated 28 ಜನವರಿ 2024, 23:30 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ (ಕೆಕೆಆರ್‌ಡಿಬಿ) ಪ್ರಸಕ್ತ ಸಾಲಿನಲ್ಲಿ (2023–24) ನೀಡಿರುವ ₹3 ಸಾವಿರ ಕೋಟಿ ಅನುದಾನದಲ್ಲಿ ತಮ್ಮ ವಿವೇಚನಾ ನಿಧಿ ಶೇ 3ರಷ್ಟು ಅಂದರೆ, ₹90 ಕೋಟಿಯನ್ನು ತಲಾ ₹5 ಕೋಟಿಯಂತೆ ಆ ಭಾಗದ ಕಾಂಗ್ರೆಸ್‌ ಶಾಸಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಂಚಿದ್ದಾರೆ.

ಕಳೆದ ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆದ ವಿಧಾನ ಮಂಡಲದ ಅಧಿವೇಶನದ ಸಂದರ್ಭದಲ್ಲಿ ನಡೆದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯಲ್ಲಿ ಪಕ್ಷದ ಎಲ್ಲ ಶಾಸಕರಿಗೂ ತಲಾ ₹25 ಕೋಟಿ ವಿಶೇಷ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಈಗಾಗಲೇ ಭರವಸೆ ನೀಡಿದ್ದರು. ಇದೀಗ, ಕಲ್ಯಾಣ ಕರ್ನಾಟಕ ಭಾಗದ ಪಕ್ಷದ ಶಾಸಕರಿಗೆ (‌ಸಚಿವರನ್ನು ಹೊರತುಪಡಿಸಿ) ಅವರು ತಮ್ಮ ವಿವೇಚನಾ ಕೋಟಾದ ನಿಧಿಯನ್ನು  ಹಂಚಿದ್ದಾರೆ.

19 ಕಾಂಗ್ರೆಸ್‌ ಶಾಸಕರು, ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ಕಾಂಗ್ರೆಸ್‌ ಜೊತೆ ಗುರುತಿಸಿಕೊಂಡಿರುವ ಲತಾ ಮಲ್ಲಿಕಾರ್ಜುನ್‌ ಸೇರಿ ಒಟ್ಟು 20 ಶಾಸಕರಿಗೆ ₹5 ಕೋಟಿಯಂತೆ ಹಂಚಲು ₹100 ಕೋಟಿ ಅಗತ್ಯವಿದೆ. ತಮ್ಮ ವಿವೇಚನಾ ನಿಧಿ ₹90 ಕೋಟಿ ಮತ್ತು ಕಡಿಮೆಯಾಗುವ ₹10 ಕೋಟಿಯನ್ನು ಕೆಕೆಆರ್‌ಡಿಬಿ ಖಾತೆಯಲ್ಲಿರುವ ಬಡ್ಡಿ ಮೊತ್ತದಿಂದ ಭರಿಸುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಶಾಸಕರಿಂದ ಕಾಮಗಾರಿ ವಿವರಗಳನ್ನು ಪಡೆದು ಆದೇಶ ಹೊರಡಿಸಬೇಕು ಎಂದು ಯೋಜನೆ ಮತ್ತು ಸಾಂಖ್ಯಿಕ ಇಲಾಖೆಗೆ ಮುಖ್ಯಮಂತ್ರಿ ನಿರ್ದೇಶನ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಸಚಿವಾಲಯದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ADVERTISEMENT

ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಬೀದರ್‌, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಸೇರಿ ಏಳು ಜಿಲ್ಲೆಗಳ ವ್ಯಾಪ್ತಿಯಲ್ಲಿ ಒಟ್ಟು 41 ವಿಧಾನಸಭಾ ಕ್ಷೇತ್ರಗಳಿವೆ. ಈ ಪೈಕಿ, 26 ಕ್ಷೇತ್ರಗಳಲ್ಲಿ ಕಾಂಗ್ರೆಸ್, 10 ರಲ್ಲಿ ಬಿಜೆಪಿ, ಮೂರು ಕ್ಷೇತ್ರಗಳಲ್ಲಿ ಜೆಡಿಎಸ್, ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ) ಮತ್ತು ಪಕ್ಷೇತರ ಒಬ್ಬರು ಶಾಸಕರಿದ್ದಾರೆ.

ಸಚಿವರಾದ ಪ್ರಿಯಾಂಕ್‌ ಖರ್ಗೆ (ಚಿತ್ತಾಪುರ), ಶರಣಪ್ರಕಾಶ ಪಾಟೀಲ (ಸೇಡಂ), ಶರಣಬಸಪ್ಪ ದರ್ಶನಾಪುರ (ಶಹಾಪುರ), ಶಿವರಾಜ ಎಸ್‌. ತಂಗಡಗಿ (ಕನಕಗಿರಿ), ಈಶ್ವರ ಖಂಡ್ರೆ (ಭಾಲ್ಕಿ), ರಹೀಂ ಖಾನ್ (ಬೀದರ್‌), ಬಿ. ನಾಗೇಂದ್ರ (ಬಳ್ಳಾರಿ) ಅವರನ್ನು ಬಿಟ್ಟು ಉಳಿದ 19 ಕಾಂಗ್ರೆಸ್‌ ಶಾಸಕರು ಮತ್ತು ಏಕೈಕ ಪಕ್ಷೇತರ ಶಾಸಕಿಗೆ ತಲಾ ₹5 ಕೋಟಿ ಹಂಚಿಕೆ ಮಾಡಲಾಗಿದೆ.

ಸಚಿವರ ವಿವೇಚನಾ ಕೋಟಕ್ಕೆ ಕತ್ತರಿ

ಕಳೆದ ಸಾಲಿನಲ್ಲಿ (2022-23) ಕೆಕೆಆರ್‌ಡಿಬಿಗೆ ಒದಗಿಸಿದ್ದ ₹3 ಸಾವಿರ ಕೋಟಿ ಅನುದಾನದಲ್ಲಿ ಮುಖ್ಯಮಂತ್ರಿಯ ವಿವೇಚನಾ ಕೋಟಾ ಶೇ 2, ಮಂಡಳಿ ಅಧ್ಯಕ್ಷರ ವಿವೇಚನಾ ಕೋಟಾ ಶೇ 3, ಸರ್ಕಾರದ ವಿವೇಚನಾ ಕೋಟಾ (ಯೋಜನಾ ಸಚಿವರ) ಶೇ 5 ಎಂದು ನಿಗದಿಪಡಿಸಲಾಗಿತ್ತು. ಯೋಜನಾ ಸಚಿವ ಡಿ. ಸುಧಾಕರ್‌ ಅಧ್ಯಕ್ಷತೆಯಲ್ಲಿ 2023ರ ಜುಲೈ 7ರಂದು ನಡೆದ ಕೆಕೆಆರ್‌ಡಿಬಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮುಖ್ಯಮಂತ್ರಿಯ ವಿವೇಚನಾ ಕೋಟಾವನ್ನು ಶೇ 3ಕ್ಕೆ ಏರಿಸಿ, ಮಂಡಳಿಯ ಅಧ್ಯಕ್ಷರ ವಿವೇಚನಾ ಕೋಟಾವನ್ನು ಶೇ 2ಕ್ಕೆ ಕಡಿಮೆ ಮಾಡಲಾಗಿತ್ತು. ಆದರೆ, ಜ. 9ರಂದು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಸರ್ಕಾರದ ವಿವೇಚನಾ ಕೋಟಾವನ್ನು (ಸಚಿವರ ಕೋಟಾ) ಶೇ 5 (ಅಂದರೆ, ₹ 150 ಕೋಟಿ) ನಿಗದಿಪಡಿಸಿರುವುದಕ್ಕೆ ಆ ಭಾಗದ ಸಚಿವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗಾಗಿ, ಮುಖ್ಯಮಂತ್ರಿಯ ಸೂಚನೆಯಂತೆ ಈ ಕೋ‌ಟಾವನ್ನು ಶೇ 3ಕ್ಕೆ (₹90 ಕೋಟಿ) ಕಡಿತಗೊಳಿಸಲಾಗಿದೆ. ಇದರಿಂದಾಗಿ ಸಚಿವರ (ಡಿ. ಸುಧಾಕರ್‌) ವಿವೇಚನಾ ಕೋಟಾಕ್ಕೆ ಕತ್ತರಿ ಬಿದ್ದಂತಾಗಿದೆ.

ಯಾರಿಗೆಲ್ಲ ತಲಾ ₹5 ಕೋಟಿ?

ಖನೀಜ್ ಫಾತಿಮ (ಕಲಬುರ್ಗಿ ಉತ್ತರ) ಅಲ್ಲಮ ಪ್ರಭು ಪಾಟೀಲ (ಕಲಬುರಗಿ ದಕ್ಷಿಣ) ಎಂ.ವೈ. ಪಾಟೀಲ್ (ಅಫಜಲಪುರ) ಬಿ.ಆರ್‌. ಪಾಟೀಲ (ಆಳಂದ) ಅಜಯ್‌ ಸಿಂಗ್ (ಜೇವರ್ಗಿ) ಚನ್ನಾರೆಡ್ಡಿ ಪಾಟೀಲ ತುನ್ನೂರ (ಯಾದಗಿರಿ) ರಾಜಾ ವೆಂಕಟಪ್ಪ ನಾಯಕ (ಸುರಪುರ) ಬಸವರಾಜ ರಾಯರಡ್ಡಿ (ಯಲಬುರ್ಗಾ) ರಾಘವೇಂದ್ರ ಬಸವರಾಜ ಹಿಟ್ನಾಳ್‌ (ಕೊಪ್ಪಳ) ಬಸನಗೌಡ ದದ್ದಲ್‌ (ರಾಯಚೂರು ಗ್ರಾಮಾಂತರ) ಜಿ. ಹಂಪಯ್ಯನಾಯಕ್‌ (ಮಾನ್ವಿ) ಹಂಪನಗೌಡ ಬಾದರ್ಲಿ (ಸಿಂಧನೂರು) ಬಸನಗೌಡ ತುರುವಿಹಾಳ (ಮಸ್ಕಿ) ಇ. ತುಕಾರಾಂ (ಸಂಡೂರು) ನಾರಾ ಭರತರೆಡ್ಡಿ (ಬಳ್ಳಾರಿ ನಗರ) ಜೆ.ಎನ್‌. ಗಣೇಶ್‌ (ಕಂಪ್ಲಿ) ಬಿ.ಎಂ. ನಾಗರಾಜ (ಸಿರಗುಪ್ಪ) ಶ್ರೀನಿವಾಸ್ ಎನ್‌. ಟಿ (ಕೂಡ್ಲಿಗಿ) ಎಚ್‌.ಆರ್‌. ಗವಿಯಪ್ಪ (ವಿಜಯನಗರ– ಹೊಸಪೇಟೆ) ಲತಾ ಮಲ್ಲಿಕಾರ್ಜುನ್ (ಹರಪನಹಳ್ಳಿ– ಸ್ವತಂತ್ರ ಅಭ್ಯರ್ಥಿ)

ಸಿಎಂ ಆಪ್ತ ರಾಯರಡ್ಡಿಗೆ ಬಂಪರ್!

ಮುಖ್ಯಮಂತ್ರಿಯ ಸಲಹೆಗಾರ (ಆರ್ಥಿಕ ಮತ್ತು ತೆರಿಗೆ) ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಂಪರ್‌ ಕೊಡುಗೆ ನೀಡಿದ್ದಾರೆ. ತಮ್ಮ ವಿವೇಚನಾ ನಿಧಿಯಿಂದ ₹5 ಕೋಟಿಯ ಜೊತೆಗೆ ಹಿಂದಿನ ಸಾಲಿನ (2022–23) ಮುಖ್ಯಮಂತ್ರಿ ವಿವೇಚನಾ ನಿಧಿಯ ₹48.57 ಕೋಟಿ ಅನುದಾನವನ್ನು ಕಾಮಗಾರಿ ಬದಲಾವಣೆ ಮಾಡಿ ರಾಯರಡ್ಡಿ ಅವರಿಗೆ  ನೀಡಿದ್ದಾರೆ. ಹಿಂದಿನ ಸಾಲಿನ ಕ್ರಿಯಾಯೋಜನೆಯಲ್ಲಿ ₹48.57 ಕೋಟಿ ಅನುದಾನದಲ್ಲಿ ಕೊಪ್ಪಳ ಜಿಲ್ಲೆಯ ಕುಕನೂರು ಯಲಬುರ್ಗಾ ಗಜೇಂದ್ರಗಡ ಗದ್ದನಕೇರಿ ರಾಷ್ಟ್ರೀಯ ಹೆದ್ದಾರಿ 367ಗೆ ಇಪಿಸಿ (ಎಂಜಿನಿಯರಿಂಗ್ ಪ್ರೊಕ್ಯೂರ್‌ಮೆಂಟ್ ಆ್ಯಂಡ್ ಕನ್‌ಸ್ಟ್ರಕ್ಷನ್) ಮಾದರಿಯಲ್ಲಿ ಬೈಪಾಸ್‌ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳಲು ಅನುಮೋದನೆ ನೀಡಲಾಗಿತ್ತು. ಆದರೆ ಆ ಕಾಮಗಾರಿ ಬೇರೆ ಅನುದಾನದಲ್ಲಿ ಕೈಗೆತ್ತಿಕೊಂಡ ಕಾರಣ ಈ ವಿವೇಚನಾ ಕೋಟಾವನ್ನು ತಮ್ಮ ಕ್ಷೇತ್ರದ ಯಲಬುರ್ಗಾ ಮತ್ತು ಕುಕನೂರು ತಾಲ್ಲೂಕುಗಳಲ್ಲಿ ಒಟ್ಟು 11 ಕಾಮಗಾರಿಗಳನ್ನು ಕೈಗೊಳ್ಳಲು ಕಾಮಗಾರಿ ಬದಲಾವಣೆ ಮಾಡಿಕೊಡುವಂತೆ ಸಿದ್ದರಾಮಯ್ಯ ಅವರಿಗೆ ರಾಯರಡ್ಡಿ ಮನವಿ ಸಲ್ಲಿಸಿದ್ದರು. ಅದಕ್ಕೆ ಮುಖ್ಯಮಂತ್ರಿ ಒಪ್ಪಿಗೆ ಸೂಚಿಸಿದ್ದಾರೆ. ಹೀಗಾಗಿ ಈ ಹಿಂದೆ ಅನುಮೋದನೆ ನೀಡಿದ್ದ ಕಾಮಗಾರಿಯನ್ನು ಬದಲಿಸಿ ಹೊಸತಾಗಿ ಅನುಮೋದನೆ ನೀಡಿ ಯೋಜನಾ ಇಲಾಖೆ ನ. 16ರಂದೇ ಆದೇಶ ಹೊರಡಿಸಿದೆ ಎಂದು ಕೆಕೆಆರ್‌ಡಿಬಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.