ADVERTISEMENT

ರಾಜ್ಯದಲ್ಲಿ ಮತ್ತೆ 20 ಸಾವಿರ ಹಾಸಿಗೆ: ಸರ್ಕಾರದಿಂದ ಸಮರೋಪಾದಿಯ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 8 ಮೇ 2021, 20:30 IST
Last Updated 8 ಮೇ 2021, 20:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಕೇಂದ್ರ ಸರ್ಕಾರ 1,200 ಟನ್‌ ಆಮ್ಲಜನಕ ಹಂಚಿಕೆ ಮಾಡಬೇಕೆಂಬ ಕರ್ನಾಟಕ ಹೈಕೋರ್ಟ್‌ ಆದೇಶವನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದ ಬೆನ್ನಲ್ಲೇ, ಆಮ್ಲಜನಕ ಸೌಲಭ್ಯ ಇರುವ ಹಾಸಿಗೆಗಳನ್ನು ಇನ್ನೂ 20 ಸಾವಿರಕ್ಕೆ ಹೆಚ್ಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ರಾಜ್ಯ ಕೋವಿಡ್‌ ಕಾರ್ಯಪಡೆ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ ಅಶ್ವತ್ಥನಾರಾಯಣ, ‘ಈ ಪೈಕಿ, 10 ಸಾವಿರ ಹಾಸಿಗೆಗಳನ್ನು ತಕ್ಷಣವೇ ವ್ಯವಸ್ಥೆ ಮಾಡಲಾಗುವುದು’ ಎಂದರು.

‘ಕೋವಿಡ್‌ ಬರುವ ಮೊದಲು ರಾಜ್ಯದಲ್ಲಿ ನಿತ್ಯ 100 ಟನ್‌ ಆಮ್ಲಜನಕ ಖರ್ಚಾಗುತ್ತಿತ್ತು. ಈಗ ನಿತ್ಯವೂ 950 ಟನ್‌ ಬೇಕಾಗುತ್ತಿದೆ. ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಆಮ್ಲಜನಕ ಸೌಲಭ್ಯದ ಹಾಸಿಗೆಗಳನ್ನೂ ಹೆಚ್ಚಿಸಬೇಕಾಗಿದೆ’ ಎಂದರು.

ADVERTISEMENT

‘ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲೂ ಆಮ್ಲಜನಕ ಸೌಲಭ್ಯದ ಹಾಸಿಗೆ ಅಳವಡಿಸಲು ನಿರ್ಧರಿಸಲಾಗಿದೆ. ಸದ್ಯ ತಲಾ 35 ಸಾವಿರದಂತೆ ಸರ್ಕಾರಿ–ಖಾಸಗಿ ಆಸ್ಪತ್ರೆಗಳ 70 ಸಾವಿರ ಹಾಸಿಗೆಗಳನ್ನು ಕೋವಿಡ್‌ ರೋಗಿಗಳಿಗೆ ಮೀಸಲಿಡಲಾಗಿದೆ. ಅದರಲ್ಲಿ 50 ಸಾವಿರ ಆಮ್ಲಜನಕ ಸೌಲಭ್ಯವಿರುವ ಹಾಸಿಗೆಗಳು’ ಎಂದು ಮಾಹಿತಿ ನೀಡಿದರು.

‘ಶೇ 30ರಿಂದ 40ರಷ್ಟು ಗಂಭೀರವಲ್ಲದ ಸೋಂಕಿತರು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿ ಆಮ್ಲ
ಜನಕ ಸೌಲಭ್ಯದ ಹಾಸಿಗೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರನ್ನು ಕೂಡಲೇ ಸ್ಟೆಪ್‌ಡೌನ್‌ ಆಸ್ಪತ್ರೆಗಳಿಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ’ ಎಂದರು.

ರೆಮ್‌ಡಿಸಿವಿರ್‌ ಕೊರತೆ ಇಲ್ಲ: ‘ಇದೇ 9ರವರೆಗಿನ ಅವಧಿಗೆ ಹಂಚಿಕೆಯಾದ ರೆಮ್‌ಡಿಸಿವಿರ್‌ನಲ್ಲಿ 30,900 ಡೋಸ್‌ ಹಂಚಿಕೆಯಾಗಿದ್ದು, ಇನ್ನೂ 70 ಸಾವಿರ ಬಾಕಿ ಇದೆ. 10ರ ನಂತರದ ಒಂದು ವಾರಕ್ಕೆ 2.60 ಲಕ್ಷ ಡೋಸ್ ಹಂಚಿಕೆಯಾಗಿದ್ದು, ರಾಜ್ಯಕ್ಕೆ ತಲುಪಬೇಕಿದೆ. ಈ ಲೆಕ್ಕದ ಪ್ರಕಾರ ನಿತ್ಯ 37 ಸಾವಿರ ಡೋಸ್ ಲಭ್ಯವಾಗುತ್ತಿರುವುದರಿಂದ ಕೊರತೆಯ ಪ್ರಶ್ನೆಯೇ ಇಲ್ಲ’ ಎಂದರು.

‘ರಾಜ್ಯಕ್ಕೆ ರೆಮ್‌ಡಿಸಿವಿರ್‌ ಕೋಟಾವನ್ನು ಸಕಾಲದಲ್ಲಿ ಪೂರೈಸುವಂತೆ ಎಲ್ಲ ತಯಾರಿಕಾ ಕಂಪನಿಗಳಿಗೆ ನೊಟೀಸ್‌ ಜಾರಿ ಮಾಡಲಾಗುವುದು’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.